ನಿಂತ ಕರಡಿ ಕುಣಿತ; ನಿಲ್ಲದ ಶೋಷಣೆ

7

ನಿಂತ ಕರಡಿ ಕುಣಿತ; ನಿಲ್ಲದ ಶೋಷಣೆ

Published:
Updated:
ನಿಂತ ಕರಡಿ ಕುಣಿತ; ನಿಲ್ಲದ ಶೋಷಣೆ

ಶ್ರೀನಿವಾಸಪುರ: ಕರಡಿ ಕುಣಿತ ಗ್ರಾಮೀಣ ಪ್ರದೇಶದಲ್ಲಿ ಒಂದು ಪಾರಂಪರಿಕ ಮನರಂಜನೆ. ಕರಡಿ ಆಡಿಸುವಾತ ಹಳ್ಳಿ ಪ್ರವೇಶ ಮಾಡಿದನೆಂದರೆ ಮಕ್ಕಳ ದಂಡು ಕರಡಿಯ ಹಿಂದೆ ಬೀಳುತ್ತಿತ್ತು. ಮನೆ ಮನೆ ಮುಂದೆ ಅದರ ಸರ್ಕಸ್ ನೋಡಿ ಮಕ್ಕಳಷ್ಟೇ ಏಕೆ ಎಲ್ಲ ವಯೋಮಾನದ ಜನರೂ ಸಂತೋಷ ಪಡುತ್ತಿದ್ದರು.ಸಾಮಾನ್ಯವಾಗಿ ಕರಡಿ ಕುಣಿಸುವರು ಸುಗ್ಗಿ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಕರಡಿಗಳೊಂದಿಗೆ ಓಡಾಡಿ ಅವು ಮಾಡುವ ಚಮತ್ಕಾರ ಪ್ರದರ್ಶಿಸಿ, ಹಳ್ಳಿಗರು ನೀಡುವ ದವಸ ಧಾನ್ಯ ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕರಡಿ ಬೆನ್ನಿನ ಮೇಲೆ ಮಕ್ಕಳನ್ನು ಬೋರಲು ಹಾಕಿದರೆ ಭಯ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿದೆ. ಜೊತೆಗೆ ಕರಡಿ ಕೂದಲನ್ನು ಒಳಗೊಂಡ ತಾಯತಗಳನ್ನು ಮಕ್ಕಳ ಕತ್ತಲ್ಲಿ ಕಟ್ಟುವುದುಂಟು.ಕರಡಿ ಕುಣಿತ ಕವಿಗಳ ಪದ್ಯ ರಚನೆಗೂ ಸ್ಪೂರ್ತಿ ನೀಡಿದೆ. ವರಕವಿ ದ.ರಾ.ಬೇಂದ್ರೆ ಅವರ ಪದ್ಯ `ಕರಡಿ ಕುಣಿತ~ ಇಂದಿಗೂ ಮಕ್ಕಳ ಬಾಯಲ್ಲಿ ಉಳಿದಿದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಗ್ರಾಮೀಣ ಕಲೆಗಳಂತೆ ಕರಡಿ ಕುಣಿತವೂ ತನ್ನ ಹಿಂದಿನ ವೈಭವ ಕಳೆದುಕೊಂಡಿದೆ. ಕರಡಿ ಕುಣಿಸುವವರಲ್ಲಿಯೂ ವ್ಯಾಪಾರ ಮನೋಭಾವ ಹೆಚ್ಚಿದೆ. ಕರಡಿ ಹಿಡಿದು ತರುವವರು ಅದನ್ನು ಹಿಂದಿನಂತೆ ಕುಣಿಸಿ ಮನರಂಜನೆ ನೀಡದೆ ಜನರಲ್ಲಿನ ಮೂಢ ನಂಬಿಕೆಯನ್ನು ಹಣವನ್ನಾಗಿ ಮಾರ್ಪಡಿಸಿಕೊಳ್ಳಲು ಹಾತೊರೆಯುತ್ತಾರೆ.ಮಗುವನ್ನು ಕರಡಿ ಬೆನ್ನಿನ ಮೇಲೆ ಬೋರಲು ಹಾಕಲು ಹಾಗೂ ಕರಡಿ ಕೂದಲನ್ನು ಒಳಗೊಂಡ ತಾಯತ ಹಾಕಲು ಇಂತಿಷ್ಟು ಹಣವೆಂದು ನಿಗದಿಪಡಿಸಿದ್ದಾರೆ. ದವಸ ಧಾನ್ಯ ಪಡೆಯುವವರು ತೀರಾ ವಿರಳ.ಹಿಂದೆ ಕರ್ನಾಟಕ ಆಂಧ್ರ ಪ್ರದೇಶದ ಗಡಿಯಲ್ಲಿರುವ ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಬೆಟ್ಟಗಳಲ್ಲಿ ಕರಡಿಗಳು ವಾಸವಾಗಿದ್ದವು. ಕರಡಿ ಕುಣಿಸುವವರು ಮರಿಗಳನ್ನು ಅಪಹರಿಸಲು ಆರಂಭಿಸಿದ ಮೇಲೆ ಕರಡಿ ಸಂತತಿ ಕಣ್ಮರೆಯಾಯಿತು ಎಂದು ಸ್ಥಳೀಯರು ಹೇಳುತ್ತಾರೆ.ಇಂದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕರಡಿ ಸಾಕುವುದು ಹಾಗೂ ಪಳಗಿಸುವುದು ಶಿಕ್ಷಾರ್ಹ ಅಪರಾಧ. ನಗರಗಳಲ್ಲಿ ಕರಡಿ ಕುಣಿಸುವವರಿಂದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ವಶಪಡಿಸಿಕೊಂಡ ವರದಿಗಳು ಆಗಾಗ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಕೆಲವು ಅಲೆಮಾರಿಗಳು ಗ್ರಾಮೀಣ ಪ್ರದೇಶದಲ್ಲಿ ಕರಡಿಗಳೊಂದಿಗೆ ಅಬಾಧಿತವಾಗಿ ಸಂಚರಿಸಿ ಜೀವನ ನಿರ್ವಹಿಸುತ್ತಾರೆ.ಕರಡಿ ಕುಣಿತವೆಂಬ ಸಾಂಸ್ಕೃತಿಕ ಪರಂಪರೆಯಲ್ಲಿ ಮನುಷ್ಯನ ಸ್ವಾರ್ಥ ಹಾಗೂ ಹಿಂಸೆಯ ವಿರಾಟ್ ರೂಪ ಅಡಗಿದೆ. ಅಳಿವಿನ ಹಾದಿ ಹಿಡಿದಿರುವ ಕರಡಿಗಳ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂಬುದು ಪರಿಸರವಾದಿ ರಾಂಪುರ ಅಶೋಕ್ ಕುಮಾರ್ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry