ಗುರುವಾರ , ಮೇ 13, 2021
16 °C

ನಿತ್ಯ ಜವ್ವನೆ ವಾಲಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಂಡು ನೀರು ಧುಮ್ಮಿಕ್ಕುವ ತಾಣಗಳಿಗೆ ಹೋಗಬೇಕೆಂದು ಮನಸ್ಸು ಹಾತೊರೆದರೂ, ಮಳೆಗಾಲ ಮುಗಿದಾಕ್ಷಣ ತುಂಬಿಹರಿಯುವ ಜಲಪಾತಗಳು ಬೇಸಿಗೆಯಲ್ಲಿ ಸಣ್ಣ ತೊರೆಯಂತೆ ಕಂಡು ನಿರಾಸೆ ಮೂಡಿಸುತ್ತವೆ.ಆದರೆ ವರ್ಷವಿಡೀ ತಂಪು ಹವಾಮಾನ ಕಾಯ್ದುಕೊಂಡಿರುವ ಪಶ್ಚಿಮಘಟ್ಟದ ಸಾಲುಗಳಲ್ಲಿ ಹರಿಯುವ ಜಲಪಾತಗಳು ಬೇಸಿಗೆಯಲ್ಲೂ ಮೈದುಂಬಿಕೊಂಡು ಮೈಮನಸ್ಸಿಗೆ ತಂಪು ನೀಡುತ್ತವೆ. ಅಂಥ ಜಲಪಾತಗಳಲ್ಲಿ ವಾಲಾರ ಜಲಪಾತವೂ ಒಂದು.ಕೇರಳ ರಾಜ್ಯಕ್ಕೆ ಸೇರಿದ ಈ ಜಲಪಾತ ಇಡುಕ್ಕಿ ಜಿಲ್ಲೆಯಲ್ಲಿ ಬರುತ್ತದೆ. ಕೊಚ್ಚಿ - ಮಧುರೈ ಹೆದ್ದಾರಿಯಲ್ಲಿ ಸಿಗುವ ಆದಿಮಲಿ ಪ್ರದೇಶದಿಂದ ಕೇವಲ 14 ಕಿ.ಮೀ ದೂರದಲ್ಲಿದೆ ಈ ಮನಮೋಹಕ ಜಲಪಾತ. ಇದು ವರ್ಷವಿಡೀ ತುಂಬಿಹರಿದು ನೀರು ಅರಸಿ ಬರುವ ಪ್ರವಾಸಿಗರನ್ನು ಸೆಳೆಯುತ್ತದೆ.ಪ್ರಖ್ಯಾತ ಗಿರಿಧಾಮ ಮುನ್ನಾರ್‌ನಿಂದ ಕೇವಲ 42 ಕಿ.ಮೀ ದೂರ ಇರುವ ವಾಲಾರ ಜಲಪಾತವನ್ನು ಕಣ್ಣಿಗೊಂದು ಹಬ್ಬ ಎಂದು ವರ್ಣಿಸಲಾಗುತ್ತದೆ. ದಿಗಿಲು ಹುಟ್ಟಿಸುವಷ್ಟು ದಟ್ಟವಾಗಿರುವ ಕಾಡಿನಲ್ಲಿ ಸಾಗಿ, ಅಚ್ಚ ಹಸಿರು ತುಂಬಿದ ಜಾಗದಲ್ಲಿ ಹಾಲಿನಂತೆ ಜಾರಿ ಬೀಳುವ ನೀರನ್ನು ನೋಡುತ್ತಾ ಮೈಮರೆಯಬಹುದು.ಬಣ್ಣಬಣ್ಣದ ಪಕ್ಷಿಗಳು ಮತ್ತು ಅಪಾಯಕಾರಿಯಲ್ಲದ ಸಣ್ಣ ಪ್ರಾಣಿಗಳು ಇಲ್ಲಿವೆ. ಮಾಲಿನ್ಯ ಮುಕ್ತವಾದ ಈ ನೀರಿನಲ್ಲಿ ಮುಳುಗೇಳಲು ಬೇಸಿಗೆ ಸಮಯದಲ್ಲಿ ಪ್ರವಾಸಿಗರ ಹಿಂಡೇ ಬರುತ್ತದೆ. ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ದೇವಿಯಾರ್ ನದಿ ಈ ಜಲಪಾತದ ಹುಟ್ಟಿಗೆ ಕಾರಣವಾಗಿದೆ. ಸಾವಿರ ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಧಾರೆಯ ಅಡಿ ನಿಂತುಕೊಳ್ಳುವ ರೋಚಕ ಅನುಭವ ಒಂದು ಕಡೆಯಾದರೆ, ಬಂಡೆಗಳನ್ನು ಏರಿ ಟ್ರೆಕ್ಕಿಂಗ್ ಮಾಡಲು ಬಯಸುವ ಸಾಹಸಿಗರ ಅನುಭವ ಮತ್ತೊಂದು ಬಗೆಯದು. ಈ ಜಲಪಾತದ ಸಮೀಪ ಜಲ ವಿದ್ಯುತ್ ಸ್ಥಾವರ ನಿರ್ಮಿಸಲು ಕೇರಳ ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.