`ನಿಂತಲ್ಲೆ ನಿಲ್ಲಿ, ಇದು ರೈಲ್ವೆ ಘೋಷಣೆ'

7

`ನಿಂತಲ್ಲೆ ನಿಲ್ಲಿ, ಇದು ರೈಲ್ವೆ ಘೋಷಣೆ'

Published:
Updated:
`ನಿಂತಲ್ಲೆ ನಿಲ್ಲಿ, ಇದು ರೈಲ್ವೆ ಘೋಷಣೆ'

ಗೌರಿಬಿದನೂರು:ಪಟ್ಟಣದ ಕರೇಕಲ್ಲಹಳ್ಳಿ ಇಡಗೂರು ರಸ್ತೆ ಬಳಿಯಿರುವ ರೈಲ್ವೆ ಗೇಟ್‌ನಿಂದ ಉಂಟಾಗುತ್ತಿರುವ ಸಮಸ್ಯೆಯಿಂದ ವಾಹನಸವಾರರು ಮಾತ್ರವಲ್ಲ, ಅಲ್ಲಿನ ನಿವಾಸಿಗಳು ಸಹ ಪರಿತಪಿಸುತ್ತಿದ್ದಾರೆ. ಸಮರ್ಪಕವಾದ ಅಂಡರ್‌ಪಾಸ್ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ವಾಹನಸವಾರರು ದೂರಿದರೆ, ಪರ್ಯಾಯ ಮಾರ್ಗ ಕಂಡು ಹಿಡಿಯದೆ ರೈಲ್ವೆ ಅಧಿಕಾರಿಗಳು ಕಾಲ ವ್ಯಯ ಮಾಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ. ಸಮಸ್ಯೆಯಿಂದ ಕಂಗೆಟ್ಟಿರುವ ಅಲ್ಲಿನ ನಿವಾಸಿಗಳು ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ.ರೈಲ್ವೆ ಗೇಟ್‌ನ ಸಮಸ್ಯೆಯನ್ನು ವಾಹನಸವಾರರು ಮತ್ತು ನಿವಾಸಿಗಳು ಎದುರಿಸುತ್ತಿರುವುದು ನಿನ್ನೆ-ಮೊನ್ನೆಯಿಂದಲ್ಲ, ಕಳೆದ 10 ರಿಂದ 15 ವರ್ಷಗಳಿಂದ ರೈಲ್ವೆ ಗೇಟ್ ಜೊತೆ ಸಮಸ್ಯೆಗಳ ಸಂಬಂಧವಿದೆ. `ಈ ರಸ್ತೆಯಲ್ಲಿ ಸಂಚರಿಸುವುದೆಂದರೆ ತುಂಬ ಕಿರಿಕಿರಿಯಾಗುತ್ತದೆ. ದಿನಕ್ಕೆ 25 ರಿಂದ 30 ರೈಲುಗಳು ಇಲ್ಲಿ ಸಂಚರಿಸುತ್ತವೆ. ಪ್ರತಿ ಬಾರಿ ಒಂದು ರೈಲು ಸಂಚರಿಸಿದಾಗಲೂ ಗೇಟ್ ಮುಚ್ಚಲಾಗುತ್ತದೆ. ರೈಲು ಸಾಗುವವರೆಗೆ 15 ರಿಂದ 30 ನಿಮಿಷಗಳವರೆಗೆ ಕಾಯಬೇಕಾಗುತ್ತದೆ. ಅಷ್ಟರಲ್ಲಿ ನಮ್ಮ ಕೆಲಸಗಳಿಗೆ ಹಿನ್ನಡೆಯಾಗುತ್ತದೆ' ಎಂದು ಅವರು ದೂರುತ್ತಾರೆ.`ರೈಲ್ವೆ ಗೇಟ್‌ನಿಂದ ಮೊದಲೆಲ್ಲ ಈ ರೀತಿಯ ಸಮಸ್ಯೆಯಿರುತ್ತಿರಲಿಲ್ಲ. ಆಗ ರೈಲ್ವೆಗಳ ಸಂಚಾರ ಕಡಿಮಯಿತ್ತು. ಜನರ ಓಡಾಟ ಮತ್ತು ವಾಹನಗಳ ಸಂಚಾರವೂ ಕಡಿಮೆಯಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಜನಸಂಖ್ಯೆ ಹೆಚ್ಚಾದಂತೆ ನಗರೀಕರಣವಾಗುತ್ತಿದೆ. ವಾಹನಗಳ ದಟ್ಟಣೆಯು ಹೆಚ್ಚಾಗುವುದರ ಜೊತೆಗೆ ರೈಲುಗಳ ಸಂಚಾರವು ದುಪ್ಪಟ್ಟಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಈಗಲಾದರೂ ಇಲ್ಲಿ ಅಂಡರ್‌ಪಾಸ್ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ' ಎಂದು ವಾಹನ ಸವಾರರು ಹೇಳುತ್ತಾರೆ.`ಪ್ರತಿನಿತ್ಯ ಇಡಗೂರು ರಸ್ತೆಯಲ್ಲಿರುವ ರೈಲ್ವೆ ಗೇಟ್ ದಾಟಿ ಪಟ್ಟಣದ ಶಾಲೆ, ಕಾಲೇಜು, ಆಸ್ಪತ್ರೆ ಮತ್ತು ನೌಕರಿಗಾಗಿ ಹೋಗುವವರ ಸಂಖ್ಯೆ ದೊಡ್ಡದಿದೆ. ದಿನಕ್ಕೆ ಹಲವು ಸಲ ರೈಲ್ವೆ ಗೇಟ್ ಹಾಕಲಾಗುತ್ತದೆ. ಕೆಲ ಸಲವಂತೂ ಅರ್ಧ ಗಂಟೆಗೂ ಹೆಚ್ಚು ಸಮಯ ಗೇಟ್ ತೆರೆಯುವುದೇ ಇಲ್ಲ. ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆಂದು ಹೊರಟ ರೋಗಿಗಳ ಪಾಡೇನು? ಅದೆಷ್ಟೋ ಸಂದರ್ಭದಲ್ಲಿ ರೋಗಿಗಳು ಪ್ರಾಣಾಪಾಯಕ್ಕೆ ತುತ್ತಾಗಿದ್ದಾರೆ. ಪ್ರಾಣವನ್ನೂ ಕಳೆದುಕೊಂಡಿದ್ದಾರೆ' ಎಂದು ತಾಲ್ಲೂಕು ಛಲವಾದಿ ಸಂಘದ ಅಧ್ಯಕ್ಷ- ಕರೇಕಲ್ಲಹಳ್ಳಿ ನಿವಾಸಿ ಮುನಿರಾಜು `ಪ್ರಜಾವಾಣಿ'ಗೆ ತಿಳಿಸಿದರು.`ಕರೇಕಲ್ಲಹಳ್ಳಿ ಇಡಗೂರು ರಸ್ತೆಯ ರೈಲ್ವೆ ಗೇಟ್ ಎಂದಾಕ್ಷಣ ವಾಹನ ಸವಾರರ ಮುಖದಲ್ಲಿ ಅಸಹನೆಯ ಗೆರೆ ಮೂಡುತ್ತದೆ. ದಿನಕ್ಕೆ ಹಲವು ಬಾರಿ ಗೇಟ್ ಮುಚ್ಚುವುದರಿಂದ ಉದ್ದನೆಯ ಸರತಿ ಸಾಲಿನಲ್ಲಿ ನಿಂತು, ಕೈ ಗಡಿಯಾರ ನೋಡುತ್ತಾರೆ. ಸಮಸ್ಯೆಗೆ ಕಾರಣರಾದವರನ್ನು ಬಯ್ದುಕೊಳ್ಳುತ್ತಾ, ಶಪಿಸುತ್ತಾರೆ. ರೈಲ್ವೆ ಗೇಟ್‌ನ ಮತ್ತೊಂದು ಭಾಗದಲ್ಲಿರುವ ಕರೇಕಲ್ಲಹಳ್ಳಿ, ವಿದ್ಯಾನಗರ, ಸ್ವಾಗತ್ ಲೇಔಟ್, ಇಡಗೂರು, ಚಂದನದೂರು, ಎಚ್.ನಾಗಸಂದ್ರ ಮತ್ತಿತರ ಗ್ರಾಮದವರಂತೂ ನಿತ್ಯವೂ ಈ ರಸ್ತೆಯಲ್ಲಿ ಓಡಾಡಲು ಬೇಸರಪಡುತ್ತಾರೆ' ಎಂದು ಅವರು ತಿಳಿಸಿದರು.`ಗಂಟೆಗಟ್ಟಲೆ ಗೇಟ್ ಹಾಕುವುದರಿಂದ ರಸ್ತೆಯುದ್ದಕ್ಕೂ ವಾಹನಗಳು ನಿಲ್ಲುತ್ತವೆ. ಕಚೇರಿಗಳಿಗೆ, ಶಾಲೆ- ಕಾಲೇಜುಗಳಿಗೆ ನಿಗದಿತ ಸಮಯಕ್ಕೆ ಹೊರಡಲು ತುಂಬಾ ತೊಂದರೆಯಾಗುತ್ತದೆ. ಗೇಟ್ ತೆಗೆದ ಕೂಡಲೆ ವಾಹನ ಸವಾರರು ಅವಸರದಲ್ಲಿ ನುಗ್ಗುವಾಗ ಶಾಲಾ ಮಕ್ಕಳು ಸೈಕಲ್‌ನಲ್ಲಿ ಗೇಟ್ ದಾಟಲು ಹರಸಾಹಸ ಪಡುತ್ತಾರೆ. ಕೆಲ ಸಲ ಅವರು ವಾಹನಗಳಿಗೆ ಸಿಕ್ಕಿ, ಕೆಳಗಡೆ ಬೀಳುತ್ತಾರೆ' ಎಂದು ಇಡಗೂರು ನಿವಾಸಿ ರಾಜಲಕ್ಷ್ಮಿ ದೂರುತ್ತಾರೆ.`ರೈಲ್ವೆ ಇಲಾಖೆಯವರು ಇಲ್ಲಿ ಅಂಡರ್‌ಪಾಸ್ ನಿರ್ಮಿಸುವುದಾಗಿ ಅಶ್ವಾಸನೆ ನೀಡುತ್ತಲೇ ಇದ್ದಾರೆ. ಆದರೆ ಈವರೆಗೆ ಅದನ್ನು ಕಾರ್ಯಗತಗೊಳಿಸಿಲ್ಲ. ಪ್ರತಿ ಬಾರಿ ಮನವಿಪತ್ರ ನೀಡುತ್ತೇವೆ. ಅವರು ಸ್ವೀಕರಿಸಿ, ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಯಾವಾಗ ಎಂಬುದಕ್ಕೆ ಉತ್ತರ ನೀಡುವುದಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ನಾವೇ ಪ್ರತಿಭಟನೆ ಮಾಡಬೇಕಾಗುತ್ತದೆ. ಅದಕ್ಕೂ ಮುಂಚೆ ರೈಲ್ವೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ' ಎಂದು ರೈಲ್ವೆ ಪ್ರಯಾಣಿಕರ ಸಂಘದ ಅಧ್ಯಕ್ಷ ಮಹಮ್ಮದ್ ಬೇಗ್ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry