ನಿಮ್ರತ್‌ ನಿರರ್ಗಳ ಮಾತು

7

ನಿಮ್ರತ್‌ ನಿರರ್ಗಳ ಮಾತು

Published:
Updated:

ತುಟಿಯಂಚಿನ ಚಾಕಲೇಟ್‌ ಸವಿಯುವ ಹುಡುಗಿ ಇದೀಗ ‘ಲಂಚ್‌ ಬಾಕ್ಸ್‌’ ಚಿತ್ರದ ನಾಯಕಿ. ಜಾಹೀರಾತಿನಿಂದ ಹಿರಿತೆರೆಯವರೆಗಿನ ತಮ್ಮ ಯಾನವನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ ನಿಮ್ರತ್‌ ಕೌರ್‌.‘ಆಲ್ ಅಬೌಟ್‌ ದಿ ವುಮೆನ್‌‘ ಎಂಬ ನಾಟಕ ರಂಗಶಂಕರದಲ್ಲಿ ಪ್ರದರ್ಶನ ಕಂಡಾಗ ನೋಡಿದ್ದ ಆ ಮುಖ ಬಹಳಷ್ಟು ಜನಕ್ಕೆ ನೆನಪಿರಲಿಕ್ಕಿಲ್ಲ. ಆದರೆ ಧಾರಾವಾಹಿಗಳ ನಡುವೆ ಪದೇಪದೇ ಅದೇ ನಗು ತುಂಬಿದ ಮೊಗದ ತುಟಿಯಂಚಿನಲ್ಲಿ ಅಂಟಿದ್ದ ಚಾಕಲೇಟನ್ನು ಬೆರಳಿನಿಂದ ಮೆಲ್ಲುತ್ತ ಮುಗುಳ್ನಗುವ ಆ ಚೆಲುವೆಯನ್ನು ಮರೆಯಲು  ಸಾಧ್ಯವಿಲ್ಲ.‘ಲಂಚ್‌ಬಾಕ್ಸ್’  ಚಿತ್ರದಲ್ಲಿನ ಈಕೆಯ ನಟನೆಗೆ ಭಾರತೀಯರು ಮಾತ್ರವಲ್ಲ ವಿದೇಶಿ ಪ್ರೇಕ್ಷಕರೂ ಇವರ ಅಭಿಮಾನಿಗಳಾಗಿದ್ದಾರೆ. ಮೊದಲ ಚಿತ್ರದಲ್ಲೇ ಸಿಕ್ಕ ಭರ್ಜರಿ ಓಪನಿಂಗ್‌ ಹಾಗೂ ಯಶಸ್ಸಿನ ಅಲೆಯ ಮೇಲಿರುವ ನಿಮ್ರತ್‌ ಕೌರ್‌ ‘ಮೆಟ್ರೊ’ದೊಂದಿಗೆ ಹಂಚಿಕೊಂಡ ಕೆಲ ಅನಿಸಿಕೆಗಳು ಇಲ್ಲಿವೆ.ಪಂಜಾಬ್‌ ಮೂಲದ ಯೋಧರ ಕುಟುಂಬದಲ್ಲಿ ಜನಿಸಿದ ನಿಮ್ರತ್‌ ಕೌರ್‌ಗೆ ಶಾಲಾ ದಿನಗಳಿಂದಲೂ ರಂಗಭೂಮಿಯತ್ತ ಆಸಕ್ತಿ. ದೆಹಲಿಯಲ್ಲಿ ಬಿಕಾಂ ಪದವಿ ಪಡೆದ ನಂತರ ಅಲ್ಲಿಂದ ಹಾರಿ ನೇರವಾಗಿ ಬಂದಿಳಿದಿದ್ದು ಮುಂಬೈ ಎಂಬ ಮಾಯಾನಗರಿಗೆ. ‘ನಾನು ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಬೇಕೆಂದು ನಿರ್ಧರಿಸಿದ್ದೆ. ಹೀಗಾಗಿ ಶತಾಯಗತಾಯ ಮನರಂಜನಾ ಕ್ಷೇತ್ರ ಸೇರುವುದು ಅನಿವಾರ್ಯವಾಗಿತ್ತು. ಹೀಗಾಗಿ ಜಾಹೀರಾತು ಕ್ಷೇತ್ರವನ್ನು ಪ್ರವೇಶಿಸಿದೆ. ಒಂಬತ್ತು ವರ್ಷ ದೇಶ ವಿದೇಶದಲ್ಲಿ ಸುಮಾರು 80 ಜಾಹೀರಾತುಗಳಲ್ಲಿ ನಟಿಸಿದ ಅನುಭವದ ಮೂಟೆಯನ್ನು ಹೊತ್ತುಕೊಂಡೇ ಸಿನಿಮಾರಂಗವನ್ನು ಪ್ರವೇಶಿಸುವ ಪ್ರಯತ್ನವನ್ನು ಮುಂದುವರಿಸಿದೆ’ ಎನ್ನುತ್ತಲೇ ನಿಮ್ರತ್‌ ಮಾತಿಗಳಿದರು.ಸಿನಿಮಾರಂಗ ಪ್ರವೇಶಕ್ಕೆ ಜಾಹೀರಾತಿನಲ್ಲಿನ ನಟನೆ ಸಹಕಾರಿಯಾಯಿತೇ?

ಸಿನಿಮಾರಂಗಕ್ಕೆ ಜಿಗಿಯಲು ಜಾಹೀರಾತು ಕ್ಷೇತ್ರ ಲಾಂಚಿಂಗ್‌ ಪ್ಯಾಡ್‌ ಅಲ್ಲ. ಆದರೆ ಕ್ಯಾಮೆರಾ ಎದುರಿಸಲು, ಸ್ಕ್ರಿಪ್ಟ್‌ ಓದಲು ಕಲಿಸಿತು. ಬದುಕಲು ಹಾಗೂ ದೇಶ ವಿದೇಶಗಳನ್ನು ಸುತ್ತಲು ಕಾಸು ನೀಡಿದ್ದನ್ನೂ ನಾನು ಮರೆಯುವಂತಿಲ್ಲ. ಆದರೆ ರಂಗಭೂಮಿಯ ಅನುಭವ ನಿಜಕ್ಕೂ ಸಹಾಯಕ್ಕೆ ಬಂತು.ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ನೀವು ಕಂಡುಕೊಂಡ ವ್ಯತ್ಯಾಸ?

ರಂಗಭೂಮಿಯಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಗೆ ಹೆಚ್ಚು ಹೊತ್ತು ಕಾಯಬೇಕಿಲ್ಲ ಅಥವಾ ಟಿವಿ/ ಪತ್ರಿಕೆ ನೋಡಬೇಕಿಲ್ಲ. ಅದು ಆ ಕ್ಷಣದಲ್ಲೇ ತಿಳಿಯುತ್ತದೆ. ತಪ್ಪುಗಳನ್ನು ಮುಂದಿನ ಪ್ರದರ್ಶನದಲ್ಲಿ ತಿದ್ದಿಕೊಳ್ಳುವ ಅವಕಾಶವಿರುತ್ತದೆ. ಆದರೆ ಸಿನಿಮಾಗಳಲ್ಲಿ ಅದರ ಚಿತ್ರೀಕರಣದ ಹಂತದಲ್ಲೇ ತಪ್ಪುಗಳು ಆಗದಂತೆ ಎಚ್ಚರವಹಿಸಬೇಕು. ಇಲ್ಲಿ ರೀಶೂಟ್‌ ಅಂತೂ ಅತಿ ವಿರಳ. ರೀಟೇಕ್‌ಗಳಲ್ಲಿ ಭಾವತೀವ್ರತೆಯ ವ್ಯತ್ಯಾಸ ಕಂಡು ಬರುತ್ತದೆ. ಪ್ರತಿ ದೃಶ್ಯವನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕಿದೆ.ನಿಮ್ಮ ನಟನೆಗೆ ಮಾದರಿ ಯಾರು?

ನಟನೆಗೆ ಮಾದರಿ ಎಂದೂ ಏನೂ ಇಲ್ಲ. ಏಕೆಂದರೆ ನನ್ನ ತಂದೆ ಸೇನೆಯಲ್ಲಿದ್ದರು. ಹೀಗಾಗಿ ಅವರೊಂದಿಗೆ ಒಂದಿಷ್ಟು ಊರುಗಳನ್ನು ಸುತ್ತಿದ ಅನುಭವವಿದೆ. ಜತೆಗೆ ಎಲ್ಲ ವರ್ಗದವರೊಂದಿಗೆ ಬೆರೆತ ಕ್ಷಣಗಳು ಮನಸ್ಸಿನಲ್ಲಿ ಅಚ್ಚೊತ್ತಿವೆ. ಆ ಅನುಭವಗಳೇ ನನ್ನ ನಟನೆಗೆ ಸ್ಫೂರ್ತಿ. ನನ್ನ ಜೀವನದ ಅನುಭವಗಳೇ ನನ್ನ ನಟನೆಗೆ ಮಾದರಿ.ಮುಂದಿನ ದಿನಗಳಲ್ಲಿ ನಿಮ್ಮ ಚಿತ್ರಗಳ ಆಯ್ಕೆ ಹೇಗಿರಲಿದೆ?

ನಾನು ಚಿತ್ರರಂಗವನ್ನು ವೃತ್ತಿಯನ್ನಾಗಿ ಸ್ವೀಕರಿಸಿದವಳು. ಹೀಗಾಗಿ ಎಲ್ಲಾ ರೀತಿಯ ಸಿನಿಮಾಗಳನ್ನು ಮಾಡಬೇಕೆಂಬುದು ನನ್ನ ಬಯಕೆ. ಅದರಲ್ಲಿ ಕಲಾತ್ಮಕ, ಮನರಂಜನೆ ಇತ್ಯಾದಿ ಯಾವ  ಲಕ್ಷ್ಮಣರೇಖೆಯನ್ನೂ ಹಾಕಿಕೊಂಡಿಲ್ಲ. ಗ್ಲಾಮರಸ್‌ ಪಾತ್ರಕ್ಕೂ ನ್ಯಾಯ ಒದಗಿಸುವ ಭರವಸೆ ಇದೆ. ಸ್ಕ್ರಿಪ್ಟ್‌ಗಳನ್ನು ಓದಿ ನನಗೊಪ್ಪುವ ಪಾತ್ರವನ್ನು ಆರಿಸಿಕೊಳ್ಳುತ್ತೇನೆ.

ನಿಮ್ಮ ಹವ್ಯಾಸಗಳು?

ನಾನು ಸಿಖ್‌ ಕುಟುಂಬದಲ್ಲಿ ಹುಟ್ಟಿದವಳು. ಹೀಗಾಗಿ ಅಡುಗೆಯಲ್ಲಿ ನಾವು ಸಿದ್ಧಹಸ್ತರು ಎಂದು ಹೇಳಬೇಕಿಲ್ಲ. ಪಂಜಾಬಿ, ಇಟಾಲಿಯನ್‌ ಖಾದ್ಯ  ತಯಾರಿಸುವುದು ನನಗಿಷ್ಟ. ರಾಜ್ಮಾ, ಪರಾಠಾ, ಹಲ್ವಾ ಇತ್ಯಾದಿಯನ್ನು ಬಿಡುವು ಸಿಕ್ಕಾಗಲೆಲ್ಲಾ ತಯಾರಿಸಿ ಊಟ ಮಾಡುವುದು ನನ್ನ ಹವ್ಯಾಸ. ಜತೆಗೆ ಹೊಸ ಹೊಸ ಪ್ರದೇಶಗಳನ್ನು ಸುತ್ತುವುದು ಬಹಳ ಇಷ್ಟ. ನನ್ನ ಗಳಿಕೆಯಲ್ಲಿ ಒಂದಿಷ್ಟು ಅಂಶವನ್ನು ಸುತ್ತಾಟಕ್ಕೆ ಮೀಸಲಿಟ್ಟಿದ್ದೇನೆ.ನೀವು ಫ್ಯಾಷನ್‌ ಮೋಹಿಯೇ?

ಹೌದು. ನನಗೆ ಎಲ್ಲ ರೀತಿಯ ವಸ್ತ್ರಗಳೂ ಇಷ್ಟ. ಆದರೆ ಅವಕ್ಕೆ ಹೊಂದುವ ಬಳೆ, ಓಲೆ, ಬ್ಯಾಗು, ಇನ್ನಿತರ ವಸ್ತುಗಳ ಹೆಚ್ಚು ಸಂಗ್ರಹವಿಲ್ಲ. ನನ್ನ ಬಳಿ ಇರುವ ದೊಡ್ಡದಾದ ಟಿ–ಶರ್ಟ್‌ ತೊಡುವುದು ಬಹಳ ಇಷ್ಟ.ಬೆಂಗಳೂರಿನೊಂದಿಗೆ ನಿಮ್ಮ ನಂಟು?

ತಂಗಿಯ ಮನೆ ಜಯನಗರದಲ್ಲಿದೆ. ನಾಟಕದಲ್ಲಿ ನಟಿಸಲು ರಂಗಶಂಕರಕ್ಕೆ ಆಗಾಗ ಭೇಟಿ ನೀಡುತ್ತಿದ್ದೆ. ಇಷ್ಟು ಬಿಟ್ಟರೆ ನಾನು ಬೆಂಗಳೂರನ್ನು ಹೆಚ್ಚು ಸುತ್ತಿದವಳಲ್ಲ. ಆದರೆ ಇಲ್ಲಿಯ ಹವೆ ಬಹಳ ಇಷ್ಟ. ಬೆಂಗಳೂರನ್ನು ಮಿಸ್‌ ಮಾಡಿಕೊಳ್ಳುತ್ತೇನೆ (ಹೀಗೆ ಮಾತನಾಡುತ್ತಲೇ ತಮ್ಮನ್ನು ಭೇಟಿಯಾಗಲು ಬಂದ ತಂಗಿ ಹಾಗೂ ಆಕೆಯ ಸ್ನೇಹಿತರನ್ನು ಆಲಂಗಿಸಿದ ನಿಮ್ರತ್‌ ಮತ್ತೆ ಮಾತಿನ ಲಹರಿಯಲ್ಲಿ ತೇಲಿಹೋದರು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry