ನಾವು ಅಪರಿಚಿತರೇ? ಅಲ್ಲ

7

ನಾವು ಅಪರಿಚಿತರೇ? ಅಲ್ಲ

Published:
Updated:

ರಾಷ್ಟ್ರೀಯತೆ ಎನ್ನುವುದು ಅರ್ಧ ಕಾಲ್ಪನಿಕ ಹಾಗೂ ಇನ್ನರ್ಧ ವಾಸ್ತವ. ವಿದೇಶಿಯರು ತಮ್ಮ ಉತ್ಸಾಹ ಮತ್ತು ಚೈತನ್ಯದೊಂದಿಗೆ ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆತಾಗಲೇ ಅದು ಇನ್ನಷ್ಟು ದೃಢವಾಗುವುದು.ಬೆಂಗಳೂರಿಗೆ ಬರುವ ವಿದೇಶಿ ವಿದ್ಯಾರ್ಥಿಗಳನ್ನು ನೋಡಿದಾಗ ಅದು ನಿಜವೇ ಎಂದನ್ನಿಸುತ್ತದೆ.‘ನಾವು ಅಪರಿಚಿತರೆಂದು ನಮಗೆಂದೂ ಅನಿಸಿದ್ದೇ ಇಲ್ಲ. ಇಲ್ಲಿನ ಜನರ ಪ್ರೀತಿ, ವಿಶ್ವಾಸ, ಸೌಹಾರ್ದ ಹಾಗೂ ಬೆಂಬಲಕ್ಕೆ ಸರಿಸಾಟಿ ಯಾವುದೂ ಇಲ್ಲ’- ಇವು ಬೆಂಗಳೂರಿನ ಇಂಡಿಯನ್ ಅಕಾಡೆಮಿಯಲ್ಲಿ ಕಲಿಯುತ್ತಿರುವ ವಿದೇಶಿ ವಿದ್ಯಾರ್ಥಿಗಳ ಭಾವಪೂರಿತ ಮಾತುಗಳಿವು.ಈ ವಿದೇಶಿ ವಿದ್ಯಾರ್ಥಿಗಳೊಂದಿಗೆ ಮಾತುಕತೆಗಿಳಿದಾಗ ಅವರಿಗೆ ಬೆಂಗಳೂರು ನಗರದ ಬಗ್ಗೆ, ಹವಾಗುಣ, ಆಹಾರ, ಶಾಪಿಂಗ್, ಸ್ನೇಹಿತರು, ಅಷ್ಟೇ ಅಲ್ಲ ತಮ್ಮ ಕಾಲೇಜು... ಹೀಗೆ ಪ್ರತಿಯೊಂದರ ಕುರಿತೂ ಹೇಳಲು ಸಾಕಷ್ಟಿದ್ದವು. ಇವರಲ್ಲಿ ಹೆಚ್ಚಿನವರು ಪ್ರತಿಭಾವಂತರೇ. ಹಾಗಾಗಿ ಇಲ್ಲಿಂದ ಪಡೆದ ಶಿಕ್ಷಣ, ಗಳಿಸಿದ ಅನುಭವ, ಸಿಕ್ಕ ಅವಕಾಶ ಎಲ್ಲವನ್ನೂ ತಮ್ಮೊಡನೆ ಕೊಂಡೊಯ್ದು ಸದುಪಯೋಗಪಡಿಸಿಕೊಳ್ಳಲು ಬಯಸುತ್ತಿದ್ದಾರೆ.ಮಾತುಕತೆಯ ಮಧ್ಯೆ, ತಮ್ಮ ಸಂಸ್ಥೆಯ ಕುರಿತು ಉತ್ತಮ ಮಾತುಗಳನ್ನಾಡಲು ಅವರು ಮರೆಯಲಿಲ್ಲ, ಇಲ್ಲಿನ ಸಿಬ್ಬಂದಿ ಪಠ್ಯೇತರ ಚಟುವಟಿಕೆಗಳನ್ನು ಮೀರಿ ನಮ್ಮೊಂದಿಗೆ ಬೆರೆತು ಮನೆಯ ವಾತಾವರಣವನ್ನು ದೊರೆಯುವಂತೆ ಮಾಡಿದ್ದಾರೆ ಎಂಬುದು ಈ ವಿದ್ಯಾರ್ಥಿಗಳ ಅಭಿಪ್ರಾಯ.ಸುಮಾರು 24 ರಾಷ್ಟ್ರಗಳ ವಿದ್ಯಾರ್ಥಿಗಳು ಇಂಡಿಯನ್ ಅಕಾಡೆಮಿಯಲ್ಲಿ ಕಲಿಯುತ್ತಿದ್ದಾರೆ. ಯುಜಿಸಿಯು ನೀಡುವ ನ್ಯಾಕ್ ಮಾನ್ಯತೆ ಇರುವುದೇ ಅವರು ಈ  ಸಂಸ್ಥೆಯನ್ನು ಆರಿಸಲು ಕಾರಣ. ಜೊತೆಗೆ ಇಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಘಟನೆ ಇಲ್ಲಿಗೆ ಬರುವ ವಿದೇಶಿ ವಿದ್ಯಾರ್ಥಿಗಳ ಯೋಗಕ್ಷೇಮ  ವಿಚಾರಿಸಿಕೊಳ್ಳುತ್ತದೆ.ಇಂಗ್ಲಿಷ್ ಬಾರದ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿತುಕೊಳ್ಳಲೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿದ ‘ಭಾಷಾ ಪ್ರಯೋಗಾಲಯ’ದ ನೆರವಿನಿಂದ ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಯೂ ಇಲ್ಲಿ ಸಾಧ್ಯವಾಗುತ್ತಿದೆ. ‘ಇದರಲ್ಲಿರುವ ಸಾಫ್ಟ್‌ವೇರ್ ಸಹಾಯದಿಂದ ಅವರು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಯಬಲ್ಲರು, ಜೊತೆಗೆ ಉಚ್ಚಾರಣೆಯನ್ನೂ   ಅಭಿವೃದ್ಧಿಪಡಿಸಬಹುದು. ಈ ನಿಟ್ಟಿನಲ್ಲಿ ಶಿಕ್ಷಕರೊಬ್ಬರು ಅವರಿಗೆ ಅಗತ್ಯವಾದ ಸಹಕಾರ  ನೀಡುತ್ತಾರೆ’ ಎನ್ನುತ್ತಾರೆ ಇಂಡಿಯನ್ ಅಕಾಡೆಮಿ ಎಜಿಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಟಿ. ಭಾರತಿ.‘ತಮ್ಮ ದೇಶ ಬಿಟ್ಟು ಒಮ್ಮೆಲೆ ಭಾರತಕ್ಕೆ ಬಂದಾಗ ಅಲ್ಲೊಂದು ‘ಸಾಂಸ್ಕೃತಿಕ ಆಘಾತ’ವೇ ಸಂಭವಿಸುತ್ತದೆ. ನಮ್ಮದು ಸಂಪ್ರದಾಯದ ಸಮಾಜವಾದರೆ ಅವರದ್ದು ಮುಕ್ತವಾದ ಸಮಾಜ, ಅದನ್ನು ಮನಗಂಡು ನಮ್ಮ ಸಂಸ್ಕೃತಿಯನ್ನು ಗೌರವಿಸಲು ಅವರಿಗೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ’ ಎನ್ನುತ್ತಾರೆ ಸಂಸ್ಥೆಯ ಅಂತರರಾಷ್ಟ್ರೀಯ ವಿದ್ಯಾರ್ಥಿ ಸಮೂಹದ ಸಂಯೋಜಕರಾದ ಪ್ರೊ. ಪಿ. ಕೇಶವ್‌ದಾಸ್.  ಇದೇ ವೇಳೆ ಕಲಿಸುವ ವಿಧಾನ ಮತ್ತು ಕಲಿಕೆಯ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ ಎನ್ನುವುದು ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಜೆಸೆಯ್ಯಾ ಸೆಲ್ವಂ ಅವರ ಅಭಿಪ್ರಾಯ.‘ನಮ್ಮ ಸಂವಹನ ವಿಧಾನಕ್ಕೆ ಅವರು ಒಗ್ಗುವಂತೆ ಮಾಡುವುದೇ ದೊಡ್ಡ ಸವಾಲಾಗಿದೆ. ಶಿಸ್ತಿನ ವಾತಾವರಣ ಕೂಡ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡುತ್ತದೆ’ ಎನ್ನುತ್ತಾರವರು.ವಿದ್ಯಾರ್ಥಿಗಳಿಗೂ ಹೇಳುವಂತದ್ದು ಬಹಳಷ್ಟಿದೆ. ‘ಯಾವುದೇ ಸಮಸ್ಯೆ ಇರಲಿ, ಅದು ಕ್ಯಾಂಪಸ್‌ನದ್ದೇ ಆಗಿರಲಿ ಅಥವಾ ಹೊರಗಿನದ್ದೇ ಆಗಿರಲಿ. ಅಧ್ಯಾಪಕರೊಂದಿಗೆ  ಹೇಳಿಕೊಳ್ಳುವಷ್ಟು ಸ್ವಾತಂತ್ರ್ಯ ನಮಗಿದೆ. ಇಂಥ ಸೌಹಾರ್ದ ಮಾತುಕತೆಯೇ ನಾವು ಇಲ್ಲಿನ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವಂತೆ ಮಾಡಿತು’ ಎನ್ನುತ್ತಾರೆ ತಾಂಜಾನಿಯಾದ ಜೆಸ್ಸಿಕಾ ಆರ್. ಇದೇ ವೇಳೆ ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೂ ಕೂಡ ವಿದ್ಯಾರ್ಥಿಗಳ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾದದ್ದು ಅಗತ್ಯ ಎನ್ನುತ್ತಾರೆ ಇರಾನ್‌ನ ಹಮೀದ್.‘ಥಿಯರಿಗಿಂತ ಪ್ರಾಕ್ಟಿಕಲ್ ಹೆಚ್ಚಾಗಿರಬೇಕು. ಹೆಚ್ಚುವರಿ ತರಗತಿಗಳು ಮತ್ತು ಪ್ರಾಜೆಕ್ಟ್ ವರ್ಕ್‌ಗಳಿಂದಾಗಿ ನಮಗೆ ಬೇರೆ ವಿಷಯಗಳತ್ತ ಗಮನಹರಿಸಲು ಸಮಯ ದೊರೆಯುವುದಿಲ್ಲ’ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.‘ಶಿಕ್ಷಣದ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಆದರೆ ಆಶ್ಚರ್ಯದ ವಿಷಯವೆಂದರೆ ವಿದೇಶಿಯರು ಇಲ್ಲಿ ಶೋಷಣೆಗೆ ಒಳಗಾಗುವುದು. ಆಟೋ ಡ್ರೈವರ್‌ಗಳೇ ಆಗಿರಲಿ, ಪೊಲೀಸ್ ಅಧಿಕಾರಿಗಳೇ ಆಗಿರಲಿ ಅಥವಾ ಬಸ್ ಕಂಡಕ್ಟರ್‌ಗಳೇ ಆಗಿರಲಿ.. ಅಥವಾ ಶಾಪಿಂಗ್‌ಗೇ ಹೋಗಲಿ, ಎಲ್ಲೇ ಹೋಗಲಿ, ನಾವು ವಿದೇಶೀಯರು ಮೋಸಕ್ಕೊಳಗಾಗುತ್ತೇವೆ. ವಿದೇಶಿ ನೋಂದಣಿ ಕಚೇರಿಯಲ್ಲೂ ನಾವು ಕಿರುಕುಳಕ್ಕೆ ಒಳಗಾಗುತ್ತೇವೆ’ ಎನ್ನುತ್ತಾರೆ ಇರಾನ್‌ನ ಮಸ್ತಾನೇ.

 

ಈ ವಿದೇಶಿ ವಿದ್ಯಾರ್ಥಿಗಳು ಇಲ್ಲಿಯ ಆಹಾರವನ್ನೂ ಇಷ್ಟಪಟ್ಟಿದ್ದಾರೆ. ಬಟರ್ ಚಿಕನ್, ಮಸಾಲಾ ದೋಸಾ, ಚಿಕನ್ ಟಿಕ್ಕಾ ಮಸಾಲಾ ಎಲ್ಲವೂ ಈ ವಿದ್ಯಾರ್ಥಿಗಳಿಗೆ ತುಂಬಾ ಇಷ್ಟ. ‘ಬೆಂಗಳೂರು ನಗರದೊಂದಿಗೆ ಹೊಂದಿಕೊಳ್ಳುವಲ್ಲಿ ಭಾರತೀಯ ವಿದ್ಯಾರ್ಥಿಗಳ ನೆರವು ಮರೆಯಲಾರದ್ದು. ಇಲ್ಲಿನ ರುಚಿಯಾದ ಆಹಾರವನ್ನು ಪರಿಚಯಿಸಿದವರು ಅವರೇ. ಅವರಿಂದಲೇ ಹೊಸ ಶಾಪಿಂಗ್ ಅನುಭವಗಳೂ ನಮಗಾಗಿವೆ. ಅಷ್ಟೇ ಅಲ್ಲ, ಪಾಠದ ವಿಷಯದಲ್ಲೂ ಅವರು ನೆರವು ನೀಡುತ್ತಾರೆ’ ಐವರಿಕೋಸ್ಟಾದ ಝಡ್ ಬಾಯರೋ ಖುಷಿಯಿಂದಲೇ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry