ಸೋಮವಾರ, ಜೂನ್ 21, 2021
20 °C

ನಿಗಿ ನಿಗಿಪೊಲಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರರೂಪಕಅಮೆರಿಕ ಕಂಡ ಪ್ರಸಿದ್ಧ ಅಮೂರ್ತ ಚಿತ್ರಕಲಾವಿದ ಜಾಕ್ಸನ್ ಪೊಲಾಕ್, ತನ್ನ ಜೀವನದುದ್ದಕ್ಕೂ ಮದಿರೆಯ ದಾಸನಾಗಿ ಕಡೆಗೆ ಅದರಿಂದಾಗಿಯೇ ಸಾವನ್ನೂ ತಂದುಕೊಂಡವ. ಈತನ ಬದುಕು ಈತನ ಕೃತಿಗಳಷ್ಟೇ ದಟ್ಟವೂ ಸಂಕೀರ್ಣವೂ. ಖ್ಯಾತಿಯಷ್ಟೇ ಅಪಖ್ಯಾತಿಗೂ ತುತ್ತಾದ ಇಂಥ ಮತ್ತೊಬ್ಬ ಕಲಾವಿದ ಬಹುಶಃ ಎಲ್ಲಿಯೂ ಸಿಗಲಾರ. 
ವಿಶ್ವಪ್ರಸಿದ್ಧ ಕಲಾಕೃತಿಗಳೊಂದಿಗೆ ಕನ್ನಡ ಮನಸ್ಸುಗಳ ಸಂವಾದದ ಈ ಮಾಲಿಕೆ ವಾರ

ಬಿಟ್ಟು ವಾರ ಪ್ರಕಟಗೊಳ್ಳಲಿದೆ. ಕಲಾಕಾರ ಹಾಗೂ ಕಲಾಕೃತಿಯ ಪರಿಚಯ ಮತ್ತು

ಆ ಕಲಾಕೃತಿಗೆ ಕವಿತೆ/ಕಥಾರೂಪದ ಪ್ರತಿಕ್ರಿಯೆಯ ವಿಶಿಷ್ಟ ಪ್ರಯೋಗವಿದು.


ಆಧುನಿಕ ಕಲಾಚರಿತ್ರೆಯನ್ನು ಅಧ್ಯಯನ ಮಾಡುವಾಗ ಅಥವಾ ಅಮೆರಿಕ ಕಲಾಜಗತ್ತನ್ನು ಅವಲೋಕಿಸುವಾಗ ಜಾಕ್ಸನ್ ಹೆಸರನ್ನು ಮರೆಯುವಂತೆಯೇ ಇಲ್ಲ. ಕ್ಯಾನ್‌ವಾಸ್ ಮೇಲೆ ಮಸಿ ಚೆಲ್ಲಿದಂತೆ ಭಾಸವಾಗುವ `ಡ್ರಿಪ್ ಪೇಂಟಿಂಗ್~ ಈತ ಕಂಡುಕೊಂಡ ಶೈಲಿ.ಇದೇ ಆತನ ಅಮೂರ್ತ ಕಲಾಕೃತಿಗಳ ಹಿಂದಿನ ಗುಟ್ಟು. 1912ರಲ್ಲಿ ಅಮೆರಿಕದ ಕಾಡಿಯಲ್ಲಿ ಜಾಕ್ಸನ್ ಜನನ. ಆರಿಜೋನಾ, ಚಿಕೊ, ಕ್ಯಾಲಿಫೋರ್ನಿಯಾಗಳಲ್ಲಿ ಬಾಲ್ಯ ಕಳೆಯಿತು. ಬಾಲಕ ಜಾಕ್ಸನ್ ಎಷ್ಟು ತುಂಟನಾಗಿದ್ದನೆಂದರೆ, ಶಾಲೆಯಿಂದಲೇ ಹೊರದೂಡಿಸಿಕೊಂಡಿದ್ದ.ಕ್ಯಾಲಿಫೋರ್ನಿಯಾದಲ್ಲಿದ್ದಾಗ ಲಾಸ್ ಏಂಜಲಿಸ್‌ನ ಮ್ಯಾನ್ಯುಯಲ್ ಕಲಾ ಪ್ರೌಢಶಾಲೆಗೆ ಸೇರ್ಪಡೆಯಾದ. ಅಲ್ಲಿಯೂ ಆತ ಹೆಚ್ಚು ಕಾಲ ಉಳಿಯಲಿಲ್ಲ. 1930ರಲ್ಲಿ ನ್ಯೂಯಾರ್ಕ್‌ನತ್ತ ಪಯಣ. ಥಾಮಸ್ ಹಾರ್ಟ್ ಬೆಂಟನ್‌ನೊಂದಿಗೆ ಕಲೆಯ ಕಲಿಕೆ. ಗುರುವನ್ನೂ ಮೀರಿಸುವ ಲಯಬದ್ಧ ಗೆರೆಗಳು ಆತನಿಗೆ ಒಲಿದಿದ್ದವು.

 

ಇಷ್ಟರ ಮಧ್ಯೆ ಕುಡಿಯುವ ನೀರು ಹಾಗೂ ಮದ್ಯಕ್ಕೂ ವ್ಯತ್ಯಾಸವೇ ಇಲ್ಲವೆಂಬಂತೆ ನಶೆಯ ದಾಸನಾದ. 1938-41ರವರೆಗಿನ ಆತನ ಮೂರು ವರ್ಷಗಳ ಬದುಕಿನಲ್ಲಿ ಕುಡಿತದಿಂದ ಹೊರಬರಲು ನಡೆಸಿದ ಹೋರಾಟ ಅಷ್ಟಿಷ್ಟಲ್ಲ.ಮಾನಸಿಕ ಚಿಕಿತ್ಸೆಗೂ ಒಳಪಟ್ಟ. ಕುಡಿತದಿಂದ ಹೊರಬರಬೇಕಾದರೆ ಆತ ಪೂರ್ಣ ಪ್ರಮಾಣದಲ್ಲಿ ಕಲೆಯಲ್ಲೇ ಮುಳುಗಿ ಹೋಗಬೇಕು ಎಂದು ವೈದ್ಯರು ಸೂಚಿಸಿದರು! ಆತ ಬೈ ಪೋಲಾರ್ ಮಾನಸಿಕ ನ್ಯೂನತೆಯಿಂದ ಬಳಲುತ್ತಿದ್ದ ಎಂಬುದು ಇತ್ತೀಚೆಗೆ ನಡೆದ ಒಂದು ಅಧ್ಯಯನದಿಂದ ತಿಳಿದು ಬಂದಿದೆ.ಇಂಥ ಸಂದಿಗ್ಧತೆಯ ನಡುವೆಯೂ ಆತನ ಬಾಳಲ್ಲಿ ತಂಗಾಳಿಯೊಂದು ಬೀಸಿತು. ಆ ತಂಗಾಳಿಯ ಹೆಸರು ಲೀ ಕ್ರಸ್ನೆರ್. ಜಾಕ್ಸನ್‌ನನ್ನು ಮದುವೆಯಾದ ಆಕೆ, ಮುಂದೆ ಆತ ಹಾಗೂ ಆತನ ಕಲಾಕೃತಿಗಳು ಶಾಶ್ವತವಾಗಿ ಬೆಳಗಲು ಕಾರಣವಾದಳು.ನ್ಯೂಯಾರ್ಕ್ ಬಳಿಯ ದ್ವೀಪವೊಂದರಲ್ಲಿ `ಸ್ಪ್ರಿಂಗ್ಸ್~ ಸ್ಟುಡಿಯೊ ಕಟ್ಟಿ ಅಲ್ಲಿ ಆತ ನೆಲೆಸುವಂತೆ ಮಾಡಿದಳು. ಜಾಕ್ಸನ್ ಕಲಾಕೃತಿಗಳನ್ನು ರಚಿಸುತ್ತಾ ಹೋದ. ತನ್ನ ಅಮೂರ್ತ ಕಲಾಕೃತಿಗಳ ಮೂಲಕ ಭಿತ್ತಿ ಹಾಗೂ ಕುಂಚ ಬಳಸಿ ಚಿತ್ರ ಬರೆಯುವ ಶೈಲಿಗೇ ಸವಾಲೆಸೆದ.ಅನಂತತೆಯನ್ನು, ಕಡು ದಟ್ಟ ವರ್ಣನೆಯನ್ನು ಬಣ್ಣಗಳ ಮೂಲಕ ಕಟ್ಟಿಕೊಟ್ಟ. ಕ್ಯಾನ್‌ವಾಸ್ ಮೇಲೆ ಅಡ್ಡಾದಿಡ್ಡಿ ಚೆಲ್ಲಿದಂತೆ ಕಂಡು ಬರುತ್ತಿದ್ದ, ಹೊಸತನದಿಂದ ಕಂಗೊಳಿಸುತ್ತಿದ್ದ ಕಲಾಕೃತಿಗಳು ಆತನಿಗೆ ಬಹುಬೇಗ ಜನಪ್ರಿಯತೆಯನ್ನು ತಂದುಕೊಟ್ಟವು.`ನೆಲದ ಮೇಲೆ ಕ್ಯಾನ್‌ವಾಸ್ ಹರಡಿ ಚಿತ್ರ ರಚಿಸುವುದು ನನಗಿಷ್ಟ. ಅದು ನನಗೆ ಹೆಚ್ಚು ಹತ್ತಿರವಾದುದು. ಅಲ್ಲದೆ ಚಿತ್ರ ರಚಿಸುವಾಗ ಕ್ಯಾನ್‌ವಾಸ್ ಸುತ್ತಲೂ ಓಡಾಡಿಕೊಂಡು ಬರೆಯಬಹುದು~ ಎಂದು ಒಂದು ಕಡೆ ತನ್ನ ಶೈಲಿಯನ್ನು ಜಾಕ್ಸನ್ ವಿವರಿಸಿದ್ದಾನೆ.1947-1950 ಆತನ ಉತ್ತುಂಗದ ಕಾಲ. ಆಗ `ಲೈಫ್~ ನಿಯತಕಾಲಿಕ `ಜಾಕ್ಸನ್ ಅಮೆರಿಕದ ಜೀವಂತವಿರುವ ಮಹಾನ್ ಚಿತ್ರಕಲಾವಿದನೇ?~ ಎಂಬ ಪ್ರಶ್ನೆ ಎತ್ತಿ ಆತನಿಗೆ ಗೌರವ ಸಲ್ಲಿಸಿತ್ತು. ಚಿತ್ರಗಳಿಗೆ ಶೀರ್ಷಿಕೆ ಕೊಡುವುದನ್ನು ಬಿಟ್ಟು ಜಾಕ್ಸನ್ ಹೊಸ ಪ್ರಯೋಗಕ್ಕಿಳಿದ. ಶೀರ್ಷಿಕೆ ಕೊಡುವುದರಿಂದ ಕಲಾಕೃತಿಗಳು ವಾಚ್ಯವಾಗುತ್ತವೆ ಎಂಬುದು ಆತನ ನಂಬಿಕೆ. ಹೀಗಾಗಿ ಬರುಬರುತ್ತಾ ಹೆಸರಿನ ಬದಲಿಗೆ ಸಂಖ್ಯೆಗಳನ್ನು ಕೊಟ್ಟ. `ಮೇಲ್ ಅಂಡ್ ಫೀಮೇಲ್~, `ಮೂನ್ ವುಮನ್ ಕಟ್ಸ್ ದ ಸರ್ಕಲ್~, `ದಿ ಕೀ~,  `ನಂಬರ್ 1 ನಂಬರ್ 3~ ಈತನ ಕೆಲವು ಪ್ರಸಿದ್ಧ ಕೃತಿಗಳು.1955ರಲ್ಲಿ `ಸೆಂಟ್~ ಮತ್ತು `ಸರ್ಚ್~ ಎಂಬ ಕಲಾಕೃತಿಗಳನ್ನು ರಚಿಸಿದ. ಇವು ಆತನ ಕಟ್ಟಕಡೆಯ ಫಸಲು. ಮರುವರ್ಷ ಆತನಿಂದ ಯಾವ ಕಲಾಕೃತಿಗಳೂ ಹುಟ್ಟಲಿಲ್ಲ.ಮದಿರೆ ಆ ಪ್ರಮಾಣದಲ್ಲಿ ಆತನನ್ನು ಆವರಿಸಿತ್ತು. 1956ರ ಆಗಸ್ಟ್ 11ರಂದು ಆತನ ಮನೆಗೆ ಅನತಿ ದೂರದಲ್ಲೇ ಒಂದು ಅನಾಹುತ ನಡೆದುಹೋಯಿತು. ಕುಡಿತದ ಅಮಲಿನಲ್ಲಿದ್ದ ಆತ ಕಾರು ಅಪಘಾತದಲ್ಲಿ ಸಾವಿಗೆ ಶರಣಾದ. ಆಗ ಆತನಿಗೆ ಕೇವಲ 44ರ ವಯಸ್ಸು.ಜಾಕ್ಸನ್ ಕಲಾಕೃತಿಗಳನ್ನು ಕಲಾ ವಿಮರ್ಶಕರು ವಿಭಿನ್ನ ರೀತಿಯಲ್ಲಿ ಗುರುತಿಸುತ್ತಾರೆ. ಅವರ ಪ್ರಕಾರ  ಜಾಕ್ಸನ್ ಒಬ್ಬ ಪ್ರತ್ಯೇಕತಾವಾದಿ ಕಲಾವಿದ. ಆತನದು ಚಂಚಲ ಚಿತ್ತ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.