ಶನಿವಾರ, ಜನವರಿ 18, 2020
19 °C

ನಿಜವಾದ ಗೆಳೆಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಶಿಧರ ಮತ್ತು ಪ್ರಕಾಶ್ ಒಳ್ಳೆಯ ಸ್ನೇಹಿತರು. ಸೋಮನಹಳ್ಳಿ ಇವರಿದ್ದ ಊರು. ಇಬ್ಬರೂ ಐದನೆಯ ತರಗತಿಯವರೆಗೆ ಅದೇ ಊರಿನ ಪಾಠಶಾಲೆಯಲ್ಲೇ ಓದಿದರು. ಶಶಿಧರನದು ಬಡ ಕುಟುಂಬ. ಪ್ರಕಾಶನದು ಶ್ರಿಮಂತ ಮನೆತನ; ಅವನ ಅಪ್ಪ ಸಾಹುಕಾರ. ಇಬ್ಬರೂ ತಮ್ಮ ಊರಿನಿಂದ ಐದು ಕಿಲೋಮೀಟರ್ ದೂರದಲ್ಲಿನ ರಾಮನಗರದ ಹಿರಿಯ ಪಾಠಶಾಲೆಯಲ್ಲಿ ಆರನೆಯ ತರಗತಿಗೆ ಸೇರಿದರು.ತುಂಬಾ ದಿನ ಇಬ್ಬರೂ ನಡೆದೇ ಶಾಲೆಗೆ ಹೋಗುತ್ತಿದ್ದರು. ಒಂದು ದಿನ ಪ್ರಕಾಶನಿಗೆ ಅವನ ಅಪ್ಪ ಒಂದು ಸೈಕಲ್ ಕೊಂಡು ತಂದರು. ಶಶಿಧರ ಮತ್ತು ಪ್ರಕಾಶ್ ಇಬ್ಬರೂ ಕೂಡಿಯೇ ಶಾಲೆಗೆ ಹೋಗುತ್ತಿದ್ದರು. ಹಾಗೆಯೇ ಕೆಲವು ದಿನ ಕಳೆದವು.ಸೈಕಲ್ ಇದ್ದದ್ದರಿಂದ ಪ್ರಕಾಶನಿಗೆ ಗೆಳೆಯರು ಹೆಚ್ಚಾದರು. ಅದರ ಇದರ ವೆಚ್ಚಕ್ಕೆಂದು ಅಪ್ಪನೇ ಕೊಟ್ಟ ಹಣವನ್ನೆಲ್ಲ ಪ್ರಕಾಶ ಖರ್ಚು ಮಾಡತೊಡಗಿದ. ದುಂದುವೆಚ್ಚ ಮಾಡದಿರಲು ಶಶಿಧರ ಎಷ್ಟೋ ಸಲ ಸಲಹೆ ಕೊಟ್ಟ. ಅದನ್ನು ಪ್ರಕಾಶ ಕಿವಿಗೆ ಹಾಕಿಕೊಳ್ಳಲೇ ಇಲ್ಲ! ಬದಲಿಗೆ ಅವನಿಂದ ದೂರ ತಿರುಗಲಾರಂಭಿಸಿದ. ಸಾಲದೆನ್ನುವಂತೆ ಸೈಕಲ್ ಮೇಲೆ ಶಾಲೆಗೆ ಒಬ್ಬನೇ ಹೋಗತೊಡಗಿದ!ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಯಿತು. ಇನ್ನೊಂದು ತಿಂಗಳಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತದೆ. ಸ್ನೇಹಿತರೊಂದಿಗೆ ರಾಮನಗರದಲ್ಲೇ ಅಭ್ಯಾಸ ನಡೆಸುವುದಾಗಿ ಪ್ರಕಾಶ ತನ್ನ ತಂದೆಯ ಬಳಿ ಕೇಳಿದ. ಆದರೆ ಅಲ್ಲಿಯವರೆಗಿನ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದ್ದನಾಗಿ ಅದಕ್ಕೆ ಅವರು ಒಪ್ಪಲಿಲ್ಲ. ಅಲೆಯುತ್ತ ಆಡುತ್ತ ಸಂತೋಷವಾಗಿ ಅಲ್ಲೇ ಓದಿಕೊಳ್ಳಬಹುದೆಂದು ಆಸೆಪಟ್ಟಿದ್ದ ಪ್ರಕಾಶನಿಗೆ ನಿರಾಶೆಯೇ ಆಯಿತು. ಆದರೆ ಅಪ್ಪನಿಗೆ ಎದುರು ಹೇಳಲಾಗದೆ ತನ್ನ ಊರಲ್ಲೇ ಓದಿಕೊಳ್ಳತೊಡಗಿದ.ಆದರೆ ಶಶಿಧರನನ್ನು ಭೇಟಿ ಆಗುತ್ತಿರಲಿಲ್ಲ. ಜೊತೆಯಲ್ಲಿ ಓದಿಕೊಳ್ಳಲು ಮನಸ್ಸು ಮಾಡಲಿಲ್ಲ. ಅವನೂ ತನ್ನ ಪಾಡಿಗೆ ತಾನು ವ್ಯಾಸಂಗ ನಡೆಸಿದ್ದ. ಅಗೋ ಇಗೋ ಎನ್ನುವಷ್ಟರಲ್ಲಿ ಒಂದು ತಿಂಗಳು ಕಳೆದೇ ಹೋಯಿತು. ಈ ನಡುವೆ ರಾಮನಗರದ ತಮ್ಮ ಶಾಲೆಗೆ ಹೋಗಿ ಹಾಲ್ ಟಿಕೆಟ್ಟುಗಳನ್ನೂ ತಂದುಕೊಂಡರು.ಪ್ರಕಾಶ್ ಪರೀಕ್ಷೆ ಪ್ರಾರಂಭವಾದ ಮೊದಲ ದಿನದಂದೇ ಬೆಳಿಗ್ಗೆ ಬೇಗ ಎದ್ದು ಸ್ವಲ್ಪ ಹೊತ್ತು ಓದಿಕೊಂಡ. ಆ ನಂತರ ಪರೀಕ್ಷೆಗೆ ಬೇಕಾದ ಪೆನ್ನು, ರಟ್ಟು ಹಾಗೂ ಹಾಲ್ ಟಿಕೆಟ್ ಎಲ್ಲವನ್ನೂ ತೆಗೆದುಕೊಂಡು ಸೈಕಲ್ ಮೇಲೆ ರಾಮನಗರಕ್ಕೆ ಹೊರಟ. ಅದನ್ನು ಶಶಿಧರನೂ ನೋಡಿದ. ಸೈಕಲ್ ಮೇಲಾದರೆ ಬೇಗ ಹೋಗಬಹುದೆಂದುಕೊಂಡು,

`ಪ್ರಕಾಶಾ, ನಾನೂ ಬರ್ತೀನಿ ಕಣೋ... ನನ್ನನ್ನೂ ಕರೆದುಕೊಂಡು ಹೋಗೋ. ಅರ್ಧ ದೂರ ಸೈಕಲ್ಲನ್ನು ನಾನೂ ತುಳಿಯುತ್ತೇನೆ ಕಣೋ...~ ಎಂದು ಕೇಳಿಕೊಂಡ. ಅವನ ಮಾತು ಕೇಳಿಸಲೇ ಇಲ್ಲ ಎನ್ನುವಂತೆ ಪ್ರಕಾಶ ವೇಗವಾಗಿ ಹೊರಟುಹೋದ. ಶಶಿಧರ ನಡೆದುಕೊಂಡೇ ರಾಮನಗರಕ್ಕೆ ಹೊರಟ.ಪರೀಕ್ಷೆ ಪ್ರಾರಂಭವಾಗಲು ಅರ್ಧ ಗಂಟೆ ಇದೆ ಎನ್ನುವ ವೇಳೆಗಾಗಲೇ ಶಶಿಧರ ಶಾಲೆಯ ಹತ್ತಿರಕ್ಕೆ ಬಂದಿದ್ದ. ಅಲ್ಲಿ ದಾರಿಯಲ್ಲಿ ಎರಡೂ ಬದಿಯಲ್ಲಿ ಮುಳ್ಳು ಕಂಟಿಗಳು ಬೆಳೆದಿದ್ದವು. ಹೀಗಾಗಿ ದಾರಿಯ ಉದ್ದಕ್ಕೂ ಎಚ್ಚರಿಕೆಯಿಂದ ಕಾಲಿಡುತ್ತ ನಡೆದಿದ್ದ. ಅಷ್ಟರಲ್ಲಿ ಶಶಿಧರನ ದೃಷ್ಟಿ ಮುಳ್ಳು ಪೊದೆಯೊಂದರಲ್ಲಿ ಸಿಕ್ಕಿಕೊಂಡು ಗಾಳಿಗೆ ರಪರಪನೆ ಸದ್ದು ಮಾಡುತ್ತಿದ್ದ ಒಂದು ಹಾಳೆಯ ಮೇಲೆ ಬಿತ್ತು. ಕುತೂಹಲದಿಂದ ಅದನ್ನು ತೆಗೆದು ಹಿಡಿದು ನೋಡಿದ. ಆಶ್ಚರ್ಯ, ಅದು ಪ್ರಕಾಶನ ಹಾಲ್ ಟಿಕೆಟ್!ಸೈಕಲ್ಲನ್ನು ಗಡಿಬಿಡಿಯಿಂದ ತುಳಿಯುತ್ತ ಹೊರಟಿದ್ದಾಗ ಅವನ ಜೇಬಿನಲ್ಲಿದ್ದ ಇದು ಗಾಳಿಗೆ ಹಾರಿ ಬಿದ್ದುಹೋಗಿರಬಹುದೆಂದು ಊಹಿಸಿದ. ಅದನ್ನು ಜೇಬಿನಲ್ಲಿಸಿಕೊಂಡು ಬಿರಬಿರನೆ ಹೆಜ್ಜೆ ಹಾಕಿದ.ಶಾಲೆಯ ಬಳಿ ಗದ್ದಲ. ನೋಟೀಸ್ ಬೋರ್ಡಿನಲ್ಲಿ ಎಲ್ಲ ವಿದ್ಯಾರ್ಥಿಗಳೂ ತುದಿಗಾಲ ಮೇಲೆ ನಿಂತು ತಂತಮ್ಮ ನೋಂದಣಿ ಸಂಖ್ಯೆಯನ್ನು ಹುಡುಕುತ್ತಿದ್ದರು. ಕೊಠಡಿಯ ಸಂಖ್ಯೆಯನ್ನೂ ತಿಳಿದುಕೊಳ್ಳುತ್ತಿದ್ದರು. ಶಶಿಧರನೂ ತನ್ನ ಕೊಠಡಿಯ ಸಂಖ್ಯೆಯನ್ನು ತಿಳಿದುಕೊಂಡು ಪ್ರಕಾಶನಿಗಾಗಿ ಹುಡುಕಾಡತೊಡಗಿದ. ಅವನು ಎಲ್ಲೂ ಕಾಣಿಸಲಿಲ್ಲ. ಪರೀಕ್ಷೆಗೆ ವೇಳೆಯಾಗುತ್ತಿತ್ತು.ಅಷ್ಟರಲ್ಲಿ ಮುಖ್ಯೋಪಾಧ್ಯಾಯರ ಕೊಠಡಿಯಿಂದ ಅಳುತ್ತಾ ಹೊರಬರುತ್ತಿದ್ದ ಪ್ರಕಾಶ ಕಾಣಿಸಿದ. ಸಮೀಪಿಸಿದ ಶಶಿಧರನಿಗೆ- `ನೋಡೋ ಶಶಿ, ನನ್ನ ಹಾಲ್ ಟಿಕೆಟ್ ಎಲ್ಲೋ ಕಳೆದುಹೋಗಿದೆ. ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಅದಿಲ್ಲದಿದ್ದರೆ ಪರೀಕ್ಷೆ ಬರೆಯಲು ಅವಕಾಶ ಕೊಡುವುದಿಲ್ಲ ಎನ್ನುತ್ತಿದ್ದಾರೆ~ ಎನ್ನುತ್ತ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.`ಪ್ರಕಾಶ, ನಿನ್ನ ಅದೃಷ್ಟ ಚೆನ್ನಾಗಿತ್ತು ಕಣೋ... ದಾರಿಯಲ್ಲಿ ಮುಳ್ಳುಕಂಟಿಯೊಂದಕ್ಕೆ ಅದು ಸಿಕ್ಕಿಹಾಕಿಕೊಂಡಿತ್ತು. ನನಗೆ ಕಣ್ಣಿಗೆ ಬಿತ್ತು. ನಿನ್ನನ್ನೇ ಹುಡುಕುತ್ತಿದ್ದೆ. ಸದ್ಯ ಸಿಕ್ಕಿದೆಯಲ್ಲ. ತಗೋ ನಿನ್ನ ಹಾಲ್ ಟಿಕೆಟ್~ ಎನ್ನುತ್ತ ಶಶಿಧರ ಅದನ್ನು ತೆಗೆದುಕೊಟ್ಟ.ಪ್ರಕಾಶನಿಗೆ ಹೋದ ಪ್ರಾಣ ಮತ್ತೆ ಬಂದಂತಾಯಿತು; ನಿಟ್ಟುಸಿರು ಬಿಟ್ಟ! ಇಂಥ ಗೆಳೆಯನ ಜೊತೆ ತಾನು ನಡೆದುಕೊಂಡ ರೀತಿ ನೆನಪಾಯಿತು...`ಶಶೀ, ನನ್ನನ್ನು ಕ್ಷಮಿಸು. ನೀನು ನನಗೆ ನಿಜವಾದ ಸ್ನೇಹಿತ. ನಾನು ಸಹಾಯ ಮಾಡದಿದ್ದರೂ ನನಗೆ ಸಕಾಲಕ್ಕೆ ನೆರವಾಗಿದ್ದೀಯ~ ಎಂದು ಕಣ್ಣಲ್ಲಿ ನೀರು ತುಂಬಿಕೊಂಡ ಪ್ರಕಾಶ.ಶಶಿಧರ ಅವನ ಕೈಯಲ್ಲಿ ತನ್ನ ಕೈಯನ್ನಿಟ್ಟು,

`ಪ್ರಕಾಶ, ಹಿಂದಿನದೆಲ್ಲವನ್ನೂ ಮರೆತುಬಿಡೋಣ. ಹಿಂದಿನ ಹಾಗೆಯೇ ಇಬ್ಬರೂ ಪಕ್ಕಾ ದೋಸ್ತಿಗಳಾಗೋಣ. ಸರಿಯಾ?~ ಅಂದ. ಮತ್ತೆ ಮುಂದೆಂದೂ ಅವರು ಸ್ನೇಹವನ್ನು ಬಿಡಲಿಲ್ಲ.

 

 

ಪ್ರತಿಕ್ರಿಯಿಸಿ (+)