ಮಂಗಳವಾರ, ಮಾರ್ಚ್ 2, 2021
23 °C
ಕೊಪ್ಪಳ: ಅರಣ್ಯ ಶಿಕಾರಿ ಜನಾಂಗದ ದಯನೀಯ ಬದುಕು, ಅಳಲಿನ ಧ್ವನಿ

ನಾವು ಕಳ್ಳರಲ್ಲ...ಯಾರೂ ನಂಬಲ್ಲ...

ಪ್ರಜಾವಾಣಿ ವಾರ್ತೆ/ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ನಾವು ಕಳ್ಳರಲ್ಲ...ಯಾರೂ ನಂಬಲ್ಲ...

ಕೊಪ್ಪಳ: ನಮ್ ಏರಿಯಾನಾ ಕಳ್ಳರ ಕೇರಿ ಅಂತ ಕರೀತಾರ‌್ರಿ... ನೋಡ್ರಿ ಕಳ್ಳರ ಮನೆ ಹಿಂಗಿರುತ್ತಾ? ದುಡಿದು ತಿನ್ನೋ ಮಂದಿ ನಾವು. ನಮ್ಮನ್ನು ಕಳ್ರು ಅಂತಾರ‌್ರಿ... ಎಂದು 70ರ ಹರೆಯದ ಹಿರಿಯಜ್ಜ ಗಾಂಗ್ಲಿ ಕಣ್ಣೀರಿಟ್ಟರು.- ಇದು ನಗರದ ಅರಣ್ಯ ಶಿಕಾರಿ (ಹರಿಣ್ ಶಿಕಾರ್) ಜನಾಂಗದವರು ಅನುಭವಿಸುತ್ತಿರುವ ದಯನೀಯ ಸ್ಥಿತಿ. ಇಲ್ಲಿನ ಸಜ್ಜೆ ಹೊಲ ಪ್ರದೇಶದಲ್ಲಿ ಪುಟ್ಟ ಪುಟ್ಟ ಮನೆಗಳಲ್ಲಿ ಈ ಆದಿವಾಸಿ ಜನಾಂಗದ ಮಂದಿ ಬದುಕುತ್ತಿದ್ದಾರೆ. ನೀರು, ವಿದ್ಯುತ್ ಮೂಲಸೌಲಭ್ಯಗಳಿಂದ ವಂಚಿತವಾಗಿ ಅತ್ತ ಪರಿಪೂರ್ಣ ಶಿಕ್ಷಣವೂ ಇಲ್ಲದೇ  ನಾಗರಿಕರ ನಡುವೆ ಇದ್ದೂ ನಾಗರಿಕರಂತೆ ಬಾಳಲಾಗದ ಪರಿಸ್ಥಿತಿ ಇಲ್ಲಿನವರದ್ದು.ಅರಣ್ಯ ಶಿಕಾರಿ ಜನಾಂಗ ಹೆಸರೇ ಹೇಳುವಂತೆ ಇವರು ಕಾಡಿನಲ್ಲಿ ಬೇಟೆ, ಕಾಡು ಉತ್ಪತ್ತಿ ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಮಂದಿ. ನಗರದಲ್ಲಿ ಇವರ 37 ಕುಟುಂಬಗಳಲ್ಲಿ ಸುಮಾರು 150 ಮಂದಿ ಇದ್ದಾರೆ. ಗುಜರಾತಿ- ಲಂಬಾಣಿ ಮಿಶ್ರಿತ ಭಾಷೆ ಮಾತನಾಡುತ್ತಾರೆ. ಶಿಕ್ಷಣ, ಸಂಸ್ಕಾರದ ಕೊರತೆಯಿಂದ ಈ ಜನಾಂಗದ ಹಲವರು ಅಪರಾಧ ಕೃತ್ಯಗಳಲ್ಲಿ ತೊಡಗಿ ನಿರಂತರ ಪೊಲೀಸರ ಅತಿಥಿಯಾಗುತ್ತಾರೆ. ಒಮ್ಮಮ್ಮೆ ಅಮಾಯಕರೂ ಏಟು ತಿಂದದ್ದು ಇದೆ. ಇದೀಗ ಇಲ್ಲಿನ ಐವರು ಯುವಕರು ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.ಸುರೇಶ್ ಪ್ರಕರಣ: ಇತ್ತೀಚೆಗೆ ಗದಗ ಪೊಲೀಸರು ನಗರದ ಪೊಲೀಸರ ನೆರವಿನೊಂದಿಗೆ ಸುರೇಶ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಾಗೆ ವಾಪಸಾದ ಸುರೇಶ ಗಾಯಾಳುವಾಗಿ ಆಸ್ಪತ್ರೆ ಸೇರಿದ್ದಾನೆ. ವಾಸ್ತವ ಸಂಗತಿ ಏನು ಎಂಬುದನ್ನು ಸುರೇಶನಾಗಲಿ, ಪೊಲೀಸರಾಗಲಿ ಸ್ಪಷ್ಟಪಡಿಸುತ್ತಿಲ್ಲ. ಯಾವುದೇ ಅಪರಾಧ ಕೃತ್ಯಗಳು ಜರುಗಿದಾಗಲೂ ಪೊಲೀಸರ ಮೊದಲ ಕಣ್ಣು ಬೀಳುವುದು ಈ ಜನಾಂಗದವರ ಮೇಲೆ.ಮುಗ್ಧತೆಯ ದುರ್ಬಳಕೆ: ಶಿಕ್ಷಣ ಇಲ್ಲದ ಈ ಜನರ ಮುಗ್ದತೆಯನ್ನು ಕೆಲವರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳವು, ಅಪರಾಧ ಪ್ರಕರಣಗಳಿಗೆ ಪ್ರೇರೇಪಿಸುತ್ತಿದ್ದಾರೆ.  