ಸೋಮವಾರ, ಆಗಸ್ಟ್ 26, 2019
20 °C

ನಿತ್ಯ ರಾಷ್ಟ್ರ ಧ್ವಜಾರೋಹಣ: ಮಾರ್ಗಸೂಚಿ ಪ್ರಕಟ

Published:
Updated:

ಚಾಮರಾಜನಗರ: ಎಲ್ಲ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ನಿತ್ಯವೂ ರಾಷ್ಟ್ರಧ್ವಜ  ಹಾರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಕಟ್ಟುನಿಟ್ಟಾಗಿ ಧ್ವಜಸಂಹಿತೆ ಪಾಲಿಸುವಂತೆಯೂ ಸೂಚಿಸಿದೆ.ಆ. 15ರಿಂದ ನಿರಂತರವಾಗಿ ಪ್ರತಿದಿನ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಾಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ರಾಷ್ಟ್ರಧ್ವಜ ಪ್ರದರ್ಶನವನ್ನು ಲಾಂಛನ ಮತ್ತು ಅಭಿದಾನ (ಅಸಮರ್ಪಕ ಬಳಕೆಯ ತಡೆ) ಕಾಯ್ದೆ 1950 ಮತ್ತು ರಾಷ್ಟ್ರ ಘನತೆಯೆಡೆಗಿನ ಅಪಮಾನ ತಡೆ ಕಾಯ್ದೆ 1971ರ ಅನುಗುಣವಾಗಿ ಭಾರತದ ಧ್ವಜಸಂಹಿತೆ 2002 ರೂಪಿಸಲಾಗಿದೆ.ಈ ಸಂಹಿತೆಯಡಿ ರಾಷ್ಟ್ರಧ್ವಜದ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲ ನಿಯಮ, ಆಚರಣೆ, ಸಂಪ್ರದಾಯ ಮತ್ತು ಸೂಚನೆಗಳು ಅಡಕವಾಗಿವೆ. ರಾಷ್ಟ್ರ ಧ್ವಜಾರೋಹಣ ನೆರವೇರಿಸುವ  ಪಂಚಾಯಿತಿಗಳು ಅತ್ಯಂತ ಎಚ್ಚರಿಕೆಯಿಂದ ಧ್ವಜಸಂಹಿತೆ ಪಾಲಿಸಬೇಕಿದೆ.

ಮಾರ್ಗಸೂಚಿಯಲ್ಲಿ ತಿಳಿಸಿರುವ ಶಿಷ್ಟಾಚಾರ ಹಾಗೂ ನಿಯಮ ಉಲ್ಲಂಘಿಸಬಾರದು ಎಂದು ನಿರ್ದೇಶಿಸಲಾಗಿದೆ. ಸುತ್ತೋಲೆ ಅನ್ವಯ ಆಯಾ ಕಚೇರಿಯ ಮುಖ್ಯಸ್ಥರು ಧ್ವಜಾರೋಹಣಕ್ಕೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.ಈಗಾಗಲೇ, ಪಂಚಾಯಿತಿ ಕಚೇರಿ ಆವರಣಗಳಲ್ಲಿ ಧ್ವಜಸ್ತಂಭಗಳಿದ್ದರೆ ಅದನ್ನೇ ಬಳಸಬೇಕು. ಧ್ವಜಸ್ತಂಭಗಳಿಲ್ಲದೆ ಹೋದರೆ ಕೂಡಲೇ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಯೋಗದೊಂದಿಗೆ ಧ್ವಜಸ್ತಂಭ ನಿರ್ಮಿಸಿಕೊಳ್ಳಬೇಕು. ಧ್ವಜಸ್ತಂಭವು ಕಟ್ಟಡದ ಮುಂಭಾಗ ಅಥವಾ ಮೇಲೆ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.ಧ್ವಜಸ್ತಂಭ ನಿರ್ಮಾಣಕ್ಕೆ ಸಂಬಂಧಿಸಿದ ವೆಚ್ಚವನ್ನು ಪಂಚಾಯತ್‌ರಾಜ್ ಸಂಸ್ಥೆಗಳು ತಮ್ಮ ನಿಧಿಯಿಂದ ಭರಿಸಬೇಕು. ಸ್ವಂತ ಸಂಪನ್ಮೂಲ ಅಥವಾ 13ನೇ ಹಣಕಾಸು ಆಯೋಗದ ಅನುದಾನದಿಂದ ವೆಚ್ಚ ಭರಿಸಬೇಕು. ಇದಕ್ಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.ಧ್ವಜದ ಅಳತೆ ಎಷ್ಟು?: ಪಂಚಾಯಿತಿಗಳು ಯಾವ ಅಳತೆಯ ಧ್ವಜ ಪಡೆಯಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಧ್ವಜ ಸಂಹಿತೆಯಲ್ಲಿ ನಮೂದಿಸಿರುವ ಭಾಗ 1ರ ಅಳತೆಯ ಧ್ವಜಗಳು ಅಂದರೆ 4 (1800*1200 ಮಿ.ಮೀ), 5 (1350*900 ಮಿ.ಮೀ) ಮತ್ತು 6 (900*600 ಮಿ.ಮೀ) ರಂತೆ ಕ್ರಮವಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳು ಅಳವಡಿಸಿಕೊಳ್ಳಬೇಕಿದೆ. ಪ್ರತಿ  ಪಂಚಾಯಿತಿಯೂ ಸರ್ಕಾರಿ ಅಧಿಕೃತ ಖಾದಿ ಭಂಡಾರಗಳಿಂದ ಒಂದೇ ಬಾರಿಗೆ 3 ರಾಷ್ಟ್ರಧ್ವಜ ಖರೀದಿಸಬೇಕಿದೆ. ಪಂಚಾಯಿತಿಗಳು ತಮ್ಮಲ್ಲಿ ಲಭ್ಯವಿರುವ ನಿಧಿ, ಸ್ವಂತ ಸಂಪನ್ಮೂಲ ಅಥವಾ 13ನೇ ಹಣಕಾಸು ಆಯೋಗದ ಅನುದಾನದಿಂದ ರಾಷ್ಟ್ರಧ್ವಜ ಖರೀದಿಸಲು ಅನುಮತಿ ನೀಡಲಾಗಿದೆ.ಗ್ರಾಮ ಪಂಚಾಯಿತಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನೇತೃತ್ವದಡಿ ಕಾರ್ಯದರ್ಶಿ, ಗ್ರಾಮ ಲೆಕ್ಕಿಗ ಹಾಗೂ ವಾಟರ್‌ಮನ್‌ಗಳ ಸಮನ್ವಯದೊಂದಿಗೆ ಬೆಳಿಗ್ಗೆ ರಾಷ್ಟ್ರಧ್ವಜ ಹಾರಿಸುವ ಹಾಗೂ ಸಂಜೆ ಇಳಿಸುವ ಹೊಣೆಗಾರಿಕೆಯನ್ನು ಶ್ರದ್ಧೆಯಿಂದ ನಿರ್ವಹಿಬೇಕಿದೆ.|ತಾಲ್ಲೂಕುಮಟ್ಟದಲ್ಲಿ ಕಾರ್ಯ ನಿರ್ವಹಣಾಧಿಕಾರಿಗಳ ಉಸ್ತುವಾರಿಯಲ್ಲಿ ಅಧಿಕಾರಿಗಳು ನಿರ್ಧರಿಸುವ ನೌಕರರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಗ್ರಾಮ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗೆ ರಾಷ್ಟ್ರಧ್ವಜ ಹಾರಿಸುವ ವಿಧಾನದ ಬಗ್ಗೆ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಿಂದ ತರಬೇತಿ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಪಂಚಾಯಿತಿಯ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ.ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ಧ್ವಜ ಪ್ರದರ್ಶನಕ್ಕೆ ನಿಗದಿಪಡಿಸಿರುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಷ್ಟ್ರಧ್ವಜದ ಗೌರವ, ಘನತೆಗೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಸುತ್ತೋಲೆ ತಿಳಿಸಿದೆ.

Post Comments (+)