ನಾವು ಬೈಕ್ ಬೀಳಿಸಿದೆವು...

7

ನಾವು ಬೈಕ್ ಬೀಳಿಸಿದೆವು...

Published:
Updated:

ಅದನ್ನು ಹೇಗೆ ಹೇಳುವುದು...? ನಾವದನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ಅದು ಹಾಗಾಗಿಬಿಟ್ಟಿತಷ್ಟೇ. ಅದಕ್ಕೆಲ್ಲಾ ಮುಖ್ಯ ಕಾರಣ ಹುಡುಗಿಯರಿಗಿದ್ದ ಕನ್ನಡಿ ನೋಡಿಕೊಳ್ಳುವ ಹುಚ್ಚು. ಇದರಲ್ಲಿ ನನ್ನದೇನೂ ಪಾಲಿಲ್ಲವಾದರೂ ವಾಸ್ತವ ನನಗೆ ಗೊತ್ತಿದ್ದರೂ ಅದನ್ನು ಮುಚ್ಚಿಟ್ಟೆ ಅನಿಸುತ್ತದೆ.ಆಗಷ್ಟೇ ದಸರಾ ರಜೆ ಮುಗಿದಿತ್ತು. ವಿದ್ಯಾರ್ಥಿಗಳೆಲ್ಲಾ ಕಾಲೇಜಿಗೆ ಹಿಂದಿರುಗಿದ್ದರೂ ದೂರದ ಊರುಗಳಿಗೆ ಹೋಗಿದ್ದ ಕೆಲ ಪ್ರಾಧ್ಯಾಪಕರಿನ್ನೂ ಬಂದಿರಲಿಲ್ಲ. ಹಾಗಾಗಿ ನಮಗೆ ಕಾಲೇಜ್ ಇದೆ. ಆದರೆ ಕ್ಲಾಸ್‌ಗಳಿರಲಿಲ್ಲ ಎಂಬ ಸಂತೋಷದ ಸ್ಥಿತಿ. ಮಧ್ಯಾಹ್ನದ ನಂತರ ತರಗತಿಗಳೊಂದೂ ಇರಲಿಲ್ಲವಾದ್ದರಿಂದ ಗೆಳತಿಯರ ಜೊತೆಗೆ ಕಾಡು ಹರಟೆ, ಸಣ್ಣ ಪುಟ್ಟ ತರಲೆ ಕೆಲಸಗಳನ್ನು ಮುಗಿಸಿಕೊಂಡೇ ಮನೆ ತಲುಪುತ್ತಿದ್ದೆವು.ಇಂಥದ್ದೇ ಒಂದು ಮಧ್ಯಾಹ್ನ ತರಗತಿ ಇರಲಿಲ್ಲ. ಇನ್ನೇನು ಹೊರಡಬೇಕೆಂದಿದ್ದಾಗ ಶೌಚಾಲಯದೊಳಗೆ ಹೋದೆ. ನನ್ನಿಬ್ಬರು ಗೆಳತಿಯರು ಹೊರಗಿದ್ದರು. ನಾನು ಹೊರಗೆ ಬರುವಷ್ಟರಲ್ಲಿ ಅವರಿಬ್ಬರು ಮಗುಚಿ ಬಿದ್ದ ಬೈಕೊಂದನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದರು. ಇವರೇಕೆ ಬೈಕ್ ಬೀಳಿಸಿದ್ದಾರೆ ಎಂಬುದು ಅರ್ಥವಾಗದೆ ಒಂದು ಕ್ಷಣ ದಂಗಾದರೂ ಅವರು ಬೈಕನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವುದನ್ನು ನೋಡಿದಾಗ ನನಗೆ ನಗು ತಡೆಯಲಾಗಲಿಲ್ಲ.ಒಬ್ಬಳು `ಪ್ಲೀಸ್ ದಿವ್ಯಾ ಹೆಲ್ಪ್ ಮಾಡು~ ಎಂದು ಗೋಗರೆದಳು. ನಾನು ಸಹಾಯ ಮಾಡಿದೆನಾದರೂ ಅದನ್ನು ಮೇಲೆತ್ತಿ ನಿಲ್ಲಿಸಲು ನಮಗಾಗಲಿಲ್ಲ. ಮತ್ತೆ ಉಳಿದದ್ದು ಪಲಾಯನ ಮಾರ್ಗ ಮಾತ್ರ. ಧರಾಶಾಹಿಯಾದ ಬೈಕನ್ನು ಅಲ್ಲಿಯೇ ಉಳಿಸಿ ನಾವು ಅಕ್ಷರಶಃ ಪರಾರಿಯಾದೆವು.ಕಾಲೇಜಿನಿಂದ ಪೇಟೆಗೆ ತೆರಳಲು ಮಾಮೂಲಾಗಿ ಬಳಸುತ್ತಿದ್ದ ದಾರಿಯಲ್ಲಿ ಹೋಗುವುದಕ್ಕೂ ನಮಗೆ ಧೈರ್ಯವಿರಲಿಲ್ಲ. ನನಗೆ ಅಷ್ಟಿಷ್ಟು ಧೈರ್ಯವಿತ್ತಾದರೂ ಬೈಕ್ ಬೀಳಿಸಿದ್ದ ಇಬ್ಬರು ಗೆಳತಿಯರಂತೂ ಇಡೀ ಜಗತ್ತು ತಮ್ಮ ಬೇಟೆಯಾಡುತ್ತಿದೆ ಎಂಬಂತೆ ಗಾಬರಿಯಾಗಿದ್ದರು. ಅವರದ್ದು ಒಂದೇ ವರಾತ- `ಯಾರಾದರೂ ನಮ್ಮನ್ನು ನೋಡಿದ್ದರೇ...?~ಈ ಪ್ರಕರಣದಲ್ಲಿ ನನ್ನ ತಪ್ಪು ಏನಾದರೂ ಇದ್ದರೆ ಅದು ತಪ್ಪು ಮಾಡಿದ ಗೆಳತಿಯರಿಗೆ ತಪ್ಪನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡಿದ್ದು ಮಾತ್ರ. ಆದರೆ ನಾನೂ ಅವರ ಜೊತೆ ಓಡುತ್ತಿದ್ದೆ. ಓಡೋಡುತ್ತಲೇ ಬೈಕ್ ಬಿದ್ದ್ದ್ದದರ ಬಗ್ಗೆ ವಿಚಾರಿಸಿದರೆ ಅವರೂ ಏದುಸಿರು ಬಿಡುತ್ತಲೇ ಉತ್ತರಿಸಿದರು.ಆಗಿದ್ದು ಇಷ್ಟೇ. ಬೈಕ್ ನಮ್ಮ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರದ್ದು. ಪ್ರಾಂಶುಪಾಲರ ಕೊಠಡಿಯ ಹಿಂಬದಿಯಲ್ಲಿ ಅವರು ಬೈಕ್ ನಿಲ್ಲಿಸಿದ್ದರು. ಬೈಕ್‌ನ ಕನ್ನಡಿಯಲ್ಲಿ ಮುಖ ನೋಡುವ ಆಸೆಯಿಂದ ಬೈಕ್‌ಗೆ ಒರಗಿ ನಿಂತು ಕನ್ನಡಿ ತಿರುಗಿಸಿದಾಗ ಅದು ಕೆಳಗುರುಳಿತು.ಬೈಕು ಪ್ರಾಂಶುಪಾಲರ ಕಚೇರಿಯ ಕಿಟಕಿಯಿಂದ ಕಾಣಿಸುತ್ತಿದ್ದುದರಿಂದ ಅದು ಸುರಕ್ಷಿತ ಸ್ಥಳ ಎಂದು ಸಮಾಜಶಾಸ್ತ್ರ ಉಪನ್ಯಾಸಕರು ಭಾವಿಸಿದ್ದರೇನೋ? ಆದರೆ ಅವರ ಅದೃಷ್ಟ ಕೈಕೊಟ್ಟಿತ್ತು. ಆ ಕ್ಷಣದಲ್ಲಿ ಅಲ್ಲಿರಲಿಲ್ಲ. ಅವರೇನಾದರೂ ಇದ್ದಿದ್ದರೆ ನಮಗೆ ನಾವು ಸಿಕ್ಕಿಬೀಳುತ್ತಿದ್ದೆವು. ಅಷ್ಟೇ ಅಲ್ಲ. ಚೆನ್ನಾಗಿ ಬೈಯಿಸಿಕೊಳ್ಳಬೇಕಾಗುತ್ತಿತ್ತು.ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಬಿದ್ದ ರಭಸಕ್ಕೆ ಬೈಕ್‌ನ ಕನ್ನಡಿ ಪುಡಿ ಪುಡಿಯಾಗಿತ್ತು. ಮತ್ತೇನಾಗಿದೆ ಎಂದು ನೋಡುವ ಗೋಜಿಗೆ ನಾವು ಹೋಗಲಿಲ್ಲ. ನಾವಿದ್ದ ಸ್ಥಳ ಕೊಂಚ ಎತ್ತರದಲ್ಲಿ ಇದ್ದುದರಿಂದ ಕೆಲವರಾದರೂ ನಾವು ಮಾಡಿದ ಅನಾಹುತವನ್ನು ನೋಡಿರಬಹುದು ಎಂಬ ಭಯ ನಮ್ಮನ್ನು ಕಾಡಲಾರಂಭಿಸಿತು.ಮರುದಿವಸ ನಾವು ಅಂಜಿಕೆಯಿಂದಲೇ ಕಾಲೇಜಿಗೆ ಬಂದಿದ್ದೆವು. ಅಂದೂ ಸಮಾಜಶಾಸ್ತ್ರ ಉಪನ್ಯಾಸಕರು ತರಗತಿಗೆ ಬಂದಿದ್ದರು. ವಿದ್ಯಾರ್ಥಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಅವರು ಬೈಕ್ ಬಿದ್ದಿದ್ದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸಲಿಲ್ಲ. ಆದರೆ ಆ ದಿನ ಬೈಕ್ ನಿಲ್ಲಿಸುವ ಸ್ಥಳ ಬದಲಾಗಿತ್ತು. ಹತ್ತಿರ ಹೋಗಿ  ನಮ್ಮ ಸಾಹಸದ ಫಲಿತಾಂಶವನ್ನು ಪರಿಶೀಲಿಸಿದೆವು. ಹೊಸ ಮಿರರ್ ಬಂದಿತ್ತು ಎನ್ನುವುದನ್ನು ಬಿಟ್ಟರೆ ಬೈಕ್‌ಗೆ ಬೇರೆ ಹಾನಿಯೇನೂ ಆಗಿರಲಿಲ್ಲ.ನಾನು ಉಪನ್ಯಾಸಕರ ಬಳಿ ನಿಜ ಹೇಳಿ ಬಿಡೋಣ ಎಂದೆ. ಆದರೆ ಬೈಕ್ ಬೀಳಿಸಿದ್ದ ಗೆಳತಿಯರು ಒಪ್ಪಲೇ ಇಲ್ಲ. ಅಂತೂ ನಮಗೆ ಕಾಲೇಜಿನ ಅಂತಿಮ ದಿನ ಬಂದೇ ಬಿಟ್ಟಿತು. ಬೀಳ್ಕೊಡುಗೆ ದಿನದಂದು ಸಮಾಜಶಾಸ್ತ್ರ ಉಪನ್ಯಾಸಕರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದೆವು. ಆಗಲೂ ನಾನು ಈಗಲಾದರೂ ನಾವು ನಿಜ ಹೇಳೋಣ ಎಂದೆ. ಆದರೆ ಗೆಳತಿಯರು ಹೇಳುವುದೇ ಬೇಡವೆಂದರು.ಯಾವ ವಿಷಯವಾದರೂ ಸರಿ ಅದಕ್ಕೆ ಉಪ್ಪು ಖಾರ ಸೇರಿಸಿ  ತರಗತಿಯನ್ನಿಡೀ ನಗೆಗಡಲಿನಲ್ಲಿ ತೇಲಿ ಬಿಡುತ್ತಿದ್ದ ನಾವು ಈ ವಿಷಯವನ್ನು ಮಾತ್ರ ಯಾರಿಗೂ ತಿಳಿಸಲೇ ಇಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry