ಶನಿವಾರ, ಏಪ್ರಿಲ್ 10, 2021
30 °C

ನಿಯಂತ್ರಣ ತಪ್ಪಿದ ಉತ್ಸವ; ಅವಧಿ ಮೊಟಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲುಕೋಟೆ/ಪಾಂಡವಪುರ: ವೈರಮುಡಿ ಉತ್ಸವ ಹೊರಲು ಕೆಲವು ಕುಡುಕ ಭಕ್ತರು ಸೇರಿಕೊಂಡ ಘಟನೆ ಮಂಗಳವಾರ ಮಧ್ಯರಾತ್ರಿ ಮೇಲುಕೋಟೆಯಲ್ಲಿ ಜರುಗಿದೆ.

ಇದರಿಂದ ಉತ್ಸವ ನಿಯಂತ್ರಣತಪ್ಪಿ ಆತಂಕದ ಸ್ಥಿತಿ  ನಿರ್ಮಾಣವಾಯಿತು. ಅದಕ್ಕಾಗಿಯೇ ಉತ್ಸವದ ಅವಧಿಯನ್ನು ಮೊಟಕು ಗೊಳಿಸಿ ವಾಹನ ಮಂಟಪಕ್ಕೆ ತಂದ ಘಟನೆ ಮಂಗಳವಾರ ರಾತ್ರಿ 12 ಗಂಟೆಯಲ್ಲಿ ನಡೆದಿದೆ.ಇದರಿಂದಾಗಿ ಸ್ವಾಮಿಯ ದರ್ಶನದಿಂದ ಸಾವಿರಾರು ಮಂದಿ ಭಕ್ತರು ವಂಚಿತರಾದರು. ಪೂರ್ವನಿಗದಿಯಂತೆ 4ಗಂಟೆಯವರೆಗೆ  ಉತ್ಸವ ನಡೆಸಲೂ ಸಾಧ್ಯವಾಗಲಿಲ್ಲ. ಮಹಾಮಂಗಳಾರತಿಯ ನಂತರ ವೈರಮುಡಿ ಉತ್ಸವ 9ಗಂಟೆ ಸುಮಾರಿಗೆ ಆರಂಭವಾಗಿ ಚತುರ್ವೀದಿಗಳಲ್ಲಿ ಸಾಗುತ್ತಿದ್ದಾಗ ಭದ್ರತೆಗಾಗಿ ಹಾಕಲಾಗಿದ್ದ ಹಳೆಯ ಬ್ಯಾರಕೇಡ್ ಮುರಿದು ಹೋಗಿವೆ.ನಂತರ ಹಗ್ಗದ ಬಲೆ ತರಿಸಿ ಉತ್ಸವ ಮುಂದುವರೆಸುತ್ತಿದ್ದಾಗ ಒಳಭಾಗದಿಂದ ನುಗ್ಗಿದ ಭಕ್ತರು ಅಡ್ಡಾದಿಡ್ಡಿ ಉತ್ಸವ ಹೊರುತ್ತಿದ್ದರು. ಇವರೊಂದಿಗೆ ಕೆಲವು ಕುಡುಕರು ಸಹ ಉತ್ಸವ ಹೊರಲು ಸೇರಿ ಕೊಂಡರು. ಇದರ ಪರಿಣಾಮ ವೈರಮುಡಿ ಉತ್ಸವ ನಿಯಂತ್ರಣ ಕಳೆದುಕೊಂಡು ವಾಲ ತೊಡಗಿತು.ಒಂದು ಹಂತದಲ್ಲಿ ನೆಲ ಮಟ್ಟಕ್ಕೂ ಉತ್ಸವಹೋಗಿ ತೀವ್ರ ಆತಂಕ ಎದುರಾಯಿತು. ಅಲ್ಲಿದ್ದ  ಯಾರ ಮಾತನ್ನು ಯಾರೂ ಕೇಳ ದಂತಾಗಿತ್ತು. ತಕ್ಷಣ ಭದ್ರತಾ ಉಸ್ತುವಾರಿ ಯಲ್ಲಿದ್ದ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ರಾಜಣ್ಣ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿ ತಕ್ಷಣ ಭದ್ರತೆ ಹೆಚ್ಚಿಸಿದರು. ಇಷ್ಟೆಲ್ಲಾ ಅವಾಂತರ ಎದುರಾಗುತ್ತಿದ್ದರೂ ದೇವಾಲಯಕ್ಕೆ ಸಂಬಂಧಿಸಿದ ಯಾವ ಅಧಿಕಾರಿಗಳೂ ಉತ್ಸವದತ್ತ ಸುಳಿಯಲಿಲ್ಲ. ಭಯಗೊಂಡ ಅಲ್ಲಿದ್ದ ಸ್ಥಾನಿಕರು, ಅರ್ಚಕರು ಮತ್ತು ಇತರ ಸಿಬ್ಬಂದಿ ವಿಧಿಯಿಲ್ಲದೆ ವೈರಮುಡಿ ಉತ್ಸವವನ್ನು ಪೋಲೀಸ್ ರಕ್ಷಣೆಯೊಂದಿಗೆ ಸುರಕ್ಷಿತವಾಗಿ ಹತ್ತೇ ನಿಮಿಷದಲ್ಲಿ ಸ್ಟೇಟ್‌ಬ್ಯಾಂಕ್ ಬೀದಿಯಿಂದ ವಾಹನೋತ್ಸವ ಮಂಟಪಕ್ಕೆ ತಲುಪಿಸಿ ಸಂಪ್ರದಾಯ ಮುಗಿಸಿದರು. ಲಕ್ಷಾಂತರ ಭಕ್ತರು ಭಾಗವಹಿಸಿದ್ದ ಪ್ರಖ್ಯಾತ ವೈರಮುಡಿ ಉತ್ಸವ ಅವ್ಯವಸ್ಥೆಯಿಂದಾಗಿ ಮಾಮೂಲಿ ಉತ್ಸವದಂತೆ ನಡೆದುಹೋಯಿತು.ನಂತರ ಆರಂಭವಾದ ರಾಜಮುಡಿ ಉತ್ಸವವನ್ನು ಭಕ್ತರಿಗಾಗಿ ಪೋಲೀಸ್ ಭದ್ರತೆಯಲ್ಲಿ ನಿಧಾನವಾಗಿ ನೆರವೇರಿಸ ಲಾಯಿತು. ಈ ಘಟನೆಯಿಂದಾಗಿ ಮೂಲ ವಿಗ್ರಹ ನಾರಾಯಣಸ್ವಾಮಿ ದೇವಾಲಯಕ್ಕೆ ಹೋಗಲು ಗಂಟೆಗಟ್ಟಲೆ ಸರತಿಸಾಲಿನಲ್ಲಿ ನಿಂತಿದ್ದ ಭಕ್ತರಿಗೂ ಸಹ ದರ್ಶನ ಭಾಗ್ಯ ತಪ್ಪಿಹೋಯಿತು.ಶ್ರೀರಂಗಪಟ್ಟಣ ಡಿ.ವೈ.ಎಸ್.ಪಿ. ಲಾರೆನ್ಸ್, ಪಾಂಡವಪುರ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಸೇರಿದಂತೆ ಹಲವು ಪೋಲೀಸ್ ಅಧಿಕಾರಿಗಳು ಮತ್ತು ನೂರಾರು ಪೋಲಿಸರು ರಾಜಮುಡಿ ಸುತ್ತುವರೆದು ಬಿಗಿಭದ್ರತೆ ನೀಡಿದರು.ವೈಭವದ ಜಾನಪದ: ಸಂಭ್ರಮಿಸಿದ ಜನತೆ

ಪಾಂಡವಪುರ:
ತಾಲೂಕಿನ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವದ ಪ್ರಯುಕ್ತ ನಡೆದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ನೋಡಿ ಸಾವಿರಾರು ಜನರು ಸಂಭ್ರಮಿಸಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಮಾ.14 ಮತ್ತು 15ರ ಸಂಜೆ ವಿವಿಧ ಕಲಾ ಮೇಳಗಳು ಮೇಳೈಸಿದವು.ಚಿಕ್ಕಅರಸಿನಕೆರೆಯ ಚಿಕ್ಕಬೋರೇಗೌಡ ತಂಡ ಪ್ರದರ್ಶಿಸಿದ ಪೂಜಾ ಕುಣಿತ ಸಂಭ್ರಮಕ್ಕೆ ಮೆರಗು ನೀಡಿತು. ತಮಟೆಯ ಬಡಿತಕ್ಕೆ ತಕ್ಕಂತೆ ಪೂಜೆಯ ಕನ್ನಂಕಾಡಿಯನ್ನು ಹೊತ್ತು ಕಲಾವಿದರು ಕುಣಿದರು. ಕನ್ನಂಕಾಡಿಯನ್ನು ತಲೆ, ಕತ್ತು, ಬೆನ್ನು ಮೇಲೆಲ್ಲಾ ಹೊತ್ತುಕೊಂಡು ಒಬ್ಬರ ಮೇಲೆ ಒಬ್ಬರು ನಿಂತು ನಗಾರಿ ತಮಟೆ ಬಡಿದರು.ಕದಲಗೆರೆಯ ಶಿವಣ್ಣಗೌಡ ತಂಡ ಎತ್ತರದ ಕಂಬಗಳನ್ನು ಹೊತ್ತುಕೊಂಡು ತಮಟೆಯ ನಾದಕ್ಕೆ ಪಟ ಕುಣಿತವನ್ನಾಡಿ ಕುಣಿದು ಕುಪ್ಪಳಿಸಿದರು. ಲಕ್ಷ್ಮೀಸಾಗರದ ಕೆಂಪೇಗೌಡ ತಂಡದ ಜಾಂಜ್‌ವೇ ಪ್ರದರ್ಶನ ಜನರನ್ನು ಬಡಿದೆಬ್ಬಿಸಿತು.ಹೆಗ್ಗಡಹಳ್ಳಿಯ ಕೃಷ್ಣೇಗೌಡ ತಂಡದ ಗಾರುಡಿ ಗೊಂಬೆ ನೃತ್ಯ ಕಣ್ಮನ ಸೆಳೆಯಿತು. ಹೆಣ್ಣು ಗಂಡು ರೂಪದ ಗೊಂಬೆ ಧರಿಸಿದ್ದವರು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಕೊಡಿಯಾಲದ ಸಿದ್ದೇಗೌಡ ತಂಡದ ಕುಬ್ಜ ಕಲಾವಿದನೊಬ್ಬ ಎತ್ತರದ ಕನ್ನಂಕಾಡಿಯನ್ನು ಹೊತ್ತುಕೊಂಡು ಎಡ ಬಲ ಭುಜಗಳಲ್ಲಿ ಎಳೆ ಹುಡುಗರನ್ನು ಕೂರಿಸಿಕೊಂಡು ಕುಣಿದು ಜನರ ಚಪ್ಪಾಳೆ ಗಿಟ್ಟಿಸಿದರು.ಲಕ್ಷ್ಮೀಸಾಗರದ ಚಂದ್ರು ತಂಡದ ಡೊಳ್ಳು ಕುಣಿತ ಜನರು ಕೂತಲ್ಲಿಯೇ ಕುಣಿಯುವಂತೆ ಮಾಡಿತು. ತಮಟೆ, ನಗಾರಿ ಬಡಿತ ನೋಡುಗರನ್ನು ದಂಗುಬಡಿಸಿತು.

ಚಾಮರಾಜನಗರದ ದೊಡ್ಡಗನಿ ಬಸಪ್ಪ ತಂಡದ ನೀಲಗಾರರ ಕಥನದ ಹಾಡುಗಳು ಬೇರೊಂದು ಲೋಕಕ್ಕೆ ಕರೆದೊಯ್ದವು. ವಾರ್ತಾ ಮತ್ತು ಪ್ರಚಾರ ಇಲಾಖೆಯ ಕನ್ನಡದ ಅಭಿವೃದ್ಧಿ ಮಂತ್ರ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ತಕ್ಕಂತೆ ಲೇಸರ್ ಕಿರಣಗಳ ಬೆಳಕು ಚೆಲ್ಲಿ ಪ್ರೇಕ್ಷಕರು  ಕುಣಿಯುವಂತೆ ಮಾಡಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.