ನಿಗಾವಹಿಸಿ ಕಾರ್ಯ ನಿರ್ವಹಿಸಲು ಸೂಚನೆ

7

ನಿಗಾವಹಿಸಿ ಕಾರ್ಯ ನಿರ್ವಹಿಸಲು ಸೂಚನೆ

Published:
Updated:

ಹಾವೇರಿ: `ಮುಂಬರುವ ದಿನಗಳಲ್ಲಿ ಬರದ ಭೀಕರತೆ ಹೆಚ್ಚಲಿದೆ. ಆದ್ದರಿಂದ ಅಧಿಕಾರಿಗಳು ಕುಡಿಯುವ ನೀರು, ಬೆಳೆವಿಮೆ ಇತ್ಯಾದಿ ವಿಷಯದಲ್ಲಿ ನಿಗಾ ವಹಿಸಿ ಕಾರ್ಯ ನಿರ್ವಹಿಸಬೇಕು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಜಿ.ಪಂ. ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬರದ ಬೀಕರತೆ ಹೆಚ್ಚುವ ಸಂದರ್ಭ ದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಜನ ಪ್ರತಿನಿಧಿಗಳಿಂದ ಹಾಗೂ ಜನರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕುಡಿಯುವ ನೀರಿನ ಕುರಿತು ನಿರ್ಲಕ್ಷ್ಯ ತೋರಬಾರದೆ ನೀರಿನ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಬೇಕು. ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ  ಯಾವುದಾದರೂ ಕಾಮಗಾರಿ ಬಾಕಿ ಉಳಿದ್ದರೆ ತಕ್ಷಣ ಪೂರ್ಣಗೊಳಿಸ ಬೇಕೆಂದು ಸಲಹೆ ಮಾಡಿದರು.ಪ್ರಸಕ್ತ ವರ್ಷ ಮಳೆ ಕಡಿಮೆಯಾ ಗಿದ್ದರಿಂದ ಶೇ.75 ರಿಂದ 80ರಷ್ಟು ಇಳುವರಿ ಕಡಿಮೆಯಾಗಲಿದೆ. ರಾಷ್ಟ್ರೀಯ ವಿಮೆಗೆ ಸಂಬಂಧಿಸಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಸಮಕ್ಷಮ ಸಮೀಕ್ಷೆ ಮಾಡಿ ಕಂಪನಿಗೆ ವಸ್ತುನಿಷ್ಠ ವರದಿ ನೀಡಬೇಕು ಎಂದರು.ತುಂಗಾಮೇಲ್ದಂಡೆ ಮುಖ್ಯ ಕಾಲುವೆ ಮೂಲಕ ಈಗಾಗಲೇ 167ಕಿ.ಮೀ.ವರೆಗೆ ನೀರು ಹರಿಸಿ ರೈತರ ಜಮೀನುಗಳಿಗೆ ನೀರು ಒದಗಿಸಿದೆ. ಮುಖ್ಯ ಕಾಲುವೆ 177 ಕಿಮೀ.ಯಲ್ಲಿ ರೇಲ್ವೆ ಇಲಾಖೆ ಯಿಂದ ರೇಲ್ವೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸೇತುವೆ ಕಾಮಗಾರಿ ಮುಗಿದ ಬಳಿಕ ಮುಖ್ಯ ಕಾಲುವೆ 197 ಕಿ.ಮೀ.ವರೆಗೆ ನೀರು ಹರಿಸಲಾಗುವುದು ಎಂದು ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್ ಮಾಹಿತಿ ನೀಡಿದರು.ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯ ಒಂದು ಮತ್ತು ಎರಡನೇ ಹಂತದದ ಕಾಮಗಾರಿಗಳು ಪ್ರಗತಿ ಯಲ್ಲಿವೆ. ಬಸಾಪುರ ಏತ ನೀರಾವರಿ ಯೋಜನೆಯಲ್ಲಿ ನೀರೆತ್ತುವ ಯಂತ್ರ ದುರಸ್ತಿ ಮಾಡಿ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದೆ ಎಂದು ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಎಂಜಿನಿಯರ್‌ತಿಳಿಸಿದರು.ಧಾರವಾಡ ಕೆಸಿಸಿ ಬ್ಯಾಂಕ್ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗಳ ಮೂಲಕ ಸೆ.31ವರೆಗೆ 4,400 ಸಣ್ಣ ಮತ್ತು ಅತಿಸಣ್ಣ ರೈತರಿಗೆ 13.90 ಕೋಟಿ ರೂ. ಅಲ್ಪಾವಧಿ ಸಾಲ ವಿತರಿ ಸಿದೆ. ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಜು.31ರ ವರೆಗೆ ಸಾಲಗಾರ ಮತ್ತು ಸಾಲಗಾರ ರಲ್ಲದ 60,153 ರೈತರಿಂದ 122.44 ಕೋಟಿ ರೂ. ವಿಮಾ ಮೊತ್ತಕ್ಕೆ 3.04 ಕೋಟಿ ರೂ. ಬೆಳೆವಿಮೆ ತುಂಬಿಸಿ ಕೊಂಡಿದೆ. ಬೆಳೆ ವಿಮೆ ಕುರಿತು ರೈತರಿಗೆ ಮನವರಿಕೆ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದರು.ನಗರ ಹಾಗೂ ಗ್ರಾಮೀಣ ನೀರು ಸರ ಬರಾಜು ಯೋಜನೆಯಡಿಯ ಸ್ಥಾವರ ಗಳಿಗೆ ಆದ್ಯತೆಯ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ನಿರಂತರ ಜ್ಯೋತಿ ಯೋಜನೆಯಡಿ ಹಾವೇರಿ ಮತ್ತು ಹಾನಗಲ್ ಉಪ ವಿಭಾಗಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಏಜೆನ್ಸಿ ಯವರಿಗೆ ಸೂಚಿಸಲಾಗಿದೆ ಎಂದು ಹೆಸ್ಕಾಂ ಎಂಜಿನಿಯರ್ ಸಭೆಗೆ ತಿಳಿಸಿದರು.ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆ ಫಲಾನುಭವಿಗಳಿಗೆ ವಿದ್ಯುತ್‌ನ್ನು ಒದಗಿಸಲು ರಾಜೀವಗಾಂಧಿ ಯೋಜನೆಯಡಿ ಈಗಾಗಲೇ ಕೈಗೊಳ್ಳ ಲಾಗಿದೆ ಎಂದು ಎಂಜಿನಿಯರ್ ವಿವರಣೆ ನೀಡಿದರು.ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ, ಜಿ.ಪಂ. ಸಿಇಒ ಉಮೇಶ ಕುಸುಗಲ್, ಜಿ.ಪಂ.ನ ವಿವಿಧ ಸ್ಥಾಯಿಸಮಿತಿಗಳ ಅಧ್ಯಕ್ಷರು ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry