ನಿಮ್ಮ ಬಯಕೆ, ನನ್ನ ವಿನ್ಯಾಸ!

7

ನಿಮ್ಮ ಬಯಕೆ, ನನ್ನ ವಿನ್ಯಾಸ!

Published:
Updated:

ಕಾವೇರಿಗಾಗಿ ಕಾವೇರಿಸಿಕೊಂಡಿದ್ದ ಸಿಲಿಕಾನ್ ಸಿಟಿಯಲ್ಲಿ ಶನಿವಾರ ಸಂಜೆ ಏಕಾಏಕಿ ಸುರಿದ ಮಳೆಗೆ ಪ್ರತಿಭಟನೆಯ ಕಾವು ಜರ‌್ರನೆ ಇಳಿದಿತ್ತು. ತಂಪು ಗಾಳಿ ಆಸ್ವಾದಿಸುತ್ತಾ ಬಂದ ಒಂದೊಂದೇ ವಾಹನಗಳು ಯುಬಿ ಸಿಟಿಯ `ಸಿಟಿ ಬಾರ್~ನಲ್ಲಿ ಜಮಾಯಿಸಿದರು.ಪ್ರತಿ ಬಾರಿ ಹಾಯ್ ಹಲೋ ಹೇಳಿದವರತ್ತ ಕಣ್ಣು ಹಾಯಿಸಿದರೆ ಬಗೆಬಗೆಯ ಶೈಲಿಯ ಉಡುಗೆ ತೊಡುಗೆಗಳ ದರ್ಶನವಾಗುತ್ತಿತ್ತು. ಮಂದ ಬೆಳಕು, ಪಾಶ್ಚಾತ್ಯ ಸಂಗೀತದ ಅಬ್ಬರ ಪರಿಸರವನ್ನೆಲ್ಲ ತುಂಬಿಕೊಳ್ಳುತ್ತಿದ್ದಂತೆ ಒಬ್ಬರಿಗೊಬ್ಬರು ಕೈಕುಲುಕಿ, ತಬ್ಬಿಕೊಂಡು, ಮುತ್ತಿಕ್ಕಿ ಉಡುಗೆ ತೊಡುಗೆಯ ಬಗ್ಗೆ ಪ್ರಶಂಸೆ ವಿನಿಮಯ ಮಾಡಿಕೊಳ್ಳುತ್ತಿದ್ದರು.`ಒಗ್ನೋರ~ ಡಿಸೈನ್ ಹೌಸ್‌ನ ಮೊದಲ ವಾರ್ಷಿಕೋತ್ಸವದಲ್ಲಿ ಕಂಡುಬಂದ ನೋಟವಿದು. `ಒಗ್ನೋರ~ದ ಸಂಸ್ಥಾಪಕರ ಲ್ಲೊಬ್ಬರಾದ ಪ್ರತೀಕ್ಷಾ ಹೆಗ್ಡೆ, ತಮ್ಮ ಸಾಧನೆಯ ಹಾದಿಯ ಬಗ್ಗೆ ಮಾತನಾಡಿದರು.`ಎಂಬಿಎ ಮಾಡಬೇಕು ಎಂಬ ಕನಸಿತ್ತು. ಆದರೆ ನಾನು ಫ್ಯಾಷನ್ ಡಿಸೈನರ್ ಆಗಬೇಕು ಎಂಬುದು ನಮ್ಮಮ್ಮನ ಕನಸಾಗಿತ್ತು. ಈ ಕ್ಷೇತ್ರದ ಬಗ್ಗೆ ಮೊದಲು ಏನೂ ಗೊತ್ತಿರದಿದ್ದರೂ ಆಸಕ್ತಿ ಇತ್ತು. ಜೊತೆಗೆ ಕುತೂಹಲವೂ ಇತ್ತೆನ್ನಿ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ಪದವಿ ಪಡೆದೆ. ನಂತರ ಅಮೆರಿಕದಲ್ಲಿ ಹೆಚ್ಚಿನ ಅಭ್ಯಾಸ ಮಾಡಿ ಬಂದೆ. ಇದು ನನ್ನ ಮೂರನೇ ಶೋ. ಪ್ರತಿ ಶೋನಲ್ಲೂ ಏನಾದರೂ ಹೊಸತನ್ನು ತರಬೇಕು ಎಂಬ ಉದ್ದೇಶ ನನ್ನದು. ನಾನು ಮೂಲತಃ ಮಂಗಳೂರಿನವಳು. ನನ್ನ ಡಿಸೈನಿಂಗ್‌ನಲ್ಲಿ ಮಂಗಳೂರು ಶೈಲಿಯ ವಧುವಿನ ಉಡುಪುಗಳು ಇವೆ. ನಮ್ಮ ನೆಲದ ಸೊಗಡನ್ನು ಬಿಟ್ಟುಕೊಡಬಾರದಲ್ವಾ~ ಎಂದು ಹೆಮ್ಮೆಯಿಂದ ನಕ್ಕರು.ಮೊದಲ ವಾರ್ಷಿಕೋತ್ಸವಕ್ಕೆಂದೇ ವಿಶೇಷವಾದ ವಿನ್ಯಾಸಗಳನ್ನು ಸಿದ್ಧಪಡಿಸಿದ್ದೇನೆ. `ಇಂಪ್ಯಾಷನ್ಡ್~ ಹೆಸರಿನ ಈ ಸಂಗ್ರಹದಲ್ಲಿ ಬೋಲ್ಡ್ ನಿಯಾನ್ ಬಣ್ಣದ ಉಡುಪುಗಳಿವೆ. ತಾನು ಧರಿಸುವ ಉಡುಪು ತುಂಬಾ ಸುಂದರ ಮತ್ತು ವಿಶೇಷವಾಗಿರಬೇಕು ಎಂದು ಎಲ್ಲಾ ಹೆಣ್ಣುಮಕ್ಕಳೂ ಬಯಸುತ್ತಾರೆ. ಅದರಿಂದ ತಾನು ಇನ್ನಷ್ಟು ಸುಂದರಿಯಾಗಿ ಕಾಣಿಸಬಹುದೆಂಬುದು ಅವರ ಲೆಕ್ಕಾಚಾರ, ಆಸೆ. ಮಹಿಳೆಯರ ಇಂತಹ ಭಾವನೆಗೆ ಸ್ಪಂದಿಸುವ ಉಡುಪುಗಳು ಈ ವಾರ್ಷಿಕೋತ್ಸವ ಸಂಗ್ರಹದಲ್ಲಿವೆ ಎಂಬ ತೃಪ್ತಿ ನನಗಿದೆ~ ಎಂದವರು ವಿವರಿಸಿದರು.ಭಾರತೀಯ ಶೈಲಿಯ ಜತೆಗೆ ಪಾಶ್ಚಾತ್ಯ ಶೈಲಿಯ ಉಡುಪುಗಳಿಗೂ ಭಾರೀ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಉಡುಪುಗಳನ್ನು ನೀಡಬೇಕು ಎಂಬುದು ಪ್ರತೀಕ್ಷಾ ಆಸೆಯಂತೆ. `ಮೊದಲು ಶೋ ಕೊಟ್ಟಾಗ ತುಂಬಾ ಭಯವಿತ್ತು. ಆದರೆ ಈಗ ಆತ್ಮವಿಶ್ವಾಸ ಬಂದಿದೆ. ನಾನು ತಯಾರಿಸಿದ ಉಡುಪುಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ಈಗ ಪುರುಷರ ಉಡುಪುಗಳನ್ನು ತಯಾರಿಸಿ ಎಂಬ ಬೇಡಿಕೆ ಕೂಡ ಬಂದಿದೆ. ಅದು ನನ್ನ ಮುಂದಿರುವ ಮಹತ್ವದ ಪ್ರಾಜೆಕ್ಟ್~ ಎಂದರು.ಫ್ಯಾಷನ್ ಸದಾ ಬದಲಾಗುತ್ತಾ ಇರುತ್ತದೆ. ಜನರನ್ನು, ಅವರ ಮನಸ್ಥಿತಿಗಳನ್ನು ಅರಿತುಕೊಂಡು ನಾವು ಉಡುಪುಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ನನ್ನ ಕುಟುಂಬದವರ ಬೆಂಬಲದಿಂದ ನನಗೆ ಇಷ್ಟೆಲ್ಲಾ ಸಾಧನೆ ಮಾಡಲು ಸಹಾಯವಾಯಿತು ಎಂದು ನಕ್ಕರು ಪ್ರತೀಕ್ಷಾ.ಮಾತು ಮುಗಿದು ಇನ್ನೇನು ಕ್ಯಾಟ್‌ವಾಕ್‌ಗಾಗಿ ರ‌್ಯಾಂಪ್ ತೆರೆದುಕೊಳ್ಳುತ್ತದೆ ಎಂಬ ಸೂಚನೆ ಸಿಗುತ್ತಲೇ ಬಾರ್‌ನಲ್ಲೊಮ್ಮೆ ಮೌನ.. ಗಪ್‌ಚುಪ್... ಊಹೆ ನಿಜವಾಯಿತು...  ಕೇಸರಿ ಬಣ್ಣದ ದಿರಿಸಿನಲ್ಲಿ ಮುದ್ದಾಗಿ ಕಾಣುತ್ತಿದ್ದ ರಮ್ಯಾ ಬಾರ್ನಾ ಬೆಕ್ಕಿನಂತೆ ಮೆತ್ತಗೆ ಹೆಜ್ಜೆಯಿಡುತ್ತಾ ಬಂದರು. ಸಂಜೆಯ ಮಳೆಗಿಂತಲೂ ಜೋರಾಗಿ ಚಪ್ಪಾಳೆ ಸುರಿಯಿತು.ನಂತರ ಬಂದ ರೂಪದರ್ಶಿಗಳು ಇನ್ನಷ್ಟು ಉಡುಪು, ಆಭರಣಗಳನ್ನು ಪ್ರದರ್ಶಿಸಿದರು.

ಒಂದು ಕೈಯಲ್ಲಿ ಬಿಯರ್ ಬಾಟಲ್, ಇನ್ನೊಂದು ಕೈಯಲ್ಲಿ ಸಿಗರೇಟ್ ಹಚ್ಚಿಕೊಂಡು ನಿಂತ ಒಬ್ಬ ಹುಡುಗಿಗೆ ಮಾತ್ರ ಇದ್ಯಾವುದರ ಗೊಡವೆಯೇ ಇರಲಿಲ್ಲ. ಹುಡುಗರು ನಶೆ ಏರಿದ ಕಣ್ಣುಗಳಲ್ಲಿ ರ‌್ಯಾಂಪ್‌ನ ಸೊಬಗು, ಬೆಡಗನ್ನು ಸವಿಯುತ್ತಿದ್ದರು.ಕೊನೆಯದಾಗಿ ಬಂದವರು ಐಂದ್ರಿತಾ ರೇ. ರ‌್ಯಾಂಪ್‌ನ ಮುಖ್ಯ ಅತಿಥಿ! ತಿಳಿ ಹಳದಿ ಬಣ್ಣದ ಲೆಹೆಂಗಾದಲ್ಲಿ ಉಜ್ವಲವಾಗಿ ಶೋಭಿಸಿದ ಐಂದ್ರಿತಾ, ಕಣ್ಣಗಲಿಸಿ, ಕೆನ್ನೆಯುಬ್ಬಿಸಿ ನಕ್ಕರು. ಅಲ್ಲಿಗೆ ರ‌್ಯಾಂಪ್ ಶೋ ಮುಕ್ತಾಯವಾಯಿತು. ಕ್ಯಾಮೆರಾಗಳು, ಐಂದ್ರಿತಾ ಬೆನ್ನಟ್ಟಿಹೋದವು.`ನನಗೆ ಗಾಢ ವರ್ಣಕ್ಕಿಂತ ತಿಳಿ ಬಣ್ಣ ತುಂಬಾ ಇಷ್ಟವಾಗುತ್ತದೆ. ರ‌್ಯಾಂಪ್ ವಾಕ್ ಮಾಡುವಾಗ ಬಟ್ಟೆ ಎಲ್ಲಿ ಜಾರುತ್ತದೆಯೋ ಎಂಬ ಭಯದಲ್ಲಿಯೇ ಮಾಡುತ್ತೇನೆ. ಆದರೆ ಈ ಲೆಹೆಂಗಾ ತುಂಬಾನೇ ಚೆನ್ನಾಗಿದೆ. ನನಗೆ ಇಷ್ಟವಾಗಿದೆ~ ಎಂದು ಹೇಳುತ್ತಾ ಮಾಸಿ ಹೋದ ತುಟಿಯ ರಂಗಿಗೆ ಮತ್ತಷ್ಟೂ ಟಚ್‌ಅಪ್ ಮಾಡಿಸಿಕೊಂಡು ನಕ್ಕರು.ಪಕ್ಕದಲ್ಲೇ ಇದ್ದ ರಮ್ಯಾ ಬಾರ್ನಾ `ಇದು ನನ್ನ ಇಷ್ಟದ ಬಣ್ಣ. ಚಿನ್ನದ ಬಣ್ಣದ ಗೆರೆಗಳಿಂದ ಇದು ಮತ್ತಷ್ಟೂ ಗ್ರ್ಯಾಂಡ್ ಆಗಿ ಕಾಣಿಸುತ್ತದೆ. ನಾನು ಮತ್ತಷ್ಟೂ ಸುಂದರವಾಗಿ ಕಾಣಿಸುತ್ತಿದ್ದೇನೆ ಅನಿಸುತ್ತಿದೆ~ ಎಂದು ಬೀಗಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry