ನಿಟ್ಟೂರು ಬಸದಿ: ಎಲ್ಲೆಲ್ಲೂ ಕಲಾಕೃತಿ

7

ನಿಟ್ಟೂರು ಬಸದಿ: ಎಲ್ಲೆಲ್ಲೂ ಕಲಾಕೃತಿ

Published:
Updated:

ಎಂಥಾ ಅದ್ಭುತ! ಎಂಬ ಉದ್ಗಾರ ಜತೆಯಲ್ಲಿದ್ದ ಗೋಪಾಲಕೃಷ್ಣ ಅವರಿಂದ ಬಂತು. ಎಷ್ಟೊಳ್ಳೆ ಚೆಂದನೆಯ ಶಿಲ್ಪಕಲಾ ಕೃತಿಗಳು. ಕಲ್ಲರಳಿ ಹೂವಾಗಿದೆಯಲ್ಲಾ ಎಂದರು. ಅವರ ವರ್ಣಣೆಯ ಮಾತು ಮುಗಿಯುವ ಮುನ್ನವೇ ಬಸದಿ ಮೇಲೆ ಕಣ್ಣು ಹರಿದಾಡಿ ನಾವು ಐಹೊಳೆಯಲ್ಲೇ ನಿಂತಿದ್ದೇವೆ ಅನ್ನಿಸತೊಡಗಿತು.

`ತೆಂಕಣದ ಐಹೊಳೆ' ಖ್ಯಾತಿಯ ಗುಬ್ಬಿ ತಾಲ್ಲೂಕು ನಿಟ್ಟೂರು ಗ್ರಾಮದ ಶಾಂತಿನಾಥ ತೀರ್ಥಂಕರರ ಬಸದಿಯ ಚಿತ್ರಣ ಇದು. ಹೊಯ್ಸಳರ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತಿರುವ ಈ ಬಸದಿಯನ್ನು 11ನೇ ಶತಮಾನದ ಕೊನೆ ಭಾಗದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಬ್ಬಿ ಬಳಿಕ ನಿಟ್ಟೂರು ಗ್ರಾಮ ಸಿಗುತ್ತದೆ.

ಕಲ್ಲುಗಳನ್ನೇ ಹೊಯ್ಸಳರು ಮೇಣ ಮಾಡಿಕೊಂಡು ಕೆತ್ತನೆ ಮಾಡಿರುವಂತಿದೆ ಇಲ್ಲಿಯ ಕಲಾಕೃತಿಗಳು. ಹೊಯ್ಸಳರ ಕಲೆಯ ಎಲ್ಲ ವೈಭವ ತಳಕು ಹಾಕಿಕೊಂಡಿರುವ ಈ ಬಸದಿ, ಜಿಲ್ಲೆಯಲ್ಲಿರುವ ಅತಿ ಪುರಾತನವಾದ ಬಸದಿಯೂ ಆಗಿದೆ.

ಬಳಪದ ಕಲ್ಲು ಬಳಕೆ

ಬಳಪದ ಕಲ್ಲುಗಳನ್ನು ಬಳಸಿ ಬಸದಿ ಕಟ್ಟಲಾಗಿದೆ. ಕಲ್ಲಿನ ಮೇಲಿನ ಸೂಕ್ಷ್ಮ ಕೆತ್ತನೆಗಳ ಕುಸುರಿ ಕೆಲಸ ಕಣ್ಮನ ಸೆಳೆಯುತ್ತವೆ. ಬಸದಿಯ ಹೊರಭಾಗ ಬೇರೆ ಬೇರೆ ಕೆತ್ತನೆಗಳಿದ್ದರೆ, ಒಳಭಾಗದ ಗೋಡೆಯ ಕೆತ್ತನೆಗಳೇ ಬೇರೆಯಾಗಿವೆ. ಹೊರಭಾಗ, ಒಳಭಾಗ ಎರಡರ ಕೆತ್ತನೆಗಳು ಮನಸೂರೆಗೊಳ್ಳುತ್ತವೆ.

ಶಿಲ್ಪಕಲೆಯ ಚೆಲುವೆಲ್ಲವನ್ನೂ ಬಸದಿ ತನ್ನೊಳಗೆ ಇಟ್ಟುಕೊಂಡಿರುವ ಕಾರಣಕ್ಕೇ ನಿಟ್ಟೂರು ಗ್ರಾಮವನ್ನು `ತೆಂಕಣದ (ದಕ್ಷಿಣದ) ಐಹೊಳೆ' ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಒಂದು ಕಾಲಕ್ಕೆ ನಿಟ್ಟೂರಿಗೆ ಅಂಟಿಕೊಂಡಂತಿರುವ ಅದಲಗೆರೆ, ಬಿದರೆ ಗ್ರಾಮಗಳು ಜೈನರ ಪ್ರಮುಖ ನೆಲೆಯಾಗಿದ್ದವು. ಪ್ರವಾಸಿ ಫ್ರಾನ್ಸಿಸ್ ಬುಖಾನನ್ ಬರಹದಲ್ಲೂ ನಿಟ್ಟೂರು ಗ್ರಾಮದ ವರ್ಣನೆಯಿದೆ.

ವೀರ ಬಲ್ಲಾಳ ಈ ಬಸದಿ ಕಟ್ಟಿಸಿದ ಎಂಬ ದಾಖಲೆಗಳಿವೆ. ಬಸದಿಯ ಶಿಲ್ಪಿ ಮಾಳೋಪಿಯ ಮಲ್ಲಯ್ಯ ಎಂದು ಬಸದಿಯ ಒಂದೆಡೆ ಕೆತ್ತಲಾಗಿದೆ. ಬಸದಿಯು ಗರ್ಭಗೃಹ, ಸುಕನಾಸಿ, ನವರಂಗ, ಮುಖಮಂಟಪ, ವಿಮಾನ ಗೋಪುರ ಒಳಗೊಂಡಿದೆ.

ಹಳೆಬೀಡು ದೇವಸ್ಥಾನದಲ್ಲಿ ಇರುವ ಒಂದು ಕಂಬದ ಮಾದರಿ ಹೋಲುವ ಮತ್ತೊಂದು ಕಂಬ ಈ ಬಸದಿಯಲ್ಲಿರುವುದು ವಿಶೇಷ. ಬಸದಿ ಮೂರು ಗರ್ಭಗುಡಿ ಹೊಂದಿದೆ. 8ನೇ ತೀರ್ಥಂಕರ ಚಂದ್ರಪ್ರಭನ ಯಕ್ಷ, ಯಕ್ಷಿ, ಅತಿಶಯ ಶಕ್ತಿಯುಳ್ಳ ಜ್ವಾಲಾಮಾಲಿ ದೇವತೆ ಇಲ್ಲಿನ ಶಕ್ತಿ ದೇವತೆ.

24 ತೀರ್ಥಂಕರರ ಕೆತ್ತನೆ

ವರ್ತಮಾನದ ತೀರ್ಥಂಕರರ ಜೊತೆಯಲ್ಲೇ ಭವಿಷತ್‌ನಲ್ಲಿ ಹುಟ್ಟಿ ಬರಲಿದ್ದಾರೆ ಎಂದು ನಂಬಿರುವ ತೀರ್ಥಂಕರರ ಮೂರ್ತಿಗಳನ್ನು ಬಸದಿಯ ಮೇಲ್ಛಾವಣೆ ಅಂಕಣದಲ್ಲಿ ಕೆತ್ತಲಾಗಿದೆ.ವರ್ತಮಾನದದಲ್ಲಿ ಬಂದು ಹೋಗಿರುವ 24 ತೀರ್ಥಂಕರರ ಕೆತ್ತನೆ ಇಲ್ಲಿದೆ. ಕಲಿಯುಗ ಅಂತ್ಯವಾದ ದಿನದಿಂದ 82 ಸಾವಿರ ವರ್ಷಗಳ ಬಳಿಕ ಭವಿಷ್ಯತ್ ಕಾಲದ ತೀರ್ಥಂಕರರು ಹುಟ್ಟಿ ಬರಲಿದ್ದಾರೆ ಎಂಬುದು ಜೈನರ ನಂಬಿಕೆ. ಭವಿಷ್ಯತ್ ಕಾಲದ ಮೊದಲ ತೀರ್ಥಂಕರರಾದ ಮಹಾಪದ್ಮ ಸೇರಿದಂತೆ 24 ತೀರ್ಥಂಕರರ ಮೂರ್ತಿಗಳನ್ನು ಇಲ್ಲಿ ಕೆತ್ತಲಾಗಿದೆ. ಈ ತೀರ್ಥಂಕರರ ಲಾಂಛನಗಳಾದ ಪ್ರಾಣಿ, ಪಕ್ಷಿಗಳ ಕೆತ್ತನೆ ಮನೋಜ್ಞವಾಗಿದೆ.

ಭಾನುವಾರ ವಿಶೇಷ ಪೂಜೆ

ಶಿಲ್ಪಕಲೆ ಮತ್ತು ಅತಿಶಯ ಶಕ್ತಿ ಕೇಂದ್ರ- ಹೀಗೆ ಎರಡು ನೆಲೆಗಳಿಂದಲೂ ಬಸದಿ ಖ್ಯಾತಿಗಳಿಸಿದೆ. 1969ರಲ್ಲಿ ಪ್ರತಿಷ್ಠಾಪಿಸಿದ ಅಮೃತ ಶಿಲೆಯ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಪೂಜೆ ಸಲ್ಲುತ್ತಿದೆ.

ಜ್ವಾಲಾಮಾಲಿನಿ ಅಮ್ಮ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲಿದೆ ಎಂಬ ನಂಬಿಕೆಯಿಂದ ಸಾಕಷ್ಟು ಭಕ್ತರು ಭೇಟಿಕೊಡುತ್ತಾರೆ. ರಾಜ್ಯದ ನಾನಾ ಕಡೆಗಳಿಂದ ಮಾತ್ರವಲ್ಲ ಉತ್ತರ ಭಾರತದಿಂದಲೂ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ಭಾನುವಾರ ವಿಶೇಷ ಪೂಜೆ ಇರುತ್ತದೆ.

ಬಸದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿದ್ದಾರೆ. ಧರ್ಮಸ್ಥಳದ ಟ್ರಸ್ಟ್ ವತಿಯಿಂದ ರೂ. 50 ಲಕ್ಷ ವೆಚ್ಚದಲ್ಲಿ ಬಸದಿ ಜೀರ್ಣೋದ್ಧಾರಕ್ಕೆ ಮುಂದಡಿ ಇಡಲಾಗಿದೆ. ಜೀರ್ಣೋದ್ಧಾರ ಕೆಲಸ ಇನ್ನಷ್ಟೇ ಆರಂಭವಾಗಬೇಕಾಗಿದೆ. ಗರ್ಭಗುಡಿಯಲ್ಲಿರುವ ಕಲ್ಲಿನ ಕಂಬ ಬಡಿದರೆ ಲೋಹ ಚಿಮ್ಮುಸುವಂಥ ಶಬ್ದ ಹೊರಹೊಮ್ಮುವುದು ಇಲ್ಲಿನ ವಿಸ್ಮಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry