ನಿಧಿಗಾಗಿ ಗುಡಿ ಅಗೆದ ಕಳ್ಳರು...!

7

ನಿಧಿಗಾಗಿ ಗುಡಿ ಅಗೆದ ಕಳ್ಳರು...!

Published:
Updated:
ನಿಧಿಗಾಗಿ ಗುಡಿ ಅಗೆದ ಕಳ್ಳರು...!

ಗದಗ: ಇಲ್ಲಿಗೆ ಸಮೀಪದ ಲಕ್ಕುಂಡಿಯ ನಾಚಿಪುರ ಹನುಮಂತ ದೇವರ ಗುಡಿಯ ಮುಂದೆ ವಾಮಾಚಾರ ನಡೆಸಿ ನಿಧಿ ದೋಚಿರುವ ಅನುಮಾನಾಸ್ಪದ ಘಟನೆ ನಾಗರ ಅಮಾವಾಸ್ಯೆ ರಾತ್ರಿ (ಶನಿವಾರ) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಲಕ್ಕುಂಡಿಯಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ನಾಚಿಪುರ ಹನುಮಂತ ದೇವರ ಗುಡಿ ಬಹಳ ಪುರಾತನವಾಗಿದ್ದು, ಕಾಲದ ಹೊಡೆತಕ್ಕೆ ಸಿಕ್ಕಿ ಶಿಥಿಲಗೊಂಡು, ಪಾಳು ಬಿದ್ದಿತ್ತು. ಗುಡಿಯ ಅಕ್ಕ-ಪಕ್ಕದಲ್ಲಿ ಇರುವ ಜಮೀನಿನ ರೈತರು ಪೂಜೆ ಸಲ್ಲಿಸುತ್ತಿದ್ದರು.ಹನುಮಂತ ದೇವರ ವಿಗ್ರಹದ ಸುತ್ತಲೂ ಸುಮಾರು ಏಳು ಅಡಿ ವಾಮಾಚಾರಕ್ಕೆ ಬಳಸುವ ದಾರವನ್ನು ಕಟ್ಟಿ ಪ್ರದೇಶವನ್ನು ಗುರುತಿಸಿ ಕೊಂಡಿರುವ ನಿಧಿಗಳ್ಳರು, ವಿಗ್ರಹದ ಮುಂಭಾಗ ದಲ್ಲಿದ್ದ ಎರಡು ದ್ವಾರ ಕಂಬಗಳನ್ನು ಕೆಡವಿದ್ದಾರೆ. ಅಲ್ಲಿ ಸುಮಾರು ಐದು ಅಗಲ, ಏಳು ಅಡಿ ಆಳದ ಗುಂಡಿಯನ್ನು ತೆಗೆದಿದ್ದಾರೆ.ವಿಗ್ರಹದ ಸುತ್ತಲೂ ನಿಂಬೆಹಣ್ಣು ಹೆಚ್ಚಿ ಇಟ್ಟಿದ್ದಾರೆ. ಗುಂಡಿ ತೋಡುವ ಮೊದಲು ವಿಗ್ರಹಕ್ಕೆ ಪೂಜೆಯನ್ನು ನಡೆಸಿದ್ದಾರೆ. ಈ ಎಲ್ಲ ವಿಧಿ-ವಿಧಾನಗಳನ್ನು ಗಮನಿಸಿದರೆ ಇಲ್ಲಿ ನಿಧಿಯನ್ನೇ ತೆಗೆದಿರಬೇಕು ಎನ್ನುವ ಅನುಮಾನ ಗ್ರಾಮಸ್ಥರನ್ನು ಕಾಡಹತ್ತಿದೆ.ವಿಷಯ ತಿಳಿದ ತಕ್ಷಣ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆದರೆ ಈ ಹಿಂದೆ ಇದೇ ದೇವರ ಗುಡಿಯ ಮುಂದೆ ನಿಧಿಗಾಗಿ ವಿಫಲ ಪ್ರಯತ್ನಗಳು ನಡೆದಾಗ ಪೊಲೀಸರು ಇತ್ತ ತಲೆ ಹಾಕಿಯೇ ಇರಲಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.ಒತ್ತಾಯ: ಎಸ್.ಎಂ. ಕೃಷ್ಣ ಸರ್ಕಾರದ ಆಡಳಿತ ಅವಧಿಯಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ನಡೆಸಲಾಗಿತ್ತು. ಇದರಿಂದ ಮುತ್ತು, ರತ್ನ, ಹವಳ, ಚಿನ್ನ ಸೇರಿದಂತೆ ಹಳೆಯ ಕಾಲದ ವಸ್ತುಗಳು ದೊರೆತಿದ್ದವು. ಹೀಗಾಗಿ ಇಂತಹ ಉತ್ಖನನ ಗ್ರಾಮದ ಸುತ್ತಲು ಮತ್ತೆ ನಡೆಯಬೇಕಾಗಿದೆ. ಆಗ ನಿಧಿ ಕುರಿತು ಇರುವ ಅನುಮಾನ ಖಚಿತಗೊಳ್ಳಲಿದೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ ವಸ್ತ್ರದ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry