ಸೋಮವಾರ, ಏಪ್ರಿಲ್ 12, 2021
24 °C

ನಿಧನ ವಾರ್ತೆ: ಬಿಜೆಪಿ ಮುಖಂಡ ಬಾಳ ಆಪ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಬಿಜೆಪಿಯ ಹಿರಿಯ ಮುಖಂಡ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತವಾದಿ ಬಲವಂತ್ ಅಲಿಯಾಸ್ ಬಾಳ ಆಪ್ಟೆ (73) ಅವರು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು.ಮಾಜಿ ರಾಜ್ಯಸಭಾ ಸದಸ್ಯ ಆಪ್ಟೆ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.`ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಆಪ್ಟೆ ಅವರನ್ನು ಜುಲೈ 6ರಂದು  ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೀರ್ಘಕಾಲದ ಶ್ವಾಸಕೋಶ ಕಾಯಿಲೆಯಿಂದ ಅವರು ಮಂಗಳವಾರ ಮಧ್ಯಾಹ್ನ 3ಗಂಟೆಗೆ ವಿಧಿವಶರಾದರು~ ಎಂದು ಹಿಂದೂಜಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ  ಗುಸ್ತಾದ್ ದಾವರ್ ಹೇಳಿದ್ದಾರೆ.ಬಿಜೆಪಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾಗಿದ್ದ ಆಪ್ಟೆ ಅವರು ಮಹಾರಾಷ್ಟ್ರದಿಂದ 2000 ಮತ್ತು 2006ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.ಈ ವರ್ಷ ಪಕ್ಷದಿಂದ ಅವರನ್ನು ನಾಮಕರಣ ಮಾಡಲು ನಿರಾಕರಿಸಲಾಗಿತ್ತು. ಅವರ ಸ್ಥಾನದಲ್ಲಿ ಗಡ್ಕರಿಗೆ ಆಪ್ತರಾಗಿದ್ದ ಅಜಯ್ ಸಂಚೇತಿ ಅವರನ್ನು ನಾಮಕರಣ ಮಾಡಲಾಗಿತ್ತು.2002-2010ರ ಅವಧಿಯಲ್ಲಿ ಅವರು ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಅಲ್ಲದೇ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.ವೃತ್ತಿಯಲ್ಲಿ ವಕೀಲರಾಗಿರುವ ಆಪ್ಟೆ, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಅಂದರೆ ಡಿಸೆಂಬರ್ 1975ರಿಂದ ಫೆಬ್ರುವರಿ 1977ರ ವರೆಗೆ ಜೈಲು ವಾಸವನ್ನೂ ಅನುಭವಿಸಿದ್ದರು.  ಆಪ್ಟೆ ಅಂತ್ಯ ಸಂಸ್ಕಾರ ದಾದರ್‌ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಬುಧವಾರ ಬೆಳಿಗ್ಗೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಆಪ್ಟೆ ಅವರ ನಿಧನಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.