ನಿತ್ಯ ದೂಳಿನ ಸ್ನಾನ, ಹೊಗೆ ಧೂಪ

7

ನಿತ್ಯ ದೂಳಿನ ಸ್ನಾನ, ಹೊಗೆ ಧೂಪ

Published:
Updated:
ನಿತ್ಯ ದೂಳಿನ ಸ್ನಾನ, ಹೊಗೆ ಧೂಪ

ಬೆಂಗಳೂರು: `ಹಾಳಾದ ರಸ್ತೆಗಳ ಕಾರಣದಿಂದ ಗಂಟೆಗಟ್ಟಲೆ ವಾಹನ ದಟ್ಟಣೆಯಲ್ಲಿ ಹೊಗೆ - ದೂಳು ಕುಡಿಯುವುದು ಅನಿವಾರ್ಯವಾಗಿದೆ. ಮಳೆ ಬಂದರಂತೂ ಇಲ್ಲಿನ ರಸ್ತೆಗಳು ಹೊಂಡಗಳಾಗುತ್ತವೆ. ಗುಂಡಿ ಬಿದ್ದು ಹಾಳಾದ ಈ ರಸ್ತೆಗಳಲ್ಲಿ ತೊಂದರೆ ಪಡುತ್ತಾ ಇನ್ನೆಷ್ಟು ದಿನ ಓಡಾಡುವುದೋ ಗೊತ್ತಿಲ್ಲ...~ಕೆ.ಆರ್.ಪುರದಲ್ಲಿ ಹಾಳಾಗಿರುವ ರಸ್ತೆಗಳ ಬಗ್ಗೆ ಸ್ಥಳೀಯರಾದ ನಾಗೇಂದ್ರ ಪ್ರಸಾದ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ.ಕೆ.ಆರ್.ಪುರದ ಹಳೇ ಮದ್ರಾಸು ರಸ್ತೆ, ದೇವಸಂದ್ರ ರಸ್ತೆ, ಬಾಣಸವಾಡಿ ಹಾಗೂ ರಾಮಮೂರ್ತಿನಗರಕ್ಕೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ ಮತ್ತು ಬಡಾವಣೆಯ ಮುಖ್ಯರಸ್ತೆಗಳು ಹಾಳಾಗಿದ್ದು, ಇದರಿಂದ ಈ ಭಾಗದ ಜನರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.`ಕೆ.ಆರ್.ಪುರ ವರ್ತುಲ ರಸ್ತೆ ಹಾಗೂ ಹಳೇ ಮದ್ರಾಸು ರಸ್ತೆಗಳಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಂತರರಾಜ್ಯ ಬಸ್‌ಗಳು ಹಾಗೂ ಲಾರಿಗಳು ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ರಸ್ತೆ ಹಾಳಾಗಿದೆ. ಆದರೆ, ರಸ್ತೆಯ ಸಮರ್ಪಕ ನಿರ್ವಹಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೋತಿದ್ದಾರೆ~ ಎಂದು ನಾಗೇಂದ್ರ ಪ್ರಸಾದ್ ದೂರಿದರು.`ಇಂದಿರಾನಗರದಿಂದ ಸರ್.ಸಿ.ವಿ.ರಾಮನ್‌ನಗರದವರೆಗಿನ ಸ್ವಾಮಿ ವಿವೇಕಾನಂದ ರಸ್ತೆ ಸ್ವಲ್ಪ ಮಟ್ಟಿಗೆ ಚೆನ್ನಾಗಿದೆ. ಕೆ.ಆರ್.ಪುರ ಸಮೀಪಿಸುತ್ತಿದ್ದಂತೇ ಗುಂಡಿ ಬಿದ್ದ ರಸ್ತೆಗಳು ವಾಹನ ಸಂಚಾರಕ್ಕೆ ಸವಾಲಿನಂತೆ ಎದುರಾಗುತ್ತವೆ. ಹಾಳಾದ ರಸ್ತೆಗಳಲ್ಲಿ ಬೈಕ್ ಚಾಲನೆ ಮಾಡುವುದರಿಂದ ನಿತ್ಯ ಮೈನೋವು ತಪ್ಪಿದ್ದಲ್ಲ. ಗುಂಡಿ ಬಿದ್ದ ರಸ್ತೆಗಳ ಕಾರಣದಿಂದ ಬೆನ್ನುಹುರಿಯ ಸಮಸ್ಯೆ ಹೆಚ್ಚಾಗಿದೆ~ ಎಂದು ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಿಶ್ವನಾಥ್ ಹೇಳಿದರು.`ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಸ್ಥಳೀಯ ಶಾಸಕರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಬಹಳಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ನಿತ್ಯ ಈ ರಸ್ತೆಗಳಲ್ಲೇ ಸಂಚರಿಸುವ ಜನಪ್ರತಿನಿಧಿಗಳು ಇಲ್ಲಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದಷ್ಟು ಬೇಗ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು~ ಎಂದು ಅವರು ಒತ್ತಾಯಿಸಿದರು.ಪಾದಚಾರಿಗಳ ಪರದಾಟ: ಕೆ.ಆರ್.ಪುರದ ಹಳೇ ಮದ್ರಾಸು ರಸ್ತೆ, ದೇವಸಂದ್ರ ರಸ್ತೆ ಹಾಗೂ ಸ್ವಾಮಿ ವಿವೇಕಾನಂದ ರಸ್ತೆಗಳಲ್ಲಿ ಸಮರ್ಪಕ ಪಾದಚಾರಿ ಮಾರ್ಗವಿಲ್ಲದೇ ಪಾದಚಾರಿಗಳು ಪರದಾಡುವಂತಾಗಿದೆ. ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ರಸ್ತೆಗಳ ಪಕ್ಕದ ಕಿರಿದಾದ ಜಾಗದಲ್ಲಿ ಸಾರ್ವಜನಿಕರು ಓಡಾಡುವುದು ಅನಿವಾರ್ಯವಾಗಿದೆ.`ರಸ್ತೆಗಳಲ್ಲಿ ಕೆಲವು ಕಡೆ ಪಾದಚಾರಿ ಮಾರ್ಗ ಹಾಳಾಗಿದೆ. ಕೆಲವು ಕಡೆಗಳಲ್ಲಿ ಪಾದಚಾರಿ ಮಾರ್ಗವೇ ಇಲ್ಲ. ರಸ್ತೆ ಪಕ್ಕದ ಚರಂಡಿಗಳ ಮೇಲೆ ಹಾಸುಗಲ್ಲನ್ನು ಹಾಕದೇ ಹಾಗೇ ಬಿಡಲಾಗಿದೆ. ಇದರಿಂದ ಬಸ್ ಇಳಿದು ರಸ್ತೆಗಳಲ್ಲಿ ನಡೆದು ಹೋಗುವುದೇ ಕಷ್ಟವಾಗಿದೆ. ವರ್ತುಲ ರಸ್ತೆಯ ಮೇಲ್ಸೇತುವೆಯ ಕೆಳಭಾಗದಲ್ಲಿ ರಸ್ತೆ ದಾಟುವುದೇ ದೊಡ್ಡ ಸಮಸ್ಯೆಯಾಗಿದೆ.

ಇನ್ನು ಕೆ.ಆರ್.ಪುರ ಬಸ್ ನಿಲ್ದಾಣದ ಬಳಿ ರಸ್ತೆ ದಾಟುವುದು ಒಂದು ಸಾಹಸ. ವಯಸ್ಸಾದವರು ಈ ರಸ್ತೆಗಳಲ್ಲಿ ಓಡಾಡುವುದು ಕಷ್ಟವಾಗಿದೆ. ಸಮರ್ಪಕ ಪಾದಚಾರಿ ಮಾರ್ಗ ಹಾಗೂ ಪಾದಚಾರಿ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯ ಶಾಸಕರಿಗೆ ಮಾಡಿರುವ ಮನವಿ ಇನ್ನೂ ಫಲಕೊಟ್ಟಿಲ್ಲ~ ಎಂದು ಟಿ.ಸಿ.ಪಾಳ್ಯದ ಹಿರಿಯ ನಾಗರಿಕರಾದ ದೇವೇಂದ್ರನಾಥ್ ಅಸಮಾಧಾನ ವ್ಯಕ್ತಪಡಿಸಿದರು.ಮೇಲು ಸೇತುವೆ ಬಳಿಯೇ ಬಸ್ ನಿಲ್ದಾಣ: ಹೊಸಕೋಟೆಗೆ ಮೇಲು ಸೇತುವೆ ಮೂಲಕವೇ ಹಾದುಹೋಗಬೇಕು. ಆದರೆ ವರ್ತುಲ ರಸ್ತೆ ಕಡೆಯಿಂದ ಬರುವ ಬಸ್‌ಗಳು ಮೇಲು ಸೇತುವೆಯ ಪ್ರವೇಶದ ಬಳಿಯೇ ನಿಲ್ಲುತ್ತವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಭಾಗದಲ್ಲಿ ರಸ್ತೆ ದಾಟುವ ವ್ಯವಸ್ಥೆಯೇ ಇಲ್ಲದಿರುವುದರಿಂದ ವಾಹನ ಚಾಲಕರಿಗೂ ತೊಂದರೆಯಾಗುತ್ತಿದೆ. ಇದರ ಜೊತೆಯಲ್ಲಿ ರಸ್ತೆ ದಾಟುವವರಿಗೂ ತೊಂದರೆಯಾಗುತ್ತಿದೆ ಎನ್ನುವುದು ನಾಗರಿಕರ ಅಳಲು.

ನಿತ್ಯವೂ ತೊಂದರೆ:  ರಸ್ತೆ ಹಾಳಾದ ಕಾರಣದಿಂದ ನಿತ್ಯವೂ ಈ ಭಾಗದಲ್ಲಿ ವಾಹನ ದಟ್ಟಣೆ ಸಾಮಾನ್ಯವಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಈ ರಸ್ತೆಗಳು ವಾಹನಗಳಿಂದ ತುಂಬಿ ಹೋಗುತ್ತವೆ. ವರ್ತುಲ ರಸ್ತೆಯ ಮೇಲ್ಸೇತುವೆಯ ಮೇಲೂ ವಾಹನಗಳು ಸಾಲು ಗಟ್ಟಿ ನಿಲ್ಲುವುದು ಅನಿವಾರ್ಯವಾಗಿದೆ.

`ರಸ್ತೆಗಳು ಹಾಳಾಗಿರುವುದು ಹಾಗೂ ವಾಹನಗಳ ಓಡಾಟ ಈ ರಸ್ತೆಗಳಲ್ಲಿ ಹೆಚ್ಚಾಗಿರುವ ಕಾರಣ ನಿತ್ಯವೂ ಇಲ್ಲಿ ವಾಹನ ದಟ್ಟಣೆಯ ಸಮಸ್ಯೆ ಇದ್ದಿದ್ದೇ. ಮಳೆ ಬಂದರಂತೂ ವರ್ತುಲ ರಸ್ತೆಯ ಮೇಲ್ಸೇತುವೆಯ ಕೆಳ ಭಾಗದಲ್ಲಿ ಹಾಗೂ ಕೆ.ಆರ್.ಪುರ ಮಾರುಕಟ್ಟೆ ಭಾಗದಲ್ಲಿ ಎರಡು ಮೂರು ಗಂಟೆಗಳ ಕಾಲ ವಾಹನಗಳ ದಟ್ಟಣೆ ಹೆಚ್ಚಾಗಿ ತೊಂದರೆ ಅನುಭವಿಸುವಂತಾಗಿದೆ~ ಎಂದು ಖಾಸಗಿ ಕಂಪೆನಿ ಉದ್ಯೋಗಿ ಮಹೇಂದ್ರ ತಿಳಿಸಿದರು.

 

 ಶೀಘ್ರವೇ ತಾತ್ಕಾಲಿಕ ದುರಸ್ತಿ`ಕೆ.ಆರ್.ಪುರ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವ ಕಾರಣ ರಸ್ತೆ ಹಾಳಾಗಿದೆ. ಹಾಳಾಗಿರುವ ರಸ್ತೆಗಳನ್ನು ಹಲವು ಬಾರಿ ದುರಸ್ತಿ ಮಾಡಲಾಗಿದೆ. ಸದ್ಯ ತಮಿಳುನಾಡಿನ ಕಡೆಯಿಂದ ಅನಿಲ ಕೊಳವೆಯ ಲೈನ್ ಇದೇ ಮಾರ್ಗವಾಗಿ ಬರುತ್ತಿದೆ. ಅಲ್ಲದೇ ಕೆ.ಆರ್.ಪುರದ ಬಹು ಭಾಗಗಳಲ್ಲಿ ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ.

ಈ ಎಲ್ಲ ಕಾಮಗಾರಿಗಳು ಮುಗಿದ ನಂತರ ಹೊಸದಾಗಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಸದ್ಯಕ್ಕೆ ಗುಂಡಿ ಬಿದ್ದಿರುವ ಕಡೆಗಳಲ್ಲಿ ತಾತ್ಕಾಲಿಕವಾಗಿ ದುರಸ್ತಿ ವ್ಯವಸ್ಥೆ ಮಾಡಲಾಗುವುದು~-ಎನ್.ಎಸ್.ನಂದೀಶ್ ರೆಡ್ಡಿ

ಶಾಸಕರು, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry