ಬುಧವಾರ, ಡಿಸೆಂಬರ್ 11, 2019
20 °C

ನಾಸಾ ಪ್ರವಾಸ ಗೆದ್ದ ಅನುದ್ರುತ

Published:
Updated:
ನಾಸಾ ಪ್ರವಾಸ ಗೆದ್ದ ಅನುದ್ರುತ

ಈಗಿನ ಮಕ್ಕಳು ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿರುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಇರುವಾಗಲೇ ಕಂಪ್ಯೂಟರ್ ತಂತ್ರಜ್ಞಾನ, ರೊಬಾಟಿಕ್ಸ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಹೊಂದಿರುತ್ತಾರೆ. ಮತ್ತೆ ಕೆಲವರು ಅಪ್ಪನ, ಅಣ್ಣನ ಬೈಕ್ ಲೀಲಾಜಾಲವಾಗಿ ಓಡಿಸುತ್ತಾರೆ.

ಅದಕ್ಕೆ ನಿದರ್ಶನ ಎಂಬಂತೆ ತಂತ್ರಜ್ಞಾನ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಥಿಂಕ್‌ಲ್ಯಾಬ್ಸ್ ಟೆಕ್ನಾಲಜಿಸ್ ಏರ್ಪಡಿಸಿದ್ದ ರಾಷ್ಟ್ರಮಟ್ಟದ ರೊಬಾಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ 13 ವರ್ಷದ ಬಾಲಕ ದೆಹಲಿ ಪಬ್ಲಿಕ್ ಶಾಲೆಯ ಅನುದ್ರುತ ಮಂಜುನಾಥ್ ಮೊದಲ ಸ್ಥಾನ ಗಳಿಸಿದ್ದಾನೆ.

ಸಿನಿಯರ್ ವಿಭಾಗದಲ್ಲಿ ‘ಡ್ರೈವ್ ಸೇಫ್ಲಿ’ ಎಂಬ ಥೀಮ್ ಮೇಲೆ 7 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಈ ರೊಬಾಟಿಕ್ಸ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಸಂಚಾರ ಸಿಗ್ನಲ್‌ಗಳನ್ನು ಅರ್ಥ ಮಾಡಿಕೊಂಡು ಚಲಿಸುವ ರೋಬಾಟ್ ತಯಾರಿಸಬೇಕಿತ್ತು. ಫ್ಲೈಓವರ್‌ಗಳನ್ನು ದಾಟುವುಟು, ಮತ್ತೊಂದು ವಾಹನ ಓವರ್‌ಟೇಕ್ ಮಾಡುವಾಗ ಸಂದೇಶ ನೀಡುವುದು, ಸಮರ್ಪಕವಾಗಿ ಪಾರ್ಕ್ ಮಾಡುವ ತಂತ್ರಜ್ಞಾನ ಅಳವಡಿಸಬೇಕಿತ್ತು. ಅನುದ್ರುತ ಇದರಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನಗಳಿಸಿದ.

ಜ್ಯೂನಿಯರ್ ವಿಭಾಗದಲ್ಲಿ  4ರಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಅರಿವು ಮೂಡಿಸುವ ‘ಗೊ ಗ್ರೀನ್’ ಥೀಮ್ ಮೇಲೆ ರೊಬಾಟಿಕ್ಸ್  ಸ್ಪರ್ಧೆ ಏರ್ಪಡಿಸಲಾಗಿತ್ತು. ಆ ಪ್ರಶಸ್ತಿ ಮುಂಬೈನ ಗೋಪಿ ಬಿರ್ಲಾ ಶಾಲೆಯ ಅಂಜಲ್ ಪಾರೀಖ್‌ಗೆ ದೊರೆಯಿತು.

ಅನುದ್ರುತ ಮತ್ತು ಅಂಜಲ್‌ಗೆ ಈಗ ಅಮೆರಿಕ ಪ್ರವಾಸದ ಅವಕಾಶ ಲಭ್ಯವಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಡಿಸ್ನಿಲ್ಯಾಂಡ್, ಯುನಿವರ್ಸಲ್ ಸ್ಟುಡಿಯೊ, ಲಿಬರ್ಟಿ ಐಲೆಂಡ್, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್‌ಗಳಿಗೆ ಈ ಮಕ್ಕಳನ್ನು ‘ಥಿಂಕ್‌ಲ್ಯಾಬ್ಸ್’ ಕರೆದೊಯ್ಯಲಿದೆ.

ಪ್ರತಿಕ್ರಿಯಿಸಿ (+)