ಮಂಗಳವಾರ, ಮೇ 18, 2021
30 °C

ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಹಾಲಿ (ಪಿಟಿಐ): `ಅಭಿಮಾನಿಗಳೇ ನಿಮ್ಮ ಪ್ರಾರ್ಥನೆ ಹಾಗೂ ಅಭಿನಂದನೆಗಳಿಗೆ ನನ್ನ ಧನ್ಯವಾದಗಳು. ಇಷ್ಟು ವರ್ಷಗಳ ಕಾಲ ನನಗೆ ಸ್ಫೂರ್ತಿ ಆದವರು ನೀವು~ ಎಂದು 39ನೇ ಜನ್ಮದಿನ ಆಚರಿಸಿಕೊಂಡ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಐಪಿಎಲ್ ಪಂದ್ಯ ಆಡಲು ಇಲ್ಲಿಗೆ ಬಂದಿರುವ ಮುಂಬೈ ಇಂಡಿಯನ್ಸ್ ಆಟಗಾರ ಸಚಿನ್ ಮಂಗಳವಾರ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು. ಚಂಡೀಗಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ  `ಸಚಿನ್-ಎ ಟ್ರಿಬ್ಯೂಟ್ ಟು ದಿ ಲೆಜೆಂಡ್~ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದರು.ಸಂಜೆ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. ತಂಡ ವಾಸ್ತವ್ಯ ಹೂಡಿರುವ ಹೋಟೆಲ್‌ನಲ್ಲಿ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪತ್ನಿ ಅಂಜಲಿ ಕೂಡ ಜೊತೆಗಿದ್ದರು.`ಈ ಹಂತ ತಲುಪಲು ದೇವರು ಹಾಗೂ ಅಭಿಮಾನಿಗಳ ಪ್ರೀತಿ ಕಾರಣ. ನನ್ನ ಜನ್ಮದಿನಕ್ಕೆ ಶುಭಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು~ ಎಂದು ಸಚಿನ್ ನುಡಿದರು.ತೆಂಡೂಲ್ಕರ್ ಅವರ ಜನ್ಮದಿನಕ್ಕೆಂದು ಪಂಚತಾರಾ ಹೋಟೆಲ್ ಆಡಳಿತ ವಿಶೇಷ ವ್ಯವಸ್ಥೆ ಮಾಡಿತ್ತು.ಐದು ಕೆ.ಜಿ. ಕೇಕ್ ಅನ್ನು ಕ್ರಿಕೆಟ್ ಕ್ರೀಡಾಂಗಣದ ರೀತಿ ನಿರ್ಮಿಸಲಾಗಿತ್ತು. ಹೋಟೆಲ್ ಸುತ್ತ ಅಪಾರ ಸಂಖ್ಯೆ ಅಭಿಮಾನಿಗಳು ಜನ್ಮದಿನ ಶುಭಾಶಯವಿದ್ದ ಭಿತ್ತಿ ಪತ್ರ ಹಿಡಿದು ಸಚಿನ್ ದರ್ಶನಕ್ಕಾಗಿ ಕಾದು ಕುಳಿತಿದ್ದರು. ಕೆಲವರು ಕುಳಿತಲ್ಲೇ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ದೇಶದ ವಿವಿಧೆಡೆ ಇಂತಹ ಸಂಭ್ರಮ ಕಂಡುಬಂತು.`ದಿ ಹಿಂದು~ ಪತ್ರಿಕೆ ಪ್ರಕಟಿಸಿರುವ ಸಚಿನ್ ಕುರಿತಾದ ಪುಸ್ತಕಕ್ಕೆ ರಮಾಕಾಂತ್ ಅಚ್ರೇಕರ್ ಮುನ್ನುಡಿ ಬರೆದಿದ್ದಾರೆ. ಇದರಲ್ಲಿ ತೆಂಡೂಲ್ಕರ್ ಅವರ ಶತಕಗಳ ಶತಕದ ವಿವರ, ದಾಖಲೆಗಳ ಬಗ್ಗೆ ಮಾಹಿತಿ ಇದೆ. ಹಿರಿಯ ಕ್ರೀಡಾ ಬರಹಗಾರ ವಿ.ಕೃಷ್ಣಸ್ವಾಮಿ 286 ಪುಟಗಳ ಈ ಪುಸ್ತಕ ಬರೆದಿದ್ದಾರೆ.`ಈ ಪುಸ್ತಕವನ್ನು ಬಿಡುಗಡೆಗೊಳಿಸಲು ನನಗೆ ತುಂಬಾ ಖುಷಿಯಾಗುತ್ತಿದೆ~ ಎಂದು ಸಚಿನ್ ಹೇಳಿದರು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹರಭಜನ್ ಹಾಗೂ ಕೋಚ್ ರಾಬಿನ್ ಸಿಂಗ್ ಕೂಡ ಇದ್ದರು.

ಬುಧವಾರ ಸಂಜೆ ಈ ತಂಡದವರು ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವೆನ್ ಎದುರು ಆಡಲಿದ್ದಾರೆ. ಗಾಯದ ಕಾರಣ ಸಚಿನ್ ಐದು ಪಂದ್ಯ ತಪ್ಪಿಸಿಕೊಂಡಿದ್ದರು. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಅವರು ತಮ್ಮ ಕೈಬೆರಳಿಗೆ ಪೆಟ್ಟು ಮಾಡಿಕೊಂಡಿದ್ದರು. ಕಳೆದ ಪಂದ್ಯದಲ್ಲಿ ಅವರು 23 ರನ್ ಗಳಿಸಿದ್ದರು.ನನಗೆ ಈಗಲೇ ನಡುಕ ಶುರುವಾಗಿದೆ. ಸಮಾಧಾನವೆಂದರೆ ಪಂದ್ಯದ ದಿನ ಸಚಿನ್ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಅಂದ ಹಾಗೆ, ಆಡುತ್ತಲೇ ಅವರು ಇನ್ನೂ ಎಷ್ಟು ಹುಟ್ಟುಹಬ್ಬ ಆಚರಿಸಿಕೊಳ್ಳಬಹುದು?

ಆ್ಯಡಮ್ ಗಿಲ್‌ಕ್ರಿಸ್ಟ್ ಕಿಂಗ್ಸ್ ಇಲೆವೆನ್ ನಾಯಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.