ಶನಿವಾರ, ಮೇ 28, 2022
30 °C

ನಿಥಾರಿ ಸರಣಿ ಹತ್ಯೆ: ಕೋಲಿಗೆ ಮರಣದಂಡನೆಗೆ ಸುಪ್ರೀಂ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ  (ಪಿಟಿಐ): ಇಡೀ ದೇಶದಲ್ಲೇ ತಲ್ಲಣ ಸೃಷ್ಟಿಸಿದ್ದ ನಿಥಾರಿ ಸರಣಿ ಹತ್ಯೆಯ ವಿವಿಧ ಪ್ರಕರಣಗಳಲ್ಲಿ ಒಂದಾದ ಬಾಲಕಿ ರಿಂಪಾ ಹಲ್ದಾರ್ ಕೊಲೆ ಪ್ರಕರಣದಲ್ಲಿ ಸುರೀಂದರ್ ಕೋಲಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿ ಹಿಡಿದು, ಇದೊಂದು ಭೀಕರ ಹಾಗೂ ಬರ್ಬರ ಪ್ರಕರಣ ಎಂದು ಹೇಳಿದೆ.

ದೇಶದ ಅಪರಾಧ ಪ್ರಕರಣಗಳಲ್ಲಿ ಇದೊಂದು ವಿರಳಾತಿ ವಿರಳ ಪ್ರಕರಣ ಎಂದಿರುವ ನ್ಯಾಯಾಲಯ ಯಾವುದೇ ವಿಧವಾದ ಕರುಣೆಯನ್ನು ಅಪರಾಧಿಗೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಬಾಲಕಿ ರಿಂಪಾ ಹಲ್ದಾರ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಮನೆ ಮಾಲೀಕ ವಾಣಿಜ್ಯೋದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಹಾಗೂ ಕೆಲಸಗಾರ ಸುರೀಂದರ್ ಸಿಂಗ್ ಕೋಲಿಗೆ ಗಾಜಿಯಾಬಾದ್ ನ ವಿಚಾರಣಾ ನ್ಯಾಯಾಲಯ ಫೆಬ್ರುವರಿ 13ರಂದು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಸೆಪ್ಟೆಂಬರ್ 11ರಂದು ಅಲಹಾಬಾದ್ ಹೈಕೋರ್ಟ್ ಪಂಧೇರ್ ನನ್ನು ಈ ಒಂದು ಪ್ರಕರಣದಲ್ಲಿ ಮಾತ್ರ ದೋಷಮುಕ್ತಗಳಿಸಿತು.

ಮಂಗಳವಾರ ಸುಪ್ರೀಂಕೋರ್ಟ್ ಕೋಲಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಖಚಿತಗೊಳಿಸಿತಾದರೂ ಪಂಧೇರ್ ನನ್ನು ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಏನೂ ಹೇಳಿಲ್ಲ. ಈ ಹಂತದಲ್ಲಿ ಪಂಧೇರ್ ಪರವಾಗಿ ಅಥವಾ ವಿರುದ್ಧವಾಗಿ ತೀರ್ಪು ನೀಡಿದರೆ ಅದು ಆತನ ವಿರುದ್ದ ಇರುವ ಪ್ರಕರಣಗಳ ವಿಚಾರಣೆ ಮೇಲೆ ಪರಿಣಾಮ ಬೀರುವುದೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ನೋಯಿಡಾಗೆ ಸಮೀಪದ ನಿಥಾರಿ ಗ್ರಾಮದ 14 ವರ್ಷದ ರಿಂಪಾ ಸೇರಿದಂತೆ ನಾಲ್ವರು ಮಹಿಳೆಯರು ಹಾಗೂ 15 ಹೆಣ್ಣು ಮಕ್ಕಳು ಆರು ವರ್ಷದ ಹಿಂದೆ ಕಾಣೆಯಾಗಿದ್ದರು. ಬಳಿಕ ಅವರೆಲ್ಲರ ಅಸ್ಥಿಪಂಜರಗಳು ಪಂಧೇರ್ ಅವರ ಮನೆಯಲ್ಲಿ ಪತ್ತೆಯಾಗಿದ್ದವು. ತೀವ್ರ ಕೋಲಾಹಲ ಸೃಷ್ಟಿಸಿದ್ದ ಈ ಪ್ರಕರಣದ ತನಿಖೆಯನ್ನು ಆಗಿನ ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿತ್ತು.

39 ವರ್ಷದ ಕೋಲಿಯ ವಿರುದ್ಧ ಒಟ್ಟು 16 ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮೂರು ಪ್ರಕರಣಗಳಲ್ಲಿ ಈಗಾಗಲೇ ಈತನಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.