ಶುಕ್ರವಾರ, ನವೆಂಬರ್ 15, 2019
20 °C
ತುಂಬಿ ತುಳುಕಿದ ಮದ್ಯದ ಅಂಗಡಿಗಳು

ನಿಯಮ ಉಲ್ಲಂಘನೆ; `ಜಾಣ ಕುರುಡು'

Published:
Updated:

ಕುಷ್ಟಗಿ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಸೋಮವಾರ ಪಟ್ಟಣದಲ್ಲಿನ ಎಲ್ಲ ರೀತಿಯ ಮದ್ಯದ ಅಂಗಡಿಗಳು ತುಂಬಿ ತುಳುಕಿದ್ದು ಉಳಿದ ದಿನಗಳಿಗಿಂತ  ಯಥೇಚ್ಛ ಮದ್ಯ ಮಾರಾಟವಾಗಿರುವ ಬಗ್ಗೆ ತಿಳಿದಿದೆ. ಆದರೆ ಅಬಕಾರಿ ನಿಯಮ ಉಲ್ಲಂಘಿ ಸಿ ಕೆಲ ಅಂಗಡಿಗಳಲ್ಲಿ ಸ್ಥಳದಲ್ಲೇ ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಚುನಾವಣೆ ಪ್ರಕ್ರಿಯೆ ಬಿರುಸುಗೊಂಡ ನಂತರ ಮದ್ಯದ ವ್ಯಾಪಾರ ಹೆಚ್ಚಾಗಿದೆ ಅದರಲ್ಲೂ ಸೋಮವಾರ ನಾಮಪತ್ರ ಸಲ್ಲಿಸಿದ ದಿನ ಅತ್ಯಧಿಕ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.ಅಬಕಾರಿ ನಿಯಮಗಳ ಪ್ರಕಾರ ಸಿ.ಎಲ್-7 ಮತ್ತು ಸಿ.ಎಲ್.9 ಪರವಾನಿಗೆ ಪಡೆದಲ್ಲಿ ಅಲ್ಲಿಯೇ ಮದ್ಯ ಸೇವನೆ ಮಾಡುವುದಕ್ಕೆ ಪರವಾನಿಗೆ ಇದೆ.ಪಟ್ಟಣದಲ್ಲಿ ಸಂತೋಷ್ ಮತ್ತು ಆಂಜನೇಯ ಎಂಬ ಎರಡು ಅಂಗಡಿಗಳು ಮಾತ್ರ ಕುಳಿತು ಕುಡಿಯುವುದಕ್ಕೆ ಪರವಾನಿಗೆ ಪಡೆದಿವೆ. ಆದರೆ ಉಳಿದ ಎಲ್ಲ ಮದ್ಯದ ಅಂಗಡಿಗಳು ಸಿ.ಎಲ್-2 ಪರವಾನಿಗೆ ಹೊಂದಿದ್ದು ಕೇವಲ ಮಾರಾಟ ಮಾಡಲು ಮಾತ್ರ ಅವಕಾಶ ಇರುತ್ತದೆ.ಆದರೆ ಸೋಮವಾರ ಅಲ್ಲಿ ನಿಯಮ ಉಲ್ಲಂಘಿ ಸಿದ್ದು ಸ್ಪಷ್ಟವಾಗಿ ಗೋಚರಿಸಿತು. ಮದ್ಯಕ್ಕಾಗಿ ಮುಗಿ ಬಿದ್ದಿದ್ದ ವಿವಿಧ ರಾಜಕೀಯ ಪಕ್ಷಗಳ ನೂರಾರು ಕಾರ್ಯಕರ್ತರಿಗೆ ಅಲ್ಲಿಯೇ ಮದ್ಯ ಸೇವನೆಗೆ ಅಂಗಡಿಯವರು ಸೂಕ್ತ ಅನುಕೂಲ ಕಲ್ಪಿಸಿದ್ದು, ಮದ್ಯ ವ್ಯಸನಿಗಳು ಕುಡಿದು ಅಂಗಡಿ ಮುಂದೆಯೇ ನಶೆ ಏರಿಸಿಕೊಂಡು ಕೇಕೆ ಹಾಕುತ್ತಿದ್ದುದು ಕಂಡುಬರುತ್ತಿದೆ, ಆದರೆ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.ಈ ಕುರಿತು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ'ಗೆ ವಿವರಿಸಿದ ಅಬಕಾರಿ ಇಲಾಖೆ ಕೊಪ್ಪಳ ಜಿಲ್ಲಾಧಿಕಾರಿ ಆಬೀದ್ ಹುಸೇನ್, ಸಿ.ಎಲ್-2 ಪರವಾನಿಗೆ ಹೊಂದಿರುವಲ್ಲಿ ಕುಡಿಯುವುದಕ್ಕೆ ಪರವಾನಿಗೆ ಇಲ್ಲ, ಯಾವುದೇ ವ್ಯಕ್ತಿ ಅಲ್ಲಿ ಮದ್ಯ ಖರೀದಿಸಿ ಅದನ್ನು ತನ್ನ ಮನೆಯಲ್ಲೇ ಕುಡಿಯಬೇಕು ಎಂದು ಸ್ಪಷ್ಟಪಡಿಸಿದರು. ನಿಯಮ ಉಲ್ಲಂಘನೆ ಇಲಾಖೆ ಗಮನಕ್ಕೆ ಬಂದಿಲ್ಲವಂತಲ್ಲ, ಆದರೆ ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ಇತರರಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶವೂ ಇದೆ. ಹಾಗಂತ ಕ್ರಮ ಕೈಗೊಳ್ಳಬಾರದು ಎಂದೇನಿಲ್ಲ ಎಂದರು.ಆದರೆ ಮಾರಾಟ ಸ್ಥಳದಲ್ಲೇ ಕುಳಿತು ಕುಡಿಯುವುದಕ್ಕೆ ಹೆಚ್ಚಿನ ಶುಲ್ಕ, ಕರ ನೀಡುತ್ತಿರುವ ಇತರೆ ಪರವಾನಿಗೆ ಪಡೆದ ಅಂಗಡಿಯವರಿಗೆ ಹಾನಿಯಾಗುವುದಿಲ್ಲವೇ ಎಂಬುದಕ್ಕೆ ಅವರಿಂದ ಸ್ಪಷ್ಟ ಉತ್ತರ ಬರಲಿಲ್ಲ.ಈ ಬಗ್ಗೆ ವಿವರಿಸಿದ ಸ್ಥಳೀಯ ಅಬಕಾರಿ ಇನ್ಸ್‌ಪೆಕ್ಟರ್ ಆರ್.ಎಸ್.ಮುದಿಗೌಡರ್ ಅವರು ಸಹ ಮೇಲಧಿಕಾರಿಯ ಅಭಿಪ್ರಾಯವನ್ನೇ ಪುನರುಚ್ಚರಿಸಿದರಾದರೂ ನಿಯಮ ಉಲ್ಲಂಘಿ ಸುವವರ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಹೇಳಿದರು.

ಪ್ರತಿಕ್ರಿಯಿಸಿ (+)