ನಿದಾ ವಿಧಾನ

7

ನಿದಾ ವಿಧಾನ

Published:
Updated:

ಕಣ್ಣಲ್ಲೇ ಮಿಂಚು ಸೂಸುವ ಈ ಬಾಬ್‌ಕಟ್ ಹುಡುಗಿಯ ನಗುವಿನಲ್ಲಿ ಕೊಂಚ ತುಂಟತನವಿದೆ. ಅರಳು ಹುರಿದಂತೆ ಮಾತನಾಡುವ ಈಕೆ ಒಮ್ಮಮ್ಮೆ ಮಾತಿನ ನಡುವೆ ಲಹರಿಗೆ ಬಿದ್ದರೆ ಎಳೆದೆಳೆದು ಮಾತನಾಡುತ್ತಾ ದೇಹವನ್ನು ಜೋಕಾಲಿಯಂತೆ ತೂಗಿಸುತ್ತಾರೆ. ಮೂಗಿನ ಬಲಬದಿಯಲ್ಲಿ ಮಿನುಗುವ ಮೂಗುನತ್ತು ಈಕೆಯ ವ್ಯಕ್ತಿತ್ವಕ್ಕೊಂದು ವಿಶೇಷ ಆಕರ್ಷಣೆ ತಂದು ಕೊಟ್ಟಿದೆ. ಈಕೆ ಇದ್ದಲ್ಲೆಲ್ಲಾ ನಗುವಿನ ಬುಗ್ಗೆ ಪುಟಿಯುತ್ತದೆ. ಹಾಸ್ಯ ಮಿಶ್ರಿತ ವ್ಯಂಗ್ಯದ ಮಾತಿನ ಬಾಣಗಳನ್ನು ಒಂದರ ಹಿಂದೆ ಒಂದರಂತೆ ಬಿಡುವ ಈಕೆ ಫ್ಯಾಷನ್ ಡಿಸೈನಿಂಗ್ ಲೋಕದ ಮಿಂಚುಳ್ಳಿ. ಹೆಸರು ನಿದಾ ಮೊಹಮೂದ್.ನಿದಾ ಬಹುಮುಖಿ ವ್ಯಕ್ತಿತ್ವವುಳ್ಳ ಡಿಸೈನರ್. ಈಕೆ ಕಲಾವಿದೆ, ವಸ್ತ್ರವಿನ್ಯಾಸಕಿ ಹಾಗೂ ಪೇಂಟರ್ ಕೂಡ ಹೌದು. ಕಲಿಕೆಯ ದಿನಗಳಲ್ಲೇ `ಮೋಸ್ಟ್ ಕ್ರಿಯೇಟಿವ್ ಡಿಸೈನ್ ಕಲೆಕ್ಷನ್~ ಅವಾರ್ಡ್ ಪಡೆದ ಅಪ್ಪಟ ಕಸುಬುಗಾತಿ. ಫ್ಯಾಷನ್ ಲೋಕಕ್ಕೆ ಕಾಲಿಟ್ಟ ಬಳಿಕ ಅಲ್ಲಿ ಸಿಕ್ಕ ದಿಗ್ಗಜರೊಂದಿಗಿನ ಒಡನಾಟ ಈಕೆಯ ಕಸುಬುದಾರಿಕೆಗೊಂದು ನೈಪುಣ್ಯ ದಕ್ಕಿಸಿಕೊಟ್ಟಿತು. ಆನೆ ನಡೆದಿದ್ದೇ ದಾರಿ ಎಂಬಂತೆ ಮುಂದೆ ಈಕೆ ಫ್ಯಾಷನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸುತ್ತಾ ಖ್ಯಾತಿ ಪಡೆದಿದ್ದಾರೆ.ಈಚೆಗೆ ನಗರದಲ್ಲಿ ನಡೆದ ಬ್ಲೆಂಡರ್ಸ್‌ ಫ್ರೈಡ್ ಫ್ಯಾಷನ್ ಟೂರ್‌ನಲ್ಲಿ ತಮ್ಮ ವಿನೂತನ ಕಲೆಕ್ಷನ್ ಪ್ರದರ್ಶಿಸಿ ಎಲ್ಲರಿಂದ ಮೆಚ್ಚುಗೆ ಪಡೆದ ನಿದಾ `ಮೆಟ್ರೊ~ ಜತೆಗೆ ಮಾತಿಗೆ ಸಿಕ್ಕಾಗ ಮಾತಿನ ಲಹರಿ ಹರಿಬಿಟ್ಟಿದ್ದು ಹೀಗೆ...

ನೀವು ಫ್ಯಾಷನ್ ಎಂಬುದನ್ನು ಅರ್ಥೈಸುವ ಬಗೆ?

ನಾವು ಧರಿಸುವ ಬಟ್ಟೆ, ಇತರರೊಂದಿಗೆ ಸಂವಾದ ನಡೆಸುವ ಕಲೆ, ಟೇಬಲ್ ಮ್ಯಾನರ್ಸ್, ಮೊಬೈಲ್‌ನಲ್ಲಿ ಮಾತನಾಡುವ ಶೈಲಿ ಇವೆಲ್ಲವೂ ಫ್ಯಾಷನ್. ನಾವು ಮಾಡುವ ಪ್ರತಿಯೊಂದು ಕೆಲಸವೂ ಫ್ಯಾಷನ್ನೇ. ಒಟ್ಟಾರೆ, ನಮ್ಮ ಜೀವನ ಶೈಲಿಯೇ ಫ್ಯಾಷನ್.`ಬಾಂಬೆ ಬನ್ ಮಸ್ಕಾ~ ಬಗ್ಗೆ ಹೇಳಿ?

ನನ್ನ ಈ ಸಂಗ್ರಹಕ್ಕೆ ಪ್ರೇರಣೆ ತುಂಬಿದ್ದು ಈ ದೇಶದ ಸ್ಟ್ರೀಟ್ ಕಲ್ಚರ್. ಬಾಂಬೆ ಬನ್ ಮಸ್ಕಾ ಯುವ ಜನತೆಗೆ ಇಷ್ಟವಾಗುವ ರೀತಿಯಲ್ಲಿ ವಿನ್ಯಾಸ ಮಾಡಿದ್ದೇನೆ. ಇಂದಿನ ಮಹಿಳೆ ಸ್ವಾವಲಂಬಿ ಬದುಕು ಸಾಗಿಸುವ ಛಲ ಉಳ್ಳವಳು. ತನ್ನ ಹಕ್ಕಿಗೆ ಚ್ಯುತಿ ಬಂದರೆ ಹೋರಾಡುವ ಮನೋಭಾವ ಬೆಳೆಸಿಕೊಂಡವಳು. ಸ್ವತಂತ್ರವಾಗಿ ಬದುಕುವ ಆಸೆಯುಳ್ಳ ಇಂದಿನ ಮಹಿಳೆಗೆ ಈ ಕಲೆಕ್ಷನ್ ತುಂಬಾ ಇಷ್ಟವಾಗುತ್ತದೆ.ನಿಮಗೆ ಅತ್ಯಂತ ಇಷ್ಟವಾದ ಉಡುಪು?

ಸೀರೆಗಳೆಂದರೆ ನನಗೆ ಪಂಚಪ್ರಾಣ. ಸೀರೆ ನೀರೆಯರ ಮೈಕಟ್ಟಿಗೆ ಸರಿಯಾಗಿ ಹೊಂದುತ್ತದೆ. ಐದೂವರೆ ಮೀಟರ್ ಉದ್ದದ ಸೀರೆ ಎಂಬ ಕ್ಯಾನ್ವಾಸ್ ಮೇಲೆ ವಿನ್ಯಾಸಕರು ತಮ್ಮ ಕಲ್ಪನೆಯ ಚಿತ್ತಾರ ಬಿಡಿಸಬಹುದು. ಹೆಣ್ಣು ಸೀರೆಯಲ್ಲಿ ಮಾದಕವಾಗಿ ಕಾಣಿಸುವಷ್ಟು ಬೇರೆ ಯಾವ ವಸ್ತ್ರದಲ್ಲೂ ಕಾಣಿಸುವುದಿಲ್ಲ.ನೀವೇ ವಿನ್ಯಾಸಗೊಳಿಸಿದ ವಸ್ತ್ರಗಳನ್ನು ಧರಿಸುತ್ತೀರಾ?

ಹೌದು. ನಾನು ವಿನ್ಯಾಸಗೊಳಿಸಿದ ಎಲ್ಲ ಬಗೆಯ ವಸ್ತ್ರಗಳನ್ನು ನಾನು ಧರಿಸುತ್ತೇನೆ. ಒಂದರ್ಥದಲ್ಲಿ ನಾನು ಪ್ರಯೋಗಪಶು.ಪ್ರವಾಸದ ವೇಳೆ ನಿಮ್ಮ ವಿನ್ಯಾಸಕ್ಕೆ ಪ್ರೇರಣೆ ನೀಡಿದ್ದು ಇದೆಯಾ?

ವಸ್ತ್ರ ವಿನ್ಯಾಸಕರ ಮನಸ್ಸು ಸದಾ ಕ್ರಿಯಾಶೀಲವಾಗಿರಬೇಕು. ಹೊಸತನ್ನು ಗ್ರಹಿಸಲು ಸನ್ನದ್ಧವಾಗಿರಬೇಕು. ನಾನು ಹೋದ್ಲ್ಲಲೆಲ್ಲಾ ಸದಾ ನನ್ನ ಮನಸ್ಸನ್ನು ತೆರೆದಿಟ್ಟುಕೊಂಡಿರುತ್ತೇನೆ. ನನ್ನ ವಿನ್ಯಾಸಕ್ಕೆ ಪ್ರೇರಣೆ ತುಂಬುವ ಅಂಶಗತ್ತ ಗಮನ ಕೇಂದ್ರೀಕರಿಸುತ್ತೇನೆ. ಹಾಗಾಗೆ ಕೆಲವೆಡೆ ಕೆಲವೊಂದರಿಂದ ಪ್ರೇರಣೆಗೊಂಡಿದ್ದೇನೆ. ಒಂದೊಂದು ಸಂಗತಿ ಒಂದೊಂದು ವಿನ್ಯಾಸಕ್ಕೆ ಪ್ರೇರಣೆ ನೀಡುತ್ತದೆ. ಪ್ರೇರಣೆ ನೀಡಿದ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾನು ಮೈಂಡ್ ಗೇಮ್ ಆಡುತ್ತೇನೆ. ಆ ಅಂಶಗಳನ್ನು ನೆನಪಿಟ್ಟುಕೊಂಡು ಅವುಗಳನ್ನು ನನ್ನ ವಿನ್ಯಾಸದಲ್ಲಿ ಪೋಣಿಸುತ್ತೇನೆ.`ಲೇಡಿ ಗಾಗಾ~ಗೆ ಡ್ರೆಸ್‌ಅಪ್ ಮಾಡುವಾಗಿನ ಅನುಭವ?

ಅದೊಂದು ಅದ್ಭುತ ಅನುಭವ. ಲೇಡಿ ಗಾಗಾ ತುಂಬಾ ತಮಾಷೆಯ ಹುಡುಗಿ. ಆಕೆಗಾಗಿ ನಾನು ಮಲ್ಟಿ ಲೇಯರ್ ಗ್ರಾಫಿಕ್ ಡ್ರೆಸ್ ಡಿಸೈನ್ ಮಾಡಿದ್ದೆ. ಎಲ್ಲರೊಂದಿಗೆ ನಕ್ಕು ನಲಿಯುತ್ತಾ ಮಾತನಾಡುವ ಲೇಡಿ ಗಾಗಾ ಡೌನ್ ಟು ಅರ್ಥ್ ಲೇಡಿ.ನಿಮ್ಮ ಪ್ರಕಾರ ಬೆಸ್ಟ್ ಟ್ರಾವೆಲ್ ಔಟ್‌ಫಿಟ್?

ಸ್ವಾವ್ ಪ್ಯಾಂಟ್. ಆಫ್ ಪ್ಯಾಂಟ್ಸ್, ಟೀಶರ್ಟ್.ನಿಮ್ಮ ಮುಂದಿನ ವಸ್ತ್ರ ವಿನ್ಯಾಸಕ್ಕೆ ಪ್ರೇರಣೆ ನೀಡಿದ ಸ್ಥಳ ಯಾವುದು?

ಪ್ಯಾರಿಸ್ ಮತ್ತು ಗ್ರೀಸ್. ಹಾಗೆಯೇ ಭಾರತದ ಸ್ಟ್ರೀಟ್ ಕಲ್ಚರ್ ಕೂಡ ನನ್ನ ಮುಂದಿನ ವಿನ್ಯಾಸಕ್ಕೆ ಪ್ರೇರಣೆ ನೀಡಿದೆ.ನೀವು ತುಂಬಾ ಇಷ್ಟಪಡುವ ಸ್ಥಳ?

ನನಗೆ ಫ್ರಾನ್ಸ್, ಇಂಗ್ಲೆಂಡ್ ಮತ್ತು ಗ್ರೀಸ್ ತುಂಬಾ ನೆಚ್ಚಿನ ಸ್ಥಳ.ನಿಮ್ಮ ಫ್ಯಾಷನ್ ಮಂತ್ರ?

ದೇಹ ಹಾಗೂ ಮನಸ್ಸಿಗೊಪ್ಪುವ ಉಡುಪು ಧರಿಸಿ. ಒಬ್ಬ ವ್ಯಕ್ತಿಯ ಸ್ಟ್ರೈಲ್ ಆತನ ಇಡೀ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಫ್ಯಾಷನ್‌ನ್ನು ಮತ್ತೊಬ್ಬರ ಮೇಲೆ ಒತ್ತಾಯಪೂರ್ವಕವಾಗಿ ಹೇರುವುದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ. ಚಿತ್ರ: ಎಂ.ಎಸ್.ಮಂಜುನಾಥ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry