ಬುಧವಾರ, ಅಕ್ಟೋಬರ್ 16, 2019
21 °C

ನಿಂಗಾಪುರ ಜನರಿಗೆ ಕೆರೆ ದಾಟಲು ಟ್ಯೂಬ್ ಆಸರೆ

Published:
Updated:

ಚನ್ನಮ್ಮನ ಕಿತ್ತೂರು: ಕುಲವಳ್ಳಿ ಗುಡ್ಡದ ಗೊಂಚಲು ಗ್ರಾಮಗಳಲ್ಲೊಂದಾಗಿರುವ ನಿಂಗಾಪುರ ಜನರು ಕೆರೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ವಾಹನ ಟ್ಯೂಬ್‌ಗಳನ್ನೆ ದಶಕಗಳಿಂದಲೂ ಬಳಸುತ್ತ ಬಂದಿದ್ದಾರೆ.ಶಾಲೆಗೆ ಬರಬೇಕಾದರೆ ಮಕ್ಕಳು ಇದರಲ್ಲೇ ಕುಳಿತು ಸಾಗಬೇಕು. ಜಾನುವಾರಗಳು ಈಜು ಬೀಳಬೇಕು. ನೋಡುವವರೇ ಭಯ ಪಡುವ ಸನ್ನಿವೇಶ ಇಲ್ಲಿದೆ. ಆದರೆ ಇವರಿಗೆಲ್ಲ ಟ್ಯೂಬ್‌ಗಳ ಸಂಚಾರವೆಂದರೆ ಎಳ್ಳಷ್ಟು ಭೀತಿಯಿಲ್ಲ. ಸರಾಗವಾಗಿ ಸಾಗಿ ಆಚೆಗಿನ ದಡ ಸೇರುತ್ತಾರೆ.ಕೆರೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನಿರ್ಭಿತಿಯಿಂದ ನಾಗರಿಕರು ಸಾಗಲು ಕನಿಷ್ಠ ತಾತ್ಕಾಲಿಕ ಬಿದಿರಿನ ಕಾಲು ಸೇತುವೆಯ ಸೌಲಭ್ಯವನ್ನಾದರೂ ಕಲ್ಪಿಸಿ ಕೊಡಬೇಕಿದ್ದ ಸರ್ಕಾರ ಇಲ್ಲಿ ಜಾಣ ಕುರಡನಂತೆ ವರ್ತಿಸಿದೆ. `ಯಾವ ರಾಜಾ ಬಂದರೇನೂ ರಾಗಿ ಬೀಸೋದು ತಪ್ಪೊಲ್ಲ~ ಎಂಬ ಮಾತಿನಂತೆ ಯಾವುದೇ ಸರ್ಕಾರ ಇರಲಿ ಅಥವಾ ಯಾವುದೇ ಶಾಸಕ ಆಯ್ಕೆಯಾಗಿ ಬರಲಿ `ಟ್ಯೂಬ್ ಸಂಚಾರ  ನಮಗೆಲ್ಲ ಆಧಾರ~ ಎಂದು ಭಾವಿಸಿಕೊಂಡು ತೆಪ್ಪಗಿದ್ದೇವೆ ಎಂಬ ಮಾತುಗಳು ಇಲ್ಲಿಯ ಸಾರ್ವಜನಿಕರಿಂದ ಮಾರ್ದನಿಸುತ್ತವೆ.ಊರಿಗಿಲ್ಲ ಬಸ್ ಸಂಚಾರ!ನಾಲ್ಕು ಓಣಿಗಳ, ವಾಹನ ಓಡಿದರೆ ದೂಳಿನಲ್ಲೇ ಮುಚ್ಚಿ ಹೋಗುವಂತಹ ಅಂದಾಜು ನೂರೈತ್ತು ಮನೆಗಳಿರುವ ಬೈಲಹೊಂಗಲ ತಾಲ್ಲೂಕಿನ ಕುಗ್ರಾಮ ನಿಂಗಾಪುರ. ಇಲ್ಲಿಯ ಮಕ್ಕಳಿಗೆಲ್ಲ ಓದಲು ಅನುಕೂಲವಾಗುವಂತೆ ಕಿರಿಯ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿದೆ.  ವಿದ್ಯುತ್ ಇದ್ದಾಗ ಮಾತ್ರ ಹೊರಚೆಲ್ಲುವ ಕೊಳವೆ ಬಾವಿ ನೀರು ಇಲ್ಲಿನವರ ನಿತ್ಯದ ಅವಶ್ಯಕತೆಗಳನ್ನು ಪೂರೈಸುತ್ತವೆ. ಊರ ಪಕ್ಕದಲ್ಲೇ ರಾಜ್ಯದ ಬಹಳ ವಿಸ್ತಾರವಾದ ಕೆರೆಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಹುಲಿಕೆರೆ~ ಇದೆ.ನೂರೈವತ್ತು ಮನೆಗಳನ್ನು ಹೊರತು ಪಡಿಸಿದರೆ, ಹೊಲಗಳಲ್ಲಿ ದೊಡ್ಡಿ ಹಾಕಿಕೊಂಡು ವಾಸಿಸುವ ಜನರೇ ಇಲ್ಲಿ ಹೆಚ್ಚಾಗಿದ್ದಾರೆ. ಸ್ವಾತಂತ್ರ್ಯ ಬಂದು ಆರೂವರೆ ದಶಕಗಳಾಗುತ್ತ ಬಂದಿದ್ದರೂ  ಕೆಂಪು ಬಣ್ಣದ ಸಾರಿಗೆ ಬಸ್ ದರ್ಶನ ಊರಿಗಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳ ದುಬಾರಿ ಕಾರುಗಳನ್ನು ನೋಡಿದ ಸೌಭಾಗ್ಯ ಕುಗ್ರಾಮಕ್ಕಿದೆ! ಇದನ್ನು ಬಿಟ್ಟರೆ ಸಂತೆ ಅಥವಾ ಆಸ್ಪತ್ರೆ ಎಂದು ಪಟ್ಟಣಕ್ಕೆ ಹೋದ ಖಾಸಗಿ ವಾಹನ ಸೌಲಭ್ಯ ವಂಚಿತರು ಮರಳಿ ಊರು ಸೇರಬೇಕೆಂದರೆ ಕಡ್ಡಾಯವಾಗಿ ಎರಡೂವರೆ ಕಿ.ಮೀ. ನಡೆಯಬೇಕು. ಹೋಗಬೇಕೆಂದರೂ ಇದೇ ಅನಧಿಕೃತ ನಿಯಮ ಪಾಲನೆಯಾಗಬೇಕು.ಹೊಲಗಳಲ್ಲಿ ದೊಡ್ಡಿ ಹಾಕಿಕೊಂಡು ಹೆಚ್ಚಾಗಿ ವಾಸಿಸುವವರು ಹಾಗೂ ಊರಿಂದ ಆಚೀಚೆಗಿನ ದಂಡೆ ಹತ್ತಿರವಿರುವ ಹೊಲಗಳಿಗೆ ತೆರಳಬೇಕೆಂದರೆ ಈ ಸ್ವನಿರ್ಮಿತ `ಟ್ಯೂಬ್ ಬೋಟ್~ ಇವರ ನೀರ ಮೇಲಿನ ಹಡಗು. ಟ್ಯೂಬ್ ಮೇಲಿಂದ ಸಾಗಲು ಇವರು ಹುಟ್ಟು ಹಾಕುವುದಿಲ್ಲ. ಫರ್ಲಾಂಗು ದೂರವಿರುವ ಕೆರೆ ದಾಟಲು ಇದರ ಎರಡೂ ಬದಿಗೆ ಗೂಟ ನೆಟ್ಟು ಸ್ವಲ್ಪ ದಪ್ಪನೆಯ ನುಲಿದಾರ ಎರಡೂ ಬದಿಗೆ ಕಟ್ಟಲಾಗಿದೆ.  ಟ್ಯೂಬ್ ಮಧ್ಯೆ ಕುಳಿತು ಸಂಚರಿಸುವ ಸಂದರ್ಭದಲ್ಲಿ ಅದನ್ನು ಎಳೆಯುತ್ತ ಸಾಗಬೇಕು. ಹೊಯ್ದಾಡುತ್ತ ಈ ರೀತಿ ಸಾಗಿ ಅಂದುಕೊಂಡಿರುವ ದಡ ಸೇರುವ ನಿತ್ಯ ತಾಪತ್ರಯದಿಂದ ಇವರು ಹೊರತಾಗಿಲ್ಲ.ಈ ತೊಂದರೆ ಬೇಡವೆಂದರೆ ಗುಡ್ಡ ಸುತ್ತಿ ಮೈಲಾರಕ್ಕೆ ಹೋದಂತೆ ಆಚೆಗಿನ ದಡ ಸೇರಬೇಕು.

ಎರಡೂ ಬದಿಗೆ ಕಟ್ಟಿದ ದಾರ ಕೊಳೆತು ಹರಿದು ಹೋದರೆ ಪುನಃ ಗಟ್ಟಿಯಾಗಿರುವ ಒಂದು ಬದಿಯ ದಾರವೇ ಇವರಿಗೆ ಆಸರೆ. ಸರಂಜಾಮು ಸಮೇತ ಹೊರಟಾಗ ಟ್ಯೂಬ್ ಗಾಳಿ ಕಡಿಮೆಯಾದರೆ ದೇವರೇ ಗತಿ. ಸೇತುವೆ ಬೇಕು:`ಟ್ಯೂಬ್ ಸದ್ಯಕ್ಕೆ ಆಸರೆಗಿದೆ. ಆದರೆ ಶಾಶ್ವತ ಸಂಚಾರಕ್ಕೆ ಕಾಲು ಸೇತುವೆ ನಿರ್ಮಿಸುವ ಅವಶ್ಯಕತೆಯಿದೆ~ ಎನ್ನುತ್ತಾರೆ ಗ್ರಾ. ಪಂ. ಸದಸ್ಯೆ ಬಂಗಾರವ್ವ ಹರಿಜನ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಉಪಾಧ್ಯಕ್ಷ ಅಬ್ದುಲ್ ಗಫಾರ್ ತಾನೇಖಾನ್. `ತುಂಬಿದ ಕೆರೆ ನೀರು ಹಿಂದೆ ಸರಿಯಬೇಕಾದರೆ ಮಾರ್ಚ್ ತಿಂಗಳ ವರೆಗೂ ಕಾಯಬೇಕು.  ಜೂನ್‌ನಲ್ಲಿ ಮಳೆ ಬಂದು ಕೆರೆಯೊಡಲು ತುಂಬಿದರೆ ಹಿನ್ನೀರಿನಲ್ಲಿ ಟ್ಯೂಬ್ ಸಂಚಾರ ಮತ್ತೆ ಪ್ರಾರಂಭವಾಗುತ್ತದೆ~ ಎನ್ನುತ್ತಾರೆ.ಅವಘಡ ಸಂಭವಿಸಿದ ಮೇಲೆ ಎಚ್ಚತ್ತುಗೊಳ್ಳುವ ಬದಲು ತಾತ್ಕಾಲಿಕ ಕಾಲು  ಸೇತುವೆಯನ್ನು ದುಡಿಯುವ ಇಲ್ಲಿಯ ಜನರಿಗೆ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

Post Comments (+)