ಗುರುವಾರ , ಮೇ 13, 2021
25 °C

ನಿದ್ದೆ ಮಾಡದ ನಗರದ ಮಕ್ಕಳ ನೈಟ್ ಕೇರ್

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಅಪ್ಪ ಅಮ್ಮಂದಿರು ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಪ್ಲೇ ಹೋಂಗಳಲ್ಲಿ ಬಿಟ್ಟು ಹೋಗುವುದು ಬೆಂಗಳೂರಿನಲ್ಲಿ ಸಾಮಾನ್ಯ. ಆದರೆ ಮಕ್ಕಳ ನೈಟ್ ಕೇರ್ ಹೋಂಗಳು ಪ್ರಾರಂಭವಾಗಿರುವ ವಿಷಯ ನಿಮಗೆ ಗೊತ್ತೆ?ಸಂಜೆ ಆರು ಗಂಟೆಯಿಂದ ಮಕ್ಕಳನ್ನು ನೋಡಿಕೊಂಡು ಮಧ್ಯ ರಾತ್ರಿಯೋ ಬೆಳಕು ಹರಿದ ಮೇಲೋ ಮನೆಗೆ ಕಳಿಸುವ ಈ ಸೇವೆ ಬೆಂಗಳೂರಿಗೆ ತೀರ ಹೊಸದು.ದುಡಿಯುವ ದಂಪತಿಗಳಿಗೆ ಹಗಲೇನೋ ಮಕ್ಕಳನ್ನು ಬಿಟ್ಟು ಹೋಗುವುದು ಅನಿವಾರ್ಯವಿರಬಹುದು, ಆದರೆ ರಾತ್ರಿಯಿಡೀ ಎಲ್ಲೋ ಬಿಟ್ಟು ಹೋಗುವುದು ಸರಿಯೇ? ಕಂದಮ್ಮಗಳ ಸುರಕ್ಷತೆ ಹೇಗೆ? ಮುರಿದು ಬೀಳುತ್ತಿರುವ ಕೌಟುಂಬಿಕ ಜೀವನವನ್ನು ಇನ್ನೂ ಕೆಡಿಸುವ ಇಂಥ ವ್ಯವಸ್ಥೆ ಬೇಕಾಗಿತ್ತೆ ಎಂದು ಆಘಾತಗೊಂಡು ಕೇಳುವವರು ಈ ಸೌಕರ್ಯವನ್ನು ಬಳಸುವವರ ಮನೆಗಳಲ್ಲೇ ಇರುತ್ತಾರೆ.ಕೆಲವು ಭಯ ಹುಟ್ಟಿಸುವ ಪ್ರಕರಣಗಳೂ ವರದಿಯಾಗಿವೆ. ಒಂದು ಕುಟುಂಬದ ಕಥೆ: ಅಪ್ಪ ಅಮ್ಮ ಕೆಲಸಕ್ಕೆ ಹೋದಮೇಲೆ ನೋಡಿಕೊಳ್ಳಲು ಇಟ್ಟುಕೊಂಡ ಮಹಿಳೆ ಏಳು ತಿಂಗಳ ಕೂಸಿಗೆ ಮದ್ದು ಕೊಟ್ಟು ಭಿಕ್ಷೆ ಎತ್ತುವವರಿಗೆ ಬಾಡಿಗೆಗೆ ಕೊಡುತ್ತಿದ್ದಳಂತೆ. ಇದು ನಡೆದದ್ದು ಮೂರು ವರ್ಷದ ಹಿಂದೆ. ಆದರೆ ಮಕ್ಕಳನ್ನು ಬಿಟ್ಟು ಹೋಗುವ ವ್ಯವಸ್ಥೆಯಲ್ಲಿ ಎಂಥ ಅಪಾಯಗಳು ಎದುರಾಗಬಹುದು ಎಂದು ಮಾತು ಬಂದಾಗಲೆಲ್ಲ ಇದನ್ನೊಂದು ಉದಾಹರಣೆಯಾಗಿ ಬೆಂಗಳೂರಿನ ಮೇಲ್ವರ್ಗದವರು ಜ್ಞಾಪಿಸಿಕೊಳ್ಳುತ್ತಾರೆ.  `ನ್ಯೂಯಾರ್ಕ್ ಟೈಮ್ಸ~ ವರದಿ ಮಾಡಿರುವಂತೆ, ಬಿ.ಪಿ.ಓ ಕಂಪೆನಿಗಳಿರುವ ಬಡಾವಣೆಗಳಲ್ಲಿ `ನೈಟ್ ಕೇರ್ ಸೆಂಟರ್~ಗಳು ಹೆಚ್ಚಾಗಿ ಪ್ರಾರಂಭವಾಗಿವೆ. ಬಾಗ್ಮನೆ ಟೆಕ್ ಪಾರ್ಕ್ ಹತ್ತಿರದ ಒಂದು ಮಕ್ಕಳ ಕೇಂದ್ರ ತಿಂಗಳಿಗೆ ರೂ. 4000 ನಿಗದಿ ಮಾಡಿದೆ.ಮತ್ತೊಂದೆಡೆ ಪಾರ್ಟಿ ಮಾಡಲು ಹೋಗುವ ಅಮ್ಮಂದಿರು ಶನಿವಾರ ಮಕ್ಕಳನ್ನು ಬಿಟ್ಟುಹೋಗಬಹುದು. ಈ ಹೋಂನಲ್ಲಿ ಒಂದು ರಾತ್ರಿಗೆ ರೂ. 1250 ಚಾರ್ಜ್ ಮಾಡುತ್ತಾರಂತೆ. ಪಾರ್ಟಿ ಮುಗಿದ ಮೇಲೆ ಅಪ್ಪ ಅಮ್ಮಂದಿರು ಬಂದು ಮಕ್ಕಳನ್ನು ಕರೆದುಕೊಂಡು ಮನೆಗೆ ಹೋಗುತ್ತಾರೆ.ಪ್ರಪಂಚವೆಲ್ಲ ಬೆಂಗಳೂರಿಗೆ ಕೆಲಸವನ್ನು ಹಚ್ಚಿದರೆ, ಬೆಂಗಳೂರು ತನ್ನ ಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನು ಔಟ್ ಸೋರ್ಸ್ ಮಾಡುತ್ತಿದೆ ಎಂದು ಆ ಅಮೆರಿಕನ್ ಪತ್ರಿಕೆಯ ಬೆಂಗಳೂರು ಅಂಕಣಕಾರ್ತಿ ಸರಿತಾ ರೈ ವರದಿ ಮಾಡಿದ್ದಾರೆ.ಅಹೋರಾತ್ರಿ ಬೇರಾವುದೋ ದೇಶದ ಗಡಿಯಾರಕ್ಕೆ ಅನುಗುಣವಾಗಿ ಕೆಲಸ ಮಾಡುವ ದಂಪತಿಗಳಿಗೆ ಇಂಥ ಒಂದು ಸೌಕರ್ಯ ಬಂದಿರುವುದು ಸಮಾಧಾನ ತಂದಿರುತ್ತದೆ.ಆದರೆ ಕೆಲಸ, ಪಾರ್ಟಿ ಎಂದು ಹೋಗಿ ಮಕ್ಕಳನ್ನು ಇವರು ಕಡೆಗಣಿಸುತ್ತಿದ್ದಾರೆ ಮತ್ತು ಇದರ ಪರಿಣಾಮ ಮಕ್ಕಳು ಬೆಳೆದಂತೆ ಚೆನ್ನಾಗಿರಲಾರರು ಎಂಬ ಅಭಿಪ್ರಾಯವೂ ಇದೆ. ಕೆಲವು ತಾಯಂದಿರು ಕೆಲಸವನ್ನೂ ಮಾಡಿ ಮಕ್ಕಳನ್ನೂ ನೋಡಿಕೊಳ್ಳಲು ಹೋಗಿ ಜೀವನವೇ ಸೆರೆಮನೆ ವಾಸದಂತಾಗಿಹೋಗಿದೆ ಅನ್ನುತ್ತಾರೆ.

