ಮಂಗಳವಾರ, ಮೇ 17, 2022
26 °C

ನಿಮ್ಹಾನ್ಸ್ ವ್ಯಾಪ್ತಿಗೆ ಧಾರವಾಡ ಆಸ್ಪತ್ರೆ: ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ನಗರದ ಮಾನಸಿಕ ಆರೋಗ್ಯ ವಿಜ್ಞಾನ ಸಂಸ್ಥೆಯನ್ನು ಬೆಂಗಳೂರಿನ ರಾಷ್ಟ್ರೀಯ ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ವ್ಯಾಪ್ತಿಗೆ ತರಲಾಗುವುದು ಎನ್ನುವ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಅವರ ಹೇಳಿಕೆಗೆ ಜೆಡಿಎಸ್ ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.ಪತ್ರಿಕಾ ಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಪಕ್ಷದ ಮುಖಂಡರಾದ ಎನ್.ಎಚ್. ಕೋನರಡ್ಡಿ, ಇಸ್ಮಾಯಿಲ್ ತಮಟಗಾರ, ಸುರೇಶ ಹಿರೇಮಠ, ಸರೋಜಾ ಪಾಟೀಲ ಮತ್ತಿತರರು ಧಾರವಾಡ ಮಾನಸಿಕ ಆರೋಗ್ಯ ವಿಜ್ಞಾನ ಸಂಸ್ಥೆಯ ಸ್ವಾಯತ್ತೆಗೆ ಧಕ್ಕೆ ತರುವಂತಹ ಯಾವುದೇ ನಿರ್ಧಾರಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.ಉತ್ತರ ಕರ್ನಾಟಕದ ಜನತೆಗೆ ಅತ್ಯುತ್ತಮವಾದ ಆರೋಗ್ಯ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದ 160 ವರ್ಷಗಳ ಹಿಂದೆ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಇಂತಹ ಆಸ್ಪತ್ರೆಯನ್ನು ನಿಮ್ಹಾನ್ಸ್‌ಗೆ ಹಸ್ತಾಂತರಿಸಿದರೆ ಎಲ್ಲ ಆಡಳಿತಾತ್ಮಕ ಕೆಲಸಗಳೂ ಅಲ್ಲಿಗೇ ವರ್ಗಾವಣೆಗೊಳ್ಳಲಿವೆ. ಇದರಿಂದ ಆಸ್ಪತ್ರೆ ಅಭಿವೃದ್ಧಿಗೆ ತೊಂದರೆಯಾಗಲಿದೆ ಎಂದು ಅವರು ದೂರಿದರು.ಪ್ರತಿ ತೊಂದರೆಗೂ ಇಲ್ಲಿಯ ವೈದ್ಯರು ನಿಮ್ಹಾನ್ಸ್ ಕಡೆಗೆ ಬೆರಳು ಮಾಡಿದರೆ ಅನಗತ್ಯವಾಗಿ ರೋಗಿಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಆಗ ಧಾರವಾಡದಲ್ಲಿ ಆಸ್ಪತ್ರೆ ಆರಂಭಿಸಿದ ಉದ್ದೇಶವೇ ವ್ಯರ್ಥವಾಗುತ್ತದೆ ಎಂದು ಅವರು ಹೇಳಿದರು. ಈ ಪ್ರಸ್ತಾವವನ್ನು ತಕ್ಷಣ ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ವಾರದಲ್ಲಿ ಈ ಬಗೆಗೆ ನಿರ್ಧಾರ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.ಕೇಂದ್ರ ಸರ್ಕಾರ ರಾಸಾಯನಿಕ ಗೊಬ್ಬರದ ಮೇಲೆ ಸಬ್ಸಿಡಿ ರದ್ದುಪಡಿಸಿದ ಕ್ರಮಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.