ನಿಡಶೇಸಿ: ಉಚಿತ ಸಾಮೂಹಿಕ ವಿವಾಹ

7

ನಿಡಶೇಸಿ: ಉಚಿತ ಸಾಮೂಹಿಕ ವಿವಾಹ

Published:
Updated:

ಕುಷ್ಟಗಿ: ತಾಲ್ಲೂಕಿನ ನಿಡಶೇಸಿಯಲ್ಲಿ ಸೋಮವಾರ ಚನ್ನಬಸವ ಶಿವಯೋಗಿಯವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 20 ಜೋಡಿ ವಧು-ವರರು ಶ್ರೀಗಳ ಸಾನ್ನಿಧ್ಯದಲ್ಲಿ ದಾಂಪತ್ಯ ಬದುಕಿಗೆ ಕಾಲಿರಿಸಿದರು.ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಉಜ್ಜಯನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಿತು. ಪೂರ್ಣಕುಂಭ ಕಲಶ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಭಜನೆ ಕಲಾವಿದರು, ಪುರವಂತರ ಸೇವೆ, ವೀರಗಾಸೆ ಕುಣಿತ ಸೇರಿದಂತೆ ಮೆರವಣಿಗೆಯಲ್ಲಿನ ಕಲಾಮೇಳ ಪ್ರಮುಖ ಆಕರ್ಷಣೆಯಾಗಿತ್ತು.ಸಂಜೆ ರಥೋತ್ಸವ (ಉಚ್ಚಾಯ)ದಲ್ಲಿ ಗ್ರಾಮದ ಹಾಗೂ ಸುತ್ತಲಿನ ನೂರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ಪುರಾಣ ಮಹಾಮಂಗಲ, ಸ್ಥಳೀಯ ಕಲಾವಿದರು ಅಭಿನಯಿಸಿದ ನಾಟಕ ಪ್ರದರ್ಶನ ಇತರೆ ಧಾರ್ಮಿಕ ಕಾರ್ಯಕ್ರಮಗಳು ಚನ್ನಬಸವ ಶಿವಾಚಾರ್ಯರ ನೇತೃತ್ವದಲ್ಲಿ ನಡೆದವು.ನಿಡಶೇಸಿಯ ಅಭಿನವ ಚನ್ನಬಸವ ಶಿವಾಚಾರ್ಯರ ಷಷ್ಟಬ್ದಿ ಸಮಾರಂಭ ಮತ್ತು ಪಟ್ಟಾಧಿಕಾರದ ಹನ್ನೆರಡು ವರ್ಷಗಳನ್ನು ಪೂರೈಸಿರುವ  ಹಿನ್ನೆಲೆಯಲ್ಲಿ `ದ್ವಾದಶ ವಾರ್ಷಿಕೋತ್ಸವ~ದ ನಿಮಿತ್ತ ಹಲವು ಧಾರ್ಮಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.  ಮೂರು ದಿನಗಳಿಂದ ಕುಷ್ಟಗಿ ಪಟ್ಟಣದ ಕಲ್ಮಠದಲ್ಲಿ ಪುರಾಣ ಪ್ರವಚನ, ವಿಶೇಷ ಉಪನ್ಯಾಸ, ವಚನ ನೃತ್ಯರೂಪಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಭಕ್ತರಿಂದ ಶ್ರೀಗಳಿಗೆ ಬೆಳ್ಳಿ ಕಿರೀಟಧಾರಣೆ ಮಾಡಲಾಯಿತು. ಧರ್ಮ ಜಾಗೃತಿ ಸಭೆ, ನಿಡಶೇಸಿ ಚನ್ನಬಸವ ಶಿವಾಚಾರ್ಯರಿಗೆ ಭಕ್ತರಿಂದ 31 ತುಲಾಭಾರ ಕಾರ್ಯಕ್ರಮದಲ್ಲಿ ಬೆದವಟ್ಟಿಯ ಶಿವಸಂಗಮೇಶ್ವರ ಶಿವಾಚಾರ್ಯ, ಚಳಗೇರಿ ಅರಳೆಲೆಕಟ್ಟಿಮನಿ ಹಿರೇಮಠದ ವಿರುಪಾಕ್ಷಲಿಂಗ ಶಿವಾಚಾರ್ಯ, ಕೊತಬಾಳದ ಗಂಗಾಧರ ಸ್ವಾಮೀಜಿ ಮತ್ತಿತರ ಮಠಾಧೀಶರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry