ನಿಯಂತ್ರಣ ಬೇಡ: ಸಕ್ಕರೆ ಉದ್ಯಮದ ಮೊರೆ

7

ನಿಯಂತ್ರಣ ಬೇಡ: ಸಕ್ಕರೆ ಉದ್ಯಮದ ಮೊರೆ

Published:
Updated:
ನಿಯಂತ್ರಣ ಬೇಡ: ಸಕ್ಕರೆ ಉದ್ಯಮದ ಮೊರೆ

ದೇಶದ ಪ್ರಮುಖ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದು 21 ವರ್ಷಗಳಾದರೂ ರೂ.80 ಸಾವಿರ ಕೋಟಿಗಳಷ್ಟು  ವಹಿವಾಟಿನ ಸಕ್ಕರೆ ಉದ್ಯಮ ಇನ್ನೂ ಸರ್ಕಾರದ ನಿಯಂತ್ರಣದಲ್ಲಿ ಇರುವುದು ಒಂದು ಕಹಿ ಸತ್ಯ.ದೇಶದ ಏಕೈಕ ಸರ್ಕಾರಿ ನಿಯಂತ್ರಿತ ಉದ್ಯಮ ಇದು. ದರ ನಿಗದಿ, ಮಾರಾಟ, ದಾಸ್ತಾನು ಮಾಡುವಿಕೆ ಮೊದಲಾದ ವಿಚಾರಗಳಲ್ಲಿ ಹಲವು ನಿಯಮಗಳಿಂದಾಗಿ ಸಕ್ಕರೆ ಉದ್ಯಮ ಭಾರಿ ತೊಂದರೆ ಅನುಭವಿಸುತ್ತಿದೆ.ಸಕ್ಕರೆ ಉದ್ಯಮ ಬದುಕಬೇಕಿದ್ದರೆ ಮತ್ತು ಪ್ರಗತಿ ಹೊಂದಬೇಕಿದ್ದರೆ ಸರ್ಕಾರದ ನಿಯಂತ್ರಣ ಕೊನೆಗೊಂಡು ತನಗೆ ಸ್ವಾತಂತ್ರ್ಯ ಸಿಗಬೇಕು ಎಂದು ಈ ಉದ್ಯಮ ಪ್ರತಿಪಾದಿಸುತ್ತಿದೆ. ಈ ಬೇಡಿಕೆ ಈಡೇರಿಕೆಗಾಗಿ ತನ್ನ ಪ್ರಾತಿನಿಧಿಕ ಸಂಘವಾದ ಭಾರತೀಯ ಸಕ್ಕರೆ ಗಿರಣಿ ಸಂಘದ (ಐಎಸ್‌ಎಂಎ) ಮೂಲಕ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡಿದೆ. ಆದರೆ, ಈ ಎಲ್ಲ ಮನವಿಗಳೆಲ್ಲ ವ್ಯರ್ಥವಾಗಿವೆ.ಸರ್ಕಾರದ ಹಲವು ನಿಯಂತ್ರಣಗಳಿಂದ ಭಾರಿ ಪ್ರಮಾಣದ ಸಕ್ಕರೆ ದಾಸ್ತಾನು ಸಂಗ್ರಹವಾಗಿದೆ ಮತ್ತು ನಷ್ಟ ಅಧಿಕವಾಗುತ್ತಿದೆ ಎಂದು ಉದ್ಯಮ ಕೊರಗುತ್ತಿದೆ.

`ಪ್ರಸಕ್ತ ಸಕ್ಕರೆ ವರ್ಷದಲ್ಲಿ  ಸಕ್ಕರೆ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಆಗಿದೆ.ಆದರೆ, ಸಗಟು ಸಕ್ಕರೆ ವ್ಯಾಪಾರಿಗಳು ಇಂತಿಷ್ಟೇ ಸಕ್ಕರೆ ದಾಸ್ತಾನು ಮಾಡಿಕೊಳ್ಳಬೇಕು ಎಂಬ ನಿರ್ಬಂಧದಿಂದಾಗಿ ದೇಶದಲ್ಲಿ ಇಂದು ಸಕ್ಕರೆ ಕಾರ್ಖಾನೆಗಳು ರೂ.30 ಸಾವಿರ ಕೋಟಿ  ಮೌಲ್ಯದ ಸಕ್ಕರೆ ದಾಸ್ತಾನು ಇಟ್ಟುಕೊಳ್ಳುವಂತಾಗಿದೆ~ ಎಂದು ಐಎಸ್‌ಎಂಎ ಅಧ್ಯಕ್ಷರೂ ಆಗಿರುವ ದೇಶದ ಪ್ರಮುಖ ಐದು ಸಕ್ಕರೆ ಉತ್ಪಾದನಾ ಕಾರ್ಖಾನೆಗಳಲ್ಲಿ ಒಂದಾಗಿರುವ ಶ್ರೀ ರೇಣುಕಾ ಶುಗರ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ನರೇಂದ್ರ ಮುರ್ಕುಂಬಿ ಹೇಳುತ್ತಾರೆ.ಸರ್ಕಾರದ ನಿಯಮದ ಪ್ರಕಾರ ಸಕ್ಕರೆ ವ್ಯಾಪಾರಿಗಳು 500 ಟನ್‌ಗಳಷ್ಟು ಸಕ್ಕರೆಯನ್ನು ಮಾತ್ರ ದಾಸ್ತಾನು ಮಾಡಿಕೊಳ್ಳಬಹುದು. ಇದರಿಂದ ಸಕ್ಕರೆ ಕಾರ್ಖಾನೆಗಳಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಸಕ್ಕರೆ ದಾಸ್ತಾನು ಮಾಡಬೇಕಾದ ಸ್ಥಿತಿ ಇದೆ. ಇದಕ್ಕೆ ತಕ್ಕಂತೆ ದಾಸ್ತಾನು ಸೌಲಭ್ಯ ಇಲ್ಲ. `ಹೇಗಾದರೂ ದಾಸ್ತಾನು ಕಡಿಮೆಯಾಗಲಿ ಎಂದು ವೇದನೆಯಿಂದಲೇ ಸಕ್ಕರೆ ಮಾರಾಟ ಮಾಡಬೇಕಾದ ಸ್ಥಿತಿ ಇದೆ, ಇದರಿಂದ ಸಕ್ಕರೆ ದರ ಕುಸಿಯುತ್ತದೆ~ ಎಂದು ಮುರ್ಕುಂಬಿ ಹೇಳುತ್ತಾರೆ.ಚಿಲ್ಲರೆ ಸಕ್ಕರೆ ಬೆಲೆ ಕೆಜಿಗೆ ರೂ.30 ಯಷ್ಟು ಇದೆ. ಕಳೆದ ಆರು ತಿಂಗಳಿಂದ ಇದು ಬದಲಾಗಿಲ್ಲ ಎಂದು ಹೇಳುವ ಮುರ್ಕುಂಬಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಕ್ಕರೆಯನ್ನು ಮತ್ತೂ ಕಡಿಮೆ ದರಕ್ಕೆ ನೀಡುವಂತಾಗಿದೆ ಎನ್ನುತ್ತಾರೆ. ಸಗಟು ವ್ಯಾಪಾರಿಗಳ ದಾಸ್ತಾನು ಮಿತಿ  ತೆಗೆದುಹಾಕಿದರೆ ಇಂತಹ ಸಮಸ್ಯೆಯನ್ನು ನಿವಾರಿಸಬಹುದು ಎಂದೂ  `ಐಎಸ್‌ಎಂಎ~ ಸರ್ಕಾರವನ್ನು ಕೇಳಿಕೊಂಡಿದೆ.ಸಕ್ಕರೆ ಉತ್ಪಾದನೆ, ಕಬ್ಬಿನ ಬೆಲೆ ಮತ್ತು ಕಾರ್ಖಾನೆಗಳಿಂದ ದೇಶೀಯ ಮಾರುಕಟ್ಟೆಗೆ ಮಾರಾಟ ಮಾಡುವ ಬಗ್ಗೆ ಮಾತನಾಡುವ ಸಕ್ಕರೆ ಮೇಲಿನ ಸಿಐಐ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಜಯ್ ಶ್ರೀರಾಮ್, ಸರ್ಕಾರದ ನೀತಿ ರೈತರು ಮತ್ತು ಸಕ್ಕರೆ ಉದ್ಯಮಗಳಿಗೆ ಉತ್ತಮ ಲಾಭ ತಂದುಕೊಡುವಂತೆ ಇರಬೇಕು ಎನ್ನುತ್ತಾರೆ.`ಸಕ್ಕರೆ ಕ್ಷೇತ್ರ ದೊಡ್ಡದಾಗಿ ಬೆಳೆಯಬೇಕಾದರೆ ಈ ಉದ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು~ ಎಂದು ಅವರು ಬಲವಾಗಿ ಪ್ರತಿಪಾದಿಸುತ್ತಾರೆ. `ಕಬ್ಬಿನ ದರಕ್ಕೂ, ಸಕ್ಕರೆ ಮಾರಾಟ ದರಕ್ಕೂ ಯಾವುದೇ ಸಂಬಂಧ ಇಲ್ಲದ ಕಾರಣ ಕಬ್ಬು ಬೆಳೆಗಾರರಿಗೆ ಉತ್ತಮ ದರ ನೀಡುವುದು ಸಾಧ್ಯವಾಗುತ್ತಿಲ್ಲ~ ಎಂದೂ ಹೇಳುತ್ತಾರೆ.ಭಾರಿ ಏರುಪೇರು


ಸರ್ಕಾರಿ ನಿಯಂತ್ರಣ ಮತ್ತು ಅಪ್ರಿಯ ನೀತಿಗಳಿಂದಾಗಿ ಸಕ್ಕರೆ ಉದ್ಯಮ ಈಗಾಗಲೇ ಭಾರಿ ಸಂಕಷ್ಟ ಅನುಭವಿಸಿದೆ. 2006-07ರಲ್ಲಿ ದೇಶದ ಸಕ್ಕರೆ ಉತ್ಪಾದನೆ 283 ಲಕ್ಷ ಟನ್‌ಗಳಿಗೆ ಹೆಚ್ಚಿತ್ತು. ಬಳಿಕ ಉತ್ಪಾದನೆ ಕಡಿಮೆಯಾಗುತ್ತ 2009-10ರಲ್ಲಿ ಉತ್ಪಾದನಾ ಪ್ರಮಾಣ ಸುಮಾರು 183 ಲಕ್ಷ ಟನ್‌ಗೆ ಕುಸಿದಿತ್ತು.

 

`ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಉತ್ತಮ ದರ ನೀಡುವುದು ಸಾಧ್ಯವಾಗದೆ ಇರುವುದರಿಂದ ರೈತರು ಇತರ ವಾಣಿಜ್ಯ ಬೆಳೆಗಳತ್ತ ಗಮನ ಹರಿಸುವಂತಾಗಿದೆ~ ಎಂದು ದಾವಣಗೆರೆ ಶುಗರ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಐಎಸ್‌ಎಂಎ ಕರ್ನಾಟಕ ಘಟಕದ ಮುಖ್ಯಸ್ಥ ಎಸ್.ಎಸ್.ಗಣೇಶ್ ಹೇಳುತ್ತಾರೆ.ಸರ್ಕಾರದ ಮತ್ತೊಂದು ನಿಯಮ ಏನೆಂದರೆ, ಒಟ್ಟು ಉತ್ಪಾದನೆಯಲ್ಲಿ ಶೇ 10ರಷ್ಟನ್ನು ಲೆವಿ ಸಕ್ಕರೆ ರೂಪದಲ್ಲಿ ನೀಡಬೇಕಾಗಿರುವುದು. ಸರ್ಕಾರ ಇದಕ್ಕೆ ನೀಡುವುದು ಕ್ವಿಂಟಲ್‌ಗೆ ರೂ. 1,700  ಮಾತ್ರ. ಸಕ್ಕರೆಯ ಸರಾಸರಿ ಉತ್ಪಾದನಾ ವೆಚ್ಚವೇ ಕ್ವಿಂಟಲ್‌ಗೆ ರೂ. 2,700ರಷ್ಟಾಗುವುದರಿಂದ ಉದ್ಯಮ ಕಷ್ಟಕ್ಕೆ ಸಿಲುಕುವಂತಾಗಿದೆ.ಸರ್ಕಾರ ಈ ಲೆವಿ ಪದ್ಧತಿಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು, ಸರ್ಕಾರವು ಮಾರುಕಟ್ಟೆ ದರದಲ್ಲೇ ಸಕ್ಕರೆ ಖರೀದಿಸಿ, ಪಡಿತರ ಮೂಲಕ ವಿತರಿಸುವ ಸಕ್ಕರೆಗೆ ಸಬ್ಸಿಡಿ ನೀಡಬೇಕು ಎಂದು ಐಎಸ್‌ಎಂಎ ಒತ್ತಾಯಿಸಿದೆ.`ಮಾರುಕಟ್ಟೆ ದರದಲ್ಲಿ ಸರ್ಕಾರ ಸಕ್ಕರೆ ಕೊಂಡು ಬಡವರಿಗೆ ಸಬ್ಸಿಡಿ ರೂಪದಲ್ಲಿ ಅದನ್ನು ಒದಗಿಸಿದರೆ ಸರ್ಕಾರಕ್ಕೆ ಬೀಳುವ ಹೊರೆ ರೂ.2,500 ಕೋಟಿ ಗಳಷ್ಟು ಮಾತ್ರ. ಒಟ್ಟಾರೆ ಆಹಾರ ಸಬ್ಸಿಡಿಯ ಪ್ರಮಾಣ ರೂ. 70 ಸಾವಿರ ಕೋಟಿಗಳು ಇರುವಾಗ ಈ ಮೊತ್ತ ತೀರಾ ಕಡಿಮೆ~ ಎಂದು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘದ ಕಾರ್ಯದರ್ಶಿ ವಿ.ಗೋವಿಂದ ರೆಡ್ಡಿ ಹೇಳುತ್ತಾರೆ.ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳ ಸಂಕಷ್ಟ ಮತ್ತೂ ಹೆಚ್ಚಾಗಿದೆ, ಏಕೆಂದರೆ ಪ್ರಸಕ್ತ ವರ್ಷ ಸಕ್ಕರೆ ಉತ್ಪಾದನೆಯಲ್ಲಿ ಶೇ 49ರಷ್ಟು ವೃದ್ಧಿಯಾಗಿದೆ ಎಂದು ಅವರು ಹೇಳುತ್ತಾರೆ. ಈ ವರ್ಷ ಎರಡು ಹೊಸ ಸಕ್ಕರೆ ಕಾರ್ಖಾನೆಗಳು ಆರಂಭವಾಗಿವೆ.ಮೇಲಾಗಿ ಕಬ್ಬಿನ ಇಳುವರಿಯೂ ಅಧಿಕವಾಗಿದೆ. ಇದೆಲ್ಲದರ ಫಲವಾಗಿ ಕಾರ್ಖಾನೆಗಳಲ್ಲಿ ಸಕ್ಕರೆ ದಾಸ್ತಾನು ಹೆಚ್ಚಿದ್ದು, ಬ್ಯಾಂಕ್‌ಗಳು ಸಾಲ ನೀಡಲು ಸಹ ಹಿಂದೇಟು ಹಾಕುತ್ತಿವೆ ಎಂಬುದನ್ನು ಅವರು ಬೊಟ್ಟು ಮಾಡುತ್ತಾರೆ.ಅಸಮರ್ಪಕ ನೀತಿಗಳು

ಮುಕ್ತವಾಗಿ ಸಕ್ಕರೆ ಮಾರಾಟ ಮಾಡುವಲ್ಲಿ ಸಹ ಸರ್ಕಾರದ ಹಸ್ತಕ್ಷೇಪ ಇದೆ. ಪ್ರತಿ ತಿಂಗಳು ಎಷ್ಟು ಸಕ್ಕರೆ ಮಾರಾಟ ಮಾಡಬಹುದು ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತದೆ. ಹೀಗಾಗಿ ಕಾರ್ಖಾನೆಗಳಿಗೆ ಮಾರಾಟದ ಯಾವುದೇ ಯೋಜನೆ ಹಾಕಿಕೊಳ್ಳುವುದು ಸಾಧ್ಯವಿಲ್ಲ. ಮೇಲಾಗಿ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿರುವ ಸಕ್ಕರೆಯನ್ನು ವಿಲೇವಾರಿ ಮಾಡುವುದೂ ಕಷ್ಟ.`ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಮಾರಾಟಕ್ಕೆ ಸಹ ನಿಯಂತ್ರಣ ಹೇರುವುದರಲ್ಲಿ ಯಾವುದೇ ಅರ್ಥವಿಲ್ಲ. ಇದರಿಂದ ದರ ಅಥವಾ ಪೂರೈಕೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಇಷ್ಟು ತೀವ್ರ ಸ್ವರೂಪದಲ್ಲಿ ನಿಯಂತ್ರಣ ಹೇರಲು ಸಕ್ಕರೆಯೇನೂ ಆವಶ್ಯಕ ಆಹಾರವಲ್ಲ~ ಎಂದು ಮುರ್ಕುಂಬಿ ಹೇಳುತ್ತಾರೆ.ರಫ್ತು ನಿರ್ಬಂಧ ಸಕ್ಕರೆ ಉದ್ಯಮದ ಮೇಲಿನ ಮತ್ತೊಂದು ನಿಯಂತ್ರಣ ಕ್ರಮ. ಅಧಿಕ ಉತ್ಪಾದನೆ ಆದ ವರ್ಷ ಸಕ್ಕರೆ ರಫ್ತು ಮಾಡಿದರೆ ಸಕ್ಕರೆ ದಾಸ್ತಾನು ಕರಗಲು ಸಾಧ್ಯವಾಗುತ್ತದೆ. ಈಗಲೂ ಸರ್ಕಾರವೇ ಯಾವಾಗ ರಫ್ತಿಗೆ ಅವಕಾಶ ನೀಡಬೇಕು, ಎಷ್ಟು ಪ್ರಮಾಣದಲ್ಲಿ ರಫ್ತು ಮಾಡಬಹುದು ಎಂಬುದನ್ನು ನಿರ್ಧರಿಸುತ್ತದೆ.ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರ ರಫ್ತು ಕೋಟಾ ಪ್ರಕಟಿಸುವುದಕ್ಕೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಸದ್ಯ ಸರ್ಕಾರ 5 ಲಕ್ಷ ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡಿದೆ. ಭಾರಿ ಪ್ರಮಾಣದ ಸಕ್ಕರೆ ಉತ್ಪಾದನೆಯನ್ನು ಗಮನಿಸಿದರೆ ಇದು ತೀರಾ ಕಡಿಮೆಯಾಯಿತು ಎಂದು `ಐಎಸ್‌ಎಂಎ~ ಹೇಳುತ್ತದೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ಬೆಲೆ ಹೆಚ್ಚುತ್ತಿರುವುದರಿಂದ ರಫ್ತು ಪ್ರಮಾಣವನ್ನು 10 ಲಕ್ಷ ಟನ್‌ಗಳಿಗೆ ಹೆಚ್ಚಿಸಬೇಕು ಎಂದು ಸಕ್ಕರೆ ಉದ್ಯಮ ಸರ್ಕಾರವನ್ನು ಒತ್ತಾಯಿಸಿದೆ. ರಫ್ತು ಪ್ರಮಾಣವನ್ನು ತಕ್ಷಣ ದುಪ್ಪಟ್ಟುಗೊಳಿಸಬೇಕು ಎಂದು ಚಂಡೀಗಢ ಮೂಲದ ಸಮಗ್ರ ಸಕ್ಕರೆ ಉತ್ಪಾದಕ ಕಂಪೆನಿ ರಾಣಾ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಣಾ ಇಂದ್ರಪ್ರತಾಪ್ ಸಿಂಗ್ ಹೇಳುತ್ತಾರೆ.

 

`ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಗೆ ಕೆಜಿಗೆ ರೂ. 38 ರಷ್ಟಿದ್ದರೆ, ದೇಶೀಯ ಮಾರುಕಟ್ಟೆಯಲ್ಲಿ ಕೆಜಿಗೆ ರೂ. 28 ರಷ್ಟು ಮಾತ್ರ ಇದೆ. ಸಕ್ಕರೆ ರಫ್ತಿಗೆ ಅವಕಾಶ ನೀಡಿದರೆ ಸಕ್ಕರೆ ಕಂಪೆನಿಗಳು ಪ್ರತಿ ಕೆಜಿಗೆ ರೂ.10ರಷ್ಟು ಹೆಚ್ಚುವರಿ ವರಮಾನ ಗಳಿಸುವುದು ಸಾಧ್ಯವಿದೆ~ ಎಂದು ಸಿಂಗ್ ಹೇಳುತ್ತಾರೆ.ರಫ್ತು ಮಾಡುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಗೆ ಕೊರತೆ ಉಂಟಾಗುವುದಿಲ್ಲ. ಕಾರಣ ಭಾರಿ ಪ್ರಮಾಣದಲ್ಲಿ ದಾಸ್ತಾನು ಇದೆ. ಮೇಲಾಗಿ ಈ ವರ್ಷ 240 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ 190 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು ಎಂದು ಅವರು ವಿವರಿಸುತ್ತಾರೆ.ಇಂಧನವಾಗಿ ಬಳಕೆ

ಪೆಟ್ರೋಲ್ ಮತ್ತು ಡೀಸೆಲ್ ಜತೆಗೆ ಮಿಶ್ರಣ ಮಾಡುವ ಇಥೆನಾಲ್‌ನ ದರ ನಿಗದಿ ಸೂತ್ರವನ್ನು ಸರ್ಕಾರ ಶೀಘ್ರ ಪ್ರಕಟಿಸಬೇಕು ಎಂದು ಸಕ್ಕರೆ ಉತ್ಪಾದಕರು ಒತ್ತಾಯಿಸ್ದ್ದಿದಾರೆ. ಹೀಗೆ ಮಾಡಿದ್ದೇ ಆದರೆ ಸಕ್ಕರೆ ಕಾರ್ಖಾನೆಗಳಲ್ಲಿ ಉಪ ಉತ್ಪನ್ನವಾಗಿ ದೊರಕುವ ಕಾಕಂಬಿಗೆ ಉತ್ತಮ ದರ ಸಿಗುವುದು ಸಾಧ್ಯ ಎಂದು ಉದ್ಯಮ ಭಾವಿಸಿದೆ.ದೇಶದಲ್ಲಿ ಸಾಂಪ್ರದಾಯಿಕವಾಗಿ ಕಾಕಂಬಿಯನ್ನು ಕೈಗಾರಿಕಾ ಸ್ಪಿರಿಟ್ ಮತ್ತು ಅಲ್ಕೊಹಾಲ್ ತಯಾರಿಕೆಗೆ ಬಳಸಲಾಗುತ್ತದೆ. ಆದರೆ, ಆಧುನಿಕ ತಂತ್ರಜ್ಞಾನದಿಂದಾಗಿ ಕಾಕಂಬಿಯನ್ನು ಪೆಟ್ರೋಲ್ ಜತೆಗೆ ಮಿಶ್ರಣ ಮಾಡುವ ಜೈವಿಕ ಇಂಧನವಾಗಿ ಉತ್ಪಾದಿಸುವುದು ಸಾಧ್ಯವಾಗಿದೆ.

 

ಕಾಕಂಬಿಯಿಂದ ಇಂತಹ ಜೈವಿಕ ಇಂಧನ ಉತ್ಪಾದಿಸುವ ಮತ್ತು ಬಳಸುವ ದೇಶಗಳ ಸಾಲಿನಲ್ಲಿ ಬ್ರೆಜಿಲ್ ಮತ್ತು ಅಮೆರಿಕ  ಮುಂಚೂಣಿಯಲ್ಲಿವೆ. ಜಪಾನ್, ಚೀನಾ, ಥಾಯ್ಲೆಂಡ್, ಐರೋಪ್ಯ ಸಮುದಾಯ ಸಹಿತ ಇತರೆಡೆ ಸಹ ಇಥೆನಾಲ್ ಮಿಶ್ರಣ ಮಾಡುವ ಯೋಜನೆ ಪ್ರಗತಿಯಲ್ಲಿದೆ.ಭಾರತವು ಬಹುದೊಡ್ಡ ಸಕ್ಕರೆ ಉತ್ಪಾದನಾ ರಾಷ್ಟ್ರ ಮತ್ತು ಬಹುದೊಡ್ಡ ಪೆಟ್ರೋಲ್ ಆಮದು ಮಾಡಿಕೊಳ್ಳುವ ರಾಷ್ಟ್ರ. ಪೆಟ್ರೋಲ್‌ನೊಂದಿಗೆ ಇಥೆನಾಲ್ ಬೆರೆಸುವ (ಇಬಿಪಿ) ಪ್ರಕ್ರಿಯೆಯಿಂದ ಪೆಟ್ರೋಲ್‌ಗೆ ಅವಲಂಬಿಸುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಸ್ವಚ್ಛವಾದ ಮತ್ತು ಅಗ್ಗದ ಪರ್ಯಾಯವೊಂದು ಸಿಕ್ಕಂತಾಗುತ್ತದೆ.

 

ಈ ನಿಟ್ಟಿನಲ್ಲಿ ಇಥೆನಾಲ್ ದರ ನಿಗದಿಪಡಿಸುವ ಸೂತ್ರ ರೂಪಿಸುವುದಕ್ಕಾಗಿ ಡಾ.ಸುಮಿತ್ರಾ ಚೌಧುರಿ ನೇತೃತ್ವದಲ್ಲಿ ಪರಿಣಿತರ ತಂಡವೊಂದನ್ನು ರಚಿಸಲಾಗಿದ್ದು, ಪೆಟ್ರೋಲ್ ದರದೊಂದಿಗೆ ಇಥೆನಾಲ್ ದರವನ್ನೂ ಜೋಡಿಸಬೇಕು ಎಂದು ಕಳೆದ ಮಾರ್ಚ್‌ನಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.ಇಥೆನಾಲ್‌ಗೆ ದರ ನಿಗದಿಪಡಿಸುವ ಸೂತ್ರವೊಂದನ್ನು ಸರ್ಕಾರ ಕೈಗೊಂಡರೆ ತೈಲ ಕಂಪೆನಿಗಳಿಗೆ ಮಿಶ್ರಣ ಮಾಡಿದ ಇಂಧನದಿಂದಾಗಿ ಪ್ರತಿ ಲೀಟರ್‌ಗೆ ಸುಮಾರು ರೂ. 12 ರಷ್ಟು ಉಳಿತಾಯ ಮಾಡುವುದು ಸಾಧ್ಯವಿದೆ.ಗ್ರಾಹಕರು ಮತ್ತು ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಸಕ್ಕರೆ ಉದ್ಯಮವನ್ನು ಸಂಕಷ್ಟದಿಂದ ಪಾರು ಮಾಡುವ ಹೊಣೆಗಾರಿಕೆ ಸಂಪೂರ್ಣವಾಗಿ ಸರ್ಕಾರದ ಮೇಲೆಯೇ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry