ನಾ ನಿನ್ನ ಬಿಡಲಾರೆ ಎಂದ... ಅಸಾಧ್ಯ ಹಿಂಸೆ ನೀಡಿದ!

ಬುಧವಾರ, ಜೂಲೈ 17, 2019
30 °C

ನಾ ನಿನ್ನ ಬಿಡಲಾರೆ ಎಂದ... ಅಸಾಧ್ಯ ಹಿಂಸೆ ನೀಡಿದ!

Published:
Updated:

ಮಂಗಳೂರು: ಎಂಫಸಿಸ್ ಕಂಪೆನಿ ಉದ್ಯೋಗಿ ಫಿಲೋಮಿನಾ ಸೆರಾವೊ ಅವರ ಅಪಹರಣ ಪ್ರಕರಣ ಮಂಗಳವಾರ ಸುಖಾಂತ್ಯ ಕಂಡಿದ್ದರೂ ನೆಮ್ಮದಿಯಿಂದಿದ್ದ ಕುಟುಂಬವೊಂದು ಪೊಲೀಸ್ ಠಾಣೆಯ ಕಂಬ ಕಂಬ ಸುತ್ತುತ್ತಾ ಮಾನಸಿಕ ಯಾತನೆ ಅನುಭವಿಸಿದ್ದು ಬೆಳಕಿಗೆ ಬಂದಿದೆ. ನಿನ್ನ ಸಂಗವೇ ಬೇಡ ಎಂದವಳಿಗೆ ಪತಿಯೇ ಪೀಡೆಯಾಗಿ ಕಾಡಿ ಇದೀಗ ಬೇಡಿ ಹಾಕಿಸಿಕೊಂಡಿದ್ದಾನೆ.

ಆರೋಪಿ ಪತಿ ಕಿರಣ್ ಜಾನ್ಸನ್ ಪಿರೇರಾ ಮತ್ತು ಸಹಚರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ರಾತ್ರಿ ಬಹಳ ಹೊತ್ತಿನವರೆಗೆ ಆರೋಪಿಗಳಿಂದ ಮತ್ತು ಅಪಹರಣಕ್ಕೊಳಗಾಗಿದ್ದ ಮಹಿಳೆಯಿಂದ ಹೇಳಿಕೆ ಪಡೆಯುವ ಕಾರ್ಯ ನಡೆಯುತ್ತಿದ್ದುದರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಹಲವು ವರ್ಷಗಳಿಂದ ಕಾಡಿ ಹಿಂಸಿಸುತ್ತಿದ್ದ ಕಿರಣ್, ಸೋಮವಾರ ಅಪಹರಿಸುವ ಮಟ್ಟಕ್ಕೆ ಹೋಗಿದ್ದಕ್ಕೆ ಫಿಲೋಮಿನಾ ಕುಟುಂಬ ಕಂಗಾಲಾಗಿ ಹೋಗಿದೆ. ಈ ಹಿಂದೆ ಆತನ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಯೇ ಫಿಲೋಮಿನಾ ಅವರ ಇಂದಿನ ಸ್ಥಿತಿಗೆ ಕಾರಣ ಎಂಬ ಸಿಟ್ಟು ಅವರಲ್ಲಿ ಮಡುಗಟ್ಟಿತ್ತು. ಅಪಹರಣಕ್ಕೆ ಒಳಗಾಗಿ ಒಂದು ಇಡೀ ರಾತ್ರಿ ದುಷ್ಕರ್ಮಿಗಳ ಜತೆಗೆ ಇದ್ದರೂ, ಫಿಲೋಮಿನಾ ಅವರ ಜೀವಕ್ಕೆ ಅಪಾಯ ಆಗದಿರುವುದಕ್ಕೆ ಒಂದು ರೀತಿಯ ನೆಮ್ಮದಿಯೂ ಅವರ ಅಪ್ಪ, ಅಮ್ಮ, ಇಬ್ಬರು ತಂಗಿಯಂದಿರು ಮತ್ತು ಬಂಧುಗಳಲ್ಲಿತ್ತು.

ಒಲ್ಲದ ಪತ್ನಿಯನ್ನು ಸೋಮವಾರ ರಾತ್ರಿ ಟಾಟಾ ಸಫಾರಿ ಕಾರಿನಲ್ಲಿ ಬಲವಂತವಾಗಿ ಹೊನ್ನಾವರಕ್ಕೆ ಕರೆದೊಯ್ದಿದ್ದ ಕಿರಣ್, ಮಧ್ಯರಾತ್ರಿ ಅಲ್ಲಿಂದಲೇ ಫಿಲೋಮಿನಾ ಅವರ ಮನೆಯವರಿಗೆ ಕರೆ ಮಾಡಿದ್ದ. ಇದರ ಜಾಡು ಹಿಡಿದ ಪೊಲೀಸರು ಆತ ಇರುವ ಸ್ಥಳ ಪತ್ತೆ ಮಾಡಿದ್ದರು. ಆಗ ಅಪಹರಣದ ಸುದ್ದಿಯೂ ರಾಜ್ಯದೆಲ್ಲೆಡೆ ಪ್ರಸಾರವಾಗಿತ್ತು.

ತನ್ನ ಸಫಾರಿ ವಾಹನದ ಬದಲಿಗೆ ಕ್ವಾಲಿಸ್ ವಾಹನವನ್ನು ನಿಗದಿ ಮಾಡಿಕೊಂಡಿದ್ದ ಆತ ಮುಂಬೈಗೆ ತೆರಳುವ ಸಂಚು ರೂಪಿಸಿದ್ದ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಆತನ ಮನವೊಲಿಸಿ ವಾಪಸ್ ಬರುವಂತೆ ಮಾಡಿದರು ಎಂದು ಹೇಳಲಾಗಿದೆ.

ಮಂಗಳವಾರ ಬೆಳಿಗ್ಗೆ ಆತ ನೆಲ್ಯಾಡಿಯಿಂದ ಕರೆ ಮಾಡಿದ. ಬಳಿಕ ಪೊಲೀಸರ ಸಂಪರ್ಕಕ್ಕೂ ಸಿಕ್ಕಿದ. ಬಳಿಕ ಪೊಲೀಸರು ಫಿಲೋಮಿನಾ ಸಹಿತ ಆರೋಪಿಗಳನ್ನೆಲ್ಲ ಮಂಗಳೂರಿಗೆ ಕರೆ ತಂದರು. ಸಂಜೆ ಬಹಳ ಹೊತ್ತಿನವರೆಗೆ ಆರೋಪಿಗಳಿಂದ ಮತ್ತು ಫಿಲೋಮಿನಾ ಅವರಿಂದ ಹೇಳಿಕೆ ಪಡೆದ ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ಲೇಡಿಘೋಷನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪದೇ ಪದೇ ಹಿಂಸೆ: ಮದುವೆಯಾದ ದಿನದಿಂದಲೇ ಫಿಲೋಮಿನಾಗೆ ಕಿರುಕುಳ ನೀಡಲಾರಂಭಿಸಿದ್ದ ಕಿರಣ್ ಒಂದು ವರ್ಷ ಹೇಗೋ ಸಂಸಾರ ನಡೆಸಿದ್ದ. ಆದರೆ ಆತನ ಕಿರುಕುಳ ತಾಳಲಾರದೆ ತವರಿಗೆ ಮರಳಿದ್ದರು ಎಂದು ಪೋಷಕರು ತಿಳಿಸಿದ್ದಾರೆ.

ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಆತ ಆಕೆಯನ್ನು ತವರಿನವರೂ ಭೇಟಿ ಮಾಡಬಾರದು ಎಂಬಂತಹ ವಿಚಿತ್ರ ಮನೋಭಾವ ಬೆಳೆಸಿಕೊಂಡಿದ್ದ. ಆತನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಫಿಲೋಮಿನಾ ತಂಟೆಗೆ ಹೋಗದಂತೆ ಕಿರಣ್‌ಗೆ ನ್ಯಾಯಾಲಯವೂ ನಿರ್ದೇಶನ ನೀಡಿತ್ತು ಎನ್ನಲಾಗಿದೆ. ಕಿರಣ್ ವಿರುದ್ಧ ಫಿಲೋಮಿನಾ ನೀಡಿದ್ದ ಒಟ್ಟು ದೂರುಗಳ ಸಂಖ್ಯೆ 20ಕ್ಕೆ ಏರಿತ್ತು. ಪತಿಯ ಹಿಂಸೆ ತಾಳಲಾರದೆ ಆಕೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು. ಬುಧವಾರ ಈ ಅರ್ಜಿಯ ಬಗ್ಗೆ ಕಿರಣ್‌ನ ವಿಚಾರಣೆ ನಡೆಯುವುದಿತ್ತು. ಈ ವಿಚಾರಣೆ ತಪ್ಪಿಸುವ ಸಲುವಾಗಿಯೇ ಎರಡು ದಿನ ಮೊದಲೇ ಕಿರಣ್ ಆಕೆಯನ್ನು ಅಪಹರಿಸಿದ್ದ ಎಂದು ಹೇಳಲಾಗಿದೆ.

ಆತ ಪತ್ನಿಗಾಗಿ ಹುಚ್ಚನಾಗಿದ್ದನೇ?

ಪತ್ನಿ ಬಗ್ಗೆ ಅತಿಯಾದ ಪ್ರೀತಿ, ವ್ಯಾಮೋಹ ತಾಳಿದ ವ್ಯಕ್ತಿ ಆಕೆಗೆ ಮಾನಸಿಕ, ದೈಹಿಕ ಹಿಂಸೆ ಕೊಡುತ್ತಾನೆ. ಆಕೆ ತನ್ನೊಂದಿಗೇ ಇರಬೇಕು ಎಂಬ ಮನೋಭಾವ ಆತನಲ್ಲಿ ದಟ್ಟವಾಗಿರುತ್ತದೆ. ಹಿಂದಿಯ ಡರ್ ಸೇರಿದಂತೆ ಇಂಥ ಕತೆಯನ್ನೇ ನೆನಪಿಸುವ ಸಿನಿಮಾಗಳು ಸಾಕಷ್ಟು ಬಂದಿವೆ. ಫಿಲೋಮಿನಾ-ಕಿರಣ್ ಪ್ರಕರಣ ನೋಡಿದರೆ ಸಿನಿಮಾ ಕತೆ ಕಾಲ್ಪನಿಕ ಅಲ್ಲ ಎಂಬುದು ಸಾಬೀತಾಗುವಂತಿದೆ.

ಆತನ ವರ್ತನೆಗಳು, ಆತ ಮಾಡಿಕೊಂಡ ಸಿದ್ಧತೆಗಳನ್ನೆಲ್ಲ ನೋಡಿದರೆ ಈ ಮಾತಿಗೆ ಪುಷ್ಠಿ ಸಿಗುವಂತಿದೆ. ಪತ್ನಿಯನ್ನು ಅಪಹರಿಸುವ ಆತನಿಗೆ ಆಕೆಯನ್ನು ಕೊಲ್ಲಲು ಖಂಡಿತ ಮನಸ್ಸಿಲ್ಲ. ತಾನು ಎಲ್ಲಿ ಇದ್ದೇನೆ ಎಂದು ಹೇಳಲು ಸಹ ಹಿಂಜರಿಕೆ ಇಲ್ಲ. ಹೇಗಾದರೂ ಸರಿ, ಆಕೆ ತನ್ನ ಜತೆಯಲ್ಲೇ ಇರಬೇಕು ಎಂಬ ಮಾನಸಿಕ ಒತ್ತಡದಿಂದ ಆತ ಬಳಲುತ್ತಿದ್ದನೇ ಎಂಬ ಸಂಶಯವೂ ಮೂಡುತ್ತಿದೆ ಎಂಬುದು ತನಿಖೆ ನಡೆಸಿರುವ ಪೊಲೀಸ್ ಮೂಲಗಳ ಮಾಹಿತಿ.

ಪತ್ನಿಯನ್ನು ಬಿಟ್ಟು ಇರಬಾರದು ಎಂದೇ ಆತ ನೆಲ್ಯಾಡಿಯಲ್ಲಿ ತಿಂಗಳಿಗೆ 3,500 ರೂಪಾಯಿ ಬಾಡಿಗೆಗೆ ಮನೆ ಗುರುತಿಸಿದ್ದ. ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಯನ್ನು ಸಂಗ್ರಹಿಸಿಟ್ಟಿದ್ದ. ಮಂಗಳವಾರ ಬೆಳಿಗ್ಗೆ ನೆಲ್ಯಾಡಿಗೆ ತಲುಪಿದ್ದ ಆತ ಫಿಲೋಮಿನಾ ಅವರನ್ನು ಅದೇ ಮನೆಯೊಳಗೆ ಕೂಡಿ ಹಾಕಿದ್ದ. ಅಲ್ಲಿ ಆಕೆಗೆ ಮತ್ತೆ ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಹೇಳಲಾಗಿದೆ.

ಬೆನ್ನು ಬಿಡದ ಬೇತಾಳ

ಫಿಲೋಮಿನಾ ಎಲ್ಲೇ ಹೋಗಲಿ, ಅಲ್ಲಿ ಕಿರಣ್ ಇರುತ್ತಿದ್ದ. ಆತನ ಸಹವಾಸ ಬೇಡ ಎಂದು ಮಂಗಳೂರಿನಲ್ಲಿನ ಕೆಲಸ ಬಿಟ್ಟು ಬೆಂಗಳೂರಿಗೆ ಆಕೆ ಹೋಗಿದ್ದರೆ ಅಲ್ಲಿಗೂ ಹೋಗಿ ಕಂಪೆನಿಗೆ ಕರೆ ಮಾಡಿ ತನ್ನ ಪತ್ನಿ ಎಂದೆಲ್ಲ ಹೇಳಿದ್ದ. ಕೊನೆಗೆ ಆತನ ಕಿರುಕುಳ ತಾಳಲಾರದೆ ಮಂಗಳೂರಿಗೆ ವರ್ಗ ಮಾಡಿಸಿಕೊಂಡ ಫಿಲೋಮಿನಾ ಕಳೆದ ನವೆಂಬರ್‌ನಲ್ಲಷ್ಟೇ ಇಲ್ಲಿನ ಕಂಪೆನಿಗೆ ಸೇರಿಕೊಂಡಿದ್ದಳು. ಈ ಹಿಂದೆ ಎರಡು ಬಾರಿ ಆಕೆಯ ಅಪಹರಣಕ್ಕೆ ಕಿರಣ್ ಯತ್ನಿಸಿದ್ದ. ಆಗೆಲ್ಲ ಕಂಪೆನಿಯ ವಾಹನದ ಚಾಲಕ ಆಕೆಯನ್ನು ಪಾರು ಮಾಡಿದ್ದ. ಆದರೆ ಸೋಮವಾರ ಕಿರಣ್ ಚೂರಿ ಹಿಡಿದು ಬೆದರಿಕೆ ಹಾಕಿದ್ದರಿಂದ ಕಂಪೆನಿ ಚಾಲಕ ಅಸಹಾಯಕನಾಗಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry