ಶುಕ್ರವಾರ, ಮೇ 7, 2021
27 °C

ನಿಖಿತಾ ಮೇಲಿನ ನಿಷೇಧ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದರ್ಶನ್ ವಿವಾದದ ಹಿನ್ನೆಲೆಯಲ್ಲಿ ನಟಿ ನಿಖಿತಾ ಮೇಲೆ ಹೇರಿದ್ದ ಮೂರು ವರ್ಷ ಅವಧಿಯ ನಿಷೇಧವನ್ನು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಹಿಂಪಡೆದಿದೆ.ಗುರುವಾರ ಸಭೆ ನಡೆಸಿದ ನಂತರ ಸಂಘದ ಅಧ್ಯಕ್ಷ ಮುನಿರತ್ನ ಸುದ್ದಿಗೋಷ್ಠಿಯಲ್ಲಿ ಈ ತೀರ್ಮಾನವನ್ನು ಪ್ರಕಟಿಸಿದರು. `ನಮ್ಮ ನಿರ್ಧಾರವು ಮೂರ್ಖತನದ್ದು. ಅದು ಆತುರದ ತೀರ್ಮಾನವೂ ಆಗಿತ್ತು~ ಎಂದು ಅವರೇ ಹೇಳಿಕೊಂಡರು.ನಟಿ ನಿಖಿತಾ ಅವರಿಗೆ ಈ ತೀರ್ಮಾನದ ಕುರಿತು ಸಂಘವು ಪತ್ರವೊಂದನ್ನು ಬರೆದಿದ್ದು ಅದು ಹೀಗೆ ಪ್ರಾರಂಭವಾಗುತ್ತದೆ- `ಕನ್ನಡದ ಉತ್ತಮ ಸಂಪ್ರದಾಯಸ್ಥ ಸುಸಂಸ್ಕೃತ ಗೌರವಸ್ಥ ಸಾಧ್ವೀ ಸದ್ಗುಣಸಂಪನ್ನೆ ಕಳಂಕರಹಿತ ಹಾಲಿನ ಮನಸ್ಸಿಗೆ ಸಮಾನರಾದ ಭಾರತದ ಬಹುಭಾಷಾ ನಟಿ ನಿಖಿತಾ ಅವರಿಗೆ...~

 ಚಿತ್ರರಂಗದ ಕೆಲವು ಬುದ್ಧಿಜೀವಿಗಳು ಕೊಟ್ಟ ಸಲಹೆಯ ಮೇರೆಗೆ ನಿಷೇಧವನ್ನು ಹಿಂಪಡೆಯಲಾಗಿದೆ ಎಂದೂ ಪತ್ರದಲ್ಲಿ ಬರೆಯಲಾಗಿದೆ.`ಹಿರಿಯ ನಿರ್ಮಾಪಕಿ, ತಾಯಿ ಸಮಾನರಾದ ಪಾರ್ವತಮ್ಮ ರಾಜ್‌ಕುಮಾರ್ ಕೆಲ ಕಿವಿಮಾತುಗಳನ್ನು ಹೇಳಿದ್ದಾರೆ. ಮಕ್ಕಳು ತಪ್ಪು ಮಾಡುವುದು ಸಹಜ. ನಮಗೀಗ ತಪ್ಪಿನ ಅರಿವಾಗಿದೆ~ ಎಂಬ ಅಂಶವೂ ಪತ್ರದಲ್ಲಿದೆ.`ಮುಂದಿನ ಜನ್ಮ ಇದ್ದರೆ ನಿಖಿತಾ ಅವರು ವಿಜಯಲಕ್ಷ್ಮಿ ಸೋದರಿಯಾಗಿ ಹುಟ್ಟಲಿ. ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ಬ್ಯಾನ್ ಎಂಬ ಪದಕ್ಕೇ ಬ್ಯಾನ್ ಮಾಡಲಾಗಿದೆ~ ಎಂದೂ ಹೇಳಲಾಗಿದೆ.ಹತಾಶ ದನಿಯಲ್ಲಿ ಮುನಿರತ್ನ ಅವರು ಆಡಿದ ಮಾತುಗಳಲ್ಲಿ ವ್ಯಂಗ್ಯವೂ ಬೆರೆತಿತ್ತು. ನಿಖಿತಾ ಮೇಲೆ ನಿಷೇಧ ಹೇರಿ, ದರ್ಶನ್ ಅವರನ್ನು ಸುಮ್ಮನೆ ಬಿಟ್ಟದ್ದು ಯಾಕೆ ಎಂಬ ಪ್ರಶ್ನೆಯೂ ಅವರಿಗೆ ಎದುರಾಯಿತು. `ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡು ಹೊರಬರಲಿ. ಆಮೇಲೆ ಚರ್ಚೆ ನಡೆಸೋಣ~ ಎಂದಷ್ಟೆ ಪ್ರತಿಕ್ರಿಯಿಸಿದರು.ಸಂಘದ ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಸೂರಪ್ಪ ಬಾಬು, ಖಜಾಂಚಿ ಪ್ರವೀಣ್ ಕುಮಾರ್ ಹಾಗೂ ಕೆಲವು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ದರ್ಶನ್ ಚೇತರಿಕೆ

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನಲ್ಲಿರುವ ನಟ ದರ್ಶನ್ ಆರೋಗ್ಯ ಸುಧಾರಿಸುತ್ತಿದೆ ಎಂದು ರಾಜೀವ್‌ಗಾಂಧಿ ಎದೆ ರೋಗ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.`ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದರ್ಶನ್ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಶುಕ್ರವಾರ ಆತನನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲಾಗುತ್ತದೆ. ಉಸಿರಾಟದ ಸಮಸ್ಯೆ ಇಲ್ಲದಿರುವುದು ಕಂಡು ಬಂದರೆ ಡಿಸ್ಚಾರ್ಜ್ ಮಾಡಲಾಗುತ್ತದೆ~ ಎಂದು ಆಸ್ಪತ್ರೆ ನಿರ್ದೇಶಕ ಡಾ. ಶಶಿಧರ್ ಬುಗ್ಗಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಪರಪ್ಪನಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.