 

ಅಮೆರಿಕನ್ ಕಂಪೆನಿಗಳು ಮತ್ತು ಆ ದೇಶದ ಕೆಲಸದ ಕ್ರಮವನ್ನು ಪಾಲಿಸುವ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಮನೆಯಿಂದ ಹೊರಗೆ 12 ಗಂಟೆಯ ಕಾಲ ಇರುವುದು ಸಾಮಾನ್ಯ. ಎಷ್ಟೋ ತಾಯಂದಿರು ಈ ಚಕ್ರದಲ್ಲಿ ಸಿಲುಕಿ ಒಂದು ಸಿನಿಮಾ ನೋಡುವುದೂ ಕಷ್ಟವಾಗಿ ಹೋಗಿದೆ ಎಂದು ಹೇಳುತ್ತಾರೆ. ಕೆಲವರು ಚಿತ್ರಮಂದಿರಕ್ಕೆ ಹೋಗಿ ನಾಲ್ಕೈದು ವರ್ಷಗಳೇ ಆಗಿ ಹೋಗಿದೆಯಂತೆ.ಹಿರಿಯರನ್ನು ನೋಡಿಕೊಳ್ಳುವ ನರ್ಸ್ ವ್ಯವಸ್ಥೆಯ ಬಗ್ಗೆ ಬೆಂಗಳೂರಿಗೆ ದಶಕಗಳಿಂದ ಗೊತ್ತಿದೆ. ಗಂಡ ಹೆಂಡಿರು ಇಬ್ಬರೂ ಕೆಲಸಕ್ಕೆ ಹೋಗುವ ರೂಢಿ ಹೆಚ್ಚಾದಂತೆಲ್ಲ ಹಿರಿಯರನ್ನು ನೋಡಿಕೊಳ್ಳುವ ನರ್ಸ್ ಸೇವೆಗೆ ಬೇಡಿಕೆ ಹೆಚ್ಚಾಗುತ್ತಿರುವುದು ಸಹಜ.ಕೇರಳ ಮೂಲದ ದಾದಿಯರು ಏಜೆನ್ಸಿಗಳ ಮೂಲಕ ಇಲ್ಲಿಗೆ ಬಂದು ಹಿರಿಯರನ್ನು ನೋಡಿಕೊಳ್ಳುವುದು ಹಲವು ಕುಟುಂಬಗಳಿಗೆ ಸಹಾಯವಾಗಿದೆ. ಇನ್ನು ರಾತ್ರಿ ಕೆಲಸದ ಕಷ್ಟ ಅನುಭವಿಸುತ್ತಿರುವವರು ಈ ಮಕ್ಕಳ ನೈಟ್ ಕೇರ್ ಸೇವೆಯನ್ನು ಖುಷಿಯಿಂದ, ಮತ್ತು ಸ್ವಲ್ಪ ಅಳುಕಿನಿಂದ, ಸ್ವೀಕರಿಸುವುದರಲ್ಲಿ ಆಶ್ಚರ್ಯವಿರಲಾರದು.ಬದಲಾಗುತ್ತಿರುವ ಜೀವನಶೈಲಿಗೆ ಸ್ಪಂದಿಸುವ ಇಂಥ ಸೇವೆಗಳನ್ನು ಒದಗಿಸಬಲ್ಲವರು ದುಡ್ಡನ್ನೂ ಸಂಪಾದಿಸಿ, ಶ್ರಮಿಸುತ್ತಿರುವ ದಂಪತಿಗಳ ಕತಜ್ಞತೆಯನ್ನೂ ಗೆದ್ದುಕೊಳ್ಳಬಹುದು. ಬೆಂಗಳೂರು ಬೇರೆ ಊರುಗಳಿಗಿಂತ ಭಿನ್ನ ಎನ್ನುವುದಕ್ಕೆ ಇದೂ ಒಂದು ಉದಾಹರಣೆ. ಉಪಾಹಾರ ಮಂದಿರದ ಪುಟ್ಟ ಚಿತ್ರಶಾಲೆ


 

ಕೃಷ್ಣ ವಿಹಾರದ ಭಿತ್ತಿಯ ಮೇಲೆ...

ಸಾಗರ್ ರೀತಿಯ ಉಪಹಾರ ಮಂದಿರಗಳಲ್ಲಿ ಮತ್ತು ದರ್ಶಿನಿಗಳಲ್ಲಿ ಮಾಡಿರುವ ಚಿತ್ರಕಲೆಯನ್ನು, ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಬೊಂಬೆಗಳನ್ನು ನೀವು ಗಮನಿಸಿರಬಹುದು. ಕಲೆ ಬಲ್ಲಂಥ ತಜ್ಞರು ಮಾಡಿದಂತೆ ಅವು ಕಾಣುವುದಿಲ್ಲ. ಎಷ್ಟೋ ಕಡೆ ಕಣ್ಣಿಗೆ ಬೀಳುವುದು ಮಕ್ಕಳ ಚಿತ್ರಕಲೆಯ ಮುಗ್ಧತೆಯೂ ಇಲ್ಲದ ಅಗ್ಗದ ಕ್ಯಾಲೆಂಡರ್ ಮಟ್ಟದ ಕಲೆ.ಬನ್ನೇರುಘಟ್ಟ ರಸ್ತೆಯ ಕೃಷ್ಣ ವಿಹಾರ ಇದಕ್ಕೆ ತದ್ವಿರುದ್ಧ. ಮಹಡಿಯ ಒಂದು ಊಟದ ಮನೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಪ್ರದೇಶದ ಅಪರೂಪದ ಚಿತ್ರಗಳನ್ನು ಸಂಗ್ರಹಿಸಿ ಸೊಗಸಾದ ಸಂಗ್ರಹವನ್ನು ಮಾಡಿದ್ದಾರೆ. ಆ ಪ್ರದೇಶದ ನೈಸರ್ಗಿಕ ಮತ್ತು ಕಲಾ ವೈಶಿಷ್ಟ್ಯವನ್ನೂ, ಪ್ರಖ್ಯಾತರ ಮುಖ ಭಾವಗಳನ್ನೂ ಛಾಯಾಚಿತ್ರಗಳಲ್ಲಿ ಹಿಡಿದಿಟ್ಟಿದ್ದಾರೆ.ಗೋಡೆಯ ಮೇಲೆ ನಕಾಶೆ ಬರೆದು ಆಯಾ ತಾಲೂಕಿನ ಹಿರಿಮೆಯನ್ನು ಸೆಪಿಯಾ ಬಣ್ಣದ ಫೋಟೋಗಳ ಮೂಲಕ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಶಿವರಾಮ ಕಾರಂತರಂಥ ಸಾಹಿತಿಗಳು, ಪ್ರಕಾಶ್ ಪಡುಕೋಣೆಯವರಂಥ ಕ್ರೀಡಾ ಪಟುಗಳು, ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ ತರಹದ ಸಿನಿಮಾ ಬೆಡಗಿಯರ ಚಿತ್ರಗಳನ್ನು ಆ ಪ್ರದೇಶದ ಪುಣ್ಯಕ್ಷೇತ್ರಗಳ, ಕಡಲ ತಡಿಯ ಚಿತ್ರಗಳ ಜೊತೆಗೆ ನೋಡಬಹುದು.

 

ಜಯದೇವ ಮೇಲ್ಸೇತುವೆ ದಾಟಿ ಶಾಪರ್ಸ್ ಸ್ಟಾಪ್ ಬಂದ ಕೂಡಲೇ ಎಡಕ್ಕೆ ತಿರುಗಿದರೆ ಈ ಉಪಹಾರ ಮಂದಿರ ಕಾಣುತ್ತದೆ. ಈ ಉಪಾಹಾರ ಮಂದಿರ ನಡೆಸುತ್ತಿರುವವರು ಉಡುಪಿ ಮೂಲದ ರಾಜೇಶ್ ಆಚಾರ್.ಲಂಚ ಕೊಟ್ಟಿರಾ, ಇಲ್ಲವಾ?

ಸೇನಾ ಖರೀದಿಯ ಹಗರಣದ ಚರ್ಚೆ ದೆಹಲಿಯಲ್ಲಿ ಬಿಸಿಯೇರುತ್ತಿದ್ದಂತೆ ಬೆಂಗಳೂರಿನಲ್ಲಿ ಕುಮಾರಸ್ವಾಮಿಯವರು ತಮ್ಮ ತಂದೆಗೆ ಯಾರೋ ಇದೇ ವಿಷಯದಲ್ಲಿ ಲಂಚ ಕೊಡಲು ಬಂದಿದ್ದರು ಎಂದು ಹೇಳಿದ್ದಾರೆ.

 

ದೇವೇಗೌಡರು ನೋಡಿದರೆ ಯಾರೂ ಹಾಗೆ ಬಂದೇ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಸಂಗತಿ ಸ್ವಲ್ಪ ಬಿಗಡಾಯಿಸಿದ್ದರಿಂದ ಅವರ ಪಕ್ಷದವರು ಹೊಸ ಹೊಸ ಸಬೂಬು ಕೊಡುತ್ತಿದ್ದಾರೆ. ಯಾರೋ ಬಂದು `ಲೆಟ್ಸ್ ಗೋ ಫಾರ್ ಲಂಚ್,~ ಎಂದು ಹೇಳಿದ್ದನ್ನು ಕುಮಾರಸ್ವಾಮಿಯವರು ಅಪಾರ್ಥ ಮಾಡಿಕೊಂಡಿದ್ದಾರೆ ಎಂಬುದೂ ಒಂದು ಸಬೂಬು ಆಗಬಹುದು, ಅಲ್ಲವಾ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.