ಭಾನುವಾರ, ಮೇ 16, 2021
22 °C

ನಿಮಿಷಾಂಬ: ಕಾಣಿಕೆ ಅಕ್ಕಿ ಮಾರಾಟಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯಕ್ಕೆ ಭಕ್ತರು ಉಡಿ (ಕಾಣಿಕೆ) ರೂಪದಲ್ಲಿ ಅರ್ಪಿಸುವ ಅಕ್ಕಿಯನ್ನು ದೇವಾಲಯ ಆಡಳಿತ ಮಂಡಳಿ ಮಾರಾಟ ಮಾಡದೆ ಪ್ರಸಾದ ಸಿದ್ಧಪಡಿಸಿ ವಿತರಿಸಬೇಕು ಎಂದು ಒತ್ತಾಯಿಸಿ ಶ್ರೀ ನಿಮಿಷಾಂಬ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಈ.ಜಿ. ನಾಯಕ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಹರಕೆ ಹೊತ್ತ ಭಕ್ತರು ಅಕ್ಕಿಯನ್ನು ದೇವಾಲಯಕ್ಕೆ ಕೊಡುತ್ತಿದ್ದು, ಆ ಹರಕೆ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ರೂ.20ರಂತೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಅಕ್ಕಿ ಮಾರಾಟವಾಗಿದೆ. ವಾರ್ಷಿಕ ಹತ್ತಾರು ಕ್ವಿಂಟಲ್  ಅಕ್ಕಿ  ಸಂಗ್ರಹವಾಗುತ್ತಿದ್ದು, ಚಿಲ್ಲರೆಯಾಗಿ ಅಕ್ಕಿ ಮಾರಾಟ ನಡೆಯುತ್ತಿದೆ.ಮತ್ತೊಂದೆಡೆ ಇಲ್ಲಿಗೆ ಬರುವ ಭಕ್ತರು ಪ್ರಸಾದಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಹುಣ್ಣಿಮೆ ಹೊರತುಪಡಿಸಿ ಇತರ ದಿನಗಲ್ಲಿ ಭಕ್ತರಿಗೆ ಪ್ರಸಾದ ವಿತರಿಸುತ್ತಿಲ್ಲ. ಹಾಗಾಗಿ ಉಡಿ ಅಕ್ಕಿಯನ್ನು ಮಾರಾಟ ಮಾಡದೆ ಪ್ರಸಾದ ತಯಾರಿಸಿ ವಿತರಿಸಬೇಕು. ಹುಣ್ಣಿಮೆ, ಆಷಾಢ ಶುಕ್ರವಾರಗಳಂದು ಇಲ್ಲಿಗೆ ಬರುವ ಎಲ್ಲ ಭಕ್ತರಿಗಾಗಿ ದಾಸೋಹ ಏರ್ಪಡಿಸಬೇಕು ಎಂದು ಶಿವಕುಮಾರ್, ಜಿ.ಎಲ್. ರವಿ, ಮಂಜುನಾಥ್ ಇತರರು ಸಲಹೆ ನೀಡಿದರು.ದೇವಾಲಯದ ಬಲ ಭಾಗದಲ್ಲಿರುವ ಕುಡಿಯುವ ನೀರು ಸಂಗ್ರಹಿಸುವ ಸಂಪು ಸ್ವಚ್ಛಗೊಳಿಸದ ಕಾರಣ ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿದೆ. ಸಂಪು ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರು ಕೊಡಬೇಕು ಎಂದು ಕಿರಂಗೂರು ವಿಜಯಕುಮಾರ್ ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಈ.ಜಿ. ನಾಯಕ್, `ಕಾಣಿಕೆ ಅಕ್ಕಿ ಮಾರಾಟವನ್ನು ತಕ್ಷಣದಿಂದಲೇ ನಿಲ್ಲಿಸಲಾಗುವುದು. ಆ ಅಕ್ಕಿಯನ್ನು ಪ್ರಸಾದಕ್ಕೆ ಬಳಸುತ್ತೇವೆ. ಹುಣ್ಣಿಮೆ ಮಾತ್ರವಲ್ಲದೆ ಭಕ್ತರು ಹೆಚ್ಚು ಬರುವ ದಿನಗಳಲ್ಲೂ ಪ್ರಸಾದ ವ್ಯವಸ್ಥೆ ಮಾಡಲಾಗುವುದು' ಎಂದರು. `ಕುಡಿಯುವ ನೀರಿನ ಸಂಪು ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಅದನ್ನು ಸ್ವಚ್ಛಗೊಳಿಸಲು ಕ್ರಮ ವಹಿಸುತ್ತೇನೆ' ಎಂದು ತಿಳಿಸಿದರು. ಸಿದ್ದಪ್ಪ, ಮಾಸ್ತಯ್ಯ, ಕುಮಾರ್, ರವಿಕಮಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.