ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು

7
ಕಲ್ಲಿದ್ದಲು ನಿಕ್ಷೇಪ: ಕಂಪೆನಿಗಳ ವಿರುದ್ಧ ಸುಪ್ರೀಂ ಕಠಿಣ ಕ್ರಮ

ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು

Published:
Updated:

ನವದೆಹಲಿ (ಪಿಟಿಐ): ಅಗತ್ಯ ಅನು­ಮತಿ­­ಗಳನ್ನು ಪಡೆದುಕೊಳ್ಳದೆ ಕಲ್ಲಿದ್ದಲು ನಿಕ್ಷೇಪ­ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರೆ ಅದಕ್ಕೆ ಆಯಾ ಕಂಪೆನಿ­­ಗಳೇ ಹೊಣೆ. ದೊಡ್ಡ ಪ್ರಮಾಣ­ದಲ್ಲಿ ಹೂಡಿಕೆ ಮಾಡಿರುವುದು ಅನು­ಮತಿ ಪಡೆಯದ ಕಂಪೆನಿಗಳ ಪರವಾನಗಿ ರದ್ದು ಮಾಡದಿರುವುದಕ್ಕೆ ಕಾರಣ ಆಗದು ಎಂದು ‘ಸುಪ್ರೀಂ’ ಹೇಳಿದೆ.ಇಂತಹ ನಿಕ್ಷೇಪಗಳನ್ನು ಮರು ಹಂಚಿಕೆ ಮಾಡುವ ಉದ್ದೇಶ ಇದೆಯೇ ಎಂಬು­­ದನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ನಿಕ್ಷೇಪಗಳಲ್ಲಿ ₨ 2 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ. ಹಾಗಾಗಿ ಕೆಲವು ಅನುಮತಿಗಳನ್ನು ಪಡೆ­ದು­­­­ಕೊಂಡಿಲ್ಲ ಎಂಬ ಕಾರಣಕ್ಕೆ ಪರ­ವಾನಗಿ ರದ್ದುಪಡಿಸುವುದು ಕಷ್ಟ ಎಂದು ಅಟಾರ್ನಿ ಜನರಲ್‌ ವಾದಿಸಿದರು.‘ಎಷ್ಟೇ ದೊಡ್ಡ ಹೂಡಿಕೆಯನ್ನಾ­ದರೂ ಮಾಡಿರಲಿ. ಅನುಮತಿಗಳನ್ನು ಪಡೆ­ದು­­ಕೊಳ್ಳದೆ ಇರುವುದರ ಪರಿಣಾ­ಮ­­ಗಳ­ನ್ನು ಕಂಪೆನಿಗಳು ಎದುರಿಸಲೇ­ಬೇಕು. ಕಾನೂನುಬಾಹಿರವಾಗಿ ನಡೆಸಿ­ರುವ ಕೃತ್ಯಗಳನ್ನು ಶುಲ್ಕ ಪಡೆದು ಸರಿ­ಪಡಿ­ಸ­ಲಾಗದು’ ಎಂದು ಮೂವರು ನ್ಯಾಯ­ಮೂರ್ತಿಗಳನ್ನು ಒಳಗೊಂಡ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಆರ್‌. ಎಲ್. ಲೋಧಾ ಹೇಳಿದ್ದಾರೆ.ಅನುಮತಿ ದೊರೆಯಬಹುದು ಎಂಬ ನಿರೀಕ್ಷೆಯೊಂದಿಗೆ ಮಾಡಿರುವ ಹೂಡಿಕೆ­­ಯನ್ನು ಸಮರ್ಥಿಸಿಕೊಳ್ಳು­ವುದು ಸಾಧ್ಯವಿಲ್ಲ. ಕಾನೂನು ಪ್ರಕಾರ ನಿಗ­­ದಿತ ಅವಧಿಯೊಳಗೆ ಅನುಮತಿ ಪಡೆ­ಯ­­ದಿದ್ದರೆ ಅಂತಹ ನಿಕ್ಷೇಪಗಳ ರಕ್ಷಣೆ ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಕೇಂದ್ರಕ್ಕೆ ಮುಖಭಂಗ: ಕಾಂಗ್ರೆಸ್‌ ನೇತೃ­ತ್ವದ ಸರ್ಕಾರದ ಆಳ್ವಿಕೆ ಇರುವ ಮಹಾ­ರಾಷ್ಟ್ರ ಕೇಂದ್ರ ಸರ್ಕಾರಕ್ಕೆ ಮುಖಭಂಗ­ವಾಗು­ವಂತಹ ಹೇಳಿಕೆ ನೀಡಿದೆ. ಕಲ್ಲಿ­ದ್ದಲು ನಿಕ್ಷೇಪಗಳ ಹಂಚಿಕೆ ಸಂಪೂರ್ಣ­ವಾಗಿ ಕೇಂದ್ರ ಸರ್ಕಾರ­ದಿಂದಲೇ ನಿಯಂತ್ರಿ­ತ­ವಾಗಿದೆ. ರಾಜ್ಯ ಸರ್ಕಾರ ಇಲ್ಲಿ ಕೇಂದ್ರದ ನಿರ್ಧಾರಗಳಿಗೆ ಅಧೀನ­ವಾಗಿ ಕೆಲಸ ಮಾಡಿದೆ ಎಂದು ಮಹಾರಾಷ್ಟ್ರ ಹೇಳಿದೆ. ಈ ಹೇಳಿಕೆ ಕಲ್ಲಿದ್ದಲು ನಿಕ್ಷೇಪ ಹಂಚಿ­ಕೆಯ ಎಲ್ಲ ಅವ್ಯವಹಾರಗಳನ್ನೂ ಕೇಂದ್ರ ಸರ್ಕಾ­ರದ ಮೇಲೆ ಹೊರಿಸುತ್ತದೆ. ಹಾಗಾಗಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಜೊತೆಗೆ, ಕೇಂದ್ರದ ಪಾತ್ರ ಕಲ್ಲಿದ್ದಲು ನಿಕ್ಷೇಪ­ಗಳನ್ನು ಗುರುತಿಸುವುದಕ್ಕೆ ಸೀಮಿತ ಎಂಬ ಅಟಾರ್ನಿ ಜನರಲ್‌ ಜಿ.ಇ.­ವಾಹನ್ವತಿ ಅವರ ಹೇಳಿಕೆಯನ್ನೂ ವಿರೋಧಿಸಿದಂತಾಗಿದೆ.ಆಂಧ್ರ ಪ್ರದೇಶ ಸರ್ಕಾರ ಕೂಡ ಇದೇ ನಿಲುವು ತೆಗೆದುಕೊಂಡಿದೆ. ಇಲ್ಲಿಯೂ ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಇದೆ.ಬಿಜೆಪಿ ನಾಯಕನ ವಿರುದ್ಧ ಪ್ರಕರಣ

ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ 1993ರಿಂದ 2004ರ ವರೆಗಿನ ಅವಧಿ­ಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಸಿಬಿಐ ಎರಡು ಹೊಸ ಪ್ರಕರಣಗಳನ್ನು ದಾಖಲಿಸಿದೆ.

ಬಿಎಲ್‌ಎ ಇಂಡಸ್ಟ್ರೀಸ್‌, ಕಾಸ್ಟ್ರನ್‌ ಟೆಕ್ನಾಲಜೀಸ್‌, ಕಾಸ್ಟ್ರನ್‌ ಮೈನಿಂಗ್‌, ಬಿಎಲ್‌ಎ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕರು, ಕೆಲವು ಸರ್ಕಾರಿ ಅಧಿಕಾರಿ­ಗಳು ಮತ್ತು ಇತರ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಬಿಎಲ್‌ಎ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅನೂಪ್‌ ಅಗರ್‌ವಾಲ್‌ ಅವರು ಬಿಜೆಪಿಯ ನಾಯಕ. ಅವರು ಜಾರ್ಖಂಡ್‌ ಬಿಜೆಪಿ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿಯ ವಿಶೇಷ ಆಹ್ವಾ­ನಿತ. ಇದೇ ಮೊದಲ ಬಾರಿ ಬಿಜೆಪಿ ನಾಯಕರೊಬ್ಬರ ಹೆಸರು ಕಲ್ಲಿದ್ದಲು ಹಗರಣ­ದಲ್ಲಿ ಕೇಳಿ ಬಂದಿದೆ.ಅಗರ್‌ವಾಲ್‌ ಅವರ ಕಂಪೆನಿಯು ವರ್ಷಕ್ಕೆ ₨ 100 ಕೋಟಿ ಮೌಲ್ಯದ ಕಲ್ಲಿದ್ದಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ ಎಂದು ಸಿಬಿಐ ಹೇಳಿದೆ. ಈ ಕಂಪೆನಿಗೆ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿ­ಯಾಗಿ­ದ್ದಾಗ 1996ರ ಜೂನ್‌ 21ರಂದು ಕಲ್ಲಿದ್ದಲು ನಿಕ್ಷೇಪ ಹಂಚಿಕ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry