ನಿನ್ನಿಕಲ್ಲು: ಕಾಳಭೈರವೇಶ್ವರ ವಿಗ್ರಹ ನಿರ್ಲಕ್ಷ್ಯ

7

ನಿನ್ನಿಕಲ್ಲು: ಕಾಳಭೈರವೇಶ್ವರ ವಿಗ್ರಹ ನಿರ್ಲಕ್ಷ್ಯ

Published:
Updated:

ನಂದಿಕೂರು (ಪಡುಬಿದ್ರಿ):  ಫಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ವೆ-ನಂದಿಕೂರು ಪ್ರದೇಶದಲ್ಲಿರುವ ನಿನ್ನಿಕಲ್ಲು ಬಂಡೆಯಲ್ಲಿರುವ ಸುಮಾರು 15ನೇ ಶತಮಾನದ ಕಾಳಭೈರವೇಶ್ವರ ವಿಗ್ರಹ  ನಿರ್ಲಕ್ಷಕ್ಕೊಳಗಾಗಿದೆ.ಭಾನುವಾರ ಇಲ್ಲಿಗೆ ಭೇಟಿ ನೀಡಿದ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಮೆಮೋರಿಯಲ್ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಕಾಲೇಜಿನ ಪುರಾತತ್ವ ಉಪನ್ಯಾಸಕ ಟಿ.ಮುರುಗೇಶ್ ಈ ಬಗ್ಗೆ ಮಾಹಿತಿ ನೀಡಿದರು.ಹಿನ್ನೆಲೆ: ‘ನಿನ್ನಿಕಲ್ಲು’ವಿಗೆ ಸಮಾನಾರ್ಥ ಪದ ಪ್ರತಿಧ್ವನಿಸುವ ಕಲ್ಲು. ನಾವು ಮಾತನಾಡಿದ ಶಬ್ದ ಪ್ರತಿಧ್ವನಿಸುವುದಕ್ಕೆ ನಿನ್ನಿ ಎಂದರ್ಥ. 15ನೇ ಶತಮಾನದಲ್ಲಿ ಕುಂದ ಹೆಗ್ಗಡೆ ಅರಸರ ಅರಮನೆ ಈ ನಿನ್ನಿಕಲ್ಲು ಪಕ್ಕದಲ್ಲಿತ್ತು. ಕಾಲಾಂತರದಲ್ಲಿ ರಾಜಕೀಯ ಸ್ಥಿತ್ಯಂತರದಿಂದ ಈ ಅರಮನೆ ಎಲ್ಲೂರಿಗೆ ಸ್ಥಳಾಂತರಗೊಂಡಿತು. ಮೂಡುಬಿದಿರೆ ಅರಮನೆ, ಬಂಟಕಲ್ಲು, ಉಡುಪಿ ಕೃಷ್ಣ ಮಠ, ಉದ್ಯಾವರ ಗಣಪತಿ ದೇವಳಗಲ್ಲಿ ದೊರೆತ ಶಾಸನಗಳಿಂದ ಈ ಮಾಹಿತಿ ಲಭ್ಯವಾಗಿದೆ ಎಂದು ಟಿ.ಮುರುಗೇಶ್ ತಿಳಿಸಿದರು.

ತುಂಡರಸರಾದ ಕುಂದ ಹೆಗ್ಗಡೆ, ಪಡುಬಿದ್ರಿ ಕಿನ್ಯಕ್ಕ ಬಲ್ಲಾಳರು, ಕಾಪು ಮರ್ದ ಹೆಗಡೆಯವರು ಕಾರ್ಕಳದ ಭೈರವಸರ ಬೆದರಿಕೆಯಿಂದ ಒಗ್ಗೂಡಿ ಒಪ್ಪಂದ ಮಾಡಿಕೊಂಡು ಈ ನಿನ್ನಿಕಲ್ಲು ಪ್ರದೇಶವನ್ನು ಕೋಟೆಯನ್ನಾಗಿ ನಿರ್ಮಿಸಿ ಒಗ್ಗಟ್ಟಾಗಿ ಹೊರಡಲು ಒಪ್ಪಂದ ಮಾಡಿಕೊಂಡ ದಾಖಲೆಗಳು ಲಭ್ಯವಾಗಿವೆ.ಅದಕ್ಕಾಗಿ ನಿನ್ನಿಕಲ್ಲು ಪ್ರದೇಶದಲ್ಲಿ ಕಾಳಭೈರವೇಶ್ವರ ವಿಗ್ರಹ ಕೆತ್ತಿ, 4 ಸುತ್ತ ಕಲ್ಲು ಕಂಬಗಳನ್ನೊಳಗೊಂಡು ನಿರಂತರ ಬಲಿ, ಪೂಜೆ ನೇರವೇರಿಸುತ್ತಿದ್ದರು. ಆ ಕಾಲದ ಕಾಳಭೈರವೇಶ್ವರ ಕೆತ್ತನೆ ಮೂರ್ತಿ ಈಗಲೂ ಯಥಾಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದರು.ಕಾಳಭೈರವೇಶ್ವರ ವಿಗ್ರಹದ ಬಗ್ಗೆ: 15ನೇ ಶತಮಾನ ಕೆತ್ತಲ್ಪಟ್ಟದ್ದು ಎಂದು ಹೇಳಲಾದ ಈ ‘ಕಾಳಭೈರವೇಶ್ವರ’ ಕೆತ್ತನೆ ಸುಮಾರು 4 ಅಡಿ ಎತ್ತರವಿದೆ. ಕೆತ್ತನೆಯಲ್ಲಿ ಶಿರದ ಮೇಲೆ 7 ನಾಗಗಳುಳ್ಳ ನಾಗ ಕಿರೀಟ, ಕಿವಿಯಲ್ಲಿ ನಾಗಾಭರಣ, ನಾಗ ಯಗ್ನೋಪವೆತ, 4 ಕೈಗಳಿದ್ದು, ಡಮರು, ತ್ರಿಶೂಲ, ಖಡ್ಗ, ಪಾನ ಪಾತ್ರೆ, 5 ಕಪಾಲಗಳು (ಮನುಷ್ಯನ ತಲೆ), ಕಾಲಲ್ಲಿ ಸುತ್ತಿಕೊಂಡ ನಾಗ, ಸೊಂಟದಲ್ಲಿ ಚಿನ್ನಾಭರಣಗಳನ್ನು ಹೊಂದಿದೆ. ಭೀಭತ್ಸ ಮೂರ್ತಿಯಂತೆ ಕಾಣುತ್ತದೆ ಎಂದರು.ಹಿಂದಿನ ಕಾಲದಲ್ಲಿ ಯುದ್ಧ ಕಾಲದಲ್ಲಿ ರಕ್ಷಣೆಗಾಗಿ ಕಾಳಭೈರವೇಶ್ವರನಿಗೆ ನರಬಲಿ ಸಹಿತ ವಿವಿಧ ಬಲಿಗಳನ್ನು ಕೊಡಲಾಗುತ್ತಿದ್ದು ಬಲಿಕಲ್ಲು ಈ ಪರಿಸರದಲ್ಲಿದೆ. ಕೋಟೆ ಅವಶೇಷಗಳು ಇಲ್ಲಿವೆ. ಹಿಂದಿನ ಕಾಲದಲ್ಲಿ ನಿರಂತರ ಪೂಜೆಗೊಳ್ಳುತ್ತಿದ್ದ ಈ ಕಾಳಭೈರವೇಶ್ವರ ಮೂರ್ತಿ ಇಂದು ಪಾಳು ಬಿದ್ದಿದೆ. ಎತ್ತರ ಪ್ರದೇಶದಲ್ಲಿರುವ ಈ ಪ್ರದೇಶದ ಒಳಭಾಗದಲ್ಲಿ ನಾಲ್ಕು ಸುತ್ತ ಕೋಟೆಯಂತೆ ಬಂಡೆ ಕಲ್ಲುಗಳಿದ್ದು ಅದರ ಒಳಭಾಗದಲ್ಲಿ ಪೂರ್ವಾಭಿಮುಖವಾಗಿ ಈ ಮೂರ್ತಿ ಕೆತ್ತಲ್ಪಟ್ಟಿದೆ ಎಂದರು.ಕೆಐಡಿಬಿ ಸರ್ವೇ ನಡೆಸಿದ ಜಾಗ: ಸುಮಾರು 60 ಎಕರೆ ವಿಸ್ತೀರ್ಣದ ಈ ‘ನಿನ್ನಿಕಲ್ಲು’ ಪ್ರದೇಶ ಸರ್ಕಾರದ ಅಧೀನದಲ್ಲಿದ್ದು ಪಾಳು ಬಿದ್ದಿದೆ. ಸರಿಯಾದ ದಾರಿಯೂ ಇಲ್ಲ. ಯಾರಿಗೂ ಮಾಹಿತಿ ನೀಡದೇ ಕೆಐಎಡಿಬಿ ಈ ಭೂಮಿ ವಶಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಕೆಐಎಡಿಬಿ ಸರ್ವೇ ಕಾರ್ಯ ನಡೆಸಿದೆ. ಫಲಿಮಾರು ಗ್ರಾಪಂ ಈ ನಿನ್ನಿಕಲ್ಲು ಪ್ರದೇಶವನ್ನು ನಿರ್ಬಂಧಿತ ಪ್ರದೇಶವನ್ನಾಗಿ ಮಾಡಿ ಪ್ರವಾಸ ತಾಣವನ್ನಾಗಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಗ್ರಾ.ಪಂ.ಅಧ್ಯಕ್ಷ ನವೀನಚಂದ್ರ ಸುವರ್ಣ ತಿಳಿಸಿದ್ದಾರೆ.ಮುಂದಿನ ದಿನಗಳಲ್ಲಿ ನಿವೇಶನದ ಸುತ್ತ ತಡೆಬೇಲಿ ನಿರ್ಮಿಸಿ, ಪ್ರದೇಶವನ್ನು ಸ್ವಚ್ಛಗೊಳಿಸಿ ಪ್ರವಾಸಿ ತಾಣವನ್ನಾಗಿಸುವುದಾಗಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಕಾಲೇಜು ಪ್ರಾಂಶುಪಾಲ ವೈ. ಭಾಸ್ಕರ ಶೆಟ್ಟಿ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಎನ್‌ಎಸ್‌ಎಸ್ ಅಧಿಕಾರಿ ವಿನೋಬನಾಥ ಐಕಳ, ಸೀತಾರಾಮ ಹೆಗ್ಡೆ, ಶ್ರೀಧರ ಭಟ್, ಪ್ರಶಾಂತ್ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry