ನಾ ನಿನಗೆ ನೀ ನನಗೆ ಜೇನಾಗುವ...

7

ನಾ ನಿನಗೆ ನೀ ನನಗೆ ಜೇನಾಗುವ...

Published:
Updated:
ನಾ ನಿನಗೆ ನೀ ನನಗೆ ಜೇನಾಗುವ...

 ಳೆ ಎನ್ನುವುದು ಜೀವನೋತ್ಸಾಹದ ರೂಪಕ. ನೆಲದ ಕಾವನ್ನು ಮಳೆ ತಣಿಸುತ್ತದೆ. ನೆಲದ ಒಡಲಿನಿಂದ ನುಸುಳಿಕೊಂಡ ಬೀಜಗಳು ಕಣ್ತೆರೆದು ಚಿಗುರಾಗುತ್ತವೆ. ಹಚ್ಚ ಹಸಿರಿನಿಂದ ಬೆಟ್ಟ ಬಯಲು ಕಂಗೊಳಿಸುತ್ತದೆ. ಮಣ್ಣು ಘಮ್ಮೆನ್ನುತ್ತದೆ. ಮಣ್ಣ ಕಂಪಿನೊಡನೆ ಸಸ್ಯಗಳ ನರುಗಂಪಿನ ಯುಗಳ. ಹೊಲದಲ್ಲಿನ ಹಸಿರು ಕಾವ್ಯವನ್ನು ನೋಡಿ ರೈತರ ಮೊಗದಲ್ಲಿ ಜೀವಕಳೆ.

ಈ ಪರ್ವ ಕಾಲ ಕೀಟ ಜಗತ್ತಿನ ಪಾಲಿಗೆ ಸಂತಾನೋತ್ಪತ್ತಿಯ ವಸಂತ ಕಾಲ. ಪ್ರಣಯೋನ್ಮಾದದಿ ಬೆರೆಯುವ ಮೈಮರೆಯುವ ಕೀಟಗಳು ತಮ್ಮ ಸುತ್ತಲಿನ ಜಗತ್ತನ್ನೇ ಧಿಕ್ಕರಿಸಿದಂತೆ ಕಾಣುತ್ತವೆ. ಜೀವ ಸಂಕುಲದ ಸಂಧಿಪದಿ ವರ್ಗದ ಚಿಟ್ಟೆ, ಪತಂಗ, ಏರೋಪ್ಲೇನ್ ಚಿಟ್ಟೆ, ದುಂಬಿ, ಕಳ್ಳ ನೊಣ, ಊಜಿ ನೊಣ– ಸೇರಿದಂತೆ ಹಲವು ಕೀಟಗಳು ಮಿಲನದ ಸಲ್ಲಾಪದಲ್ಲಿ ತೊಡಗಿರುವ ಛಾಯಾಚಿತ್ರಗಳು ಇಲ್ಲಿವೆ.

ಈ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಸುಲಭದ ಕೆಲಸವೇನೂ ಅಲ್ಲ. ಮೋಡ ಮುಸುಕಿನ ಮಂದ ಬೆಳಕು, ಹೊಲಗದ್ದೆಗಳ ಇಕ್ಕಟ್ಟು ಬದು, ಕುರುಚಲು ಪೊದೆಗಳ ಪರಿಸರ, ಕಾಡಿನ ಹಸಿರುವ ಮರೆ– ಇಂಥ, ಪರಿಸರದಲ್ಲಿ ಪ್ರಣಯ ಕ್ರಿಯೆಯಲ್ಲಿ ತೊಡಗಿದ ಕೀಟಗಳ ಮಧುಚಂದ್ರವನ್ನು ಅವುಗಳಿಗೆ ರಸಭಂಗವಾಗದಂತೆ ಕ್ಲಿಕ್ಕಿಸಲು ಅಪಾರ ತಾಳ್ಮೆ ಬೇಕು. ನಮ್ಮ ಉತ್ಸಾಹದಿಂದ ಅವುಗಳಿಗೆ ರಸಭಂಗವಾದರೆ, ಮಧುಚಂದ್ರ ಕಂಟಕ ದೋಷಕ್ಕೆ ಒಳಗಾಗಬೇಕಾದೀತು!ನೀರಿನ ಸಮೀಪದಲ್ಲಿ ಫೋಟೊ ತೆಗೆಯುವ ಸಂದಭರ್ದಲ್ಲಿ ಕಾಲುಗಳಿಗೆ ಇಂಬಳ ಅಂಟಿಕೊಳ್ಳುತ್ತವೆ. ‘ಇದು ನಾಚಿಕೆಗೇಡಿನ ಕೆಲಸ’ ಎಂದು ಹೇಳುವಂತೆ, ಮಳೆಹನಿಗಳು ಕ್ಯಾಮೆರಾ ಕಣ್ಣನ್ನು ಒದ್ದೆಯಾಗಿಸುತ್ತವೆ. ಕ್ಯಾಮೆರಾ ರಕ್ಷಿಸಿಕೊಳ್ಳಲು ಛತ್ರಿಯ ಆಸರೆ ಪಡೆದು, ಕೀಟಗಳ ರಸಕ್ಷಣಗಳನ್ನು ದಾಖಲಿಸಿದಾಗ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವಷ್ಟು ಸಾರ್ಥಕ ಭಾವ.ಎಲ್ಲಿಯೋ ಇರುವ ಗಂಡು ಇನ್ನೆಲ್ಲಿಯೋ ಇರುವ ಹೆಣ್ಣನ್ನು ತನ್ನತ್ತ ಸೆಳೆಯಲು ನಾನಾ ತಂತ್ರ ಹೂಡುತ್ತದೆ. ಅವುಗಳ ಮೈಯಿಂದ ಹೊಮ್ಮುವ ಗಂಧ, ಸೂಕ್ಷ್ಮ ತರಂಗ ಗಂಡು ಬೆದೆಗೆ ಬಂದ ಸಂಕೇತವನ್ನು ಹೆಣ್ಣಿಗೆ ರವಾನಿಸುತ್ತದೆ. ಮೋಹಕ ಮೈಮಾಟ, ನೋಟ, ವೈಯಾರದ ನಡೆ– ಇವೆಲ್ಲವೂ ಕೀಟಗಳು ಪರಸ್ಪರ ಸೆಳೆಯಲು ಹೂಡುವ ತಂತ್ರಗಳಾಗಿವೆ.

ಒಂದನ್ನೊಂದು ಆಕರ್ಷಿಸುತ್ತಾ  ತಮ್ಮ ಸಂತಾನಾಭಿವೃದ್ದಿಗೆ ಪೂರ್ವ ಸಿದ್ಧತೆ ನಡೆಸಿ, ನಂತರ ಎರಡು ಜೀವಿಗಳು ‘ನಾ ನಿನಗೆ ನೀ ನನಗೆ ಜೇನಾಗುವ’ ಎಂದು ಹಾಡುತ್ತವೆ. ಕೀಟಗಳ ಮಧುಚಂದ್ರದ ಇಲ್ಲಿನ ಚಿತ್ರಪಟದಲ್ಲಿ ಪ್ರಕೃತಿಯ ಚೆಲುವೂ, ಜೀವವೈವಿಧ್ಯದ ಪಠ್ಯವೂ, ಪರಿಸರದ ತಾಯ್ತನದ ಕುರುಹುಗಳೂ ಇರುವಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry