ಮಂಗಳವಾರ, ಮೇ 11, 2021
27 °C

ನಿಮ್ಮ ನಗುವನ್ನು ಮರೆಯುವ ಮುನ್ನ...

ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ಮೈಸೂರು: ಪ್ರೊ.ಕೆ.ನ.ಶಿವತೀರ್ಥನ್ ಇದ್ದಲ್ಲಿ ನಗುವಿಗೆ ಬರವಿರಲಿಲ್ಲ. ಎಂತಹದೇ ಗಂಭೀರ ಸನ್ನಿವೇಶದಲ್ಲಿಯೂ ಹಾಸ್ಯಪ್ರಜ್ಞೆಯಿಂದ ನಗೆ ಉಕ್ಕಿಸುತ್ತಿದ್ದರು.  ಮಾತು ಮಾತಿಗೂ ಪನ್‌ಗಳ ಮಳೆಗರಿಯುತ್ತಿದ್ದರು. ಎದುರಿಗೆ ಇದ್ದವರ ಕಾಲೆಳೆಯುತ್ತಿದ್ದರು.ಎಷ್ಟೋ ಬಾರಿ ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತಿದ್ದರು. ಇವರಲ್ಲಿ ಹಾಸ್ಯಪ್ರಜ್ಞೆ ಸದಾ ಜಾಗೃತವಾಗಿರುತ್ತಿತ್ತು. ಸಂಭಾಷಣೆ ಇರಲಿ, ಗೆಳೆಯರು, ಪರಿಚಿತರ ಜೊತೆಗಿನ ಹರಟೆ ಇರಲಿ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಹಾಗೂ ಓರಗೆಯ ಲೇಖಕ ಮಿತ್ರರ ಕುರಿತು ಸ್ವಾರಸ್ಯಕರವಾಗಿ ಮಾತನಾಡುತ್ತಿದ್ದರು. ಬಗೆ ಬಗೆಯ ಮದ್ಯಗಳ ಬಗ್ಗೆ ಮಾತನಾಡಲು ಹೊರಟರೆ ಮುಗಿಯಿತು, ಇವರ ಮಾತು ಕೇಳುತ್ತಾ ಕುಳಿತವರು ಎಷ್ಟು ಬೇಗ ರಾತ್ರಿಯಾಗುತ್ತದೆಯೋ ಎಂದು ಆಕಾಶ ನೋಡುವಂತಾಗುತ್ತಿತ್ತು. ಮದ್ಯ ಕುರಿತು ಶಿವತೀರ್ಥನ್ ಹೀಗೆ ಬರೆದಿದ್ದರು-~ಮೌನ ಓಲ್ಡ್ ಮಾಂಕ್, ಮಾತು ಥಿಂಕ್‌ಟ್ಯಾಂಕ್~.ಪ್ರಗತಿಪರ ಹೋರಾಟಗಳಲ್ಲಿಯೂ ಇವರು ತಮ್ಮನ್ನು ತೊಗಡಿಸಿಕೊಂಡಿದ್ದರು. ಹೆಸರಾಂತ ಸಾಹಿತಿಗಳಾದ ಪಿ.ಲಂಕೇಶ್, ಬಿ.ಸಿ.ರಾಮಚಂದ್ರ ಶರ್ಮ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಡಾ.ಬೆಸಗರಹಳ್ಳಿ, ಪ್ರೊ.ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ, ಹೋರಾಟಗಾರರಾದ ಪ್ರೊ.ಕೆ.ರಾಮದಾಸ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪ್ರೊ.ಎಚ್.ಎಲ್.ಕೇಶವಮೂರ್ತಿ ಸೇರಿದಂತೆ ಹಲವರೊಂದಿಗೆ ಒಡನಾಟವಿತ್ತು.ಕೆಲವೊಂದು ವೇಳೆ ಇದ್ದಕ್ಕಿದ್ದ ಹಾಗೆ ಕೋಪ ಮಾಡಿಕೊಳ್ಳುತ್ತಿದ್ದರು. ಒಮ್ಮೆ ಹೀಗಾಯಿತು: ಯುವರಾಜ ಕಾಲೇಜು ಎದುರು ಹೊಸದೊಂದು ಕಟ್ಟಡ ನಿರ್ಮಾಣಕ್ಕಾಗಿ ಮರಗಳನ್ನು ಕತ್ತರಿಸಲು ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿತು. ಈ ವಿಷಯ ತಿಳಿದ ಪ್ರಗತಿಪರರು ಪ್ರತಿಭಟನಾ ಮೆರವಣಿಗೆಯನ್ನು ಸಂಘಟಿಸಿದ್ದರು. ಈ ಮೆರವಣಿಗೆಯಲ್ಲಿ ಹಿರಿಯರಾದ ಪ್ರೊ.ಜೆ.ಆರ್. ಲಕ್ಷ್ಮಣರಾವ್, ಜಿ.ಟಿ.ನಾರಾಯಣರಾವ್,  ಪ್ರೊ.ಕೆ.ರಾಮದಾಸ್ ಜೊತೆಗೆ ಶಿವತೀರ್ಥನ್ ಸಹ ಇದ್ದರು. ಮೆರವಣಿಗೆ ಕ್ರಾಫರ್ಡ್ ಹಾಲ್ ತಲುಪಿತು. ಅಲ್ಲಿ ಪೊಲೀಸರು ಪ್ರವೇಶದ್ವಾರವನ್ನು ಮುಚ್ಚಿದ್ದರು. ಇದರಿಂದ ರಾಮದಾಸ್, ಶಿವತೀರ್ಥನ್ ಆಕ್ರೋಶಗೊಂಡಿದ್ದರು. ಆಗ ಬಿ.ಜೆ.ಹೊಸಮಠ್ ಕುಲಸಚಿವರಾಗಿದ್ದರು. ಮನವಿಪತ್ರ ಸ್ವೀಕರಿಸಲು ಬಂದ ಹೊಸಮಠ್‌ರನ್ನು ಉದ್ದೇಶಿಸಿ `ನೀವು ಐಎಫ್‌ಎಸ್ ಅಧಿಕಾರಿ. ನೀವೇ ಮರ ಕಡಿಸಲು ಮುಂದಾಗಿದ್ದೀರಿ~ ಎಂದು ಏರುಧ್ವನಿಯಲ್ಲಿ ಶಿವತೀರ್ಥನ್ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಇದರಿಂದ ಮತ್ತಷ್ಟು ಸಿಟ್ಟಾದವರು `ನಾನು ಉಪವಾಸ ಸತ್ಯಾಗ್ರಹ ನಡೆಸುತ್ತೇನೆ~ ಎಂದು ಘೋಷಿಸಿಯೇ ಬಿಟ್ಟರು. ಆನಂತರದಲ್ಲಿ ಜೊತೆಗಿದ್ದವರು ಸಮಾಧಾನ ಪಡಿಸಿದ್ದರು.ಇವರ ಪದ್ಯದ ಕೆಲವು ಸಾಲುಗಳು ಹೀಗಿವೆ- `ಓಡುವ ಹೆಣ್ಣಿಗೆ ಕಾಲವೇ ಬೆರಗು, ಓಡದ ಹೆಣ್ಣಿಗೆ ಸೋಲೇ ಸೆರಗು~.`ಶಿವತೀರ್ಥನ್ ಎಲ್ಲ ಗುಂಪಿನ ಜೊತೆಗಿದ್ದಾರೆ. ಆದರೆ ಯಾವ ಗುಂಪಿನಲ್ಲಿಯೂ ಗೋವಿಂದ ಎನ್ನಲಿಲ್ಲ. ಇವರು ಕಾವ್ಯ ರಚನೆಯಲ್ಲಿ ತನ್ನತನ   ಕಾಪಾಡಿಕೊಂಡು ಬಂದಿದ್ದಾರೆ~ ಎಂದು ಖ್ಯಾತ ನಾಟಕಕಾರ ಎಚ್. ಎಸ್.ಶಿವಪ್ರಕಾಶ್ ಹೇಳಿದ್ದಾರೆ. ಇದು ಇವರಿಗೆ ದೊರೆತ ದೊಡ್ಡ ಗೌರವ.ಸದಾ ಲವಲವಿಕೆಯಿಂದ, ತಮಾಷೆ, ಗೇಲಿ, ಪನ್ ಮಾಡುತ್ತಾ ಇದ್ದ ಶಿವತೀರ್ಥನ್ 2007 ರ ನವೆಂಬರ್ ತಿಂಗಳಲ್ಲಿ ಪಾರ್ಶ್ವವಾಯುವಿಗೆ ಒಳಗಾದರು. ಆನಂತರ ಇವರಿಗೆ ನರ್ಸಿಂಗ್ ಹೋಂ ಮನೆಯಾಯ್ತು, ಹಾಸಿಗೆ ಗೆಳೆಯ ಆಯಿತು. ಇನ್ನು ಮುಂದೆ ಶಿವತೀರ್ಥನ್ ನಗುವುದಿಲ್ಲ, ಉಳಿದವರನ್ನೂ ನಗಿಸುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.