ನಿಡಶೇಸಿ ಕೆರೆ:ನೀರು ಪೋಲು– ದುರಸ್ಥಿ

7

ನಿಡಶೇಸಿ ಕೆರೆ:ನೀರು ಪೋಲು– ದುರಸ್ಥಿ

Published:
Updated:

ಕುಷ್ಟಗಿ: ಸತತ ಮಳೆಯಿಂದಾಗಿ ತಾಲ್ಲೂ­ಕಿನ ನಿಡಶೇಸಿ ಕೆರೆ ಭರ್ತಿಯಾಗಿರುವ ಬೆನ್ನಲ್ಲೆ, ಕೆರೆ ಏರಿಯಲ್ಲಿ ಅಲ್ಲಲ್ಲಿ ರಂಧ್ರಗಳು ಕಾಣಿಸಿಕೊಂಡಿವೆ. ಆದರೆ ಗಮನಕ್ಕೆ ಬಂದ ತಕ್ಷಣ ದುರಸ್ತಿ ಕೆಲಸಕ್ಕೆ ಮುಂದಾಗಿದ್ದರಿಂದ ಕೆರೆ ಏರಿ ಒಡೆ­ಯುವ ಅಪಾಯ ಇಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌  ತಿಳಿಸಿದ್ದಾರೆ.ಮಂಗಳವಾರ ರಾತ್ರಿ ರಂಧ್ರಗಳ ಮೂಲಕ ನೀರು ಹರಿಯುತ್ತಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದರಿಂದ ರಾತ್ರಿಯಲ್ಲೇ ಉಸುಕಿನ ಚೀಲಗಳನ್ನು ಇಟ್ಟು ರಂಧ್ರಗಳನ್ನು ಇಡುವ ಕೆಲಸ ನಡೆಸಿದರೂ ಮಳೆ ಕೆಲಸಕ್ಕೆ ಅಡ್ಡಿಯಾಗಿತ್ತು. ಬೆಳಿಗ್ಗೆ ಜೆಸಿಬಿ ಮತ್ತು ಹತ್ತಾರು ಟ್ರ್ಯಾಕ್ಟರ್‌ಗಳು ಮತ್ತು ರಂಧ್ರಗಳನ್ನು ಪತ್ತೆ ಮಾಡುವ ಮುಳುಗು ಹಾಕುವ ಕಾರ್ಮಿಕ­ರೊಂದಿಗೆ ಸ್ಥಳಕ್ಕೆ ಬಂದ ಇಲಾಖೆ ಸಿಬ್ಬಂದಿ ಮತ್ತು ಕೆಲ ಗುತ್ತಿಗೆದಾರರು ರಂಧ್ರಗಳನ್ನು ಮುಚ್ಚಿ ನೀರು ಹೊರ ಹೋಗುವುದನ್ನು ತಡೆಯುವಲ್ಲಿ ಶ್ರಮಿಸುತ್ತಿದ್ದರು.ಕೆರೆ ಒಡೆದಿದೆ ಎಂಬ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ರೈತರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ವರ್ಷ ನೀರು ಇರಲಿಲ್ಲ, ಆಗ ಸಣ್ಣಪುಟ್ಟ ದುರಸ್ತಿ ಕೈಗೊಂಡು ನಿಗಾವಹಿಸಿದ್ದರೆ ಕೆರೆಗೆ ರಂಧ್ರಗಳು ಬೀಳುತ್ತಿರಲಿಲ್ಲ. ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲು ಕ್ರಮ ಕೈಗೊ­ಳ್ಳುವಂತೆ ರೈತರು ಸ್ಥಳದಲ್ಲಿದ್ದ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಒತ್ತಾಯಿಸಿದರು.ಕೆರೆ ತುಂಬಿದರೆ ಒಂದು ವರ್ಷದ­ವರೆಗೂ ಪಟ್ಟಣ ಸೇರಿದಂತೆ ಸುತ್ತಲಿನ ಕೆಲ ಹಳ್ಳಿಗಳ ಕೊಳವೆಬಾವಿಗಳಿಗೆ ಸಾಕಷ್ಟು ನೀರು ಲಭ್ಯವಾಗುತ್ತದೆ, ಆದರೆ ನೀರು ಬಂದರೂ ಅದನ್ನು ಹಿಡಿದಿಕೊಟ್ಟುಕೊಳ್ಳುವಲ್ಲಿ ಇಲಾಖೆ ಅಧಿಕಾರಿಗಳು ಕಾಳಜಿವಹಿಸುವುದೇ ಅಪರೂಪ ಎಂದು ಜಗನ್ನಾಥ ಈಳಗೇರ, ಹನಮಗೌಡ ಬ್ಯಾಲಿಹಾಳ ಮೊದಲಾದವರು ಅಸಮಾಧಾನ ಹೊರಹಾಕಿದರು.ಶಾಸಕ ಭೇಟಿ: ಕೆರೆಗೆ ಬೋಂಗಾ ಬಿದ್ದಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದೊಡ್ಡನಗೌಡ ಪಾಟೀಲ, ದುರಸ್ತಿ ಕಾರ್ಯವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ ಬಗ್ಗೆ ನಿಗಾ ವಹಿಸುವಲ್ಲಿ ಇಲಾಖೆ ಎಂಜಿನಿಯರರ ಕರ್ತವ್ಯಲೋಪ ಎದ್ದುಕಾಣುತ್ತಿದೆ. ಕನಿಷ್ಟ ಪ್ರಮಾಣದ ದುರಸ್ತಿ ಕೆಲಸಗಳನ್ನೂ ನಿರ್ವಹಿಸುತ್ತಿಲ್ಲವೆಂದರೆ ಇವರ ಕೆಲಸವಾದರೂ ಏನು ಎಂಬುದು ಅರ್ಥವಾಗದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಕೆರೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಮಾಡು­ವುದಾಗಿ ದೊಡ್ಡನಗೌಡ ಹೇಳಿದರು.ಸಾರ್ವಜನಿಕರ ಮತ್ತು ಶಾಸಕರ ಆರೋಪವನ್ನು ನಿರಾಕರಿಸಿದ ಸಹಾ­ಯಕ ಕಾರ್ಯನಿರ್ವಾಹಕ ಎಂಜಿನಿ­ಯರ್ ಪ್ರಕಾಶ್, ಜಂಗಲ್ ಕಟಿಂಗ್ ಮತ್ತಿತರೆ ಕೆಲಸಗಳನ್ನು ನಿರ್ವಹಿಸ­ಲಾಗಿದೆ. ಆದರೆ ಕೆಲ ವರ್ಷ ನೀರಿಲ್ಲದ ಕಾರಣ ಹುಳುಹುಪ್ಪಡಿಗಳು ಬಿಲ­ಗಳನ್ನು ಕೊರೆದಿವೆ, ಇದರಲ್ಲಿ ನಮ್ಮ ತಪ್ಪೇನೂ ಇಲ್ಲ ಎಂದು ಸ್ಪಷ್ಟಪಡಿಸಿ­ದರು. ಪದೇಪದೇ ಬೋಂಗಾ ಬೀಳು­ತ್ತಿರುವುದು ಸಾಮಾನ್ಯ ಎಂಬಂತಾ­ಗಿದ್ದು. ಕೆರೆಯೊಳಗೆ ಕೀಟ್ರೆಂಚ್ಮನ ನಿರ್ಮಾಣ ಮಾಡುವುದರಿಂದ ಇಂಥ ಸಮಸ್ಯೆಗಳು ಇರುವುದಿಲ್ಲ ಎಂದು ಸಹಾಯಕ ಎಂಜಿನಿಯರ್ ರಾಠೋಡ್ ಅಭಿಪ್ರಾಯಪಟ್ಟರು.ಗುತ್ತಿಗೆದಾರ ಅಶೋಕ್ ಬಳ್ಳೊಳ್ಳಿ, ಶುಕರಾಜ ತಾಳಕೇರಿ ಮತ್ತಿತರರು ದುರಸ್ತಿ ಕೆಲಸಕ್ಕೆ ನೆರವಾದರು. ರೈತರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಿಪಿಐ ನೀಲಪ್ಪ ಓಲೇ­ಕಾರ, ಸಬ್ಇನಸ್ಪೆಕ್ಟರ್ ಮಹಾದೇವ ಪಂಚಮುಖಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry