ಭಾನುವಾರ, ಜನವರಿ 19, 2020
22 °C
ಅವನತಿಯ ಹಾದಿಯಲ್ಲಿ ಕೊಕ್ಕೊ

ನಿಧಾನವಾಗುತ್ತಿದೆ ಕೊಕ್ಕೊ ಆಟಗಾರರ ಹೆಜ್ಜೆ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ/ ಎ.ಎನ್‌.ರಘು Updated:

ಅಕ್ಷರ ಗಾತ್ರ : | |

ತುಮಕೂರು: ಭಾರತದ ಕೊಕ್ಕೊ ಕ್ರೀಡಾ ಇತಿಹಾಸ­ದಲ್ಲಿ 10 ಬಾರಿ ಕೊಕ್ಕೊ ಕ್ಲಬ್‌ಗಳು ನಡೆಸುವ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿ­ಕೊಂಡ ಒಂದೇ ಒಂದು ತಂಡ ಕರ್ನಾಟಕ ಪೊಲೀಸ್‌ ತಂಡ.ಕರ್ನಾಟಕ ಪೊಲೀಸ್‌ ತಂಡದ ವಿರುದ್ಧ ಆಡಲು ಬೇರೆ ಕ್ಲಬ್‌ಗಳ ಆಟಗಾರರು ಹೆದರುತ್ತಿದ್ದರು. ಸತತ 10 ಬಾರಿ ಪ್ರಶಸ್ತಿ ಪಡೆದ ತಂಡದಲ್ಲಿ ಜಿಲ್ಲೆಯ 8 ಆಟಗಾರರು ಪಾಲ್ಗೊಂಡಿದ್ದರು. ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ತಂಡ ಇದೀಗ ತೆರೆಮರೆಗೆ ಸರಿದಿದೆ.ಪೊಲೀಸ್‌ ನೇಮಕಾತಿಯಲ್ಲಿ ಕ್ರೀಡಾ ಮೀಸ­ಲಾತಿ­ಯನ್ನು ತೆಗೆದಿರುವುದರಿಂದ ಪೊಲೀಸ್‌ ತಂಡದಲ್ಲಿ ಆಟಗಾರರ ಕೊರತೆಯುಂಟಾಗಿದೆ. ತಂಡ­ದಲ್ಲಿದ್ದ ಆಟಗಾರರನ್ನು ಇಲಾಖೆಯು ವಾಪಸ್‌ ಕರೆಸಿಕೊಂಡಿದೆ.ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳದಲ್ಲಿ ವಿಶ್ವವಿದ್ಯಾಲಯದ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಪಾಲ್ಗೊಂಡವರಿಗೂ ಅಲ್ಲಿನ ಸರ್ಕಾರಗಳು ಉದ್ಯೋಗ ನೀಡಿ ಪ್ರೋತ್ಸಾಹ ನೀಡುತ್ತಿವೆ. ರಾಜ್ಯದ ಆಟಗಾರರು ರಾಷ್ಟ್ರ ಮಟ್ಟದ ಕೊಕ್ಕೊ ತಂಡದ ನಾಯಕರಾಗಿ ಪ್ರಶಸ್ತಿಗಳನ್ನು ಗೆದ್ದರೂ, ಅವರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಬೆಳವಣಿಗೆ ಕೊಕ್ಕೊ ಆಟಗಾರರಲ್ಲಿ ನಿರಾಸಕ್ತಿ ಮೂಡಿಸಿದೆ.ಜಿದ್ದಿನ ಕಾಳಗ:  ಪೊಲೀಸ್‌ ನೇಮಕಾತಿಯಲ್ಲಿ ಮೀಸಲಾತಿ ಇದ್ದ ಕಾರಣ ಆಟಗಾರರ ನಡುವೆ ಈ ಹಿಂದೆ ಸಾಕಷ್ಟು ಪೈಪೋಟಿ ಇತ್ತು. ಪಂದ್ಯಗಳು ಮುಗಿಯಲು ನಾಲ್ಕೈದು ಗಂಟೆಗಳಾದರೂ ಬೇಕಾಗುತ್ತಿತ್ತು. ಈಗ ಪಂದ್ಯ ನಡೆಯುವುದಕ್ಕೆ ಮುಂಚೆಯೇ ಫಲಿತಾಂಶ ನಿರ್ಧರಿಸುವ ಸ್ಥಿತಿ ಬಂದಿದೆ ಎನ್ನುತ್ತಾರೆ ತರಬೇತುದಾರರೊಬ್ಬರು.‘ನನ್ನೊಂದಿಗೆ ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾ­ವಳಿ­ಯಲ್ಲಿ ಪಾಲ್ಗೊಂಡಿದ್ದ ಸಹ ಆಟಗಾರ­ನೊಬ್ಬನಿಗೆ ಕೇರಳ ಸರ್ಕಾರ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ನೀಡಿದೆ. ಅವರು ಆಟದಲ್ಲಿ ಮುನ್ನಡೆ ಸಾಧಿಸಿ, ರಾಜ್ಯ– ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಂತೆ ಬಡ್ತಿಯೂ ಏರುತ್ತದೆ. ನಾನು ಇಲ್ಲಿಯವರೆಗೆ  18ಕ್ಕೂ ಹೆಚ್ಚು ಭಾರೀ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದೇನೆ. ಆದರೆ ಇನ್ನೂ ಉದ್ಯೋಗಾವಕಾಶ ಸಿಕ್ಕಿಲ್ಲ. ಬೇರೆ ರಾಜ್ಯಗಳಲ್ಲಿ ಕ್ರೀಡಾ ಮೀಸಲಾತಿ ನೀಡುವುದರಿಂದ ಅಲ್ಲಿ ಅರ್ಜಿ ಸಲ್ಲಿಸಿದರೆ ಕೆಲಸ ಸಿಗಬಹುದು ಆದರೆ ಅವರು ಸ್ಥಳೀಯರಿಗೆ ಮೊದಲು ಪ್ರಾತಿನಿಧ್ಯ ನೀಡುವುದರಿಂದ ನಮಗೆ ಉದ್ಯೋಗ ಸಿಗುತ್ತಿಲ್ಲ, ಬ್ಯಾಂಕಿಂಗ್‌, ಎಚ್‌ಎಎಲ್‌, ಬಿಇಎಲ್‌ ಸಂಸ್ಥೆಗಳು ವಾಲಿಬಾಲ್‌, ಬಾಲ್‌ಬ್ಯಾಡ್ಮಿಂಟನ್‌ ತಂಡಗಳನ್ನು ಹೊಂದಿವೆ. ಅವರಿಗೆ ಮೀಸಲಾತಿಯೂ ಸಿಗುತ್ತದೆ. ಆದರೆ ಕೊಕ್ಕೊ ಆಟಕ್ಕೆ ಪ್ರಾತಿನಿಧ್ಯ ನೀಡುವರು ಕಡಿಮೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ರಾಷ್ಟ್ರೀಯ ಆಟಗಾರ.ಕೊಕ್ಕೊ ವಿಭಾಗದಲ್ಲಿ ಅರ್ಜುನ ಪ್ರಶಸ್ತಿ ಪಡೆದ ಏಕೈಕ ಮಹಿಳಾ ಕ್ರೀಡಾಪಟು ಶೋಭಾ ನಾರಾಯಣ್‌ ಮೈಸೂರಿನವರು. ಅರ್ಜುನ ಪ್ರಶಸ್ತಿ ಪಡೆದ ನಂತರ ಕೊಕ್ಕೊ ತರಬೇತುದಾರರಾಗಲು ಸಾಕಷ್ಟು ಪ್ರಯತ್ನ ನಡೆಸಿದರು. ಸರ್ಕಾರ ಅವರಿಗೆ ಸಹಕಾರ ನೀಡಲಿಲ್ಲ. ಛಲ ಬೀಡದ ಶೋಭಾ ಎಂಪಿಇಡಿ ಪದವಿ ಪಡೆದು ಬೆಂಗಳೂರು ವಿ.ವಿ.ಯಲ್ಲಿ ಕೆಲಕಾಲ ದೈಹಿಕ ಶಿಕ್ಷಣ ಉಪನ್ಯಾಸಕ­ರಾಗಿ ಕೆಲಸ ಮಾಡಿದರು. ನಂತರ ಕೆಲಸ ತೊರೆದು ಸ್ವ ಉದ್ಯೋಗ ಮಾಡಲು ಮುಂದಾಗಿದ್ದಾರೆ.‘ಸರ್ಕಾರ ಮತ್ತು ಸರ್ಕಾರಿ ಉದ್ದಿಮೆಗಳು ಕ್ರೀಡೆಯ ಕುರಿತು ತಮ್ಮ ನಿಲುವು ಪರಾಮರ್ಶಿ­ಸದಿದ್ದರೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೊಕ್ಕೊ ಇತಿಹಾಸ ಸೇರಬಹುದು’ ಎಂದು ಕ್ರೀಡಾಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.ರಾಜಕೀಯ:  ಸರ್ಕಾರದ ನಿರಾಸಕ್ತಿಯ ಜೊತೆಗೆ ರಾಜ್ಯ ಕೊಕ್ಕೊ ಅಸೋಸಿಯೇಶನ್‌ನಲ್ಲಿರುವ ಒಳ ರಾಜಕೀಯವೂ ಆಟದ ಹಿನ್ನಡೆಗೆ ತನ್ನದೇ ಆದ ಕೊಡುಗೆ ನೀಡಿದೆ. ಒಳ ರಾಜಕೀಯದಿಂದಾಗಿ ಅಸೋಸಿಯೇಶನ್ ಎರಡು ಬಣವಾಗಿದೆ. ಕ್ರೀಡಾ ಮೀಸಲಾಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಮನಸ್ಥಿತಿ ಕಳೆದುಕೊಂಡಿದೆ.ಒತ್ತಡ ಹಾಕಬೇಕಿದೆ

ರೈಲ್ವೆಯ ವಿವಿಧ ವಿಭಾಗಗಳಲ್ಲಿ ವಾಲಿಬಾಲ್‌, ಬಾಲ್‌ ಬ್ಯಾಡ್ಮಿಂಟನ್‌ ತಂಡಗಳು ಇವೆ. ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಿಭಾಗದಲ್ಲಿ ಕೊಕ್ಕೊ ಆಟಗಾರರಿಗೂ ಮೀಸಲಾತಿ ನೀಡುವಂತೆ ಮನವಿ ಮಾಡಿದ್ದೇವೆ. ಹೊಸದಾಗಿ ಆರಂಭವಾಗಿರುವ ಕಾರಣದಿಂದ ಸದ್ಯಕ್ಕೆ ಒಂದೊದಾಗಿ ತಂಡಗಳನ್ನು ಆಯ್ಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕೊಕ್ಕೊ ಆಟಗಾರರಿಗೂ ಅವಕಾಶ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ. ಇಲಾಖೆ ಭರವಸೆ ನೀಡಿದ ಮಾತ್ರಕ್ಕೆ ನೇಮಕಾತಿ ನಡೆಯುತ್ತದೆ ಎಂದಿಲ್ಲ. ಈ ವಿಷಯದಲ್ಲಿ ರಾಜಕೀಯ ಮುಖಂಡರು ಒತ್ತಡ ಹಾಕಬೇಕಿದೆ. ನೇಮಕಾತಿಯಲ್ಲಿ ಕೊಕ್ಕೊ ಆಟಗಾರರಿಗೆ ಅವಕಾಶ ನೀಡಿದರೆ ಕ್ರೀಡಾಪಟುಗಳು ಬೆಳೆಯಲು ಅವಕಾಶ ದೊರೆಯುತ್ತದೆ.

–ಸಿದ್ದಲಿಂಗಯ್ಯ, ರೈಲ್ವೆ ಕೊಕ್ಕೊ ತಂಡದ ಪ್ರಧಾನ ಕೋಚ್‌

ಪ್ರತಿಕ್ರಿಯಿಸಿ (+)