ಅಂಥ ಕೃತ್ಯಗಳಲ್ಲಿ ತೊಡಗಿದ ಇಲ್ಲಿನ ಮಂದಿಯನ್ನು ಸಮಾಜ ಕೀಳಾಗಿ ಕಾಣುತ್ತಿದೆ. ತಿಂಗಳಿಗೆ ಮೂರು ನಾಲ್ಕು ಬಾರಿಯಾದರೂ ಪೊಲೀಸರ ಭೇಟಿ ಇಲ್ಲಿ ಸಾಮಾನ್ಯ ಎನ್ನುತ್ತಾರೆ ಯುವಕ ಮಲ್ಲೇಶ.ರೇಷನ್‌ಕಾರ್ಡ್, ಮನೆ ಇಲ್ಲ:  ನಿರ್ಲಕ್ಷ್ಯಕ್ಕೆ ಒಳಗಾದ ಈ ಜನಾಂಗಕ್ಕೆ ರೇಷನ್ ಕಾರ್ಡ್ ಅಡುಗೆ ಅನಿಲ ಸಂಪರ್ಕ ಇಲ್ಲ. ಹೊಸದಾಗಿ ನಿವೇಶನ ನೀಡುವಂತೆ ಹಲವು ಬಾರಿ ಜಿಲ್ಲಾಡಳಿತ, ಈ ಹಿಂದಿನ ವಸತಿ ಸಚಿವರು, ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಅದಿನ್ನೂ ಕಾರ್ಯಗತ ಆಗಿಲ್ಲ. ಯಾವ ಹೋರಾಟ ಸಂಘಟನೆಯೂ ಇವರ ಪರವಾಗಿ ಪ್ರಬಲವಾದ ಧ್ವನಿ ಎತ್ತಿಲ್ಲ. ಇವರು ನಿರ್ದಿಷ್ಟವಾಗಿ (ಸರ್ಕಾರಿ ದಾಖಲೆ ಪ್ರಕಾರ) ಯಾವ ಜಾತಿಗೆ ಸೇರಿದವರು ಎಂಬ ಸ್ಪಷ್ಟತೆ ಇಲ್ಲದ ಕಾರಣ ಯಾವ ಸೌಲಭ್ಯವೂ ಸಿಕ್ಕಿಲ್ಲ. ಪುಟ್ಟ ಮನೆಗಳ ಕತ್ತಲೆ ಕೋಣೆಗಳಲ್ಲಿ ಇವರ ಬದುಕು ಸಾಗಿದೆ ಎನ್ನುತ್ತಾರೆ ಈ ವಾರ್ಡ್‌ನ ನಗರಸಭಾ ಸದಸ್ಯೆ ಸರಿತಾ ಸುಧಾಕರ್ ಹೊಸಮನೆ.ಅಂಗನವಾಡಿಯೂ ಅಲಭ್ಯ: ಇಲ್ಲಿ ಪುಟ್ಟ ಮಕ್ಕಳಿಗೆ ಸಮೀಪದ ಅಂಗನವಾಡಿಯಲ್ಲಿಯೂ ಪ್ರವೇಶವಿಲ್ಲ. ಕ್ಷುಲ್ಲಕ ಕಾರಣಕ್ಕಾಗಿ ಅಂಗನವಾಡಿ ಕಾರ್ಯಕರ್ತೆ ಮತ್ತು ಇಲ್ಲಿನ ಮಹಿಳೆಯರ ನಡುವೆ ನಡೆದ ಕಲಹ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಮೊಮ್ಮಗಳನ್ನು ಅಪ್ಪಿಕೊಂಡು ನುಡಿದರು ಗಿರಿಜಾ.ದ್ಯಾಮವ್ವನ ಗುಡಿಯ `ನಂದಾದೀಪ': ಇಲ್ಲಿ ಅಕ್ಷರದ ಹಣತೆ ಬೆಳಗಿಸುವ ಪುಟ್ಟ ಪ್ರಯತ್ನ ನಡೆದಿದೆ. ನಂದಾದೀಪ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಗರಸಭಾ ಸದಸ್ಯ ಪ್ರಾಣೇಶ್ ಮಹೇಂದ್ರಕರ್ ನೇತೃತ್ವದಲ್ಲಿ ಸಂಜೆ ವೇಳೆ ಇದೇ ಜನಾಂಗದವರಿಗೆ ಸೇರಿದ ಸೀಮಿ ದ್ಯಾಮವ್ವನ ಗುಡಿಯ ಆವರಣದಲ್ಲಿ ಅನೌಪಚಾರಿಕ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಅಲ್ಲಿಯೇ ಓದು ಬರಹ ಕಲಿಯುತ್ತಿದ್ದಾರೆ.ಇನ್ನೂ ಕಾಲ ಮಿಂಚಿಲ್ಲ: ನಗರಸಭೆಗೆ ಹೊಸ ಆಡಳಿತ ಅಸ್ತಿತ್ವಕ್ಕೆ ಬರಲಿದೆ. ರಾಜ್ಯ ಸರ್ಕಾರವೂ ಬದಲಾದ ಸನ್ನಿವೇಶದಲ್ಲಿ ಈ ಜನಾಂಗಕ್ಕೊಂದು ಸೂರು - ನೀರು ಒದಗಿಸಬೇಕು. ವಿನಾಕಾರಣ ಪೊಲೀಸ್ ಹಿಂಸೆ ನಿಲ್ಲಬೇಕು. ಅವರು ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಆಡಳಿತ ವ್ಯವಸ್ಥೆ, ಸಮಾಜ, ನಗರದಲ್ಲಿರುವ ಪ್ರಭಾವಿ ಸಮಾಜಮುಖಿ ಮಠಗಳು ಸ್ಪಂದಿಸಬೇಕು ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಯ ಮುಖಂಡ ಬಸವರಾಜ ಶೀಲವಂತರ್.

ಮಟ್ಕಾ `ದೊರೆ'ಯ ಅಧಿಪತ್ಯ

ಇಲ್ಲಿನ ಜನರನ್ನು ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುವ ಮಂದಿ ಇದ್ದಾರೆ. ಸುರೇಶ್ ಪ್ರಕರಣದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರ ವಿರುದ್ಧ ಆರೋಪ ಮಾಡುತ್ತಿರುವವರ ಹಿಂದೆ `ನವಜಾತ' ಪಕ್ಷವೊಂದರಿಂದ ಆಯ್ಕೆಯಾದ ನಗರಸಭಾ ಸದಸ್ಯೆಯೊಬ್ಬರ ಪತಿಯ ಕೈವಾಡ ಇದೆ. ಅವರು ನಡೆಸುತ್ತಿರುವ ಮಟ್ಕಾ ವ್ಯವಹಾರದ ವಿರುದ್ಧ ಪೊಲೀಸರು ಬಿಗಿ ಕ್ರಮ ಕೈಗೊಳ್ಳಲು ಮುಂದಾದಾಗ ಇಲ್ಲಿನ ಮುಗ್ದ ಜನರನ್ನು ಪೊಲೀಸರ ವಿರುದ್ಧ ಎತ್ತಿ ಕಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.