ಸೋಮವಾರ, ಮಾರ್ಚ್ 27, 2023
22 °C

ನಿಂಬೆ ಹಣ್ಣಿನಿಂದ ವಿದ್ಯುತ್ ಉತ್ಪಾದನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಂಬೆ ಹಣ್ಣಿನಿಂದ ವಿದ್ಯುತ್ ಉತ್ಪಾದನೆ!

ಮೈಸೂರು: ನಿಂಬೆ ಹಣ್ಣನ್ನು ಊಟದಲ್ಲಿ, ಜ್ಯೂಸ್ ಮಾಡಲು ಬಳಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪೂಜೆಗೆ ಬಳಕೆ ಮಾಡುವುದೂ ಗೊತ್ತು. ಆದರೆ, ಇಲ್ಲೊಬ್ಬರು ನಿಂಬೆ ಹಣ್ಣಿನಿಂದ ವಿದ್ಯುತ್ ಉತ್ಪಾದಿಸಬಹುದು ಎಂಬುದನ್ನು ಸಾಬೀತು ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ನಗರದ ಎನ್.ಆರ್.ಮೊಹಲ್ಲಾದ ಸಂತ ಆನ್ಸ್ ಪ್ರೌಢಶಾಲೆಯಲ್ಲಿ ಸೋಮವಾರದಿಂದ ಆರಂಭವಾದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಈ ದೃಶ್ಯವನ್ನು ಕಾಣಬಹುದು. ಕೆ.ಆರ್.ನಗರದ ಸಂತ ಜೋಸೆಫ್ ಶಾಲೆಯ ಚಿನ್ನುಶ್ರೀ ಎಂಬ ಏಳನೇ ತರಗತಿ ವಿದ್ಯಾರ್ಥಿನಿಯೇ ನಿಂಬೆ ಹಣ್ಣಿನಿಂದ ವಿದ್ಯುತ್ ಉತ್ಪಾದನೆಗೆ ಮುಂದಾಗಿದ್ದಾರೆ.10 ರಿಂದ 12 ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಒಂದು ಬದಿಗೆ ಸತುವಿನ ತುಂಡನ್ನು ಚುಚ್ಚಲಾಗಿದೆ. ವಿರುದ್ಧ ದಿಕ್ಕಿಗೆ ತಾಮ್ರದ ತಂತಿಯನ್ನು ಅಳವಡಿಸಲಾಗಿದೆ. ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್, ಸತು ಮತ್ತು ತಾಮ್ರ ಮೂರು ಸೇರಿದಾಗ ರಾಸಾಯನಿಕ ಕ್ರಿಯೆ ನಡೆದು ವಿದ್ಯುತ್ ಉತ್ಪಾದನೆ ಆಗುತ್ತದೆ. ಇಂತಹ ಸರಳ ಪ್ರಯೋಗವನ್ನು ಶಿಕ್ಷಕಿ ಲಿಡಿಯಾ ಅವರ ಸಹಾಯದೊಂದಿಗೆ ಚಿನ್ನುಶ್ರೀ ಮಾಡುವ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ.ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಹನಸೋಗೆ ಸರ್ಕಾರಿ ಶಾಲೆಯ ಮಕ್ಕಳು ಗ್ಯಾಸ್ ಮತ್ತು ಕುಕ್ಕರ್ ಬಳಸಿ ವಿದ್ಯುತ್ ಉತ್ಪಾದಿಸುವ ಯಂತ್ರದ ಪ್ರಾತ್ಯಕ್ಷಿಕೆ ಅನಾವರಣಗೊಳಿಸಿದ್ದಾರೆ. ಗ್ಯಾಸ್ ಸ್ಟೌ ಮೇಲೆ ಪ್ರೆಷರ್ ಕುಕ್ಕರ್ ಇಟ್ಟು, ಅದರಿಂದ ಬರುವ ಹಬೆಯನ್ನು ಪೈಪ್ ಮೂಲಕ ಚಕ್ರಕ್ಕೆ ರವಾನೆ ಆಗುವಂತೆ ಮಾಡಲಾಗಿದೆ. ಚಕ್ರಕ್ಕೆ ಗಾಳಿ ತಗುಲಿದಾಗ ವಿದ್ಯುತ್ ಉತ್ಪಾದನೆಯಾಗುವ ಸರಳ ಪ್ರಯೋಗ ಇದಾಗಿದೆ.ಹೈಡ್ರಾಲಿಕ್ ಜೆಸಿಬಿ: ಎಚ್.ಡಿ.ಕೋಟೆ ತಾಲ್ಲೂಕಿನ ಬಾಚೇಗೌಡನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಪ್ರಸಾದ್ ಖಾಲಿ ಸಿರಿಂಜ್ ಮತ್ತು ಸಲಾಯಿನ್ ಬಾಟಲ್‌ಗಳಿಂದ ಜೆಸಿಬಿ ಯಂತ್ರದ ಮಾದರಿಯನ್ನು ಸಿದ್ಧಪಡಿಸಿದ್ದಾನೆ. ಏಕಕಾಲಕ್ಕೆ ಎರಡು ಸಿರಿಂಜ್‌ಗಳಿಂದ ನೀರನ್ನು ಒತ್ತಿದರೆ ಜೆಸಿಬಿ ಕೆಲಸ ನಿರ್ವಹಿಸುತ್ತದೆ.ಇದೇ ಮಾದರಿಯಲ್ಲಿ ನಂಜನಗೂಡು, ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ ವಿವಿಧ ತಾಲ್ಲೂಕುಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಸಿದ್ಧಪಡಿಸಿದ್ದಾರೆ. ಮಾನವನ ಜೀರ್ಣಾಂಗ ವ್ಯೆಹ, ಬೆಳಕು ಸರಳ ರೇಖೆಯಲ್ಲಿ ಚಲಿಸುವ ಪ್ರಯೋಗ, ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕ, ಕೋಳಿ ಸಾಕಾಣಿಕೆ, ಸೋಲಾರ್ ಕುಕ್ಕರ್, ವಾಟರ್ ಹೀಟರ್, ವಿಜ್ಞಾನ ಪ್ರಯೋಗಗಳು, ಭೂಮಂಡಲ, ಗ್ರಹಗಳ ಚಲನೆ, ಪವನ ಶಕ್ತಿಯ ಉತ್ಪಾದನೆ, ಗೋಬರ್ ಗ್ಯಾಸ್, ಮಳೆ ನೀರು ಸಂಗ್ರಹ, ಭೌತಶಾಸ್ತ್ರದ ಮಾದರಿಗಳು ಸೇರಿದಂತೆ 200ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶನದಲ್ಲಿವೆ.ಮಂಜುನಾಥ್ ಚಾಲನೆ: ಜಿಲ್ಲಾ ಮಟ್ಟದ ವಸ್ತು ಪ್ರದರ್ಶನಕ್ಕೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್ ಚಾಲನೆ ನೀಡಿದರು. ತಾ.ಪಂ. ಅಧ್ಯಕ್ಷೆ ಮಂಜುಳಾ ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಂದ್ರಕುಮಾರ್ ಹಾಜರಿದ್ದರು.

ವಸ್ತು ಪ್ರದರ್ಶನವು ಮೇ 16ರಿಂದ 21ರ ವರೆಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.