ನಿಜಕ್ಕೂ ನೋವಾಗಿದೆ: ಬರಗೂರು

7

ನಿಜಕ್ಕೂ ನೋವಾಗಿದೆ: ಬರಗೂರು

Published:
Updated:

ತುಮಕೂರು: ‘ನನ್ನ ತವರು ಜಿಲ್ಲೆಯ ಉತ್ಸವಕ್ಕೆ ಜಿಲ್ಲಾಡಳಿತ ಕನಿಷ್ಠ ಸೌಜನ್ಯಕ್ಕೂ ಆಹ್ವಾನ ನೀಡದಿರುವುದು ಮನಸಿಗೆ ತುಂಬಾ ನೋವುಂಟು ಮಾಡಿದೆ’ ಎಂದು ಖ್ಯಾತ ನಿರ್ದೇಶಕ ಮತ್ತು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ.ಜಿಲ್ಲಾ ಉತ್ಸವದ ಪ್ರಶಸ್ತಿ ಪುರಸ್ಕೃತ ಚಿತ್ರಗಳ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಶಬರಿ’ ಚಿತ್ರವೂ ಪ್ರದರ್ಶನವಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಗಳ ಜಿಲ್ಲೆಯ ನಿರ್ದೇಶಕರೊಂದಿಗೆ ಸಂವಾದ ಕೂಡ ನಡೆಯಿತು. ಇದೇ ಜಿಲ್ಲೆಯವರಾದ ‘ಮೌನಿ’ ಚಿತ್ರದ ಬ್ಯಾಲದಕೆರೆ ಲಿಂಗದೇವರು, ಬೇರು ಚಿತ್ರದ ಪಿ.ಶೇಷಾದ್ರಿ ಅವರನ್ನು ಚಿತ್ರೋತ್ಸವಕ್ಕೆ ಆಹ್ವಾನಿಸಲಾಗಿತ್ತು. ಆದರೆ ಬರಗೂರು ರಾಮಚಂದ್ರಪ್ಪ ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಲಿಲ್ಲ. ಚಿತ್ರೋತ್ಸವದಲ್ಲಿ ಶಬರಿ ಚಿತ್ರವನ್ನು ಪ್ರದರ್ಶಿಸಿದ ಮೇಲೆ ಬರಗೂರರಿಗೆ ಆಹ್ವಾನ ಏಕೆ ನೀಡಿಲ್ಲ? ಎಂಬ ಪ್ರಶ್ನೆ ಪ್ರಾಜ್ಞರ ವಲಯದಲ್ಲಿ ಗಂಭೀರ ಚರ್ಚೆ ನಡೆದಿದೆ.ಭಾನುವಾರ ಸಾಗರದಲ್ಲಿದ್ದ ಬರಗೂರು ರಾಮಚಂದ್ರಪ್ಪ ಅವರು ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಜಿಲ್ಲಾಡಳಿತ ತಮಗೆ ಆಹ್ವಾನ ನೀಡದಿರುವುದನ್ನು ಅವರು ದೃಢಪಡಿಸಿದ್ದಾರೆ. ತಮ್ಮ ಮನಸಿಗೆ ಆಗಿರುವ ನೋವು ಮತ್ತು ಅಸಮಾಧಾನವನ್ನು ಹೊರಹಾಕಿದ್ದಾರೆ.ಅವರು ಹೇಳಿದ್ದಿಷ್ಟು; ವಾರದ ಹಿಂದೆ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ದೂರವಾಣಿ ಕರೆ ಮಾಡಿ, ‘ಚಿತ್ರೋತ್ಸವಕ್ಕೆ ನಿಮ್ಮ ಶಬರಿ ಚಿತ್ರದ ಪ್ರಿಂಟ್ ಬೇಕಾಗಬಹುದು. ಸಾಧ್ಯವಾದರೆ ನೀವು ಬರಬೇಕಾಗುತ್ತದೆ’ ಎಂದಿದ್ದರು. ಯಾರನ್ನಾದರೂ ಕಳುಹಿಸಿದರೆ ಪ್ರಿಂಟ್ ವ್ಯವಸ್ಥೆ ಮಾಡುತ್ತೇನೆ. ದಿನಾಂಕ ತಿಳಿಸಿದರೆ,  ಸಾಧ್ಯವಾದರೆ ಬರುತ್ತೇನೆ ಎಂದಿದ್ದೆ. ಆದರೆ, ಜಿಲ್ಲಾಡಳಿತದಿಂದ ಆಹ್ವಾನ ಪತ್ರಿಕೆಯೇ ಬರಲಿಲ್ಲ. ಜಿಲ್ಲಾ ಉತ್ಸವದ ದಿನಾಂಕವನ್ನು ತಿಳಿಸಲಿಲ್ಲ. ಆದರೆ, ಪತ್ರಕರ್ತರೊಬ್ಬರು ಚಿತ್ರದ ಪ್ರಿಂಟ್ ತೆಗೆದುಕೊಂಡು ಹೋಗಲು ಬಂದ್ದಿರು. ನಿರ್ಮಾಪಕರಿಗೆ ಹೇಳಿ ಪ್ರಿಂಟ್ ಕಳುಹಿಸುವ ವ್ಯವಸ್ಥೆ ಮಾಡಿದೆ.ಚಿತ್ರೋತ್ಸವದಲ್ಲಿ ಶಬರಿ ಚಿತ್ರ ಪ್ರದರ್ಶನ ಮತ್ತು ಸಂವಾದ ಇದ್ದ ಮೇಲೆ ನನ್ನೇಕೆ ಕರೆಯಲಿಲ್ಲ? ಎನ್ನುವುದು ತಿಳಿಯದು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಗಳ ಜಿಲ್ಲೆಯ ನಿರ್ದೇಶಕರನ್ನು ಸಂವಾದಕ್ಕೆ ಆಹ್ವಾನಿಸಿದ ಮೇಲೆ, ಕನಿಷ್ಠ ಸೌಜನ್ಯಕಾದರೂ ನನಗೂ ಆಹ್ವಾನ ನೀಡಬಹುದಿತ್ತು. ತನ್ನ ಚಿತ್ರದ ಬಗ್ಗೆ ಪ್ರೇಕ್ಷಕರೊಂದಿಗೆ ಸಂವಾದ ನಡೆಸಲು ಎಲ್ಲ ನಿರ್ದೇಶಕನಿಗೂ ಆಸಕ್ತಿ ಇರುತ್ತದೆ. ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿರುವುದಕ್ಕೆ ಹೆಮ್ಮೆಪಡುತ್ತೇನೆ. ಜಿಲ್ಲೆಯಲ್ಲೇ, ಓದಿ, ಉಪನ್ಯಾಸ ವೃತ್ತಿ ಮಾಡಿದ್ದೇನೆ. ಸ್ನಾತಕೋತ್ತರ ಕೇಂದ್ರದ ಮೊದಲ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೇನೆ. ಯಾವುದೇ ಗೋಷ್ಠಿಗೆ ಹಾಕಿಕೊಳ್ಳದಿದ್ದರೂ ಕನಿಷ್ಠ ಉತ್ಸವದಲ್ಲಿ ಊರಿನ ಮಗನಾಗಿ ಪಾಲ್ಗೊಳ್ಳಲು ಆಹ್ವಾನ ಬೇಡವೇ?’ ಎಂದು ತಮ್ಮ ಒಡಲೊಳಗಿನ ವೇದನೆಯನ್ನು ಬಿಚ್ಚಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry