ಸೋಮವಾರ, ಜೂನ್ 21, 2021
30 °C

ನಾವು ಕಾಂಗ್ರೆಸ್ ಗುಲಾಮರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಬಿಜೆಪಿ ಅಭ್ಯರ್ಥಿಗೆ ಪರೋಕ್ಷವಾಗಿ ಸಹಾಯ ಮಾಡಲು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಆರೋಪಿಸುವ ಕಾಂಗ್ರೆಸ್ ಬಿಜೆಪಿಯ ಮತ್ತೊಂದು ಬಣದೊಂದಿಗೆ ಇರುವ ಆಂತರಿಕ ವ್ಯವಹಾರ, ಬಿ.ಎಸ್ ಯಡಿಯೂರಪ್ಪ ಅವರ ಮೃದು ಧೋರಣೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಇಲ್ಲಿ ಪ್ರಶ್ನಿಸಿದರು.ಕುಂದಾಪುರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ನಿಲುವಿನ ಜೆಡಿಎಸ್ ಪಕ್ಷದ ಸಹಾಯವಿಲ್ಲದೆ ಇದ್ದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಥಾನ ದೊರಕುವುದು ಸಾಧ್ಯವಿರಲಿಲ್ಲ.ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಯಿಂದ ನಡೆದ ಚುನಾವಣೆಯಲ್ಲಿ 10 ಸ್ಥಾನ ಗೆಲ್ಲಲು ಸಹಾಯ ನೀಡಿದ ಜೆಡಿಎಸ್ ನಿಲುವಿಗೆ ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಆ ಪಕ್ಷದ ಮುಖಂಡರು ಸ್ವಷ್ಟ ಪಡಿಸಬೇಕು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕಿತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾವೇನು ಕಾಂಗ್ರೆಸ್ ಗುಲಾಮರಲ್ಲ, ದೆಹಲಿಯ ಹೈಕಮಾಂಡ್ ತೀರ್ಮಾನಗಳನ್ನು ಪಾಲಿಸುವ ಅಡಿಯಾಳುಗಳಾಗಬೇಕಾದ ಅನಿವಾರ್ಯತೆ ನಮಗಿಲ್ಲ ಎಂದು ಪ್ರತಿಕ್ರಿಯಿಸಿದರು.ಡಿನೋಟಿಫಿಕೇಶನ್ ಪ್ರಕರಣವೊಂದರಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಅವರ ಕಡೆಯವರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸುವ ಕಾಂಗ್ರೆಸ್ ಮುಖಂಡರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸತ್ತವರ ಹೆಸರಿನಲ್ಲಿ ಭೂ ಪರಿವರ್ತನ ಪ್ರಕ್ರಿಯೆ ಕೈಬಿಟ್ಟಿರುವ ವಿವರ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.ರಾಜ್ಯ ಬಿಜೆಪಿಯಲ್ಲಿ ಈಗಾಗಲೆ ಆಗಿರುವ ಎರಡು ಬಣಗಳಿಂದಾಗುವ ಗೊಂದಲಗಳಿಂದಾಗಿ ಕಾರ್ಯಕರ್ತರು ಹೈರಾಣಾಗಿದ್ದಾರೆ. ಒಂದು ಬಣ ಕಾಂಗ್ರೆಸ್‌ನೊಂದಿಗೆ ಒಳಒಪ್ಪಂದ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಬಹಿರಂಗ ಪಡಿಸಲಿ. ಸರ್ಕಾರ ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳದೆ ಇದ್ದುದರಿಂದ ರಾಜ್ಯದಲ್ಲಿ ಕೆಲವು ಸಂಸ್ಥೆಗಳು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಕಾನೂನು-ಸುವ್ಯವಸ್ಥೆ ನಿರ್ವಹಿಸಲಾಗದ ಗೃಹ ಸಚಿವರು ಹಾಗೂ ಕಾನೂನು ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.ಇನ್ನು ಮುಂದೆ ಯಾವುದೇ ಪಕ್ಷದೊಂದಿಗೆ, ಯಾವ ಬಣದೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ಅವರು ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷ, ಜೆಡಿಎಸ್ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದರು.ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತ ವಿರೋಧಿ ನಿಲುವಿನಿಂದಾಗಿ ಮತದಾರರು ಈ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದರು.ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಶಾಸಕರಾದ ಪುಟ್ಟರಾಜು, ಪುಟ್ಟೇ ಗೌಡ, ಮಾಜಿ ಶಾಸಕ ಮುದ್ದು ಹನುಮೇಗೌಡ, ಅಭ್ಯರ್ಥಿ ಎಸ್.ಎಲ್ ಬೋಜೇಗೌಡ, ಪಕ್ಷದ ಪ್ರಮುಖರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶ್ರೀಕಾಂತ ಅಡಿಗ, ಕಿಶೋರ ಕುಂದಾಪುರ, ಶಾಲಿನಿ ಶೆಟ್ಟಿ ಕೆಂಚನೂರು, ರಾಧಾದಾಸ್ ಕುಂಭಾಸಿ, ಸಂದೇಶ್ ಭಟ್ ಉಪ್ಪುಂದ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.