ನಿಡಗುಂದಿ: ಜನಾಕರ್ಷಿಸಿದ ದ್ಯಾಮವ್ವನ ಸೋಗು

7

ನಿಡಗುಂದಿ: ಜನಾಕರ್ಷಿಸಿದ ದ್ಯಾಮವ್ವನ ಸೋಗು

Published:
Updated:

ಆಲಮಟ್ಟಿ: ಶ್ರಿ ಬನಶಂಕರಿದೇವಿ ರಥೋತ್ಸವದ ನಂತರ ಜಾತ್ರೆಯ ಅಂಗವಾಗಿ ಮಂಗಳವಾರ ನಿಡಗುಂದಿ ಪಟ್ಟಣದಲ್ಲಿ ದ್ಯಾಮವ್ವನ ಸೋಗಿನ ವೇಷಧಾರಿಗಳ ಮೆರವಣಿಗೆ ಜನರ ಮನರಂಜಿಸಿತು. ಮಂಗಳವಾರ ನಡೆದ ದ್ಯಾಮವ್ವನ ಸೋಗಿನ ಜಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.ನೂರಾರು ವರ್ಷಗಳಿಂದಲೂ ಸಾಗಿ ಬಂದಿರುವ ಈ ಸೋಗಿನ ಪರಂಪರೆ ಆಯಾ ಮನೆತನಗಳ ಇಂದಿನ ಪೀಳಿಗೆಯವರು ಆಧುನಿಕ ಭರಾಟೆಯಲ್ಲಿಯೂ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಶೇಷ.`ದ್ಯಾಮವ್ವ' ಎಂಬ ದೇವಿಯ ಪ್ರತಿರೂಪವಾಗಿ ಒಬ್ಬ ಯುವಕ ಸೋಗನ್ನು ಹಾಕುತ್ತಾನೆ. ಆತನಿಗೆ ಸುಮಾರು ಎರಡು ಘಂಟೆ ವಿಶೇಷ ಅಲಕಾಂರ ಮಾಡಲಾಗುತ್ತದೆ. ಆತನಿಗೆ ಕಿರೀಟ, ದೇವಿ ಆಕಾಶದಲ್ಲಿ ಬರುತ್ತಾಳೆ ಎಂಬ ಸೂಚನೆಯಂತೆ ಕೈಗೆ ರೆಕ್ಕೆಗಳು, ಕೊರಳಲ್ಲಿ ಬಂಗಾರದ ಆಭರಣಗಳು, ಕಣ್ಣಿಗೆ ಬೆಳ್ಳಿಯ ಲೇಪನ, ಸೊಂಟದಲ್ಲಿ ಡಾಬು ಹೀಗೆ ಆ ದೇವಿಯ ಸೋಗು ಹಾಕುವವನಿಗೆ ಅಲಂಕಾರ ಮಾಡಲಾಗಿರುತ್ತದೆ. ಈ ಬಾರಿ ಈರಣ್ಣ ಬಡದಾನಿ ಎಂಬ ಯುವಕ ದ್ಯಾಮವ್ವನ ಸೋಗು ಹಾಕಿಕೊಂಡಿದ್ದನು.ಹತ್ತಾರು ಯುವಕರು ಎತ್ತುಗಳು ಇಲ್ಲದ ಬಂಡಿಯ ಮೇಲೆ ದ್ವಾಮವ್ವನ ಸೋಗು ಹಾಕಿದವನನ್ನು ಕೂಡಿಸಿ, ತಾವೇ ಆ ಬಂಡಿಯನ್ನು ಹೊತ್ತುಕೊಂಡು ಇಡಿ ಪಟ್ಟಣ ತುಂಬಾ ಸಾಗುತ್ತಾರೆ. ದೇವಿಯ ಸೋಗು ಹಾಕಿದವರ ಪಕ್ಕದಲ್ಲಿ ಗಾಳಿ ಬೀಸುವವರೂ ಇರುತ್ತಾರೆ. ಪೋತದಾರರೂ ತಮ್ಮ ಅಸ್ತಿತ್ವ ತೋರ್ಪಡಿಸುತ್ತಾರೆ.ದೇವಿಯ ಆರಾಧನೆಗಾಗಿ ಚೌಡಕಿ ಪದ ಹಾಡುವ ಜೋಗಮ್ಮ ಹಾಗೂ ಹಾಗೂ ಇನ್ನಿತರರ ವೇಷಧಾರಿಗಳು ಅಲ್ಲಿದ್ದರು.

ಮೆರವಣಿಗೆಯ ಮುಂದೆ ತಮ್ಮ ಮುಖವನ್ನು ಅಲಂಕಾರ ಮಾಡಿಕೊಂಡು ದೇವಾಂಗ ಸಮಾಜದ ಯುವಕರು ಡೊಳ್ಳನ್ನು ಬಾರಿಸುತ್ತಾ ವೀರಾವೇಷದ ಪ್ರದರ್ಶನ ನೀಡಿದರು.ನಿತ್ಯ ಬದುಕಿನಲ್ಲಿ ಇವಾರರು ಈ ಪಾತ್ರಗಳನ್ನು ನಿರ್ವಹಿಸದಿದ್ದರೂ, ಜಾತ್ರೆಯ ದಿನ ಮಾತ್ರ ಅವರವರ ಮನೆತನಕ್ಕೆ ಆದಿ ಕಾಲದಿಂದಲೂ ಬಂದ ವಿಶೇಷ ಸೋಗನ್ನು ಈಗಿನ ಯುವಕರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಒಟ್ಟಾರೇ ಸುಮಾರು 3 ಗಂಟೆ ನಿಡಗುಂದಿಯ ಪ್ರಮುಖ ಬಡಾವಣೆಗಳಲ್ಲಿ ತಿರುಗಿ ನಂತರ ಶ್ರಿ ಬನಶಂಕರಿ ದೇವಸ್ಥಾನಕ್ಕೆ ಬಂದು ಸೋಗಿನ ಮೆರವಣಿಗೆ ಅಂತ್ಯವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry