ನಿಖರ ಕಾರಣ ಇಲ್ಲದ ಕ್ಯಾನ್ಸರ್ ಇದು

7

ನಿಖರ ಕಾರಣ ಇಲ್ಲದ ಕ್ಯಾನ್ಸರ್ ಇದು

Published:
Updated:

ಬೆಂಗಳೂರು: ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಬಳಲುತ್ತಿರುವುದು ಶ್ವಾಸಕೋಶದ ಕ್ಯಾನ್ಸರ್‌ನಿಂದ ಅಲ್ಲ. ಕ್ಯಾನ್ಸರ್ ಗೆಡ್ಡೆ ಅವರ ಎಡ ಮತ್ತು ಬಲ ಶ್ವಾಸಕೋಶದ ಮಧ್ಯೆ ಕಾಣಿಸಿಕೊಂಡಿದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ `ಜರ್ಮ್ ಸೆಲ್~ ಕ್ಯಾನ್ಸರ್ ಎನ್ನುತ್ತಾರೆ.ಯುವರಾಜ್ ಇದೀಗ ಅಮೆರಿಕದ  ಬಾಸ್ಟನ್‌ನ ಕ್ಯಾನ್ಸರ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಜರ್ಮ್ ಸೆಲ್ ಕ್ಯಾನ್ಸರ್ ಸಾಮಾನ್ಯವಾಗಿ ವೃಷಣ ಮತ್ತು ಅಂಡಾಶಯಗಳಲ್ಲಿ ಕಂಡುಬರುತ್ತದೆ. ಆದರೆ ಯುವರಾಜ್‌ಗೆ ಎಡ ಮತ್ತು ಬಲ ಶ್ವಾಸಕೋಶಗಳ ನಡುವೆ ಇರುವ `ಮೀಡಿಯಸ್ಟೀನಮ್~ ಭಾಗದಲ್ಲಿ ಕಂಡುಬಂದಿದೆ. ಎದೆಗೂಡನ್ನು ಎಡ ಮತ್ತು ಬಲ ಭಾಗಗಳಾಗಿ ವಿಭಾಗಿಸುವ ಚರ್ಮದ ಭಿತ್ತಿಗೆ `ಮೀಡಿಯಸ್ಟೀನಮ್~ ಎಂಬ ಹೆಸರಿದೆ.`ಕ್ಯಾನ್ಸರ್ ಗೆಡ್ಡೆ ಶ್ವಾಸಕೋಶದ ಒಳಭಾಗದಲ್ಲಿ ಕಂಡುಬಂದಿಲ್ಲ. ಆದ್ದರಿಂದ ಇದು ಶ್ವಾಸಕೋಶದ ಕ್ಯಾನ್ಸರ್ ಅಲ್ಲ. ಬಲು ಅಪರೂಪವಾಗಿ ಕಾಣಿಸಿಕೊಳ್ಳುವ ಜರ್ಮ್ ಸೆಲ್ ಕ್ಯಾನ್ಸರ್~ ಎಂದು ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಡಾ. ರಾಧೇಶ್ಯಾಮ್ `ಪ್ರಜಾವಾಣಿ~ಗೆ ತಿಳಿಸಿದರು.`ಈ ರೀತಿಯ ಕ್ಯಾನ್ಸರ್‌ಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ. ಧೂಮಪಾನ ಅಥವಾ ಮದ್ಯಪಾನದಿಂದ ಬರುವಂತಹ ಕ್ಯಾನ್ಸರ್ ಇದಲ್ಲ. ಹುಟ್ಟಿನಿಂದಲೇ ಬರುತ್ತದೆ ಎನ್ನುವುದೂ ಕಷ್ಟ~ ಎಂದು ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಅನುಭವ ಹೊಂದಿರುವ ಅವರು ತಿಳಿಸಿದರು.`ಆರಂಭದಲ್ಲಿ ಕೆಮ್ಮು, ಉಸಿರಾಟದ ತೊಂದರೆ, ಎದೆನೋವು ಮುಂತಾದ ಲಕ್ಷಣಗಳು ಕಾಣಿಸುತ್ತವೆ. ಪರೀಕ್ಷೆಗೆ ಒಳಗಾದಾಗ ಕ್ಯಾನ್ಸರ್ ಇರುವುದು ಗೊತ್ತಾಗುತ್ತದೆ. ಯುವರಾಜ್‌ಗೆ ಆಗಿರುವುದು ಇದೇ ಕ್ಯಾನ್ಸರ್~ ಎಂದರು.

`ಈ ರೀತಿಯ ಕ್ಯಾನ್ಸರ್‌ಗೆ ಕಿಮೋಥೆರಪಿ ಸೂಕ್ತ ಚಿಕಿತ್ಸೆ~ ಎಂದ ರಾಧೇಶ್ಯಾಮ್, `ಶೇ 100 ರಷ್ಟು ಅಲ್ಲದಿದ್ದರೂ, ಶೇ 90-95 ರಷ್ಟು ಗುಣಪಡಿಸಲು ಸಾಧ್ಯ. ಚಿಕಿತ್ಸೆಯ ಅವಧಿ ಕನಿಷ್ಠ ನಾಲ್ಕರಿಂದ ಆರು ತಿಂಗಳವರೆಗೆ ಇರುವುದು~ ಎಂದು ವಿವರಿಸಿದರು.`ಕಿಮೋಥೆರಪಿ ಸಂದರ್ಭದಲ್ಲಿ ರೋಗಿ ದೈಹಿಕವಾಗಿ ಸಾಕಷ್ಟು ಬಳಲುತ್ತಾನೆ. ಚಿಕಿತ್ಸೆ ಕೊನೆಗೊಂಡ ಒಂದೆರಡು ತಿಂಗಳಲ್ಲಿ ಮೊದಲಿನ ದೈಹಿಕ ಸಾಮರ್ಥ್ಯ ಪಡೆಯಬಹುದು. ಈ ಕಾರಣ ಯುವರಾಜ್ ಮತ್ತೆ ಕ್ರಿಕೆಟ್ ಆಡಲು ಸಾಧ್ಯ~ ಎಂದು ನುಡಿದರು.`ಕಿಮೋಥೆರಪಿ ಚಿಕಿತ್ಸೆ ಭಾರತದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಲಭ್ಯವಿದೆ. ನಾನು ಪ್ರತಿ ವರ್ಷ ಸಾಮಾನ್ಯವಾಗಿ ಇಂತಹ ಒಂದೆರಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ~ ಎಂದೂ ಅವರು ತಿಳಿಸಿದರು.

ಯುವರಾಜ್ ಅವರು ಮೇ ತಿಂಗಳ ವೇಳೆ ಮತ್ತೆ ಕಣಕ್ಕಿಳಿಯುವರು ಎಂಬ ವಿಶ್ವಾಸವನ್ನು ಅವರ ಫಿಸಿಯೋ ಜತಿನ್ ಚೌಧರಿ ವ್ಯಕ್ತಪಡಿಸಿದ್ದರು. ಅವರಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯ ನಿಕೇಶ್ ರೋಹ್ಟಗಿ ಕೂಡಾ ಇದೇ ಅಭಿಪ್ರಾಯ ತಿಳಿಸಿದ್ದರು. `10 ವಾರಗಳ ಬಳಿಕ ಯುವರಾಜ್ ಪೂರ್ಣ ರೀತಿಯ ದೈಹಿಕ ತರಬೇತಿ ನಡೆಸಬಹುದು~ ಎಂದಿದ್ದರು.ಅಮೆರಿಕದ ಸೈಕಲ್ ಸ್ಪರ್ಧಿ ಲ್ಯಾನ್ಸ್   ಆರ್ಮ್‌ಸ್ಟ್ರಾಂಗ್ ಕೂಡಾ `ಜರ್ಮ್ ಸೆಲ್~ ಕ್ಯಾನ್ಸರ್‌ನಿಂದ ಬಳಲಿದ್ದರು. ಆದರೆ ಎದೆಯ ಬದಲು ವೃಷಣದಲ್ಲಿ ಕ್ಯಾನ್ಸರ್ ಕಂಡುಬಂದಿತ್ತು. ಕಿಮೋಥೆರಪಿ ಚಿಕಿತ್ಸೆಯಿಂದ ಸಂಪೂ ರ್ಣವಾಗಿ ಗುಣಮುಖರಾಗಿದ್ದ ಅವರು ಸ್ಪರ್ಧಾ ಕಣಕ್ಕೆ ಮರಳುವಲ್ಲೂ ಯಶಸ್ವಿಯಾಗಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry