ನಿತ್ಯಾನಂದಗೆ ಉನ್ನತ ಬಿರುದು- ಯತಿಗಳ ಪ್ರತಿಭಟನೆ

7

ನಿತ್ಯಾನಂದಗೆ ಉನ್ನತ ಬಿರುದು- ಯತಿಗಳ ಪ್ರತಿಭಟನೆ

Published:
Updated:
ನಿತ್ಯಾನಂದಗೆ ಉನ್ನತ ಬಿರುದು- ಯತಿಗಳ ಪ್ರತಿಭಟನೆ

ಲಖನೌ: ರಾಸಲೀಲೆ ಪ್ರಕರಣದಲ್ಲಿ ಸಿಲುಕಿರುವ ಬೆಂಗಳೂರು ಬಳಿಯ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಅವರಿಗೆ ಮಂಗಳವಾರ ರಹಸ್ಯವಾಗಿ `ಮಹಾಮಂಡಲೇಶ್ವರ' ಬಿರುದು ಪ್ರದಾನ ಮಾಡಲಾಗಿದ್ದು, ಈ ನಿರ್ಧಾರವನ್ನು ಶ್ರೀ ಶ್ರೀ ರವಿಶಂಕರ್ ಗುರೂಜಿ ಸೇರಿದಂತೆ ಸ್ವಾಮೀಜಿಗಳ ಒಂದು ವರ್ಗ ತೀವ್ರವಾಗಿ ವಿರೋಧಿಸಿದೆ.ಸಾಧುಗಳ ಪ್ರಮುಖ ಪಂಥಗಳಲ್ಲಿ ಒಂದಾದ `ಪಂಚ ಯತಿ ಆಖಾರ ಮಹಾನಿರ್ವಾಣಿ'ಯು ನಿತ್ಯಾನಂದ ಸ್ವಾಮೀಜಿ ಅವರಿಗೆ ಈ ಉನ್ನತ ಧಾರ್ಮಿಕ ಬಿರುದನ್ನು `ರಹಸ್ಯ ಕಾರ್ಯಕ್ರಮದಲ್ಲಿ' ಪ್ರದಾನ ಮಾಡಿದೆ. ಈ ಬಿರುದಿಗೆ ಪಾತ್ರರಾಗುವುದರೊಂದಿಗೆ ನಿತ್ಯಾನಂದ ಅವರು ಅಲಹಾಬಾದ್‌ನಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ  ಶುಕ್ರವಾರ ರಥದ ಮೇಲೆ ಕುಳಿತುಕೊಳ್ಳಲು ಅರ್ಹರಾಗಲಿದ್ದಾರೆ. ಅಲ್ಲದೇ, ಅಂದು ಅವರು ವಿವಿಧ ಆಕಾರಗಳ ಪ್ರಮುಖ ಯತಿಗಳೊಂದಿಗೆ ಸಂಗಮದಲ್ಲಿ ಪುಣ್ಯಸ್ನಾನವನ್ನೂ ಕೂಡ ಮಾಡಬಹುದಾಗಿದೆ.ನಿತ್ಯಾನಂದ ಸ್ವಾಮೀಜಿ ಅವರಿಗೆ ಈ ಉನ್ನತ ಬಿರುದು ಪ್ರದಾನ ಮಾಡಲಾದ ಈ ಕಾರ್ಯಕ್ರಮದ ಬಗ್ಗೆ ಯಾವುದೇ ಪ್ರಚಾರ ಮಾಡದೆ ಅತ್ಯಂತ ಗೋಪ್ಯವಾಗಿ ಇಡಲಾಗಿತ್ತು; ಎಂದಿನ ಸಂಪ್ರದಾಯದಂತೆ, ಬೇರೆ ಆಖಾರಗಳಿಗಾಗಲೀ ಅಥವಾ ಕುಂಭಮೇಳದ ಅಧಿಕಾರಿಗಳಿಗಾಗಲೀ ಇದನ್ನು ತಿಳಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ನಿತ್ಯಾನಂದ ಅವರಿಗೆ ಬಿರುದು ಪ್ರದಾನ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಇನ್ನಿತರ ಪ್ರಮುಖ ಆಖಾರಗಳ ಪ್ರತಿನಿಧಿಗಳು ಮತ್ತು ಯತಿಗಳು ಪ್ರತಿಭಟನೆ ನಡೆಸಿದರು.`ಈ ನಿರ್ಧಾರವು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಸನ್ಯಾಸಿಗಳ ಬಗ್ಗೆ ಜನತೆಯಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ' ಎಂದರು.

ಆದರೆ, ಮಹಾನಿರ್ವಾಣಿ ಆಖಾರ ಸಮಿತಿ ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ. `ನಿತ್ಯಾನಂದ ಅವರು ಆರೋಪಗಳನ್ನು ಎದುರಿಸುತ್ತಿರಬಹುದು.... ಆದರೆ ಅದು ಅವರ ಖಾಸಗಿ ಬದುಕಿಗೆ ಸಂಬಂಧಿಸಿದ್ದು. ಅವರ ವಿರುದ್ಧದ ಆಪಾದನೆಗಳು ಇನ್ನೂ ಸಾಬೀತಾಗಿಲ್ಲ ಎಂಬುದು ನಮ್ಮ ನೆನಪಿನಲ್ಲಿರಬೇಕು' ಎಂದು ಮಹಾನಿರ್ವಾಣಿ ಆಖಾರದ ಕಾರ್ಯದರ್ಶಿ ಮಹಂತ ರವೀಂದ್ರ ಪುರಿ ಸಮರ್ಥಿಸಿಕೊಂಡರು.`ನಿತ್ಯಾನಂದ ಅವರು ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಯತಿಗಳ ನಡುವಿನ ಸಂಪರ್ಕ ಸೇತುವಾಗಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಜತೆಗೆ, ತಮ್ಮ ಭಾಗದವರಿಗೆ ಉನ್ನತ ಬಿರುದನ್ನು ಪ್ರದಾನ ಮಾಡುವುದಿಲ್ಲ ಎಂಬುದು ದಕ್ಷಿಣ ಭಾರತದ ಯತಿಗಳ ಆಕ್ಷೇಪವಾಗಿತ್ತು. ಈ ಅಂಶಗಳನ್ನೆಲ್ಲಾ ಪರಿಗಣಿಸಿ ನಿತ್ಯಾನಂದ ಅವರಿಗೆ ಈ ಬಿರುದು ಪ್ರದಾನ ಮಾಡಲಾಗಿದೆ' ಎಂದೂ ಪುರಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry