ನಿತ್ಯವೂ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

ಶುಕ್ರವಾರ, ಜೂಲೈ 19, 2019
22 °C

ನಿತ್ಯವೂ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

Published:
Updated:

ಇಳಕಲ್: ನಗರದ ಮುಖ್ಯ ಬಜಾರ, ತರಕಾರಿ ಮಾರುಕಟ್ಟೆಯ ಮೂಲಕ ಸಾಗಲು ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಅಡ್ಡಾದಿಡ್ಡಿ ನಿಂತ ವಾಹನಗಳು, ರಸ್ತೆಯ ಆಕ್ರಮಿಸಿಕೊಂಡಿರುವ ಒತ್ತುಬಂಡಿಗಳು, ರಸ್ತೆ ಅತಿಕ್ರಮಿಸಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣಗಳಿಂದಾಗಿ ರಸ್ತೆ ಇಕ್ಕಟ್ಟಾಗಿದೆ.ಜವಳಿ, ಕಿರಾಣಿ, ಸರಾಫ್, ಹಾರ್ಡವೇರ್, ಸ್ಟೇಶನರಿ ಸೇರಿದಂತೆ ಎಲ್ಲ ರೀತಿಯ ಅಂಗಡಿಗಳು ಇಲ್ಲಿಯ ಮುಖ್ಯ ಬಜಾರನಲ್ಲಿವೆ. ಗಾಂಧಿ ಚೌಕದಿಂದ ಬಜಾರದ ಕೊನೆಯಲ್ಲಿರುವ ಬಸವಣ್ಣ ದೇವರ ದೇವಸ್ಥಾನವರೆಗೂ ನಿತ್ಯವೂ ಟ್ರಾಫಿ ಕ್ ಜಾಮ್.ತರಕಾರಿ ಮಾರುಕಟ್ಟೆಯ ಸ್ಥಿತಿಯಂತೂ ಅದ್ವಾನವಾಗಿದೆ. ತರಕಾರಿ ಮಾರಾಟಗಾರರಿಗೆ ವ್ಯವಸ್ಥಿತವಾದ ಪ್ರಾಂಗಣ ಇಲ್ಲ. ರಸ್ತೆಯ ಮೇಲೆ ಗಟಾರಕ್ಕೆ ಹೊಂದಿಕೊಂಡು ವ್ಯಾಪಾರ ಮಾಡುತ್ತಾರೆ. ಗ್ರಾಹಕರು ಒಬ್ಬರಿಗೊಬ್ಬರು ಮೈತಾಗಿಸಿಕೊಂಡೇ ನಡೆದಾಡುವಷ್ಟು ಇಕ್ಕಟ್ಟಿನ ಸ್ಥಳ ಇದಾಗಿದೆ. ವಾಹನಗಳ ಪಾರ್ಕಿಂಗ್‌ಗೆ ಜಾಗವಿಲ್ಲ.ಹೀಗಾಗಿ ರಸ್ತೆಯ ಮೇಲೆ ಪಾರ್ಕಿಂಗ್. ನಗರದ ಅನೇಕ ರಸ್ತೆಗಳು ಇಲ್ಲಿ ಸಂಗಮಗೊಳ್ಳುವುದರಿಂದ ಇಲ್ಲಿ ಸದಾ ಹೆಚ್ಚು ಜನಸಂದಣಿ ಇರುತ್ತದೆ. ಈ ಎಲ್ಲಾ ಸಮಸ್ಯೆಗಳ ನಿವಾರಣೆಗೆ ನಗರಸಭೆಯಿಂದ ಯಾವತ್ತೂ ಪ್ರಯತ್ನಗಳು ನಡೆದಿಲ್ಲ. ಪೊಲೀಸರು ಕೂಡಾ ಸಂಚಾರವನ್ನು ಸುಗಮಗೊಳಿಸುವ ಪ್ರಯತ್ನ ಮಾಡಿಲ್ಲ. ರಸ್ತೆಯು ತರಕಾರಿ ಮಾರ್ಕೆಟ್ ಆದ ಕಾರಣ ಇಲ್ಲಿ ಮನೆ ಹೊಂದಿರುವ ನಾಗರಿಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ.  ಮನೆಯ ಸುತ್ತಲೂ ನಿತ್ಯ ಸಂತೆ ನಡೆದರೆ ನೆಮ್ಮದಿಯಿಂದ ಇರುವುದಾದರೂ ಹೇಗೆ? ತುಂಬಾ ತೊಂದರೆಯಾಗಿದೆ ಎಂದು ಇಲ್ಲಿಯ ನಿವಾಸಿಗಳು ಅಳಲು ತೋಡಿಕೊಂಡರು. ಆದರೆ ನಗರಸಭೆ ಮಾರುಕಟ್ಟೆಯ ಸಮಸ್ಯೆ ನಿವಾರಿಸಲು ಹಾಗೂ ಪರ್ಯಾಯ ವ್ಯವಸ್ಥೆ ಮಾಡುವುದರ ಕಡೆಗೆ ಲಕ್ಷ್ಯ ವಹಿಸುತ್ತಿಲ್ಲ ಎಂದು ಆರೋಪಿಸಿದರು.ಇಕ್ಕಟ್ಟಾದ ತರಕಾರಿ ಮಾರ್ಕೆಟ್‌ನಲ್ಲಿ ಬಿಡಾಡಿ ದನಗಳು, ಗೂಳಿಗಳು ನುಗ್ಗುತ್ತವೆ. ಇದರಿಂದ ಜನ ಭಯದಲ್ಲಿಯೇ ತರಕಾರಿ ಕೊಂಡುಕೊಳ್ಳುತ್ತಾರೆ. ಮಳೆ ಬಂದರಂತೂ ತರಕಾರಿ ಮಾರ್ಕೆಟ್ ಅಕ್ಷರಶಃ ಕೊಳಚೆ ಗುಂಡಿಯಾಗುತ್ತದೆ. 25 ಸಾವಿರ ಜನಸಂಖ್ಯೆ ಇದ್ದಾಗ ಆರಂಭಗೊಂಡಿದ್ದ ತರಕಾರಿ ಮಾರ್ಕೆಟ್ ಈಗ ಲಕ್ಷ ಜನಸಂಖ್ಯೆಯ ಒತ್ತಡವನ್ನು ತಡೆದುಕೊಂಡು, ಜನರಿಗೆ ಅನುಕೂಲ ಕಲ್ಪಿಸಬಲ್ಲದೆ? ಸಾಧ್ಯವೇ ಇಲ್ಲ. ಸೂಕ್ತ ಸ್ಥಳವನ್ನು ಹುಡುಕಿ ಸ್ಥಳಾಂತರಿಸಬೇಕು ಇಲ್ಲವೇ, ನಗರದ ಇತರೆಡೆಗೆ ಇನ್ನೂ ಮೂರ‌್ನಾಲ್ಕು ತರಕಾರಿ ಮಾರುಕಟ್ಟೆಗಳನ್ನು ಆರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರೂ.5 ಕೋಟಿಯ ಮಾರುಕಟ್ಟೆ: ಹನಮಸಾಗರ ರಸ್ತೆಗೆ ಹೊಂದಿಕೊಂಡು, ಸಜ್ಜನಶಾಲೆಯ ಹತ್ತಿರ 5 ಕೋಟಿ ವೆಚ್ಚದಲ್ಲಿ ನಗರಸಭೆ ವತಿಯಿಂದ ಸೂಪರ್ ಮಾರ್ಕೆಟ್ ನಿರ್ಮಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಈ ವಾಣಿಜ್ಯ ಸಂಕೀರ್ಣ ನಿರ್ಮಾಣವಾದರೇ ಸದ್ಯ ತರಕಾರಿ ಮಾರುಕಟ್ಟೆಯ ಮೇಲಿನ ಒತ್ತಡ ಕಡಿಮೆಯಾಗಿ, ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುವುದು ಎಂದು ನಗರಸಭೆ ಅಧಿಕಾರಿ ಜಿ.ಎನ್.ಗೋನಾಳ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry