ನಿತ್ಯಾನಂದ ಆಶ್ರಮ: ಪ್ರತಿಭಟನೆ: ಲಾಠಿ ಪ್ರಹಾರ: 30ಕ್ಕೂ ಹೆಚ್ಚು ಮಂದಿ ಸೆರೆ

7

ನಿತ್ಯಾನಂದ ಆಶ್ರಮ: ಪ್ರತಿಭಟನೆ: ಲಾಠಿ ಪ್ರಹಾರ: 30ಕ್ಕೂ ಹೆಚ್ಚು ಮಂದಿ ಸೆರೆ

Published:
Updated:
ನಿತ್ಯಾನಂದ ಆಶ್ರಮ: ಪ್ರತಿಭಟನೆ: ಲಾಠಿ ಪ್ರಹಾರ: 30ಕ್ಕೂ ಹೆಚ್ಚು ಮಂದಿ ಸೆರೆ

ರಾಮನಗರ: ಒಂದೆಡೆ ವಿವಿಧ ಸಂಘಟನೆಗಳ ಸದಸ್ಯರ ಪ್ರತಿಭಟನೆ, ಇನ್ನೊಂದೆಡೆ ಆಶ್ರಮ ವಾಸಿಗಳ ಆಕ್ರೋಶ, ಆಶ್ರಮದ ಒಳಗೆ ಮತ್ತು ಹೊರಗೆ ಏಕಕಾಲದಲ್ಲಿ ಗಲಾಟೆ, ಸುದ್ದಿಗೋಷ್ಠಿಗೆಂದು ಬಂದಿದ್ದ ಪತ್ರಕರ್ತರಿಗೆ ಆಶ್ರಮ ಪ್ರವೇಶಿಸದಂತೆ ನಿಷೇಧ ಹೇರಿದ್ದ ಶಿಷ್ಯಗಣ, ಪೊಲೀಸರಿಗೂ ಪ್ರವೇಶ ನಿರಾಕರಣೆ, ನಂತರ ಲಘು ಲಾಠಿ ಪ್ರಹಾರ, 30ಕ್ಕೂ ಹೆಚ್ಚು ಜನರ ಬಂಧನ...ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಆಶ್ರಮದಲ್ಲಿ ಶುಕ್ರವಾರ ನಡೆದ ಘಟನೆಗಳಿವು.

ಆಶ್ರಮದ ಬಳಿ ಗುರುವಾರ ಮತ್ತು ಶುಕ್ರವಾರ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಕೆಲ ಸಂಘಟನೆಗಳ 20ಕ್ಕೂ ಹೆಚ್ಚು ಸದಸ್ಯರು, 10 ಮಹಿಳೆಯರೂ ಸೇರಿದಂತೆ 15 ಜನ ಆಶ್ರಮವಾಸಿಗಳನ್ನು ಬಂಧಿಸಿದ ಪೊಲೀಸರು `ಸುವರ್ಣ ನ್ಯೂಸ್~ ಸುದ್ದಿವಾಹಿನಿಯ ವರದಿಗಾರರೊಬ್ಬರನ್ನು ವಶಕ್ಕೆ ತೆಗೆದುಕೊಂಡರು.ನಿತ್ಯಾನಂದ ಸ್ವಾಮೀಜಿಯ ಶಿಷ್ಯರಾದ ಅಚಲಾನಂದ, ಶಾಂತಾನಂದ, ಭಕ್ತಿಕಾನಂದ, ಮನಿಷಾನಂದ, ರಾಘಸುಧಾ, ಮೋಕ್ಷಪ್ರಿಯಾ, ತುರಿಯಾ ಮಹಾರಾಜ್ ಸೇರಿದಂತೆ 15 ಜನರನ್ನು ಬಂಧಿಸಿ ಐಜೂರು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ವಿವಿಧ ಸಂಘಟನೆಗಳ 20ಕ್ಕೂ ಹೆಚ್ಚು  ಕಾರ್ಯಕರ್ತರನ್ನು ಬಂಧಿಸಿ ರಾಮನಗರ ಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.ಘಟನೆಗೆ ಕಾರಣವೇನು?: ನಿತ್ಯಾನಂದ ಸ್ವಾಮೀಜಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಖಾಸಗಿ ಸುದ್ದಿ ವಾಹಿನಿಯ ವರದಿಗಾರರು ಕೇಳಿದ ಪ್ರಶ್ನೆಯಿಂದ ಕೆಂಡಾಮಂಡಲರಾಗಿದ್ದರು. ಶಿಷ್ಯಂದಿರಿಂದ ಆ ಪತ್ರಕರ್ತನನ್ನು ಸುದ್ದಿಗೋಷ್ಠಿಯಿಂದ ಹೊರ ಹಾಕಿಸಿದ್ದರು.ಆಶ್ರಮದಲ್ಲಿ ಗುರುವಾರ ನಡೆದ ಘಟನೆಗಳ ಕುರಿತು ಮಾಹಿತಿ ನೀಡಲು ಸ್ವಾಮೀಜಿ ಶುಕ್ರವಾರ ಮತ್ತೊಂದು ಸುದ್ದಿಗೋಷ್ಠಿ ಏರ್ಪಡಿಸಿದ್ದರು. ಅದಕ್ಕೆ ಎಲ್ಲ ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಆದರೆ 1.30 ಗಂಟೆಯ ನಂತರ ಆಶ್ರಮದ ಒಳಗೆ ಯಾವ ಮಾಧ್ಯಮದವರನ್ನೂ ಬಿಡಲಿಲ್ಲ. ಆ ವೇಳೆಗಾಗಲೆ ಕೇವಲ ಎರಡು-ಮೂರು ಮಾಧ್ಯಮಗಳ ಪ್ರತಿನಿಧಿಗಳು ಮಾತ್ರ ಆಶ್ರಮ ಪ್ರವೇಶಿಸಿದ್ದರು.ಈ ಸಂದರ್ಭದಲ್ಲಿ ಆಶ್ರಮದ ಮುಂಭಾಗ ನಿತ್ಯಾನಂದ ಸ್ವಾಮೀಜಿ, ಅವರ ಭಕ್ತರು ಮತ್ತು ಆಶ್ರಮದ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರು. ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದರು. ಅವರೆಲ್ಲ ಮುಂದೆ ಬಂದು `ಸುದ್ದಿಗೋಷ್ಠಿಗೆ ಮಾಧ್ಯಮದವರನ್ನು ಏಕೆ ಬಿಡುತ್ತಿಲ್ಲ ? ಇದರ ಹಿಂದಿನ ಮರ್ಮ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಪ್ರತಿಭಟನಾಕಾರರು ಆಶ್ರಮಕ್ಕೆ ನುಗ್ಗಲು ಯತ್ನಿಸಿದರು.  ಆಗ ಕುಪಿತಗೊಂಡ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ನಂತರ 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು.ಆಶ್ರಮದ ಒಳಗೂ ಗಲಾಟೆ: ಈ ನಡುವೆ ಆಶ್ರಮದ ಒಳಗೂ ಗಲಾಟೆ, ದಾಂಧಲೆ ನಡೆಯುತ್ತಿತ್ತು. ಆಶ್ರಮ ಪ್ರವೇಶಿಸಿದ್ದ ಕೆಲ ಪತ್ರಕರ್ತರನ್ನು ಉದ್ದೇಶಿಸಿ ಸ್ವಾಮೀಜಿಯ ಭಕ್ತರು ಸುದ್ದಿಗೋಷ್ಠಿ ಆರಂಭಿಸಿದ್ದರು. ಮಾಧ್ಯಮದವರ ಪ್ರಚೋದನೆಯಿಂದ ಕನ್ನಡದ ಗೂಂಡಾಗಳು ದುಂಡಾವರ್ತನೆ ತೋರಿ ಸ್ವಾಮೀಜಿಯ ಶಿಷ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅದು ಹೇಗೋ ಕನ್ನಡ ಸಂಘಟನೆಯ ಇಬ್ಬರು ಕಾರ್ಯಕರ್ತರು ಪತ್ರಕರ್ತರ ಸೋಗಿನಲ್ಲಿ ಸುದ್ದಿಗೋಷ್ಠಿಗೆ ಪ್ರವೇಶಿಸಿದ್ದರು. ಸ್ವಾಮೀಜಿಯ ಶಿಷ್ಯಂದಿರು `ಕನ್ನಡದ ಗೂಂಡಾ~ಗಳು ಎಂದು ಪದ ಪ್ರಯೋಗಿಸಿದ ಕೂಡಲೇ ಅವರು ಎದ್ದು ನಿಂತೂ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸುದ್ದಿಗೋಷ್ಠಿ ಅರ್ಧಕ್ಕೆ ಸ್ಥಗಿತಗೊಂಡಿತು.ಪೊಲೀಸರ ಪ್ರವೇಶಕ್ಕೂ ತಡೆ: ಪತ್ರಕರ್ತರ ಜತೆಗೆ ಪೊಲೀಸರನ್ನು ಆಶ್ರಮ ಪ್ರವೇಶಿಸದಂತೆ ಸ್ವಾಮೀಜಿ ಭಕ್ತರು ನೋಡಿಕೊಂಡರು. `ಆಶ್ರಮದ ಒಳಗೆ ಗಲಾಟೆ ನಡೆಯುತ್ತಿದ್ದು, ಸೂಕ್ತ ರಕ್ಷಣೆ ಮತ್ತು ಬಂದೋಬಸ್ತ್ ಕಲ್ಪಿಸಬೇಕು ಒಳಗೆ ಬಿಡಿ~ ಎಂದು ಪೊಲೀಸರು ಹೇಳಿದರೂ ಸ್ವಾಮೀಜಿ ಶಿಷ್ಯರು ಅವರನ್ನು ಒಳಗೆ ಬಿಡಲಿಲ್ಲ. ಇದರಿಂದ ಆಕ್ರೋಶಗೊಂಡ ಪೊಲೀಸರು `ನಿಮಗೆ ರಕ್ಷಣೆ ನೀಡಲು ಬಂದರೆ ನಮ್ಮನ್ನೇ ಒಳಗೆ ಬಿಡುವುದಿಲ್ಲ ಎಂದರೆ ಹೇಗೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.13ರವರೆಗೆ ನಿಷೇಧಾಜ್ಞೆ ಜಾರಿ

ಧ್ಯಾನಪೀಠ ಆಶ್ರಮದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇದೇ 13ರವರೆಗೆ ಸೆಕ್ಷನ್ 144ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಇದೇ 10ರಂದು ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಈ ರೀತಿಯ ಗಲಾಟೆಗಳು ನಡೆಯುವುದು ಸರಿಯಲ್ಲ. ಜಿಲ್ಲೆಯಲ್ಲಿ ಕಾನೂನು ಸುರಕ್ಷತೆ ಕಾಯ್ದುಕೊಳ್ಳುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಅವರು ಪ್ರತಿಕ್ರಿಯಿಸಿದರು.ನಿತ್ಯಾನಂದ ನಾಪತ್ತೆ?

ಬಿಡದಿ ಧ್ಯಾನಪೀಠ ಆಶ್ರಮದಲ್ಲಿ ಇಷ್ಟೆಲ್ಲ ದಾಂಧಲೆ ನಡೆಯುತ್ತಿದ್ದರೆ ನಿತ್ಯಾನಂದ ಸ್ವಾಮೀಜಿ ನಾಪತ್ತೆಯಾಗಿದ್ದರು.ಭಕ್ತರನ್ನು ಸಮಾಧಾನಪಡಿಸುವುದಾಗಲಿ, ಸೂಕ್ತ ಸ್ಪಷ್ಟನೆ ನೀಡುವ ಗೋಜಿಗಾಗಲಿ ನಿತ್ಯಾನಂದ ಮುಂದಾಗಲಿಲ್ಲ. ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸಲು ಪೊಲೀಸರು ಆಶ್ರಮದಲ್ಲಿ ಶೋಧ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry