ಶನಿವಾರ, ಫೆಬ್ರವರಿ 27, 2021
19 °C
ಸಾಂಕೇತಿಕ ಸಂಕ್ರಾಂತಿ

ನಿತ್ಯ ನೂತನ ಬದುಕ ಪಯಣ

ಪದ್ಮನಾಭ ಭಟ್ Updated:

ಅಕ್ಷರ ಗಾತ್ರ : | |

ನಿತ್ಯ ನೂತನ ಬದುಕ ಪಯಣ

ಮುಂಜಾವಿನ ಸವಿಸವಿ ನಿದ್ದೆ... ಈಗಷ್ಟೇ ಶುರುವಾದ ನಸುಕಿನ ಸಿಹಿಕನಸು ರೋಚಕ ಘಟ್ಟ ತಲುಪುವಷ್ಟರಲ್ಲಿಯೇ ಅಡುಗೆ ಮನೆಯಲ್ಲೇನೋ ಸದ್ದಾಗಿ..,  ಅರೆ ಎಚ್ಚರದಲ್ಲಿ ಇಷ್ಟೇ ತೆರೆದ ಕಣ್ಣಿನೊಳಗೆ ಕನಸಿನ ಇಡೀ ಕನಸೊಂದು ಮುರಿದುಹೋಗಿ... ಹೊದ್ದ ಚಾದರದೊಳಗೂ ಸುಳಿಯುವ ಕಳ್ಳ ಚಳಿಯ ಕಚಗುಳಿ ಆಟಕ್ಕೆ ನಸು ನಡುಗುತ್ತಲೇ ಮುದುಡಿಕೊಳ್ಳುತ್ತಿರುವಾಗ...ಧಕ್ಕನೇ ಆಫೀಸು ಬಾಸ್‌ನ ಸಿಡುಕು ಮುಖ ನೆನಪಾಗಿ, ದಾರಿಯುದ್ದಕ್ಕೂ ಒತ್ತೊತ್ತಾಗಿ ನಿಂತು ಸಮಯ ಕೊಲ್ಲುವ ಅಗಣಿತ ವಾಹನಗಳ ಅಸಹನೀಯ ಟ್ರಾಫಿಕ್‌ ನೆನಪಾಗಿ, ನಿನ್ನೆ ಮಾಡಿದ್ದ ತಂಗಳು ಚಿತ್ರಾನ್ನವನ್ನೇ ತಿನ್ನಬೇಕಾದ್ದು ನೆನಪಾಗಿ, ಆಫೀಸಿನಲ್ಲಿ ಇಂದು ಮುಗಿಸಲೇ ಬೇಕಾದ ಕೆಲಸ, ನಿನ್ನೆಯ ತಪ್ಪನ್ನು ಮುಖ್ಯಸ್ಥರ ಮುಂದೆ ಒಪ್ಪಿಕೊಳ್ಳಬೇಕಿರುವ ವಿಪರ್ಯಾಸ ಎಲ್ಲವೂ ಒಮ್ಮಿಂದೊಮ್ಮೆಲೇ ನೆನಪಾಗಿ ನಿದ್ದೆ ಗಿದ್ದೆಯೆಲ್ಲಾ ಹಾರಿಹೋಗಿ ದಿಗ್ಗನೆದ್ದು ಗಡಿಬಿಡಿಯಲ್ಲಿ ರೆಡಿಯಾಗಿ, ಅದೆಷ್ಟನೆಯದೋ ಮಳಿಗೆಯಿಂದ ಕೆಳಗಿಳಿಯಲು ಲಿಫ್ಟ್‌ಗಾಗಿ ಕಾಯಲು ಸಮಯವಿಲ್ಲದೇ ಧಡಧಡ ಮೆಟ್ಟಿಲಿಳಿದು ಓಡೋಡಿ ಹುಲ್ಲಿನ ಹೊರೆಯಂತೆ ಜನರನ್ನು ತುಂಬಿಕೊಂಡು ಬಂದ ಬಸ್‌ ಏರಿ, ಸಹಪ್ರಯಾಣಿಕರತ್ತ ಸಣ್ಣ ನಗು ತೂರಿ...ಅಬ್ಬಾ, ಬೆಂಗಳೂರಿನಲ್ಲಿ ಹೀಗೆ ಬೆಳಗಾಯಿತು...!ಇನ್ನು ಸಂಜೆಯ ಕತೆಯೂ ತುಂಬ ಭಿನ್ನವೇನಲ್ಲ. ಕೆಲಸದ ಸುಸ್ತು, ಮತ್ತದೇ ಟ್ರಾಫಿಕ್ಕು, ರಶ್ಶು ಬಸ್ಸು, ಮನೆ ಸೇರುವ ಹೊತ್ತಿಗೆ ಸುಸ್ತೋ ಸುಸ್ತು...ಇಂಥ ಜಂಜಡದ ದಿನಚಕ್ರದ ಓಟದಲ್ಲಿ ಸೂರ್ಯನ ಉದಯ–ಅಸ್ತಗಳನ್ನು ಸವಿಯುವ ಪರಿಸ್ಥಿತಿಯಾಗಲೀ ಮನಸ್ಥಿತಿಯಾಗಲಿ ಯಾರಿಗಿದೆ?‘ನಿಸರ್ಗ’ ಎಂದರೆ ‘ಕಬ್ಬನ್‌ ಪಾರ್ಕ್‌ನಲ್ಲಿದ್ಯಲ್ಲಾ ಅದಾ?’ ಎಂದು ಕೇಳುವಂತಹ ಪರಿಸ್ಥಿತಿ ಮಹಾನಗರಗಳಲ್ಲಿದೆ.ಇಂದಿನ ಮಹಾನಗರದ ಜೀವನಶೈಲಿಗೆ ತದ್ವಿರುದ್ಧವಾಗಿ ನಮ್ಮ ಬಹುತೇಕ ಹಬ್ಬಗಳು ನಿಸರ್ಗದೊಂದಿಗೆ ಹೊಂದಿಕೊಂಡೇ ರೂಪುಗೊಂಡವು. ಪ್ರಕೃತಿಯ ಚಲನೆಗೆ– ವಿಕಾಸಕ್ಕೆ ಅದರೊಡನೆಯೇ ಬೆಳೆದು ಬಂದ ಬದುಕಿನ ಆಯಾಮಗಳೊಡನೆ ಮಿಳಿತಗೊಂಡೇ ಆಚರಣೆಗೊಳ್ಳುವಂಥವು.ನಮ್ಮೆದುರಿಗೆ ಇರುವ ಈ ‘ಸಂಕ್ರಾಂತಿ’ ಹಬ್ಬವೂ ಇದಕ್ಕೆ ಹೊರತಲ್ಲ. ಸೂರ್ಯ ತನ್ನ ಚಲನೆಯ ಪಥದ ದಿಕ್ಕನ್ನು ಬದಲಿಸುವ ಮುಹೂರ್ತವನ್ನೇ ಸಡಗರದಿಂದ ಆಚರಿಸುವ ಹಬ್ಬವಿದು.ರೈತ ಆ ವರ್ಷ ಬೆಳೆದ ಹೊಸ ಪೈರನ್ನು ಪೂಜಿಸುವ ಶ್ರಮಸಂಸ್ಕೃತಿಯ ಗಂಧವೂ ಈ ಹಬ್ಬಕ್ಕಿದೆ. ಎಳ್ಳು ಬೆಲ್ಲ ತಿನ್ನುವ, ಒಳ್ಳೊಳ್ಳೆ ಮಾತಾಡುವ ಸಂಕಲ್ಪ ಮಾಡುವ, ಬೆಳೆಯನ್ನು ಪೂಜಿಸುವ, ಎತ್ತುಗಳನ್ನು ಪೂಜಿಸುವ ಆಚರಣೆಗಳೆಲ್ಲವೂ ಹಬ್ಬದ ಮೂಲ ಆಶಯಕ್ಕೆ ಹೊಂದಿಕೊಂಡೇ ಇದೆ.ಆದರೆ ಹೊಲವನ್ನೇ ಕಾಣದ, ಮೇಲ್ಚಾವಣಿಯಲ್ಲಿ ಹಿಡಿಮಣ್ಣಿನಲ್ಲಿ ಯಾವುದೋ ಹೂವಿನ ಗಿಡ ಬೆಳೆದು ಸಂಭ್ರಮಿಸುವ, ಸೂರ್ಯನನ್ನೇ ನೋಡದೇ ದಿನ ಕಳೆದುಬಿಡುವ ಈ ಮಹಾನಗರವೆಂಬ ನಿರ್ವಾತ ಜಗತ್ತಿನಲ್ಲಿ ಈ ಹಬ್ಬದ ಆಚರಣೆಗಳನ್ನು ಹೇಗೆ ಗ್ರಹಿಸುವುದು?ಎರಡು ರೀತಿಯ ಗ್ರಹಿಕೆಗಳು ಹೆಚ್ಚು ಜನಪ್ರಿಯ. ಒಂದು ಹಿರಿಯರು ಮಾಡಿದ ಆಚರಣೆಗಳು ಎಂಬ ಒಂದೇ ಕಾರಣಕ್ಕೆ ಅಂಧವಾಗಿ ಆಚರಿಸುವುದು. ಇನ್ನೊಂದು ಅವೆಲ್ಲವೂ ಮೌಢ್ಯ ಕಂದಾಚಾರಗಳು ಎಂಬ ಕಾರಣ ನೀಡಿ ಪೂರ್ತಿ ತಿರಸ್ಕರಿಸಿಬಿಡುವುದು.ಈ ಎರಡು ದಾರಿಗಳನ್ನು ಹೊರತುಪಡಿಸಿ ಇನ್ನೂ ಒಂದು ದಾರಿಯಿದೆ. ಅದನ್ನು ಬೇಕಾದರೆ ಮಧ್ಯಮಮಾರ್ಗ ಎಂದು ಕರೆಯಬಹುದು. ಸಂಪ್ರದಾಯ ಎಂಬ ಕಾರಣಕ್ಕೇ ಕಣ್ಮುಚ್ಚಿ ಒಪ್ಪಿಕೊಳ್ಳದೇ, ಹಾಗೆಂದು ಮೌಢ್ಯ ಎಂದು ಕಣ್ಮುಚ್ಚಿ ತಿರಸ್ಕರಿಸದೆಯೇ ನಮ್ಮ ಇಂದಿನ ದೇಶಕಾಲದಲ್ಲಿ ನಿಂತು ಹಳೆಯ ಹಬ್ಬಗಳನ್ನು ಒಗ್ಗಿಸಿಕೊಳ್ಳಲು ಪ್ರಯತ್ನಿಸುವ ದಾರಿಯದು.ಆಚರಣೆಗಳನ್ನು ಸಾಂಕೇತಿಕವಾಗಿ ಗ್ರಹಿಸಿ ಅಳವಡಿಸಿಕೊಳ್ಳುವುದೇ ಈ ದಾರಿಯ ಗುರಿ. ಈ ದಾರಿ ನೀಡುವ ಅರಿವಿನಲ್ಲಿ ನೋಡಿದರೆ ಸಂಕ್ರಾಂತಿ ಹೊಸದೇ ಧ್ವನ್ಯಾರ್ಥಗಳಿಂದ ಹೊಳೆಯತೊಡಗುತ್ತದೆ. ನಮ್ಮೊಳಗೇ ಬೆಳೆಯತೊಡಗುತ್ತದೆ. ಇದು ನಮ್ಮನ್ನು ನಾವು ಬೆಳೆಸಿಕೊಳ್ಳುವ ಪರಿಯೂ ಹೌದು.***

ಪೂರ್ವದಲ್ಲಿ ಸೂರ್ಯ ಹುಟ್ಟುತ್ತಾನೆ ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಖಗೋಳ ಶಾಸ್ತ್ರದ ಪ್ರಕಾರ ಸೂರ್ಯ ಕರಾರುವಾಕ್‌ ಆಗಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವುದು ವರ್ಷದಲ್ಲಿ ಎರಡೇ ದಿನ. ಆ ದಿನ ಹಗಲು ರಾತ್ರಿಗಳು 12 ಗಂಟೆಗಳಾಗಿ ಸಮಸಮ ಹಂಚಿಕೊಳ್ಳುತ್ತವೆ. ಆದರೆ ಉಳಿದ ದಿನಗಳು ಹೀಗಿರುವುದಿಲ್ಲ.ಆ ಎರಡು ದಿನಗಳ ಹೊರತಾಗಿ ಉಳಿದ ದಿನಗಳಲ್ಲಿ ಸೂರ್ಯೋದಯ ಪೂರ್ವದಿಂದ ಬಲಕ್ಕೆ ಅಥವಾ ಎಡಕ್ಕೆ ಪಲ್ಲಟಗೊಳ್ಳುತ್ತಾ ಹೋಗುತ್ತದೆ. ಹಾಗೆಯೇ ಸೂರ್ಯಾಸ್ತವೂ ಪಶ್ಚಿಮದಲ್ಲಿ ಇದೇ ಮಾದರಿಯಲ್ಲಿ ಬದಲಾಗುತ್ತಾ ಹೋಗುತ್ತದೆ. ಅದಕ್ಕೆ ಅನುಗುಣವಾಗಿ ಹಗಲು ರಾತ್ರಿಗಳ ಪಾತ್ರಗಳೂ ಬದಲಾಗುತ್ತಿರುತ್ತವೆ.ಜನಪ್ರಿಯ ನಂಬಿಕೆಯನ್ನು ತನ್ನ ಚೌಕಟ್ಟಿನೊಳಗೇ ಮುರಿಯುವ ಈ ಸೂರ್ಯಪಲ್ಲಟದ ವಾಸ್ತವವನ್ನು ಮನುಷ್ಯನೊಳಗಿನ ಒಳಿತು ಕೆಡುಕು ಎಂಬೆರಡು ವಿರುದ್ಧ ದಿಶೆಗಳ  ರೂಪಕವಾಗಿಯೂ ನೋಡಬಹುದು.ಮೇಲು ನೋಟಕ್ಕೆ ಕಪ್ಪು–ಬಿಳುಪು ಎಂಬಷ್ಟು ವಿರುದ್ಧ ದಿಕ್ಕುಗಳಾಗಿ ಕಾಣುವ ಈ ಪರಿಕಲ್ಪನೆಯು ಹಾಗಿರುವುದಿಲ್ಲ. ಯಾವುದೇ ಮನುಷ್ಯ ಪೂರ್ತಿ ಒಳ್ಳೆಯವನೂ ಆಗಿರುವುದಿಲ್ಲ, ಹಾಗೆಯೇ ಪೂರ್ತಿ ಕೆಟ್ಟವನಾಗಿರುವುದೂ ಸಾಧ್ಯವಿಲ್ಲ. ಒಳಿತು ಕೆಡಕುಗಳು ಮನುಷ್ಯನ ಮನೋದಿಗಂತದಲ್ಲಿ ತಮ್ಮ ವ್ಯಾಖ್ಯಾನಿತ ಪಥವನ್ನು ಬದಲಿಸುತ್ತಲೇ ಇರುತ್ತವೆ.‘ಸಂಕ್ರಮಣ’ ಎಂಬಲ್ಲಿಯೇ ಹೊಸ ತಿರುವಿನ ಸೂಚನೆ ಇದೆ. ಬದಲಾವಣೆಯ ಗಾಳಿಯಿದೆ. ಶುಭಸೂಚಕದ ಗಂಧವೂ ಇದೆ. ‘ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು’ ಎಂಬ ನಂಬಿಕೆಯ ಈ ನೆಲದಲ್ಲಿ ಮಾತಿಗೆ ಜ್ಯೋತಿರ್ಲಿಂಗದ ಘನತೆಯಿದೆ. ನವೀನ ಸಂಬಂಧಗಳೇ ಬಾಂಧವ್ಯ ಚಿಗುರಲು ಸಿಹಿ ಮಾತೇ ಸೋಪಾನವೆಂಬುದರ ಸೂಚಕವಾಗಿ ಎಳ್ಳು ಬೆಲ್ಲ ತಿಂದು ಬಾಯಿ ಸಿಹಿಮಾಡಿಕೊಳ್ಳುವ ಸಂಪ್ರದಾಯವೂ ಇದೆ.ಇದಿಷ್ಟೇ ಅಲ್ಲ, ಸಂಕ್ರಾಂತಿಯ ಪ್ರತಿ ಆಚರಣೆಯನ್ನೂ ಹೊಸ ಧ್ವನಿಯೊಂದಿಗೆ ನಮ್ಮ ಬದುಕಿಗೆ ಸಂಬಂಧಿಸಿಕೊಳ್ಳಬಹುದು. ಪೈರು ಪೂಜಿಸುವುದನ್ನು ಶ್ರಮ ಸಂಸ್ಕೃತಿಯ ಫಲಾನಂದದ ಪರಿಯಾಗಿ, ಎತ್ತಿನ ಅಲಂಕಾರವನ್ನು ಪ್ರಾಣಿ ಜಗತ್ತಿನೊಂದಿಗೆ ಮನುಷ್ಯ ಸಂಬಂಧದ ಕುರುಹಾಗಿ, ಕಿಚ್ಚು ಹಾಯಿಸುವುದನ್ನು ತನ್ನೊಳಗಿನ ಅಗ್ನಿದಿವ್ಯ ದಾಟಿಕೊಳ್ಳಬೇಕಾದ ಅನಿವಾರ್ಯತೆಯ ಪ್ರತೀಕವಾಗಿ, ಮನೆಮನೆಯೂ ಊರಿಗೆ ಊರೇ ಸುಣ್ಣ ಬಣ್ಣಗಳಿಂದ ಕಂಗೊಳಿಸುವುದನ್ನು ಬದುಕ ನವೀಕರಣದ ರೂಪಕವಾಗಿ, ಇಡೀ ಸಂಕ್ರಾಂತಿ ಹಬ್ಬವನ್ನು ತನ್ನೊಂದಿಗೆ ಬದುಕ ಹಂಚಿಕೊಂಡ ಎಲ್ಲ ಜೀವಗಳೊಟ್ಟಿಗೇ ತಾನೂ ಒಂದಾಗಿ ಸಂಭ್ರಮಿಸುವ ಜೀವಗಾನವಾಗಿ ನೋಡಬಹುದು.ಸೂರ್ಯದಾರಿಯಂತೆ ಪ್ರತಿ ಕ್ಷಣವೂ ಬದುಕು ಮತ್ತು ಅದು ರೂಪುಗೊಂಡಿರುವ ಜಗತ್ತು ಎರಡೂ ಬದಲಾಗುತ್ತಲೇ ಇರುತ್ತವೆ. ಈ ಬದಲಾವಣೆಯನ್ನೇ ಸಂಭ್ರಮಿಸುವ ಸಂಕ್ರಾಂತಿಯಲ್ಲಿ ಹೊರಜಗತ್ತಿನಂತೆಯೇ ನಮ್ಮೊಳಗಿನ ಮನೋಜಗತ್ತಿನ ಜಡ್ಡುಗಳನ್ನು ತೊಳೆದುಕೊಂಡು ಪುನರುಜ್ಜೀವನಗೊಳ್ಳುವಂತಹ ಪ್ರೇರಣೆಯೂ ಇದೆ. ಅದನ್ನು ಗ್ರಹಿಸಿದಾಗಲೇ ನಿಜದ ‘ಹಬ್ಬ’ ಘಟಿಸಲು ಸಾಧ್ಯ. ಬಾಹ್ಯಬದುಕಿನೊಟ್ಟಿಗೇ ಅಂತರಂಗದಲ್ಲಿಯೂ ಸಂಕ್ರಮಣ ಕಾಲ ಮೂಡಲು ಸಾಧ್ಯ.ಇಲ್ಲದ ಮರೀಚಿಕೆಯ ಬೆನ್ನುಬಿದ್ದು ಒದ್ದಾಡುವುದಕ್ಕಿಂತ ಇರುವ ಬದುಕಿನ ಸಮೃದ್ಧಿಯನ್ನು ಅರಿತುಕೊಳ್ಳುವ ಆಶಯವಾಗಿ, ಜಡಗೊಂಡ ಎಲ್ಲವನ್ನೂ ಸಂಸ್ಕರಿಸಿ ಚಲನಶೀಲಗೊಳಿಸುವ ಸಂಭ್ರಮವಾಗಿ, ತನ್ನ ಸುತ್ತಲಿನ ಎಲ್ಲರನ್ನೂ ಎಲ್ಲವನ್ನೂ ಹೊಸತಾಗಿ ನೋಡುವ, ನಿರ್ವಾಜ್ಯವಾಗಿ ಪ್ರೀತಿಸಲು ಪ್ರೇರಣೆಯಾಗಿ, ನಮಗಿಷ್ಟು ಚಂದದ ಬದುಕನ್ನು ಕೊಟ್ಟ ಈ ಜಗವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವ ನೆಪವಾಗಿ..ಅದೆಷ್ಟನೆಯದೋ ಮಳಿಗೆಯ ವರಾಂಡಾ ಮೆಟ್ಟಲ ಅಂಚಿನ ಪುಟ್ಟ ಕುಂಡದಲ್ಲಿ ಈಗಷ್ಟೇ ಕಣ್ಬಿಡುತ್ತಿರುವ ತಿಳಿಹೂವಿನಷ್ಟೇ ಮುಗ್ಧವಾಗಿ ಮುದ್ದಾಗಿ  ಅರಳಿಕೊಳ್ಳಲಿ ಸಂಕ್ರಾಂತಿ ಎಲ್ಲರ ಎದೆಯಲ್ಲಿ...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.