ಮಂಗಳವಾರ, ಮೇ 11, 2021
20 °C

ನಿಮ್ಮ ಕಾಲು ಊದಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಮ್ಮ ಕಾಲು ಊದಿದೆಯೇ?

`ಮೇಡಂ ನನ್ನ ಎರಡೂ ಕಾಲುಗಳು ಎಷ್ಟೊಂದು ಊದಿವೆ ನೋಡಿ, ಪೂರ್ಣವಾಗಿ ಚಪ್ಪಲಿ ಹಾಕಲೂ ಆಗುವುದಿಲ್ಲ. ಇದೇಕೆ ಹೀಗೆ?' ಎಂದು ಹೊಸದಾಗಿ ಮನೆ ಕೆಲಸಕ್ಕೆ ಸೇರಿದ 38ರ ದುರ್ಗ ಕೇಳಿದಾಗ, ಕಾಲು ಊದಿಕೊಳ್ಳಲು ಇರುವ ನೂರಾರು ಕಾರಣಗಳು ನನ್ನ ಮನಸ್ಸಿನಲ್ಲಿ ಹಾದುಹೋದವು. ಇವುಗಳಲ್ಲಿ ಈಕೆಗೆ ಯಾವುದು ಸೂಕ್ತವಾಗಬಹುದು ಎಂದು ಕೂಲಂಕಷವಾಗಿ ವಿಚಾರಿಸಿ, ಪರೀಕ್ಷಿಸಿದಾಗ, ದುರ್ಗ ದೀರ್ಘಕಾಲದ ರಕ್ತಹೀನತೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂತು.ಬೇರೆ ಕಾರಣಗಳು ಅವಳ ರೋಗ ಲಕ್ಷಣಗಳಿಗೆ ಹೋಲಿಕೆಯಾಗದ್ದರಿಂದ, ರಕ್ತಹೀನತೆಯಿಂದ ಅವಳ ಕಾಲುಗಳು ಮತ್ತು ಆಗಾಗ ಮುಖವೂ ಊದಿಕೊಳ್ಳುತ್ತಿದೆ ಎಂಬ ತೀರ್ಮಾನಕ್ಕೆ ಬಂದು, ತಕ್ಷಣದಿಂದ ಕಬ್ಬಿಣಾಂಶದ ಮಾತ್ರೆಗಳನ್ನು ಕೊಡಲು ಶುರು ಮಾಡಿದೆ. ಮೂರು ತಿಂಗಳ ನಂತರ ಅವಳ ಮುಖದಲ್ಲಿ ಲವಲವಿಕೆ ಕಂಡುಬಂತು ಮತ್ತು ಕಾಲು ಊತವೂ ಕಡಿಮೆಯಾಗಿತ್ತು.ದಿನವಿಡೀ ಕುಳಿತು/ ನಿಂತು ದುಡಿಯುವ ವರ್ಗದಲ್ಲಿ ದಿನಾಂತ್ಯಕ್ಕೆ ಕೆಲವರಿಗೆ ಕಾಲು ಊದಿಕೊಂಡಂತೆ ಕಾಣುವುದು ಸಾಮಾನ್ಯ. ಒಂದೇ ಕಡೆ ಬಹಳ ಹೊತ್ತು ಕುಳಿತು ಕೆಲಸ ಮಾಡುವುದರಿಂದ ಅಥವಾ ದೀರ್ಘಕಾಲ ನಿಂತು ಕೆಲಸ ಮಾಡುವುದರಿಂದ ಪಾದಗಳಲ್ಲಿ ರಕ್ತ ಪರಿಚಲನೆ ಏರುಪೇರಾಗುತ್ತದೆ. ಅಪಧಮನಿಗಳ ಮೂಲಕ ಹೃದಯಕ್ಕೆ ಹೋಗುವ ರಕ್ತದ ಗತಿ ಕಡಿಮೆಯಾಗಿ, ಮೊಣಕಾಲಿನಿಂದ ಕೆಳಗೆ ಊತ ಕಾಣಿಸಿಕೊಳ್ಳುತ್ತದೆ.

ಹೀಗಾದಾಗ ಕಾಲು ಚಾಚಿ, ಇಲ್ಲವೇ ಪಾದಗಳನ್ನು ತಲೆಯ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿಟ್ಟು (ದಿಂಬು ಕೊಟ್ಟು) ಮಲಗುವುದರಿಂದ ಸಾಮಾನ್ಯವಾದ ಕಾಲು ಊತ ಬೆಳಗಿನ ಹೊತ್ತಿಗೆ ಮಾಯವಾಗಿ ಬಿಡುತ್ತದೆ. ಆದರೆ ಹೀಗಾಗದೆ, ಮಲಗಿ ಎದ್ದಾಗಲೂ ಯಾವುದೇ ಬದಲಾವಣೆ ಕಾಣದಿದ್ದರೆ ಮತ್ತು ಮುಂಜಾನೆ ಹೆಚ್ಚಿದ್ದು ದಿನದ ಕೊನೆಗೆ ಕಡಿಮೆಯಾಗುತ್ತಿದೆ ಎನಿಸಿದರೆ ಕೂಡಲೇ ವೈದ್ಯರನ್ನು ಕಾಣಬೇಕು.

ಗಮನಿಸಿ...

ಕಾಲು ಅಥವಾ ದೇಹದ ಯಾವುದೇ ಭಾಗದಲ್ಲಿ ಊತ ಕಾಣಿಸಿಕೊಂಡಾಗ ಗಮನದಲ್ಲಿ ಇಡಬೇಕಾದ ಅಂಶಗಳು:


ನೀವು ಹೃದಯ ಸಂಬಂಧಿ ಇಲ್ಲವೇ ಯಾವುದೇ ರೀತಿಯ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದು ಕಾಲು/ ಮುಖದಲ್ಲಿ ಊತ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.ಗರ್ಭಿಣಿಯರಿಗೆ ಕೈ/ ಕಾಲು/ ಮುಖ ಊದಿಕೊಂಡರೆ ಬಿ.ಪಿ. ಇಲ್ಲವೆಂದು ಖಚಿತಪಡಿಸಿಕೊಳ್ಳಿ.ರಕ್ತಹೀನತೆಯಿಂದ ಬಳಲುತ್ತಿದ್ದರೆ (ಮುಖ್ಯವಾಗಿ ಮಹಿಳೆಯರು) ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ತೆಗೆದುಕೊಳ್ಳಿ.ನಿಮ್ಮ ಆಹಾರ ಕ್ರಮವನ್ನು ಒಮ್ಮೆ ಅವಲೋಕಿಸಿ. ಆಹಾರದಲ್ಲಿ ಸಾಕಷ್ಟು ಪ್ರೊಟೀನ್ ಅಂಶ ಇಲ್ಲವೆನಿಸಿದರೆ, ಪ್ರೊಟೀನ್‌ಯುಕ್ತ ಆಹಾರಕ್ಕೆ ಮಹತ್ವ ನೀಡಿ (ಮೊಟ್ಟೆಯ ಬಿಳಿ ಭಾಗ, ಹಾಲು, ಮಾಂಸ, ಮೀನು, ಮೊಳಕೆಯೊಡೆದ ಧಾನ್ಯಗಳು ಇತರೆ)

ಕಾಲು ಊತಕ್ಕೆ ಕಾರಣಗಳು

ಎ. ಸಾಮಾನ್ಯ ಕಾರಣಗಳು

ಇದು ಯಾವುದೇ ಔಷಧಗಳ ನೆರವಿಲ್ಲದೆ ಜೀವನ ಕ್ರಮದಲ್ಲಿನ ಕೆಲ ಬದಲಾವಣೆಗಳಿಂದ ಸರಿ ಹೋಗುತ್ತದೆ. ಅವುಗಳೆಂದರೆ:1. ಬಹಳ ಕಾಲ ಒಂದೇ ಕಡೆ ನಿಂತು/ ಕುಳಿತು ಕೆಲಸ ಮಾಡುವವರು (ಗೃಹಿಣಿಯರು, ಸಾಫ್ಟ್‌ವೇರ್/ ಇನ್ನಿತರ ಉದ್ಯೋಗಿಗಳು)2. ಗರ್ಭಿಣಿಯರು: ದಿನೇ ದಿನೇ ಹಿಗ್ಗುತ್ತಿರುವ ಗರ್ಭಕೋಶ ಹೊಟ್ಟೆಯ ಭಾಗದಲ್ಲಿರುವ ದೊಡ್ಡ ಅಪಧಮನಿಯ ಮೇಲೆ ಒತ್ತಡ ಹಾಕುವುದರಿಂದ ಹೃದಯಕ್ಕೆ ಕಾಲುಗಳಿಂದ ರಕ್ತ ಸಾಗುವುದು ನಿಧಾನವಾಗಿ, ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದು ಎಲ್ಲ ಗರ್ಭಿಣಿಯರಲ್ಲಿ ಸಾಮಾನ್ಯ.

ಗರ್ಭಿಣಿಯರಲ್ಲಿ ಉಂಟಾಗುವ ಪ್ರೊಟೀನ್ ಕೊರತೆಯಿಂದಲೂ ಊತ ಕಾಣಿಸಿಕೊಳ್ಳುತ್ತದೆ. ಬಿ.ಪಿ. ಹೆಚ್ಚಾದಾಗ ಸಹ ಕಾಲು, ಮುಖ ಊದಿಕೊಳ್ಳುವುದರಿಂದ ವೈದ್ಯರನ್ನು ಸಂಪರ್ಕಿಸಿ ಬಿ.ಪಿ. ಇದೆಯೇ ಇಲ್ಲವೇ ಎಂದು ಖಚಿತ ಪಡಿಸಿಕೊಳ್ಳಬೇಕು.3. ಅತಿಯಾದ ಬೊಜ್ಜಿನಿಂದಲೂ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.4. ದೀರ್ಘಕಾಲ ಸಂಪೂರ್ಣ ಪ್ರೊಟೀನ್ ನಿಷೇಧಿತ ಆಹಾರ ಸೇವಿಸುವುದರಿಂದ ದೇಹದಲ್ಲಿ ಪ್ರೋಟೀನ್ ಅಂಶದ ಕೊರತೆಯಾಗಿ ಕೈಕಾಲು, ಮುಖ ಊದಿಕೊಳ್ಳುತ್ತವೆ.

ಬಿ. ಅಂಗಾಂಗಗಳ ಕಾರ್ಯ ನಿರ್ವಹಣೆಯಲ್ಲಿ ಏರುಪೇರಾದಾಗ (ಇದಕ್ಕೆ ಔಷಧೋಪಚಾರ ಬೇಕೇ ಬೇಕು)

1. ಹೃದಯ ಕಾಯಿಲೆಗಳು: ಹಲವಾರು ಕಾರಣಗಳಿಂದ ಹೃದಯದ ಕಾರ್ಯ ನಿರ್ವಹಣೆ ಕಡಿಮೆಯಾದಾಗ ದೇಹದ ಭಾಗಗಳಲ್ಲಿ, ವಿಶೇಷವಾಗಿ ಕಾಲುಗಳಲ್ಲಿ ನೀರು ಶೇಖರವಾಗಿ ಊತ ಕಾಣಿಸಿಕೊಳ್ಳುತ್ತದೆ.2. ಮೂತ್ರಪಿಂಡ ವೈಫಲ್ಯ: ಹಲವು ಕಾಯಿಲೆಗಳಿಂದ ಮೂತ್ರಪಿಂಡದ ಕಾರ್ಯಕ್ಷಮತೆ ಕಡಿಮೆಯಾದಾಗ, ಮೂತ್ರದಲ್ಲಿ ಪ್ರೊಟೀನ್ ಸೋರಿ ಹೋಗುತ್ತದೆ. ದೇಹದಲ್ಲಿ ಪ್ರೊಟೀನಿನ ಕೊರತೆಯಿಂದ ಕಾಲು- ಮುಖ ಊದಿಕೊಳ್ಳುತ್ತವೆ.3. ಯಕೃತ್ತಿಗೆ ಸಂಬಂಧಪಟ್ಟ ಕಾಯಿಲೆಗಳು: ಯಕೃತ್ತು ನಮ್ಮ ರಕ್ತದಲ್ಲಿ ಸಂಚರಿಸುವ ಎಲ್ಲ ಪ್ರೊಟೀನ್‌ಗಳ ಉತ್ಪತ್ತಿಗೆ ಕಾರಣವಾದ್ದರಿಂದ, ಅದಕ್ಕೆ ಬರುವ ಕಾಯಿಲೆಗಳಿಂದ, ಪ್ರೊಟೀನ್ ಕೊರತೆಯಾಗಿ ದೇಹದ ಹಲವು ಭಾಗಗಳು ಊದಿಕೊಳ್ಳುತ್ತವೆ.4. ದೀರ್ಘಕಾಲದ ರಕ್ತಹೀನತೆಯೂ ಕಾಲು, ಮುಖ ಊದಿಕೊಳ್ಳಲು ಕಾರಣವಾಗುತ್ತದೆ.5. ಹಲವು ಕಾರಣಗಳಿಂದ (ನಾಳ ಮುಚ್ಚಿ ಹೋಗುವುದು, ಕ್ಯಾನ್ಸರ್ ಗಡ್ಡೆಯಿಂದ ನಾಳದ ಮೇಲೆ ಒತ್ತಡ ಬೀಳುವುದು), ಮೇಧಸ್ಸು ನಾಳಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಅದಕ್ಕೆ ಸಂಬಂಧಪಟ್ಟ ಜಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ.ಉದಾ: ಫೈಲೇರಿಯಾಸಿಸ್‌ನಲ್ಲಿ ಕಾಲುಗಳಲ್ಲಿನ ಮೇಧಸ್ಸು ನಾಳವು ಫೈಲೇರಿಯಾ ಎಂಬ ಪರೋಪಜೀವಿಯಿಂದ ಮುಚ್ಚಿ ಹೋಗಿ ಕಾಲು ಆನೆ ಕಾಲಿನಂತೆ ಊದಿಕೊಳ್ಳುತ್ತದೆ. ಸ್ತನ ಕ್ಯಾನ್ಸರ್ ಆದಾಗ, ಕ್ಯಾನ್ಸರ್ ಗಡ್ಡೆಯಿಂದ ಮೇಧೋಗ್ರಂಥಿಗಳಿಂದ ಮೇಧಸ್ಸು ನಾಳದ ಮೇಲೆ ಒತ್ತಡ ಬಿದ್ದು, ಆ ಕಡೆಯ ಕೈ ಊದಿಕೊಳ್ಳುತ್ತದೆ.6. ಔಷಧಗಳು: ಕೆಲವು ಔಷಧಗಳ ಸೇವನೆಯಿಂದ ಮೂತ್ರಪಿಂಡ ಹಾಗೂ ಧಮನಿಗಳ ಕಾರ್ಯಕ್ಷಮತೆ ಕಡಿಮೆಯಾಗಿ ದೇಹದಲ್ಲಿ ನೀರು ಶೇಖರವಾಗಿ ಊತ ಕಾಣಿಸಿಕೊಳ್ಳುತ್ತದೆ.

ಉದಾ: ನೆಗಡಿ/ ಕೆಮ್ಮು/ ಮೈ ಕೈ ನೋವಿಗೆ ಬಳಸುವ ಸಾಮಾನ್ಯ ನೋವು ನಿವಾರಕ ಮಾತ್ರೆಗಳು, ಹಾರ್ಮೋನುಗಳು.7. ಥೈರಾಯ್ಡ ಹಾರ್ಮೋನ್‌ಗಳು ಕಡಿಮೆಯಾದರೂ ದೇಹ ಊದಿಕೊಳ್ಳುತ್ತದೆ.8. ಕೆಲವು ಬಗೆಯ ಅಲರ್ಜಿಗಳೂ ಕೈ-ಕಾಲು, ಮುಖ ಊದಿಕೊಳ್ಳಲು ಕಾರಣವಾಗುತ್ತವೆ.

9. ಮಹಿಳೆಯರು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವಾಗ ಸಹ ಕಾಲು, ಮುಖ ಊದಿಕೊಂಡಂತೆ ಅನಿಸಬಹುದು.ದಿನನಿತ್ಯ ಧರಿಸುತ್ತಿದ್ದ ಚಪ್ಪಲಿ/ ಶೂ ಬಿಗಿಯಾಗಿದ್ದರೆ, ಬೆರಳಲ್ಲಿನ ಉಂಗುರ ತೀರಾ ಬಿಗಿ ಆಗಿದ್ದರೆ ಕೈ-ಕಾಲು ಊದಿಕೊಂಡಿರಬಹುದಾದ ಸಾಧ್ಯತೆ ಇರುತ್ತದೆ. ಹೀಗೆ ಅನುಮಾನವಿದ್ದಾಗ, ಹೆಬ್ಬೆರಳಿನ ಸಹಾಯದಿಂದ ಹಿಮ್ಮಡಿಗಿಂತ ಸ್ವಲ್ಪ ಮೇಲೆ ಇಪ್ಪತ್ತು ಸೆಕೆಂಡು ಒತ್ತಿ ಹಿಡಿದು ಬಿಡಿ. ಬೆರಳು ತೆಗೆದಾಗ ಒತ್ತಿದ ಜಾಗದಲ್ಲಿ ಗುಳಿ ಬಿದ್ದಿದ್ದರೆ ಕಾಲು ಊದಿಕೊಂಡಿರುವುದು ನಿಶ್ಚಿತ.ಪ್ರೊಟೀನ್ ಕೊರತೆಯಿಂದ ಬರುವ ಊತ ಸಾಮಾನ್ಯವಾಗಿ ಸಂಪೂರ್ಣ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಬೆಳಗಿನ ಜಾವ ಹೆಚ್ಚಾಗಿದ್ದು, ಸಂಜೆಗೆ ಕಡಿಮೆಯಾದಂತೆ ಎನಿಸುತ್ತದೆ. ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಂದ ಕಾಣಿಸಿಕೊಳ್ಳುವ ಊತ ಸಾಮಾನ್ಯವಾಗಿ ಕಾಲುಗಳಿಗೆ ಸೀಮಿತವಾಗಿದ್ದು, ಸಂಜೆಗೆ ಹೆಚ್ಚಾಗುತ್ತಾ ಹೋಗುತ್ತದೆ.

-ಡಾ.ವೀಣಾ ಭಾಸ್ಕರ್ ಎಸ್. ಗೌಡ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.