ಗುರುವಾರ , ಮಾರ್ಚ್ 4, 2021
18 °C

ನಿಂತುಹೋದ ಪದ್ಮಿನಿ ಗೆಜ್ಜೆ ನಿನಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಂತುಹೋದ ಪದ್ಮಿನಿ ಗೆಜ್ಜೆ ನಿನಾದ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನೃತ್ಯ ಕಲಾವಿದೆ ಪದ್ಮಿನಿ ರಾಮಚಂದ್ರನ್ (71) ಭಾನುವಾರ ನಿಧನ ಹೊಂದಿದರು.***

ಕೇರಳದ ಮಾವಳ್ಳಿಕರದಲ್ಲಿ ಜನಿಸಿದ (1944) ಕಲಾವಿದೆ ಪದ್ಮಿನಿ ರಾಮಚಂದ್ರನ್‌ ಅವರು ಸಾಗರದಾಚೆಯೂ ಗೆಜ್ಜೆಯ ನಿನಾದ ಮೂಡಿಸಿದವರು. ಪದ್ಮಿನಿ ಅವರ ವಿದ್ಯಾಭ್ಯಾಸ ಮದ್ರಾಸಿನಲ್ಲಿ ನಡೆಯಿತು. ಚೊಕ್ಕಲಿಂಗಂ ಪಿಳ್ಳೆ ಅವರಲ್ಲಿ ನೃತ್ಯಾಭ್ಯಾಸ ಆರಂಭಿಸಿದ ಅವರು, ಮುಂದೆ ವಳವೂರು ರಾಮಯ್ಯ ಪಿಳ್ಳೆ ಅವರಲ್ಲಿ ದಶಕಗಳ ಕಾಲ ಕಲಿತು ರಂಗಪ್ರವೇಶವನ್ನೂ ಮಾಡಿದರು. ಬಾಲ್ಯದಲ್ಲೇ ಪದ್ಮಿನಿ ಪ್ರಿಯದರ್ಶಿನಿ ನಾಮಾಂಕಿತದಲ್ಲಿ ಸಿನಿಮಾಗಳಲ್ಲೂ ನಟನೆಯಲ್ಲಿ ತೊಡಗಿದರು. ಅವರ ನೃತ್ಯ ಚಲನಚಿತ್ರಗಳಲ್ಲೂ ಜನಪ್ರಿಯವಾಯಿತು. ಅವುಗಳಲ್ಲಿ ಎನ್‌ಟಿಆರ್‌ ಅವರೊಂದಿಗೆ ‘ನರ್ತನಶಾಲಾ’, ರಾಜ್‌ಕಪೂರ್‌ ಅವರೊಂದಿಗೆ ‘ದಿಲ್‌ ಹೀ ತು ಹೈ’, ಶಿವಾಜಿ ಗಣೇಶನ್‌ ಅವರೊಂದಿಗೆ ‘ಇರುವರ್‌ ಉಳ್ಳಂ’ ಗಮನಾರ್ಹವಾದುವು.ರಾಮಚಂದ್ರನ್‌ ಅವರೊಂದಿಗೆ ಮದುವೆಯಾದ ನಂತರ ಬೆಂಗಳೂರು ವಾಸಿಯಾದ ಪದ್ಮಿನಿ ಅವರು 1974ರಲ್ಲಿ ‘ನಾಟ್ಯಪ್ರಿಯ’ ಶಾಲೆ ತೆರೆದು ನೂರಾರು ಆಸಕ್ತರಿಗೆ ಭರತನಾಟ್ಯ ಕಲಿಸಿದರು. ಕಿರಿಯರಿಗೆ ನೃತ್ಯ ಕಲಿಸುವುದು ಅವರಿಗೆ ಅತ್ಯಂತ ಪ್ರಿಯವಾದ ಕೆಲಸವಾಗಿತ್ತು. ಪ್ರತಿ ವಿದ್ಯಾರ್ಥಿನಿಯ ಶ್ರದ್ಧೆ, ತಿಳಿವಳಿಕೆ, ಶಾರೀರಿಕ ಲಕ್ಷಣಗಳನ್ನು ಆಧರಿಸಿ, ಪ್ರತಿಯೊಬ್ಬರಿಗೂ ತಕ್ಕಪಾಠ ಮಾಡಿ, ಕಿರಿಯರ ನೃತ್ಯ ಭವಿಷ್ಯವನ್ನು ರೂಪಿಸುತ್ತಿದ್ದರು.ಇದರಿಂದ ಗುರುಗಳ ಶಿಷ್ಯವಾತ್ಯಲ್ಯ ಹಾಗೂ ವಿದ್ಯಾರ್ಥಿನಿಯರ ಗುರುಭಕ್ತಿ ಎರಡೂ ಗಾಢವಾಗಿ ಮೇಳೈಸುತ್ತಿದ್ದವು. ಕಾಲಕ್ರಮೇಣ ಸಭಾಂಗಣ, ಶಿಕ್ಷಣ ಕೊಠಡಿ ನಿರ್ಮಿಸಿ ‘ನೃತ್ಯಕ್ಷೇತ್ರ’ವನ್ನು ನಗರದಲ್ಲಿ ತೆರೆದರು.ಇಂದು ನೃತ್ಯ ವೇದಿಕೆ ಮೇಲೆ ಬೆಳಗುತ್ತಿರುವ ಅನೇಕ ನರ್ತಕಿಯರು ಪದ್ಮಿನಿ ಅವರ ಶಿಷ್ಯರೇ ಎಂಬುದು ಗಮನಾರ್ಹ. ಅವರಲ್ಲಿ ರತ್ನಾ ಸುಪ್ರಿಯಾ, ರಂಗಶ್ರೀ, ಮೋನಿಷಾ ಉನ್ನಿ, ನವ್ಯಾ ನಟರಾಜನ್‌, ಕೀರ್ತಿ ರಾಮಗೋಪಾಲ್‌, ಶಿಲ್ಪಾ ನಂಜಪ್ಪ, ಮಿಥುನ್‌ ಶ್ಯಾಮ್‌ ಹಾಗೂ ಅವರ ಮಗಳು ಕನ್ಯಾ – ಪ್ರಮುಖರು.ಸದಾ ಜೀವನೋತ್ಸಾಹದಿಂದ ಪುಟಿಯುತ್ತಿದ್ದ ಪದ್ಮಿನಿ ಅವರು, ಪಾಠ, ಕೊರಿಯೋಗ್ರಫಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದರು.ಅವರು ಹುರುಪಿನಿಂದ ನಟುವಾಂಗ ಮಾಡುತ್ತಿದ್ದುದು, ಸಬಲವಾಗಿ ತಾರಸ್ಥಾಯಿಯಲ್ಲಿ ಜತಿಗಳನ್ನು ಹೇಳುತ್ತಿದ್ದುದನ್ನು ಎಂದಿಗೂ ಮರೆಯಲಾಗದು! ನೂರಕ್ಕೂ ಹೆಚ್ಚು ಜನ ಶಿಷ್ಯರ ರಂಗಪ್ರವೇಶ ಮಾಡಿಸಿ ದಾಖಲೆ ನಿರ್ಮಿಸಿದ್ದ ಪದ್ಮಿನಿ ಅವರು ಅನೇಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಷಯ–ವ್ಯಕ್ತಿಗಳನ್ನು ಆಧರಿಸಿ ನೃತ್ಯ ಸಂಯೋಜನೆ ಮಾಡಿದ್ದರು. ಅವುಗಳಲ್ಲಿ ‘ಅಷ್ಟಲಕ್ಷ್ಮಿ’, ‘ಕಿತ್ತೂರು ರಾಣಿ ಚನ್ನಮ್ಮ’, ‘ವಿಠಲ ದರ್ಶನ’ –ಜನಪ್ರಿಯವಾದವುಗಳು. ಪಾತ್ರ–ಸನ್ನಿವೇಶಗಳ ಒಳಹೊಕ್ಕು ಸಂಗೀತ ಅಭಿನಯಗಳ ಮೂಲಕ ಸುಂದರವಾಗಿ ನಿರೂಪಿಸುವ ಕಲೆ ಅವರಿಗೆ ಕರಗತವಾಗಿತ್ತು.ಪದ್ಮಿನಿ ಅವರ ವಿದ್ವತ್ತು ಅನುಭವಗಳನ್ನು ಆಧರಿಸಿ ಸಹಜವಾಗಿ ಅನೇಕ ಗೌರವ–ಪ್ರಶಸ್ತಿಗಳು ಅವರ ಕೊರಳನ್ನು ಅಲಂಕರಿಸಿದ್ದವು. ರಾಜ್ಯದ ಉನ್ನತ ಪುರಸ್ಕಾರವಾದ ಶಾಂತಲಾ ಪ್ರಶಸ್ತಿ ಅಲ್ಲದೆ ಸಂಗೀತ–ನೃತ್ಯ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳೂ ಅವರಿಗೆ ಸಂದಿದ್ದವು. ಪದ್ಮಿನಿ ಅವರ ನಿಧನದಿಂದ ಓರ್ವ ಹಿರಿಯ ಗುರು ಹಾಗೂ ನೃತ್ಯ ಸಂಯೋಜಕಿಯನ್ನು ರಾಜ್ಯ ಸಾಂಸ್ಕೃತಿಕ ಲೋಕ ಕಳೆದುಕೊಂಡಿದೆ. ಪ್ರೊ. ಮೈಸೂರು ವಿ.ಸುಬ್ರಹ್ಮಣ್ಯಇಂದು ಅಂತ್ಯಕ್ರಿಯೆ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನೃತ್ಯ ಕಲಾವಿದೆ ಪದ್ಮಿನಿ ರಾಮಚಂದ್ರನ್ (71) ಭಾನುವಾರ ನಿಧನ ಹೊಂದಿದರು. ಅವರಿಗೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ನಾಟ್ಯಪ್ರಿಯ ನೃತ್ಯ ಶಾಲೆ ನಡೆಸುತ್ತಿದ್ದ ಅವರಿಗೆ ಅಪಾರ ಶಿಷ್ಯಬಳಗವಿದೆ. ರಾಜ್ಯ ಸರ್ಕಾರದ ಶಾಂತಲಾ ನೃತ್ಯ ಪ್ರಶಸ್ತಿಯನ್ನು ಅವರು ಪಡೆದಿದ್ದರು. ಹಳೆ ಮದ್ರಾಸ್‌ ರಸ್ತೆಯ ಕಲ್ಪಳ್ಳಿ ಸ್ಮಶಾನದಲ್ಲಿ ಸೋಮವಾರ ಬೆಳಿಗ್ಗೆ 10ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.