ಮಂಗಳವಾರ, ಮೇ 11, 2021
26 °C

ನಿಯಮ ಉಲ್ಲಂಘನೆ: ಮರಳು ಗಣಿಗಾರಿಕೆ ಟೆಂಡರ್ ರದ್ದು

ಚಿದಂಬರ ಪ್ರಸಾದ್ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಮರಳಿಗೆ ಕೊರತೆ ಇಲ್ಲ. ಉತ್ಕೃಷ್ಟ ಗುಣಮಟ್ಟದ ಮರಳು ಇಲ್ಲಿದೆ. ಅದರಲ್ಲಿಯೂ ಕೃಷ್ಣಾ ತೀರದ ಮರಳಿಗೆ ಹೆಚ್ಚು ಬೇಡಿಕೆ. ಆದರೆ ಇದು ಜಿಲ್ಲೆಯ ನೈಸರ್ಗಿಕ ಸಂಪತ್ತಿನ ಲೂಟಿಗೂ ಕಾರಣವಾಗಿದೆ.ವ್ಯಾಪಕವಾದ ಅವ್ಯವಹಾರದಿಂದಾಗಿ ಕಳೆದ ಡಿಸೆಂಬರ್‌ನಿಂದ ಜಿಲ್ಲೆಯಾದ್ಯಂತ ಮರಳು ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಕಟ್ಟಡ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೂ ತೊಂದರೆ ಉಂಟಾಗಿದೆ.ಜಿಲ್ಲೆಯಲ್ಲಿ ಎರಡು ನದಿಗಳಿವೆ. ಆದರೆ ಭೀಮಾ ನದಿಗಿಂತ, ಕೃಷ್ಣಾ ತೀರದಲ್ಲಿ ಸಿಗುವ ಮರಳೇ ಉತ್ತಮ. ಬಹಳಷ್ಟು ಜನರು ಇಲ್ಲಿನ ಮರಳು ಖರೀದಿಸಲು ಮುಂದಾಗುತ್ತಾರೆ. ನೆರೆಯ ಆಂಧ್ರಪ್ರದೇಶಕ್ಕೂ ಇಲ್ಲಿಯ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು.ಯಾದಗಿರಿ, ಸುರಪುರ ಹಾಗೂ ಶಹಾಪುರ ತಾಲ್ಲೂಕಿನಲ್ಲಿ ಜಿಲ್ಲಾಡಳಿತದ ವತಿಯಿಂದಲೇ ಮರಳು ಗಣಿಗಾರಿಕೆಗೆ ಬ್ಲಾಕ್‌ಗಳ ಹಂಚಿಕೆ ಮಾಡಿ, ಗುತ್ತಿಗೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 46 ಬ್ಲಾಕ್‌ಗಳಿದ್ದು, ಯಾದಗಿರಿ ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆಗೆ ಹೈಕೋರ್ಟ್‌ನಿಂದ ತಡೆ ಇದೆ.ಇನ್ನು ಸುರಪುರ, ಶಹಾಪುರ ತಾಲ್ಲೂಕಿನ ಒಟ್ಟು 31 ಬ್ಲಾಕ್‌ಗಳಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿತ್ತು. ಮರಳು ಗಣಿಗಾರಿಕೆಗೆ ಆರಂಭದಲ್ಲಿ ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನ ನಿಯಮಾವಳಿಗಳನ್ನು ಗುತ್ತಿಗೆದಾರರು ಪಾಲಿಸದ ಕಾರಣ ಉಪಸಮಿತಿ ವರದಿಯ ಆಧಾರದ ಮೇಲೆ ಎಲ್ಲ ಟೆಂಡರ್‌ಗಳನ್ನು ರದ್ದುಪಡಿಸಲು ತೀರ್ಮಾನಿಸಲಾಯಿತು.ಹೊಸ ಟೆಂಡರ್ ಆಗುವವರೆಗೆ ಲೋಕೋಪಯೋಗಿ ಇಲಾಖೆಯಿಂದಲೇ ಮರಳು ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನಿರ್ಧರಿಸಿತ್ತು. ಆದರೆ ಅಕ್ರಮ ಮರಳು ಸಾಗಣೆಗೆ ಮಾತ್ರ ತಡೆ ಬೀಳಲಿಲ್ಲ. ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದರೂ, ಅಧಿಕಾರಿಗಳ ಜೊತೆ ಕೈಜೋಡಿಸಿ, ಅಕ್ರಮ ಮರಳು ಸಾಗಾಟ ಯಥೇಚ್ಚವಾಗಿ ಮುಂದುವರಿಯಿತು.ನಿತ್ಯ 50 ಲಾರಿಗಳಷ್ಟು ಮರಳು ಮಾರಾಟ ಮಾಡಲು ಅನುಮತಿ ಇದ್ದರೂ, ಓವರ್‌ಲೋಡ್‌ನ ಜೊತೆಗೆ ನಕಲಿ ರಸೀದಿ ಬಳಸಿ ನಿತ್ಯ 80 ಲಾರಿಗಳಷ್ಟು ಮರಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಹಯ್ಯಾಳ ಬಿ. ಗ್ರಾಮದ ಬ್ಲಾಕ್‌ನಿಂದ ಒಟ್ಟು 36 ದಿನಗಳಲ್ಲಿ 1.37 ಕೋಟಿ ರೂಪಾಯಿ ರಾಜಧನ ಸಂಗ್ರಹಿಸಲಾಗಿತ್ತು. ಇನ್ನೊಂದೆಡೆ ಯಕ್ಷಂತಿ ಗ್ರಾಮದ ಬ್ಲಾಕ್‌ನಲ್ಲಿ ಮರಳು ಖಾಲಿಯಾಗಿದ್ದರೂ, ರಾಜಧನವೇ ಜಮಾ ಆಗಿರಲಿಲ್ಲ.ಇಲಾಖೆಯಿಂದಲೇ ಅವ್ಯವಹಾರ: ಆದೇಶಗಳನ್ನು ಪಾಲಿಸದೇ ಲೋಕೋಪಯೋಗಿ ಇಲಾಖೆಯಿಂದ ನಿಯಮ ಬಾಹಿರವಾಗಿ ಮರಳು ಗಣಿಗಾರಿಕೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳು ವ್ಯಾಪಕವಾಗಿದ್ದವು. ಇದನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಡಿಸೆಂಬರ್ 17ರಂದು ಹಠಾತ್ತಾಗಿ ಹಯ್ಯಾಳ ಮತ್ತು ಯಕ್ಷಂತಿ ಬ್ಲಾಕ್‌ಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ 26 ಲಾರಿ ಹಾಗೂ ಒಂದು ಹಿಟಾಚಿ ಯಂತ್ರ ವಶಪಡಿಸಿಕೊಳ್ಳಲಾಯಿತು.ಮರಳು ಸಾಗಾಣಿಕೆ ಮಾಡುತ್ತಿದ್ದ 26 ಲಾರಿಗಳ ದಾಖಲೆ ಪರಿಶೀಲನೆ ಮಾಡಲಾಯಿತು. ಈ ಲಾರಿಗಳಲ್ಲಿ ಸರ್ಕಾರದ ರಾಜಸ್ವ ಪಾವತಿಸಿದ ರಸೀದಿಗಳೂ ಇದ್ದವು. ಆದರೆ ಈ  ರಸೀದಿಗಳನ್ನು ಲೋಕೋಪಯೋಗಿ ಇಲಾಖೆಯಿಂದ ನೀಡಿಯೇ ಇಲ್ಲ ಎಂದು ಇಲಾಖೆಯ ಅಧಿಕಾರಿಗಳೇ ಹೇಳಿದ್ದನ್ನು ಕೇಳಿದ ಜಿಲ್ಲಾಧಿಕಾರಿಯೇ ಬೆಚ್ಚಿ ಬೀಳುವಂತಾಯಿತು.

`ಈ ರಸೀದಿಗಳಲ್ಲಿ ಇರುವ ಮೊಹರು ತಮ್ಮದೇ ಆಗಿದ್ದರೂ, ಸಹಿ ಮಾತ್ರ ತಮ್ಮದಲ್ಲ. ಲೋಕೋಪಯೋಗಿ ಇಲಾಖೆಯವರು ಇವುಗಳನ್ನು ಕೊಟ್ಟಿಲ್ಲ' ಎಂದು ಅಧಿಕಾರಿಗಳೇ ಹೇಳಿದ್ದರು.ಈ ಬಗ್ಗೆ ಸಮಗ್ರ ತನಿಖೆ ನಡೆಸಿದಾಗ,  ಇಲಾಖೆಯ ಮೂವರು ಅಧಿಕಾರಿಗಳೇ ತಪ್ಪಿತಸ್ಥರು ಎನ್ನುವುದು ಗೊತ್ತಾಯಿತು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದರ ಜೊತೆಗೆ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಎಂದು ಜಿಲ್ಲಾಧಿಕಾರಿ ಡಿಸೆಂಬರ್‌ನಲ್ಲಿಯೇ ಆದೇಶ ಹೊರಡಿಸಿದ್ದಾರೆ.

ಬೊಕ್ಕಸಕ್ಕೆ ಆದಾಯ ಸಿಗಲಿ

ಮರಳು ನೈಸರ್ಗಿಕ ಸಂಪತ್ತು. ಅದನ್ನು ಲೂಟಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು. ಜಿಲ್ಲಾಡಳಿತದ ಹೊಣೆಗಾರಿಕೆಯೂ ಹೆಚ್ಚಾಗಿದೆ. ಜಿಲ್ಲೆಯ ಮರಳು ಒಳ್ಳೆಯ ಗುಣಮಟ್ಟದ್ದಾಗಿದ್ದು, ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ಸಮರ್ಪಕವಾಗಿ ಮರಳು ನೀತಿ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ದೊರೆಯುವಂತೆ ಮಾಡಬೇಕು.

ಮಲ್ಲಿಕಾರ್ಜುನ ಸತ್ಯಂಪೇಟೆ (ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಜಿಲ್ಲಾ ಘಟಕದ ಅಧ್ಯಕ್ಷ).

ಜಯ ತಂದ ಹೋರಾಟ

ಯಾದಗಿರಿ ತಾಲ್ಲೂಕಿನ ಗಡಿ ಭಾಗದ ಚೆಲ್ಹೇರಿ, ಈಡ್ಲೂರು, ಜೈಗ್ರಾಮ್, ಕರಣಗಿ ಗ್ರಾಮಗಳಲ್ಲಿಯೂ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆದೇ ಇತ್ತು. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೂಡಲೇ ಗಣಿಗಾರಿಕೆ ಗುತ್ತಿಗೆ ರದ್ದುಪಡಿಸುವಂತೆ ಈ ಭಾಗದ ರೈತರು ಎರಡು ತಿಂಗಳು ಹೋರಾಟ ನಡೆಸಿದರು.ಇದಕ್ಕೆ ಮಣಿದ ಜಿಲ್ಲಾಡಳಿತ ಯಾದಗಿರಿ ತಾಲ್ಲೂಕಿನಲ್ಲಿ ಮರಳು ಗುತ್ತಿಗೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿತು. ಇಷ್ಟಕ್ಕೇ ಬಿಡದ ರೈತರು, ಗುಲ್ಬರ್ಗ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ನೇತೃತ್ವದಲ್ಲಿ ಹೈಕೋರ್ಟ್ ಹಸಿರು ಪೀಠದಲ್ಲಿ ದಾವೆ ಹೂಡಿದರು.ಹೈಕೋರ್ಟ್ ಹಸಿರು ಪೀಠದಿಂದಲೂ ರೈತರ ಹೋರಾಟಕ್ಕೆ ಜಯ ದೊರೆಯಿತು. ಯಾದಗಿರಿ ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆ ನಡೆಸದಂತೆ ಹೈಕೋಟ್ ತಡೆಯಾಜ್ಞೆ ನೀಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.