ಶನಿವಾರ, ಮೇ 28, 2022
25 °C

ನಿತ್ಯಾನಂದರಿಂದ ಸತ್ಕಾರ್ಯ ಮಠಗಳಿಗೆ ಕೆಟ್ಟ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: `ಯಾವುದೆ ನಿಶ್ಚಿತ ಸಿದ್ಧಾಂತ ಹಾಗೂ ತತ್ವಾದರ್ಶಗಳಿಲ್ಲದೆ ಕೇವಲ ಹಣ ಬಲದಿಂದ ನಿತ್ಯಾನಂದರಂತಹ ಸ್ವಾಮಿಗಳು ಇಲ್ಲಸಲ್ಲದ ಕೀಳು ಕೆಲಗಳನ್ನು ಮಾಡುತ್ತಿದ್ದು, ಅಂತವರಿಂದ ಸತ್ಕಾರ್ಯದಲ್ಲಿ ತೊಡಗಿರುವ ಮಠ ಮಾನ್ಯಗಳಿಗೆ ಕೆಟ್ಟ ಹೆಸರು ಬರುತ್ತದೆ~ ಎಂದು ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ಸ್ಥಳೀಯ ಜಗದ್ಗುರು ತೋಂಟದಾರ್ಯ ಪ್ರವಚನ ಸಮಿತಿಯು ಇಲ್ಲಿಯ ಶಾಖಾ ಮಠದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ `ರೋಗದಿಂದ ಯೋಗದೆಡೆಗೆ~ ಅಧ್ಯಾತ್ಮ ಪ್ರವಚನದ ಉದ್ಘಾಟನಾ ಸಮಾರಂಭ ಹಾಗೂ 62ನೇ ತ್ರೈಮಾಸಿಕ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.`ಮಠ ಮಾನ್ಯಗಳು ಸಮಾಜದ ಬಹುಮಖ್ಯ ಅಂಗಗಳಾಗಿದ್ದು, ಜನರಿಂದ ಅಥವಾ ಸಮಾಜದಿಂದ ಮುಚ್ಚಿಡುವಂತಹ ಯಾವುದೆ ಕಾರ್ಯ ಚಟುವಟಿಕೆಗಳು ಅಲ್ಲಿ ಜರುಗಬಾರದು. ಜನಸೇವೆಯೇ ಮಠಗಳ ಮುಖ್ಯ ಗುರಿಯಾಗಿರುವಾಗ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿರಬೇಕು. ಎಲ್ಲ ಚಟುವಟಿಕೆಗಳಲ್ಲಿ ಜಾತಿ ಭೇದ ಮರೆತು ಎಲ್ಲರನ್ನೂ ಮುಕ್ತವಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.`ಸಮಾಜವಾದ, ಪ್ರಜಾಪ್ರಭುತ್ವ, ಕಮ್ಯುನಿಜಂ ಮೊದಲಾದ ಜಗತ್ತಿನ ಎಲ್ಲ ಜನತಂತ್ರ ವ್ಯವಸ್ಥೆಗಳು ಬಸವಣ್ಣ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ತತ್ವ ಹಾಗೂ ಸಿದ್ಧಾಂತಗಳ ತಳಹದಿಯ ಮೇಲೆ ನಿಂತಿವೆ. ಈ ಕಾರಣಗಳಿಂದಾಗಿ ಬಸವಣ್ಣ ಮತ್ತು ಅಂಬೇಡ್ಕರ್ ಅವರು ಜನಸಾಮಾನ್ಯರಿಗೆ ಪ್ರಕೃತಿ ನ್ಯಾಯ ಒದಗಿಸಲು ವ್ಯವಸ್ಥೆಯ ವಿರುದ್ಧ ಸದಾ ಹೋರಾಟ ಮಾಡಬೇಕಾಯಿತು~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದಿರು.ಸದಾ ನಿಷ್ಪಕ್ಷಪಾತವಾಗಿರುವ ನೆಲ, ಜಲ, ಗಾಳಿ ಮೊದಲಾದವುಗಳಂತೆ ಬಸವಣ್ಣ ಮತ್ತು ಅಂಬೇಡ್ಕರರ ತತ್ವಗಳು ಪ್ರಕೃತಿ ತತ್ವಗಳಾಗಿದ್ದವು. ಇಬ್ಬರೂ ಸಮಾಜದ ಅಸಮಾನತೆಯ ವಿರುದ್ಧ ಹೋರಾಡಿ ವ್ಯವಸ್ಥೆಯನ್ನು ಸರಿದಾರಿಗೆ ತರದೆ ವಿಫಲರಾದದ್ದು ಈ ಜಗತ್ತಿನ ಬಹುದೊಡ್ಡ ದುಂರತವಾಗಿದೆ~ ಎಂದು ಅವರು ವಿಷಾದ ವ್ಯಕ್ತಪಡಿಸಿದರು. `ದಿನದಿಂದ ದಿನಕ್ಕೆ ವಿವಿಧ ತಜ್ಞ ವೈದ್ಯರ ಸಂಖ್ಯೆ ಹೆಚ್ಚುತ್ತಿದ್ದರೂ ರೋಗಗಳು ಮಾತ್ರ ನಿಯಂತ್ರಣಕ್ಕೆ ಬಾರದೆ ವಿವಿಧ ಬಗೆಯ ಹೊಸ ಹೊಸ ರೋಗಗಳು ಸೃಷ್ಟಿಯಾಗುತ್ತಿವೆ. ಇದರಿಂದ ರೋಗಿಗಳ ಸಂಖ್ಯೆ ಗಣನೀಯವವಾಗಿ ಹೆಚ್ಚಾಗುತ್ತಿದೆ. ಆಹಾರ ಪದ್ಧತಿಯಿಂದ ಔಷಧರಹಿತವಾಗಿ ಭಾಗಶಃ ರೋಗಗಳನ್ನು ನಿವಾರಿಸುವ ಶಕ್ತಿ ಉಪವಾಸ ವ್ರತಕ್ಕೆ ಮಾತ್ರವಿದೆ~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಬಸವಾನಂದ ಸ್ವಾಮೀಜಿ ತಿಳಿಸಿದರು. ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿ ನೂತನ ಅಧ್ಯಕ್ಷ ಕೆ.ವಿ. ಹಂಚಿನಾಳ ಹಾಗೂ ಡಾ.ನಿಂಗು ಸೊಲಗಿ ಪ್ರವಚನವನ್ನು ಉದ್ಘಾಟಿಸಿದರು. ಗೌರಮ್ಮ ಗುಗ್ಗರಿ ಧರ್ಮಗ್ರಂಥ ಪಠಣ ಮಾಡಿದರು. ನೇತ್ರಾ ಮೇಟಿ ವಚನ ಚಿಂತನ ನಡೆಸಿದರು. ಹೇಮಂತಗೌಡ ಪಾಟೀಲ, ಧ್ರುವಕುಮಾರ ಹೊಸಮನಿ, ಶಂಶುದ್ದಿನ್ ಹಾರೋಗೇರಿ, ಕೊಟ್ರಯ್ಯ ಅಮರಗೊಳಹಿರೇಮಠ, ಕೊಟ್ರಮ್ಮ ಇಟಗಿ ವೇದಿಕೆಯ ಮೇಲೆ ಹಾಜರಿದ್ದರು. ಮೃತ್ಯುಂಜಯ ಹಿರೇಮಠ ಪ್ರಾರ್ಥನೆ ಹಾಡಿದರು. ಪ್ರವಚನ ಸೇವಾ ಸಮಿತಿಯ ನೂತನ ಅಧ್ಯಕ್ಷ ಕೊಟ್ರೇಶ ಅಂಗಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಿಶಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.