ಶನಿವಾರ, ಮೇ 28, 2022
27 °C

ನಿಟ್ಟುಸಿರು ಬಿಟ್ಟ ಜನ: ಸೆರೆ ಸಿಕ್ಕ ಕಪ್ಪು ಕೋತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕಳೆದ ನಾಲ್ಕು ದಿನಗಳಿಂದ ನಗರದ ವಿವಿಧೆಡೆ ಸಾರ್ವಜನಿಕರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಕಪ್ಪು ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ)ಯ ಆಸ್ಪತ್ರೆ ಬಳಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.ಕೋತಿ ಹಿಡಿಯುವುದಕ್ಕೆಂದೇ ಗಂಗಾ ವತಿಯಿಂದ ಆಗಮಿಸಿದ್ದ ವಾನರ ತಜ್ಞ, ಅರಣ್ಯ ಇಲಾಖೆ ದಿನಗೂಲಿ ನೌಕರ ಮೌಲಾ ಅವರು ವಾಹನವೊಂದರಲ್ಲಿ ವಿಶೇಷ ಬಲೆ ಇರಿಸಿ, ಉಪಾಯವಾಗಿ ಆಕರ್ಷಿಸಿ ಸಂಜೆ 4.30ರ ವೇಳೆಗೆ ಕೋತಿಯನ್ನು ಯಾಶಸ್ವಿಯಾಗಿ ಸೆರೆ ಹಿಡಿದರು.ವಿಮ್ಸ ಸುತ್ತಮುತ್ತ ಮಧ್ಯಾಹ್ನ ಈ ಕೋತಿ ಜನರ ಮೇಲೆ ದಾಳಿ ನಡೆಸುತ್ತ, ಕೀಟಲೆ ಮಾಡುತ್ತಿರುವ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸರ್ವಸನ್ನದ್ಧರಾಗಿ ಸ್ಥಳಕ್ಕೆ ಧಾವಿಸಿದರು.ಹುಚ್ಚಾಗಿ ವರ್ತಿಸುತ್ತ ಕಂಡಕಂಡ ಜನರ ಮೇಲೆ, ರಸ್ತೆ ಮೇಲೆ ಸಾಗುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದ ಕೋತಿಗೆ ಶೇಂಗಾ ಬೀಜ ಹಾಕುತ್ತ ಬಲೆ ಇರುವ ಜಾಗೆಯವರೆಗೂ ಆಕರ್ಷಿ ಸಲಾಯಿತು. ಬಲೆಯೊಳಗೆ ಇದ್ದ ಮತ್ತಷ್ಟು ಶೇಂಗಾ ತಿನ್ನಲು ಕೋತಿ ಒಳ ನುಗ್ಗುತ್ತಿದ್ದಂತೆಯೇ ಬಾಗಿಲನ್ನು ಭದ್ರಪಡಿಸಲಾಯಿತು, `ಬಹುಶಃ ಈ ಕೋತಿಯು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಾಧ್ಯತೆ ಇದೆ. ಇದು ಹುಚ್ಚಾಟದ ಆರಂಭಿಕ ಹಂತವಾಗಿದ್ದು, ಇನ್ನಷ್ಟು ದಿನ ಕಳೆದಿದ್ದರೆ ಜನರ ಮೇಲೆ ಭೀಕರ ದಾಳಿ ನಡೆಸುವ ಸಾಧ್ಯತೆ ಇತ್ತು' ಎಂದು ಮೌಲಾ ಅವರು `ಪ್ರಜಾವಾಣಿ'ಗೆ ತಿಳಿಸಿದರು.ಕಳೆದ 4 ದಿನಗಳಿಂದ ನಗರದ ಕಪಗಲ್ ರಸ್ತೆ, ಸಿದ್ಧಾರ್ಥ ಕಾಲೋನಿ, ಬಸವೇಶ್ವರ ನಗರ, ಎಸ್.ಜಿ. ಕಾಲೇಜು ರಸ್ತೆ, ಗಾಂಧಿನಗರ, ಕನಕ ದುರ್ಗಮ್ಮ ದೇವಸ್ಥಾನ ಮತ್ತಿತರ ಕಡೆ ಜನರ ಮೇಲೆ ದಾಳಿ ನಡೆಸಿದ್ದ ಈ ಕೋತಿಯು ಕೆಲವರನ್ನು ಗಾಯಗೊಳಿಸಿದ ಕುರಿತು ಇಲಾಖೆಗೆ ದೂರುಗಳು ಬಂದಿದ್ದವು. ಕಳೆದ ಮೂರು ದಿನಗಳಿಂದ ಇದನ್ನು ಹಿಡಿಯಲು ಕಾರ್ಯಾಚರಣೆ ನಡೆಸ ಲಾಗಿತ್ತು. ಆದರೂ `ಲಂಗೂರ' ಜಾತಿಯ ಈ ಕಪ್ಪು ಕೋತಿ ಸುಲಭದಲ್ಲಿ ಬಲೆಗೆ ಬಿದ್ದಿರಲಿಲ್ಲ. ವಾನರ ತಜ್ಞ ಮೌಲಾ ಅವರು ಉಪಾಯದಿಂದ ಅದನ್ನು ಹಿಡಿಯುವಲ್ಲಿ ಸಫಲರಾದರು ಎಂದು ಜಿಲ್ಲಾ ಅರಣ್ಯಾಧಿಕಾರಿ ಮಣಿಕಂಠನ್ ವಿವರಿಸಿದರು.ಒಂದು ವಾರ ಕಾಲ ನಗರದ ಪ್ರಾಣಿ ಸಂಗ್ರಹಾಲಯದಲ್ಲಿ ಈ ಕೊತಿಯನ್ನು ಇರಿಸಿ, ಅದರ ವರ್ತನೆಯನ್ನು ಅವಲೋಕಿಸಲಾಗುತ್ತದೆ. ನಂತರ ಅಗತ್ಯ ಬಿದ್ದರೆ ಸೂಕ್ತ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಕಾಡಿಗೆ ಬಿಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.